ಮೆಟ್ರೊದಲ್ಲಿ ಹೆಚ್ಚಾಯ್ತು ಪಿಕ್ ಪಾಕೆಟ್

04-01-2018 342
ಇತ್ತೀಚಿನ ದಿನಗಳಲ್ಲಿ ಮೆಟ್ರೊ ರೈಲು ಪ್ರಯಾಣ ಸೇಫ್ ಮತ್ತು ಆರಾಮದಾಯಕ ಅನ್ನುವುದು ಬಹುತೇಕರ ಅಭಿಪ್ರಾಯ. ಹೀಗಾಗಿಯೇ 2002ರಲ್ಲಿ ದೆಹಲಿ ಮೆಟ್ರೊ ಆರಂಭವಾದಾಗ ಪ್ರತಿದಿನ ಸುಮಾರು 40 ಸಾವಿರ ಪ್ರಯಾಣಿಕರು ಓಡಾಡುತ್ತಿದ್ದರೆ, ಇವತ್ತು 230 ಕಿಲೋ ಮೀಟರ್ ಮೆಟ್ರೊ ರೈಲು ಜಾಲದಲ್ಲಿ ಪ್ರತಿದಿನ 27 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ.
ಆದರೆ, ದೆಹಲಿ ಮೆಟ್ರೊದಲ್ಲಿ ಪ್ರತಿದಿನ 35 ಪ್ರಯಾಣಿಕರು ಕಳ್ಳರ ಕೈಚಳಕಕ್ಕೆ ಬಲಿಯಾಗುತ್ತಿದ್ದಾರೆ. ಫೋನ್, ಪರ್ಸ್ ಮತ್ತು ಚಿಕ್ಕ ಬ್ಯಾಗುಗಳ ಕಳ್ಳತನದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ ಎಂದು ದೆಹಲಿ ಪೊಲೀಸರು ಹೇಳುತ್ತಾರೆ.
2017ರಲ್ಲಿ ದೆಹಲಿ ಮೆಟ್ರೊ ಆವರಣ ಮತ್ತು ರೈಲುಗಳಲ್ಲಿ ಒಟ್ಟು 12,854 ಪ್ರಕರಣಗಳು ವರದಿಯಾಗಿವೆ, ಇದು 2016ಕ್ಕೆ ಹೋಲಿಸಿದಲ್ಲಿ ಶೇ. 33ರಷ್ಟು ಹೆಚ್ಚು. ಪೊಲೀಸರು ನೀಡುವ ಮಾಹಿತಿ ಪ್ರಕಾರ, ಕಳ್ಳತನದಲ್ಲಿ ಪಳಗಿದ ಹೆಂಗಸರ ಗ್ಯಾಂಗಿನವರು ಇಂಥ ಶೇ.90ರಷ್ಟು ಪ್ರಕರಣಗಳಿಗೆ ಕಾರಣರಾಗಿದ್ದಾರಂತೆ. ಇವರಲ್ಲಿ ವಿದ್ಯಾವಂತರೂ ಇದ್ದು, ಬೇರೆ ಎಲ್ಲ ಪ್ರಯಾಣಿಕರಂತೆಯೇ ಕಾಣಿಸುವ ಇಂಥವರನ್ನು ಗುರುತಿಸುವುದು ಮತ್ತು ಇವರು ನಡೆಸುವ ಕಳ್ಳತನಗಳನ್ನು ಪತ್ತೆ ಹಚ್ಚುವುದು ಕಷ್ಟ ಅನ್ನುವುದು, ದೆಹಲಿ ಪೊಲೀಸರ ಹೇಳಿಕೆ. ಇದಲ್ಲದೆ, ಮೆಟ್ರೊ ರೈಲು ನಿಲ್ದಾಣಗಳ ಪಾರ್ಕಿಂಗ್ ಸ್ಥಳಗಳಿಂದ ಕಳವಾಗುವ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆಯಂತೆ. ಇದರ ಜೊತೆಗೆ, ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ 23 ಪ್ರಕರಣಗಳು 2017ರಲ್ಲಿ ವರದಿಯಾಗಿವೆ. ದೆಹಲಿ ಮೆಟ್ರೊ ವ್ಯವಸ್ಥೆಗೆ ಹೋಲಿಸಿಕೊಂಡರೆ ಬೆಂಗಳೂರಿನ ನಮ್ಮ ಮೆಟ್ರೊದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯೆಂದೇ ಹೇಳಬೇಕು. ಅಲ್ಲೊಮ್ಮೆ ಇಲ್ಲೊಮ್ಮೆ ಸಣ್ಣ ಜಗಳ ಮತ್ತು ಮಹಿಳಾ ಪ್ರಯಾಣಿಕರಿಗೆ ಕಿರುಕುಳ ಕೊಟ್ಟ ಕೆಲವೇ ಪ್ರಕರಣಗಳು ಇಲ್ಲಿ ವರದಿಯಾಗಿವೆ.
ಒಂದು ಕಮೆಂಟನ್ನು ಹಾಕಿ