ಸೌಮ್ಯ ರೆಡ್ಡಿಯ ಫ್ಲೆಕ್ಸ್ ಹಾವಳಿ

03-01-2018 1380
ಈಗಾಗಲೇ ತಂದೆ ರಾಮಲಿಂಗಾರೆಡ್ಡಿ ಎಂಎಲ್ಎ ಆಗಿ ಮಾಡಿದ ಸಾಧನೆಯನ್ನೇ ಜಯನಗರದ ಜನ ಇನ್ನೂ ಕೈಬೆರಳುಗಳಲ್ಲಿ ಎಣಿಸುತ್ತಿರುವಾಗ, ಮಗಳು ಸೌಮ್ಯ ರೆಡ್ಡಿ ಜಯನಗರ ವಿಧಾನಸಭಾ ಕ್ಷೇತ್ರದ ಮೇಲೆ ವಕ್ರ ದೃಷ್ಟಿ ಬೀರಿ, ತನ್ನ ಪುಂಡ ಬೆಂಬಲಿಗರ ಮೂಲಕ ಜಯನಗರದಾದ್ಯಂತ ಫ್ಲೆಕ್ಸ್ಗಳನ್ನು ಹಾಕಿಸಿಕೊಂಡು, ಈ ಸುಸಂಸ್ಕೃತರ ಬಡಾವಣೆಯನ್ನು ಗಬ್ಬೆಬ್ಬೆಸುತ್ತಿರುವುದು ಅಲ್ಲಿನ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈಗ ಸದ್ಯಕ್ಕೆ, ಜಯನಗರದ ಶಾಸಕರಾಗಿರುವ ವಿಜಯಕುಮಾರ್ ಅಂಥ ಸಮರ್ಥರಲ್ಲದಿದ್ದರೂ, ಸಭ್ಯ ರಾಜಕಾರಣಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ. ಸ್ಥಳೀಯ ನಾಗರಿಕ ಹಕ್ಕುಗಳ ಹೋರಾಟಗಾರರು, ಪೊಲೀಸ್ ಅಧಿಕಾರಿಗಳು ಮತ್ತು ಕಾಂಗ್ರೆಸ್ ಸುಪರ್ದಿಯಲ್ಲಿರುವ ಬಿಬಿಎಂಪಿ ಅಧಿಕಾರಿಗಳು ಹೇಳುವಂತೆ, ಶಾಸಕ ವಿಜಯಕುಮಾರ್ ಫ್ಲೆಕ್ಸ್ ಹಾಕಿಸುವ, ರೋಡ್ ಅಗೆಸುವ ಅಥವ ಫೂಟ್ಪಾತ್ ಆಕ್ರಮಣ ಮಾಡುವಂಥ ಅನಾಗರಿಕ ಚಟುವಟಿಕೆಗಳಿಗೆ ಕೈ ಹಾಕುವುದಿಲ್ಲ ಮತ್ತು ಅಂಥದ್ದನ್ನು ಮಾಡುವವರನ್ನು ಬೆಂಬಲಿಸುವುದೂ ಇಲ್ಲ. ಆದರೂ, ಬಿಜೆಪಿ ಕಾರ್ಪೊರೇಟರ್ ಆದಿಯಾಗಿ ಅನೇಕ ಪುಢಾರಿಗಳು, ಜಯನಗರದಲ್ಲಿ ಫ್ಲೆಕ್ಸ್ ಹಾವಳಿಗೆ ಕಾರಣರಾಗಿರುವುದು, ಎಲ್ಲರಿಗೂ ಗೊತ್ತಿರುವಂಥದ್ದೇ.
ಆದರೆ, ಇರುವ ಸಂಕಷ್ಟಗಳ ಜೊತೆಗೆ ಒಂದು ಹೊಸ ಅನಿಷ್ಟ ಎಂಬಂತೆ, ಈ ಸೌಮ್ಯ ರೆಡ್ಡಿ ತನ್ನ ಫ್ಲೆಕ್ಸ್ ಹಾವಳಿಯೊಂದಿಗೆ ಜಯನಗರಕ್ಕೆ ವಕ್ಕರಿಸಿರುವುದು, ಜಯನಗರ ಬಡಾವಣೆಯ ನಾಗರಿಕರನ್ನು ದಿಗ್ಭ್ರಾಂತಗೊಳಿಸಿದೆ. ತಂದೆಯ ಗೃಹ ಇಲಾಖೆಯ ಪ್ರಭಾವ ಬಳಸಿಕೊಂಡು, ಒಂದಷ್ಟು ತಾತ್ಕಾಲಿಕ ಬೆಂಬಲಿಗರನ್ನು ಒಟ್ಟುಗೂಡಿಸಿರುವ ಸೌಮ್ಯ ರೆಡ್ಡಿ, ಈ ಬೆಂಬಲಿಗರ ಮೂಲಕವೇ ಮುಂದಿನ ಚುನಾವಣೆಯಲ್ಲಿ ಜಯನಗರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು, ಈ ಎಲ್ಲ ಕುತಂತ್ರಗಳ ಮೂಲಕ ಹುನ್ನಾರ ನಡೆಸುತ್ತಿರುವುದು ಜಯನಗರದಲ್ಲಿ ರಹಸ್ಯವಾಗೇನೂ ಉಳಿದಿಲ್ಲ.
ಒಂದು ಕಮೆಂಟನ್ನು ಹಾಕಿ