'ಈ ಬಾರಿ 120 ಸೀಟು ಗೆದ್ದು ಅಧಿಕಾಕ್ಕೇರಲಿದ್ದೇವೆ’03-01-2018 514

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಲೆ ಪ್ರಬಲವಾಗಿ ಬೀಸುತ್ತಿದ್ದು ಈ ಹಿನ್ನೆಲೆಯಲ್ಲಿ ಯಾರೇನೇ ಹೇಳಿದರೂ ಕಾಂಗ್ರೆಸ್ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಟ 120 ಸೀಟುಗಳನ್ನು ಗೆದ್ದು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಅನುಭವವನ್ನೇ ಮಾನದಂಡವನ್ನಾಗಿಸಿಕೊಂಡು ಮುಂದಿನ ಚುನಾವಣೆಯ ಸ್ವಯಂ ಸರ್ವೇ ವರದಿಯನ್ನು ವಿವರಿಸಿದರು.

ಇಷ್ಟು ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ, ತಂದೆ ಶಾಸಕರಾಗಿದ್ದವರು, ಅದನ್ನು ನೋಡಿಕೊಂಡು ಬೆಳೆದವನು ನಾನು, ಇದರ ಜೊತೆಗೆ ಜನರ ನಾಡಿಮಿಡಿತವನ್ನು ಅರಿತು ಹೇಳುತ್ತಿದ್ದೇನೆ, ಯಾವ ಅನುಮಾನವೂ ಇಲ್ಲದೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದರು. ಮಾಧ್ಯಮಗಳಲ್ಲಿ ವಿವಿಧ ರೀತಿಯ ಸರ್ವೇಗಳಾಗುತ್ತಿವೆ ಅವರು ಸರ್ವೇ ಮಾಡಲಿ. ಆದರೆ ನನ್ನ ವೈಯಕ್ತಿಕ ಸರ್ವೇಯ ಪ್ರಕಾರ ನಾವು ನಿಸ್ಸಂಶಯವಾಗಿ ಗೆದ್ದು ಅಧಿಕಾರ ಹಿಡಿಯುತ್ತೇವೆ ಎಂದು ಹೇಳಿದರು.

ಮೊದಲನೆಯದಾಗಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇಲ್ಲ. ಯಾಕೆಂದರೆ ಅವರು ಎಲ್ಲ ವರ್ಗದ ಮತದಾರರನ್ನು ತಲುಪುವಂತಹ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆರೋಗ್ಯ, ಶಿಕ್ಷಣ, ಹಸಿವು ಸೇರಿದಂತೆ ವಿವಿಧ ವಿಷಯಗಳಲ್ಲಿ ಅವರು ಎಲ್ಲ ವರ್ಗದ ಜನರನ್ನು ತಲುಪಿರುವುದರಿಂದ ಕಾಂಗ್ರೆಸ್‍ಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಎರಡನೆಯದಾಗಿ ವೀರಶೈವ-ಲಿಂಗಾಯತ ವಿಷಯವೇನಿದೆ?ಅದು ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಪ್ಲಸ್ ಆಗಲಿದೆ. ಮೂರನೆಯದಾಗಿ ಈ ಸರ್ಕಾರ ಯಾವ ಸಮುದಾಯಗಳ ವಿರುದ್ಧ ಹೋಗಿಲ್ಲ. ಬದಲಿಗೆ ಅವರಿಗೆ ಅನುಕೂಲವಾಗುವಂತೆ ಮಾಡಿದೆ.

ನಾಲ್ಕನೆಯದಾಗಿ ಕಾಂಗ್ರೆಸ್‍ನ ಗೆಲುವಿಗೆ ಅನಂತಕುಮಾರ್ ಹೆಗಡೆ,ಶೋಭಾ ಕರಂದ್ಲಾಜೆ,ನಳೀನ್ ಕುಮಾರ್ ಕಟೀಲು,ಪ್ರತಾಪ್‍ಸಿಂಹ ಹಾಗೂ ಗೋ.ಮಧುಸೂಧನ್ ಅವರು ತುಂಬು ಶಕ್ತಿ ಒದಗಿಸಿದ್ದಾರೆ. ಎಲ್ಲರೂ ತಮ್ಮ ತಮ್ಮ ಜಿಲ್ಲೆಯಲ್ಲಿ ಬೆಂಕಿ ಹಚ್ಚುವ ಮಾತುಗಳನ್ನೇ ಆಡುತ್ತಿದ್ದಾರೆ. ಅವರ ಪಕ್ಷದ ಅಧ್ಯಕ್ಷರು ರಾಜ್ಯಕ್ಕೇ ಬೆಂಕಿ ಹಚ್ಚುವ ಮಾತುಗಳನ್ನಾಡುತ್ತಿದ್ದಾರೆ, ಹೀಗಾಗಿ ಬೆಂಕಿ ಹಚ್ಚುವವರಿಗೆ ಯಾಕೆ ಮತ ನೀಡಬೇಕು ಎಂದು ಎಲ್ಲ ಸಮುದಾಯಗಳ ಜನ ಯೋಚಿಸುತ್ತಾರೆ.

ಇವರೆಲ್ಲ ಇವತ್ತು ಬೆಂಕಿ ಹಚ್ಚುವ ಮಾತುಗಳನ್ನು ಆಡಿಯೂ ಸಂಸದರಾಗಿ, ಮತ್ತಿತರ ಅಧಿಕಾರಗಳಲ್ಲಿ ಮುಂದುವರಿದಿದ್ದಾರೆ ಎಂದರೆ ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನೀಡಿದ ಶಕ್ತಿ. ಜೈಲಿಗೆ ಹೋಗಿ ಬಂದ ಒಬ್ಬ ನಾಯಕ ಮರಳಿ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುವ ಶಕ್ತಿ ಕೊಟ್ಟಿರುವವರೂ ಬಾಬಾ ಸಾಹೇಬ್ ಅಂಬೇಡ್ಕರ್.

ಇವರೆಲ್ಲ ಬೇರೆ ದೇಶಗಳಲ್ಲಿದ್ದರೆ ಪರ್ಮನೆಂಟಾಗಿ ಜೈಲಿಗೆ ಹೋಗುತ್ತಿದ್ದರು, ಆದರೆ ಇಂತಹ ಮಾತುಗಳನ್ನಾಡಿಯೂ ಇವರು ಹೊರಗೇ ಇದ್ದಾರೆಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಶಕ್ತಿ, ಆ ಮೂಲಕ ಪ್ರಜಾಪ್ರಭುತ್ವದ ಸೌಂದರ್ಯವನ್ನು ಅವರು ಹೆಚ್ಚಿಸಿದ್ದು ಹೇಗೆ?ಅನ್ನುವುದು ಗೊತ್ತಾಗಿ ಬಿಡುತ್ತದೆ ಎಂದರು.

ಜೆಡಿಎಸ್‍ಗೆ ಈ ಬಾರಿ ದಲಿತರ ಹಾಗೂ ಅಲ್ಪಸಂಖ್ಯಾತರ ಸ್ವಲ್ಪ ವೋಟುಗಳು ದಕ್ಕಲಿವೆ, ಬಿಜೆಪಿಗೆ ಅದರದೇ ಆದ ಕಾರಣಗಳಿಗಾಗಿ ಕೆಲ ಕ್ಷೇತ್ರಗಳಲ್ಲಿ ಬೆಂಬಲ ದಕ್ಕಲಿದೆ, ಆದರೆ ಎಲ್ಲದರ ನಡುವೆಯೂ ಕಾಂಗ್ರೆಸ್ ಪಕ್ಷ 120 ಸ್ಥಾನಗಳನ್ನುಗಳಿಸಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುತ್ತದೆ ಎಂದು ಸ್ಪಷ್ಟ ಪಡಿಸಿದರು. ರಾಜ್ಯದಲ್ಲಿ ಈಗಿರುವುದು ಸಿದ್ದರಾಮಯ್ಯ ಅಲೆ, ಮೋದಿ ಅಲೆಯಲ್ಲ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಪದೇ ಪದೇ ಕರ್ನಾಟಕಕ್ಕೆ ಬಂದು ಹೋಗುತ್ತಲೇ ಇದ್ದಾರೆ. ಆದರೆ ಏನುಪಯೋಗವಾಗಿದೆ?ಎಂದು ಪ್ರಶ್ನಿಸಿದರು.ಸಂಬಂಧಿತ ಟ್ಯಾಗ್ಗಳು

U. T. Khader press meat ಅಮಿತ್ ಷಾ ಅಲ್ಪಸಂಖ್ಯಾತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ