ಜಗತ್ತಿನಿಂದಲೇ ಚಾಕ್‌ಲೇಟ್ ಮಾಯ!

Global Warming: Chocolate Gonna Disappear

03-01-2018 436

ಈ ಜಗತ್ತಿನಲ್ಲಿ ಯಾರಿಗೆ ತಾನೆ ಚಾಕ್‌ಲೇಟ್ ಇಷ್ಟ ಇಲ್ಲ ಹೇಳಿ? ಮಗುವಾಗಿರಲಿ, ದೊಡ್ಡವರಾಗಿರಲಿ, ಸಂಸಾರಿ ಆಗಿರಲಿ ಸನ್ಯಾಸಿಯೇ ಆಗಿರಲಿ, ಜೀವನದಲ್ಲಿ ಒಂದೇ ಒಂದು ಬಾರಿಯೂ ನಾನು ಚಾಕ್ಲೇಟ್ ತಿಂದಿಲ್ಲ ಅಂತ ಹೇಳೋ ಯಾವುದೇ ಒಬ್ಬ ವ್ಯಕ್ತಿ ನಮ್ಮ ಜಗತ್ತಿನಲ್ಲಿ ಇಲ್ಲವೇ ಇಲ್ಲ ಎಂದೇ ಹೇಳಬೇಕು. ಯಾರಾದ್ರೂ, ನನಗೆ ಚಾಕ್‌ಲೇಟ್ ಸ್ವಲ್ಪವೂ ಇಷ್ಟ ಇಲ್ಲ ಅಂದ್ರೆ, ಮೊದಲು ಅಂಥವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸಿ, ಆಮೇಲೆ ಅವರ ಬಗ್ಗೆ ಮಾತನಾಡಬೇಕು. ಹೀಗೆ, ಇಷ್ಟೊಂದೆಲ್ಲ ಫೇಮಸ್ ಆಗಿರೋ ಈ ಚಾಕ್ಲೇಟ್, ನಮ್ಮ ಜಗತ್ತಿನಿಂದಲೇ ಮಾಯ ಆಗೋ ಸಾಧ್ಯತೆ ಇದೆಯಂತೆ. ಎಂಥ ದುಃಖದ ವಿಚಾರ ಇದು. ಇದಕ್ಕೆ ಏನು ಕಾರಣ ಅಂತ ನೋಡೋದಾದ್ರೆ, ನಿಮಗೆ ಗ್ಲೋಬಲ್ ವಾರ್ಮಿಂಗ್ ಅರ್ಥಾತ್ ಜಾಗತಿಕ ತಾಪಮಾನದಲ್ಲಿನ ಏರಿಕೆ ವಿಚಾರ ಗೊತ್ತಲ್ಲ ಅದರ ಕಾರಣದಿಂದಲೇ ಮುಂದಿನ 30 ವರ್ಷದಲ್ಲಿ ಚಾಕ್‌ಲೇಟ್ ಇಲ್ಲವಾಗುವ ಸಾಧ್ಯತೆ ಇದೆ.

ಜಗತ್ತಿನ ತಾಪಮಾನ ಏರಿಕೆ ಮತ್ತು ಮಳೆ ಪ್ರಮಾಣದ ಕೊರತೆಯಿಂದ, ಕೊಕೊ ಮರಗಳು ಬೆಳೆಯುವುದಕ್ಕೆ ತುಂಬಾ ಕಷ್ಟಪಡುತ್ತಿವೆಯಂತೆ. ಅಮೆರಿಕದಲ್ಲಿನ ಒಂದು ವರದಿ ಪ್ರಕಾರ, ಮುಂದಿನ 30 ವರ್ಷಗಳಲ್ಲಿ ಜಗತ್ತಿನ ಹವಾಮಾನದ ಉಷ್ಣಾಂಶದಲ್ಲಿ ಕೇವಲ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾದರೂ ಕೂಡ, ಕೋಕೊ ಮರಗಳು ನಶಿಸಿಹೋಗುವ ಸಾಧ್ಯತೆ ಇದೆಯಂತೆ. ಇದರಿಂದ ಜಗತ್ತಿನ ಚಾಕೋಲೇಟ್ ಉದ್ಯಮವೇ ಮುಚ್ಚಿಹೋಗಬಹುದು.  ಒಂದು ವೇಳೆ, ನಿಜವಾಗಲೂ ಹೀಗಾಗಿಬಿಟ್ಟರೆ ಏನು ಮಾಡುವುದು?

ಬಾಯಲ್ಲಿಟ್ಟರೆ ಸಾಕು ಸ್ವರ್ಗ ಸುಖ ನೀಡುವ ಈ ಅಚ್ಚು ಮೆಚ್ಚಿನ ಸಿಹಿ ಪದಾರ್ಥ ಇಲ್ಲವಾದರೆ ಬದುಕಿರುವುದಾದರೂ ಹೇಗೆ? ಗೆಳತಿಗೆ ಪ್ರೇಮ ನಿವೇದನೆ ಮಾಡುವ ಮೊದಲ ಹಂತದಿಂದ ಹಿಡಿದು, ಹೃದಯವನ್ನು ಗೆಲ್ಲುವ ಹಂತದವೆರೆಗೂ ಕೊಡುತ್ತಲೇ ಹೋಗುವುದಾದರೂ ಏನನ್ನು? ತಮ್ಮ ಚಾಕ್‌ಲೇಟ್ ಪ್ಯಾಕುಗಳ ಮೇಲೆ A Gift for Someone You Love ಎಂದು ಬರೆದು, ಚಾಕ್‌ಲೇಟ್ ಪ್ರೇಮವನ್ನು ಅಮರಗೊಳಿಸಿದ ಅಮುಲ್ ಚಾಕ್‌ಲೇಟ್‌ ನವರು ಮುಂದೇನು ಮಾಡುತ್ತಾರೆ? ಇಲ್ಲ, ಹೀಗಾಗಲು ಬಿಡಬಾರದು. ಜಗತ್ತಿನಲ್ಲಿ ವಿವಿಧ ಧರ್ಮ, ಜಾತಿ ಮತ್ತು ವರ್ಗದ ಜನರಿದ್ದಾರೆ ಆದರೆ, ಚಾಕಲೇಟ್ ತಿನ್ನುವವರೆಲ್ಲ ಒಂದೇ ಜಾತಿ ಅನ್ನುವುದಾದರೆ, ಇಡೀ ಜಗತ್ತೇ ಒಂದು ಕುಟುಂಬವಾಗಿಬಿಡುತ್ತದೆ. ಈ ರೀತಿಯಲ್ಲೂ ಕೂಡ, ಉದಾರ ಚಿಂತನೆಯ ‘ವಸುಧೈವ ಕುಟುಂಬಕಮ್’ ಪರಿಕಲ್ಪನೆ ನಿಜವಾಗಬಹುದು. ಹೀಗಾಗಿ, ಬನ್ನಿ ಚಾಕ್‌ಲೇಟ್‌ಗೋಸ್ಕರವಾದರೂ ಜಗತ್ತಿನ ಹವಾಮಾನವನ್ನು ಕಾಪಾಡೋಣ. ಇಲ್ಲದಿದ್ದರೆ, ಕೆಮಿಕಲ್ ಗಳಿಂದ ತಯಾರಿಸಿರುವ ಕೃತಕ ಚಾಕ್‌ಲೇಟ್ ತಿನ್ನುವ ಪರಿಸ್ಥಿತಿ ಬರಬಹುದು. ರಿಯಲ್ ಚಾಕ್‌ಲೇಟ್ ತಿಂದೇ ಕೃತಕ ಪ್ರೀತಿ ತೋರುವ ಜನರು, ಇನ್ನು ಕೃತಕ ಚಾಕ್‌ಲೇಟ್ ತಿಂದು ನಿಜವಾದ ಪ್ರೀತಿ ತೋರಿಸುತ್ತಾರೆಂದು ನಿರೀಕ್ಷೆ ಮಾಡಲು ಸಾಧ್ಯವೇ?

 ಸಂಬಂಧಿತ ಟ್ಯಾಗ್ಗಳು

Chocolate Global warming ಜಾಗತಿಕ ಉಷ್ಣಾಂಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ