ಮಿನಿಮಮ್ ಬ್ಯಾಲೆನ್ಸ್ ಇಲ್ವ? ಮುಗೀತು ಬಿಡಿ..!

02-01-2018 1481
ಬ್ಯಾಂಕ್ನಲ್ಲಿ ನಿಮ್ಮ ಎಸ್ಬಿ ಅಕೌಂಟಿದೆಯೇ? ಹಾಗಿದ್ರೆ ನೀವು ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್ ಮಾಡ್ದಿದ್ದೀರಿ ತಾನೆ? ಸದ್ಯಕ್ಕೆ ಬೆಂಗಳೂರಿನಲ್ಲಿರೋ ಎಸ್ಬಿಐ ಅಕೌಂಟ್ಗಳಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ 3 ಸಾವಿರ ರೂಪಾಯಿ ಆದ್ರೂ ಇರಬೇಕು. ಇಲ್ಲದಿದ್ರೆ, ಬ್ಯಾಂಕಿನವರು ಪ್ರತಿ ತಿಂಗಳೂ ಐವತ್ತರಿಂದ ನೂರುರೂಪಾಯಿವರೆಗೆ ದಂಡ ಹಾಕ್ತಾರೆ? ನೀವು ಎಚ್ಚರವಹಿಸಿ ಸರಿಯಾಗಿ ನೋಡಿಕೊಳ್ಳದೇ, ಉಳಿದಿರೋ ಅಲ್ಪಸ್ವಲ್ಪ ಹಣ ಎಲ್ಲವೂ ಹಾಗೇ, ಬರೀ ದಂಡವಾಗಿ ಖಾಲಿ ಆಗಿಬಿಡುತ್ತೆ. ಇತ್ತೀಚಿನ ದಿನಗಳಲ್ಲಿ, ಕೆಲವು ಸರ್ಕಾರಿ ಬ್ಯಾಂಕುಗಳು ವರ್ತಿಸುತ್ತಿರುವ ರೀತಿ ನೋಡಿದರೆ, ಅವನ್ನು ಗ್ರಾಹಕರ ಸೇವೆಗೆ ಇರುವಂಥ ಬ್ಯಾಂಕುಗಳು ಅಂತ ಕರೆಯೋದು ಕಷ್ಟ ಆಗುತ್ತೆ. ಇರಲಿ ಬಿಡಿ, ಆ ವಿಚಾರದ ಬಗ್ಗೆ ಮತ್ತೊಮ್ಮೆ ಮಾತನಾಡೋಣ.
ಇತ್ತೀಚೆಗೆ, ಬೇರೆ ಎಲ್ಲ ವ್ಯವಹಾರಗಳಿಂದ ಬರೋ ಲಾಭಕ್ಕಿಂತ ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್ ಮಾಡಿಲ್ಲ ಅಂತ ಗ್ರಾಹಕರಿಗೆ ಹಾಕ್ತಿರೋ ದಂಡದಿಂದ ನಮ್ಮ ಬ್ಯಾಂಕುಗಳಿಗೆ ಮ್ಯಾಕ್ಸಿಮಮ್ ಪ್ರಾಫಿಟ್ ಬರ್ತಿದೆಯಂತೆ. ಇದೇ ವರ್ಷ ಏಪ್ರಿಲ್ ನಿಂದ ನವೆಂಬರ್ ವರೆಗೆ ಎಸ್ಬಿಐ ನವರು ಮಿನಿಮಮ್ ಬ್ಯಾಲೆನ್ಸ್ ಇಟ್ಟುಕೊಳ್ಳದ ಗ್ರಾಹಕರಿಂದ 1771 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರಂತೆ. ಇದು, ಎಸ್ಬಿಐ ನವರ ಜುಲೈ-ಸೆಪ್ಟಂಬರ್ ತ್ರೈಮಾಸಿಕದ ಆದಾಯ 1581 ಕೋಟಿಗಿಂತಲೂ ಸುಮಾರು 200 ಕೋಟಿ ರೂಪಾಯಿಗಳಷ್ಟು ಹೆಚ್ಚು. ಇದೇ ರೀತಿ, ಇತರೆ ಹಲವು ಬ್ಯಾಂಕುಗಳೂ ಕೂಡ ಮಿನಿಮಮ್ ಬ್ಯಾಲೆನ್ಸ್ ವ್ಯವಹಾರದಿಂದಲೇ ಮ್ಯಾಕ್ಸಿಮಮ್ ಪ್ರಾಫಿಟ್ ಮಾಡಿಕೊಳ್ಳುತ್ತಿವೆಯಂತೆ.
ಒಟ್ಟಿನಲ್ಲಿ, ‘ವಿಜಯ್ ಮಲ್ಯನಂಥ ದೊಡ್ಡ ಕುಳಗಳಿಗೆ ಕೊಟ್ಟ ಸಾವಿರಾರು ಕೋಟಿ ರೂಪಾಯಿ ಸಾಲ ವಸೂಲಿ ಮಾಡುವ ತಾಕತ್ತು ಈ ಬ್ಯಾಂಕುಗಳಿಗೆ ಇಲ್ಲದಿದ್ದರೂ, ಬಡಪಾಯಿ ಗ್ರಾಹಕರಿಂದ ದಂಡ ವಸೂಲಿ ಮಾಡುವುದರಲ್ಲಿ ಮಾತ್ರ ಮುಂದಿವೆ’ ಎಂದು ಜನ ಆಡಿಕೊಳ್ಳುವುದನ್ನು, ತಪ್ಪು ಎಂದು ಹೇಳುವುದಂತೂ ಕಷ್ಟ.
ಒಂದು ಕಮೆಂಟನ್ನು ಹಾಕಿ