ಗೋಶಾಲೆ ನಿರ್ವಹಣೆಗೆ ಮೇನಕೆಯ ಕೈಪಿಡಿ!

26-12-2017 354
ನೀವು ಹಲವಾರು ರೀತಿಯ ಕೈಪಿಡಿಗಳನ್ನು ನೋಡಿದ್ದೀರಿ, ಓದಿದ್ದೀರಿ. ಸ್ಮಾರ್ಟ್ ಫೋನ್ ಕೈಪಿಡಿಯಿಂದ ಹಿಡಿದು ಕಂಪ್ಯೂಟರ್, ದ್ವಿಚಕ್ರವಾಹನ ಮತ್ತು ಕಾರುಗಳ ಕೈಪಿಡಿ ಅರ್ಥಾತ್ ಮ್ಯಾನ್ಯುಯಲ್ ನೋಡಿದ್ದೀರಿ. ಅದೇ ರೀತಿ, ಭಗವದ್ ಗೀತೆ ಇತ್ಯಾದಿಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಕೂಡ ಕೈಪಿಡಿಗಳು ದೊರೆಯುತ್ತವೆ. ಹೀಗಾಗಿ, ಕೈಪಿಡಿ ಅಂದರೆ ಅರ್ಥಮಾಡಿಕೊಳ್ಳಲು ಅಥವ ಒಂದು ಕೆಲಸವನ್ನು ಸರಿಯಾಗಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ನೆರವಾಗುವ ಪುಸ್ತಿಕೆ ಎಂದು ಅರ್ಥ.
ಇಷ್ಟೆಲ್ಲಾ ಪೀಠಿಕೆ ಏಕೆ ಅಂದ್ರಾ? ಇದೀಗ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮೇನಕ ಗಾಂಧಿ ಒಂದು ವಿಶೇಷ ಮತ್ತು ದೇಶದಲ್ಲಿ ಈವರೆಗೆ ಯಾರೂ ರಚಿಸದೇ ಇರುವ ವಿಶಿಷ್ಟ ಕೈಪಿಡಿ ರಚಿಸಿದ್ದಾರೆ. ಅದು ಯಾವುದರ ಬಗ್ಗೆ ಅಂದ್ರಾ, ಊಹೆ ಮಾಡಿ ನೋಡೋಣ. ಮೇನಕ ಗಾಂಧಿ ಅವರಿಗೆ ಯಾರನ್ನು ಕಂಡರೆ ಹೆಚ್ಚು ಪ್ರೀತಿ ಹೇಳಿ? ಹೌದು ಪ್ರಾಣಿ, ಪಕ್ಷಿಗಳನ್ನು ಕಂಡರೆ ತುಂಬಾ ಪ್ರೀತಿ, ಅವರು ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುವ ಕಾರ್ಯಕರ್ತೆಯೂ ಹೌದು. ಹೀಗಾಗಿ, ಮೇನಕಾ ಗಾಂಧಿ ಅವರು ಗೋಶಾಲೆ ನಿರ್ವಹಣೆಮಾಡುವುದು ಹೇಗೆ? ಎಂಬ ಕೈಪಿಡಿ ಬರೆದಿದ್ದಾರೆ.
ಭಾರತದಲ್ಲಿನ ಗೋಶಾಲೆಗಳು ಮತ್ತು ಅಲ್ಲಿನ ಕೆಟ್ಟ ಪರಿಸ್ಥಿತಿ, ಅಲ್ಲಿನ ಪ್ರಾಣಿಗಳು ಸಾವಿಗೀಡಾಗುವುದು, ಇತ್ಯಾದಿ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಕೈಪಿಡಿ ರಚಿಸಿದ್ದಾರಂತೆ. 2014ರ ಜಾನುವಾರು ಗಣತಿ ಪ್ರಕಾರ ದೇಶದಲ್ಲಿ ಹಸು, ಕರು, ಎತ್ತುಗಳೂ ಸೇರಿದಂತೆ ಸುಮಾರು 12 ಕೋಟಿ ಗೋವುಗಳು ಮತ್ತು ಮೂರುಸಾವಿರಕ್ಕೂ ಹೆಚ್ಚು ಗೋಶಾಲೆಗಳಿವೆಯಂತೆ. ಇವುಗಳಲ್ಲಿ 1325 ಗೋಶಾಲೆಗಳನ್ನು, ರಾಜ್ಯ ಸರ್ಕಾರಗಳ ಪಶುಸಂಗೋಪನಾ ಇಲಾಖೆಗಳು ನೋಡಿಕೊಳ್ಳುತ್ತವೆ, ಉಳಿದವನ್ನು ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ನೋಡಿಕೊಳ್ಳುತ್ತಾರೆ. ಖಾಸಗಿ ಗೋಶಾಲೆಗಳು ಯಾರಾದರೂ ಕೊಡುವ ದೇಣಿಗೆಯನ್ನು ಆಧರಿಸಿರುತ್ತವೆ.
ಅವು ಸರ್ಕಾರಿಯಾಗಲಿ, ಖಾಸಗಿಯಾಗಲಿ ಬಹುತೇಕ ಗೋಶಾಲೆಗಳ ನಿರ್ವಹಣೆ ಸರಿಯಾಗಿಲ್ಲ. ಅಲ್ಲಿ, ಮುದಿ ಹಸುಗಳು, ಅಂಗ ವೈಕಲ್ಯ ಇರುವ ದನಗಳು, ಎಲ್ಲವನ್ನೂ ಸಣ್ಣ ಕೊಟ್ಟಿಗೆಯಲ್ಲಿ ತುಂಬಿರುತ್ತಾರೆ. ಅವುಗಳ ಆರೋಗ್ಯದ ಬಗ್ಗೆ ನಿಗಾವಹಿಸಲು ಪಶುವೈದ್ಯರೂ ಅಲ್ಲಿರುವುದಿಲ್ಲ. ಇಂಥ ಕಡೆ, ಪ್ರತಿ ತಿಂಗಳೂ ಅಲ್ಲಿನ ದನಗಳ ಪೈಕಿ ಶೇ.10ರಷ್ಟು ದನಗಳು ಮೃತಪಡುತ್ತವಂತೆ. ಹೀಗಾಗಿ, ಜಾನುವಾರುಗಳ ಆರೋಗ್ಯ ಮತ್ತು ಅಗತ್ಯತೆಗಳನ್ನು ಸರಿಯಾಗಿ ತಿಳಿದುಕೊಳ್ಳಲು ಮತ್ತು ಆ ಗೋಶಾಲೆಗಳು ಆರ್ಥಿಕವಾಗಿಯೂ ಸದೃಢವಾಗಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮೇನಕಾ ಗಾಂಧಿ ಕೈಪಿಡಿ ಸಲಹೆ ನೀಡುತ್ತದಂತೆ.
ನಮ್ಮ ಗೋಶಾಲೆಗಳಲ್ಲಿ ಗೋವನ್ನು ಪೂಜಿಸುವಂಥ ದೇವಸ್ಥಾನ ಇರುತ್ತದೆ ಆದರೆ, ಅನಾರೋಗ್ಯಕ್ಕೊಳಗಾದ ಗೋವನ್ನು ಉಪಚರಿಸಲು ಪ್ರತ್ಯೇಕವಾದ ಸ್ಥಳ ಮಾತ್ರ ಇರುವುದಿಲ್ಲ ಎಂದು ಟೀಕಿಸುವ ಮೇನಕಾ ಗಾಂಧಿ, ಈ ಕೈಪಿಡಿಯನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ಬರೆದಿದ್ದು, ಇದಕ್ಕೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲವಂತೆ.
ಗೋಶಾಲೆಗಳನ್ನು ಕಟ್ಟುವುದು ಹೇಗೆ? ಗೋವುಗಳಿಗೆ ಯಾವ ಆಹಾರ ನೀಡಬೇಕು? ಬಾವಿಗೆ ಬಿದ್ದ ಹಸುಗಳನ್ನು ಹೇಗೆ ರಕ್ಷಣೆ ಮಾಡಬೇಕು? ಮೃತಪಟ್ಟ ಗೋವುಗಳ ದೇಹವನ್ನು ಯಾವ ರೀತಿ ನಿರ್ವಹಣೆ ಮಾಡಬೇಕು? ಇತ್ಯಾದಿ ವಿಚಾರಗಳ ಬಗ್ಗೆಯೂ ಈ ಕೈಪಿಡಿಯಲ್ಲಿ ಮಾಹಿತಿ ನೀಡಿದ್ದಾರಂತೆ. ಗೋವುಗಳ ಸಗಣಿಯಿಂದ ಯಾವ ರೀತಿಯ ಉತ್ಪನ್ನಗಳನ್ನು ತಯಾರಿಸಬಹುದು? ಗೋಬರ್ ಗ್ಯಾಸ್, ಬಯೋ ಗ್ಯಾಸ್, ಗೊಬ್ಬರ ಇತ್ಯಾದಿಗಳ ಉತ್ಪಾದನೆ ಹೇಗೆ? ಅನ್ನುವುದರ ಬಗ್ಗೆಯೂ ಅದರಲ್ಲಿ ವಿವರಣೆ ಇದೆಯಂತೆ.
ಭಾರತದಲ್ಲಿ ಗೋವುಗಳನ್ನು ಪವಿತ್ರ ಪ್ರಾಣಿಗಳು ಎಂದು ಪರಿಗಣಿಸಿರುವುದರಿಂದ, ಗೋವಿನ ಹಿರಿಮೆಯ ಬಗ್ಗೆ ಸಂತರು, ಸನ್ಯಾಸಿಗಳಿಂದ ಗೋಕಥೆಗಳನ್ನು ಏರ್ಪಡಿಸಿ, ಗೋಶಾಲೆ ನಿರ್ವಹಣೆಗೆ ಹಣ ಸಂಗ್ರಹಣೆ ಮಾಡುವ ಬಗ್ಗೆಯೂ ಈ ಕೈಪಿಡಿಯಲ್ಲಿ ಹೇಳಲಾಗಿದೆಯಂತೆ. ಗೋಶಾಲೆ ಅನ್ನುವುದು ಭಾರತಕ್ಕೆ ಮಾತ್ರ ಸೀಮಿತವಾದ ಒಂದು ವಿಶಿಷ್ಟ ಪರಿಕಲ್ಪನೆ, ಹೀಗಾಗಿ ಅವುಗಳ ಸಮರ್ಪಕ ನಿರ್ವಹಣೆಗೆ ಒಂದು ಕೈಪಿಡಿ ಪ್ರಕಟವಾಗಿರುವುದು ಒಳ್ಳೆಯ ವಿಚಾರವೇ ಎಂದು ಹೇಳಬಹುದು.
ಒಂದು ಕಮೆಂಟನ್ನು ಹಾಕಿ