ಮಾನವರೋ ಇವರು?

Rich Idiots Are Putting Spikes On Trees in London

22-12-2017 444

ಅಲ್ಲ, ಮನುಷ್ಯ ಅನ್ನೋ ಈ ಪ್ರಾಣಿ ಯಾಕೆ ಇಷ್ಟೊಂದು ಕೆಳಮಟ್ಟಕ್ಕೆ ಇಳೀತಿದ್ದಾನೆ? ಪ್ರಕೃತಿಯಲ್ಲಿರುವ ಬೇರೆ ಎಲ್ಲಕ್ಕಿಂತಲೂ ತಾನೇ ಅತ್ಯಂತ ಶ್ರೇಷ್ಠ ಅಂತ ಹೇಳಿಕೊಳ್ಳೋ ಮಾನವ, ಯಾಕೆ ಈ ರೀತಿ ನೀಚತನ ತೋರಿಸ್ತಿದ್ದಾನೆ? ಯಾಕೆ ಇಷ್ಟೊಂದು ಸ್ವಾರ್ಥಿ ಆಗ್ತಿದ್ದಾನೆ? ಲಂಡನ್‌ನಿಂದ ಬಂದ ಒಂದು ಸುದ್ದಿ ಕೇಳಿದ ಮೇಲೆ, ಇವೆಲ್ಲ ಪ್ರಶ್ನೆಗಳನ್ನು ನಮಗೆ ನಾವು ಕೇಳಿಕೊಳ್ಳಲೇಬೇಕಾಗಿದೆ.  ಲಂಡನ್ ಮಹಾನಗರದ ಶ್ರೀಮಂತ ಜನರು, ಅಲ್ಲಿನ ಮರಗಳ ಕೆಳಗೆ ನಿಲ್ಲಿಸಿರುವ ತಮ್ಮ ಬಿಎಂಡಬ್ಲ್ಯು, ಆಡಿ ಇತ್ಯಾದಿ ಐಶಾರಾಮಿ ಕಾರುಗಳು, ಹಕ್ಕಿಗಳ ಹಿಕ್ಕೆಯಿಂದ ಗಲೀಜಾಗುವುದನ್ನು ತಪ್ಪಿಸಲು ಏನು ಮಾಡಿದ್ದಾರೆ ಗೊತ್ತೇ? ಏನ್ ಮಾಡಿರ್ತಾರೆ, ಒಳ್ಳೆಯ ಕವರ್ ತಂದು ಕಾರಿನ ಮೇಲೆ ಹಾಕಿರ್ತಾರೆ ಅಂದ್ರಾ? ಅಷ್ಟೇ ಆಗಿದ್ರೆ ನಾವ್ಯಾಕ್‌ ಸ್ವಾಮಿ ಈ ಸುದ್ದಿ ಬರೀಬೇಕಿತ್ತು. ಆ ಶ್ರೀಮಂತರ ಜನ, ತಮ್ಮ ಕಾರಿಗೆ ಕವರ್ ಹಾಕಲಿಲ್ಲ, ಬದಲಿಗೆ ಅಲ್ಲಿನ ಮರಗಳ ಎಲ್ಲ ಕೊಂಬೆಗಳಿಗೆ anti-bird spikes ಹಾಕಿಸಿದ್ದಾರೆ. ಹಂಗಂದ್ರೆ ಲೋಹ(ಕಬ್ಬಿಣ, ಅಲುಮಿನಿಯಂ ಇತ್ಯಾದಿ) ಅಥವ ಪ್ಲಾಸ್ಟಿಕ್ಕಿನ ಸೂಜಿಯಂಥ ಮುಳ್ಳುಗಳನ್ನು ಜೋಡಿಸಿರುವ ಉದ್ದನೆ ಪಟ್ಟಿಗಳು. ಈ ಮುಳ್ಳುಗಳ ಪಟ್ಟಿಯನ್ನು ಅಲ್ಲಿನ ಮರಗಳ ರೆಂಬೆ ಕೊಂಬೆಗಳಿಗೆ ಅಳವಡಿಸಿರುವುದರಿಂದ ಅಲ್ಲಿ ಯಾವುದೇ ಹಕ್ಕಿ ಕೂರಲು ಸಾಧ್ಯವಿಲ್ಲ. ಒಂದು ವೇಳೆ ಸಾಹಸ ಮಾಡಿ ಕೂರಲು ಹೋದರೆ, ಪಕ್ಷಿಯ ಮೈಗೆ ಮುಳ್ಳು ಚುಚ್ಚಿ ಗಾಯವಾಗಬಹುದು ಅಥವ ಮುಳ್ಳಿಗೆ ಸಿಲುಕಿ ವಿಲವಿಲ ಒದ್ದಾಡಿ ಸಾಯಬಹುದು.

ಭೂಮಿಯ ಮೇಲೆ ತನ್ನ ಕಾರುಬಾರು ನಡೆಸುವ ಮನುಷ್ಯ, ಕಾಡುಗಳನ್ನು ಕಡಿದು ನಾಡು ಮಾಡಿಕೊಂಡಿದ್ದಾನೆ, ವನ್ಯ ಜೀವಿಗಳ ನೆಲೆ ಕಸಿದುಕೊಂಡಿದ್ದಾನೆ, ಪರಿಸರವನ್ನು ಹಾಳುಗೆಡುವುತ್ತಿದ್ದಾನೆ. ಇಷ್ಟಾದರೂ ಸುಮ್ಮನಾಗದೆ, ಸ್ವಾರ್ಥ ಬದುಕಿನ ಪರಮಾವಧಿ ಎಂಬಂತೆ, ಮರಗಳ ಮೇಲೆ ಹಕ್ಕಿಗಳು ಕೂರುವುದನ್ನೂ ತಪ್ಪಿಸಲು ಹೊರಟಿದ್ದು ತಪ್ಪು ತಾನೆ? ಹಾಗಿದ್ದರೆ, ಹಕ್ಕಿಗಳಿಗೆ ಬದುಕುವುದಕ್ಕೇ ಹಕ್ಕಿಲ್ಲವೇ? ಹಕ್ಕಿಗಳು ಮರದ ಮೇಲಲ್ಲದೆ ಮನುಷ್ಯರ ತಲೆ ಮೇಲೆ ಕೂರಲು ಸಾಧ್ಯವೇ? ಹಕ್ಕಿಗಳು ಮರಗಳ ಮೇಲೂ ಕೂರದಂತೆ ಮಾಡಲು ಹೊರಟ ಈ ಮಾನವನಿಗೆ ನಾಚಿಕೆಯಾಗಬೇಕು. ನಮಗೆ ಶುದ್ಧ ಗಾಳಿ ಕೊಡುವ ಮರಗಳೇನು ಮನುಷ್ಯನ ಅಪ್ಪನ ಮನೆ ಆಸ್ತಿಯಲ್ಲ. ಪ್ರಕೃತಿಯಲ್ಲಿ ಮನುಷ್ಯರಂತೆ ಎಲ್ಲ ಪ್ರಾಣಿ, ಪಕ್ಷಿಗಳಿಗೂ ಬದುಕುವ ಹಕ್ಕಿದೆ ಎನ್ನುವುದನ್ನು ನಾವು ಮರೆಯಬಾರದು.

ಇದು, ದೂರದ ಲಂಡನ್ ಕತೆ ಆಯ್ತು, ನಮ್ಮ ಬೆಂಗಳೂರಿನಲ್ಲೇನು ಎಲ್ಲಾ ಪುಣ್ಯಕೋಟಿಗಳೇ ಇದ್ದಾರೆ ಅಂದ್ಕೊಳ್ಳೋಹಾಗಿಲ್ಲ. ಎಲ್ಲಾ ಬಸ್ ಸ್ಟಾಪ್‌ಗಳ ಬದಿಯ ಮರಗಳನ್ನು ನೋಡಿ, ಹೇಗೆ ವಿರೂಪಗೊಳಿಸಿದ್ದಾರೆ ಅಂತ. ಮರಗಳ ರೆಂಬೆ, ಕೊಂಬೆಗಳಿಗೆಲ್ಲ ಮೊಳೆ ಮತ್ತು ಪಿನ್ ಹೊಡೆದು ಚಿತ್ರ ವಿಚಿತ್ರವಾದ ಜಾಹೀರಾತುಗಳನ್ನು ಹಾಕಿರುತ್ತಾರೆ. ಮನೆ ಕಟ್ಟುವವವರು ಬಾರ್ ಬೆಂಡಿಂಗ್ ಅಂದರೆ, ಕಬ್ಬಿಣದ ಕಂಬಿಗಳನ್ನು ಬಗ್ಗಿಸಲು ಮನೆಯೆದುರಿನ ಮರಕ್ಕೇ ದೊಡ್ಡ ಕಬ್ಬಿಣದ ಗೂಟ ಹೊಡೆದು ಬಿಟ್ಟಿರುತ್ತಾರೆ. ಈ ಮರಗಳಿಗೂ ಜೀವ ಇದೆ, ಇವು ನಮ್ಮ ಲಾಭಕ್ಕಾಗಿಯೇ ಇವೆ, ನಮಗೆ ನೆರಳು, ಶುದ್ಧ ಗಾಳಿ, ಹಣ್ಣುಗಳನ್ನು ಕೊಡುತ್ತವೆ ಅನ್ನುವುದನ್ನು ಮರೆಯುವ ನಾವು, ಮರಗಳಿಗೆ ಚಿತ್ರ ಹಿಂಸೆ ಕೊಡುವುದು ಅಮಾನವೀಯ ವರ್ತನೆ ತಾನೇ? ಇನ್ನುಮುಂದೆ, ಎಲ್ಲಾದರೂ ಮರಗಳಿಗೆ ಮೊಳೆ ಹೊಡೆಯುವವರು ಕಂಡರೆ ಅವರನ್ನು ಪ್ರಶ್ನಿಸಿ, ತಡೆಯಿರಿ ಅವರ ವಿರುದ್ಧ ದೂರು ನೀಡಿ.

ಕನ್ನಡದ ಆಸ್ತಿ ಎನ್ನಿಸಿಕೊಂಡಿದ್ದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು, ಬೆಂಗಳೂರಿನ ಗವೀಪುರಂನ ತಮ್ಮ ಮನೆಯಿಂದ ಗಾಂಧಿ ಬಜಾರಿಗೆ ನಡೆದು ಬರುವಾಗ, ವರ್ಷದ ಎಲ್ಲಾ ದಿನಗಳಲ್ಲೂ ತಲೆ ಮೇಲೆ ಕೊಡೆ ಹಿಡಿದೇ ಬರುತ್ತಿದ್ದರಂತೆ. ಏಕೆ ಸ್ವಾಮಿ ಹೀಗೆ ಎಂದು ಯಾರೋ ಕೇಳಿದಾಗ, ಇದು ಗಾಂಧಿ ಬಜಾರಿನ ಮರಗಳ ಮೇಲಿನಿಂದ ಬೀಳುವ ‘ಪಕ್ಷಿ ಪಾತ’ ತಪ್ಪಿಸಿಕೊಳ್ಳುವ ಉಪಾಯ ಎಂದು ಹೇಳಿದ್ದರಂತೆ. ಹಕ್ಕಿಗಳ ಹಿಕ್ಕೆ ತಪ್ಪಿಸಿಕೊಳ್ಳಲು ಆ ಹಿರಿಯರು ಮಾಡಿದ ಉಪಾಯ ಹೇಗಿದೆ?  ಕಾರುಗಳ ಮೇಲೆ ಹಕ್ಕಿಗಳ ಹಿಕ್ಕೆ ಬೀಳದಂತೆ ತಡೆಯಲು ಲಂಡನ್ ನಗರದ ಶ್ರೀಮಂತರು ಮಾಡಿದ ಉಪಾಯ ಹೇಗಿದೆ? ನೀವೇ ಯೋಚಿಸಿ…ಸಂಬಂಧಿತ ಟ್ಯಾಗ್ಗಳು

anti bird london ಪ್ರಕೃತಿ ಐಶಾರಾಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ