ಸೂಸೈಡ್ ಮೆಷಿನ್…!

suicide machine

08-12-2017 640

ನಾವು ಆಗೊಮ್ಮೆ ಈಗೊಮ್ಮೆ ಇಚ್ಛಾ ಮರಣ ಅಥವ ದಯಾ ಮರಣ ಅನ್ನೋ ಪರಿಕಲ್ಪನೆ ಅಥವ ವಿಚಾರದ ಬಗ್ಗೆ ಕೇಳ್ತಿರ್ತೀವಿ. ‘ನಾನು ಗುಣವಾಗದ ಖಾಯಿಲೆಯಿಂದ ಬಳಲುತ್ತಿದ್ದೇನೆ, ನನಗೆ ದಯಾಮರಣಕ್ಕೆ ಅವಕಾಶ ನೀಡಿ’ ಎಂಬ ಪ್ರಕರಣಗಳು ಕೋರ್ಟಿನ ಮುಂದೆ ಬಂದದ್ದೂ ಇದೆ. ಆದರೆ, ಭಾರತದಲ್ಲಂತೂ ಇಂಥದ್ದಕ್ಕೆ ಅವಕಾಶ ಇಲ್ಲ. ಹೀಗಿದ್ರೂ ಕೂಡ, ಆಸ್ಟ್ರೇಲಿಯದ ಒಬ್ಬ ಡಾಕ್ಟರ್, ನೋವಿಲ್ಲದೆ ಸಾವು ತರುವ ಒಂದು ಯಂತ್ರ ನಿರ್ಮಿಸಿದ್ದಾನಂತೆ. ಅಂತರಿಕ್ಷ ನೌಕೆ ಹಾಗೆ ಕಾಣುವ ಈ ಯಂತ್ರ, ಸಾಯುವ ಇಚ್ಛೆಯುಳ್ಳವರನ್ನು ಶಾಂತಿಯಿಂದ ಪರಲೋಕಕ್ಕೆ ಕರೆದುಕೊಂಡು ಹೋಗುತ್ತದಂತೆ. ಇದು, ನಮ್ಮ ನಿಮ್ಮ ಊರಿನ ಕೈಲಾಸ ರಥ, ವೈಕುಂಠ ರಥಗಳ ರೀತಿಯಲ್ಲಿ, ಶವವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುವ ವಾಹನ ಅಲ್ಲ. ಇದು, ವ್ಯಕ್ತಿ ಬದುಕಿದ್ದಾಗಲೇ ಅವನನ್ನು ಈ ಯಂತ್ರದಲ್ಲಿ ಕೂರಿಸಿ ಸುಖವಾಗಿ ಪ್ರಾಣತ್ಯಾಗ ಮಾಡಲು ನೆರವಾಗುವ ವಾಹನ. ಸುಮಾರು 75 ಸಾವಿರ ರೂಪಾಯಿಗಳ ವೆಚ್ಚ ತಗುಲುವ ಸಾರ್ಕೊ ಎಂಬ ಹೆಸರಿನ ಈ ಯಂತ್ರವನ್ನು, ಇತ್ತೀಚಿನ ಆಧುನಿಕ 3 ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ಜಗತ್ತಿನ ಯಾವುದೇ ಕಡೆ ಬೇಕಾದರೂ ಸಿದ್ಧಪಡಿಸಿಕೊಳ್ಳಬಹುದಂತೆ. ಈ ಯಂತ್ರದಲ್ಲಿ ಕುಳಿತು, ಅಲ್ಲಿರುವ ಒಂದು ಗುಂಡಿ ಒತ್ತಿದರೆ ಸಾಕು, ಅದು ನಿಮ್ಮನ್ನು ಸುಖವಾಗಿ ಪರಲೋಕಕ್ಕೆ ಕರೆದೊಯ್ಯುತ್ತದಂತೆ.  ಸಾರ್ಕೊ ಅನ್ನುವ ಈ ಪರಲೋಕ ವಾಹನದಲ್ಲಿ, ದ್ರವರೂಪದ ನೈಟ್ರೊಜನ್ ಇರುವ ಡಬ್ಬಿಗಳು ಮತ್ತು ಆರಾಮವಾಗಿ ಕುಳಿತುಕೊಳ್ಳುವ ಆಸನ ಇರುತ್ತದೆ. ಅದರ ಎದುರಿಗೆ, ಒಂದು ಬಟನ್ ಇರುತ್ತದೆ. ಸಾಯಬೇಕು ಎಂದು ಅನ್ನಿಸುವ ಯಾರಾದರೂ, ಆನ್‌ಲೈನ್‌ ನಲ್ಲಿ ನಡೆಸುವ ಒಂದು ಮಾನಸಿಕ ಪರೀಕ್ಷೆಯಲ್ಲಿ ಪಾಸಾಗಬೇಕಂತೆ, ಆ ಬಳಿಕ ಅವರಿಗೆ, ಈ ಡೆತ್ ಮೆಷಿನ್ ಪ್ರವೇಶಿಸಲು ಅವಕಾಶ ನೀಡುವ ಪಿನ್ ಕೋಡ್ ನೀಡಲಾಗುತ್ತದಂತೆ. ಆ ಯಂತ್ರವನ್ನು ಪ್ರವೇಶಿಸುವ ಮೊದಲು, ಮತ್ತೊಮ್ಮೆ ‘ನೀವು ಇದರ ಒಳಗೆ ಹೋದ ತಕ್ಷಣವೇ ಸಾಯಲು ಇಷ್ಟಪಡುತ್ತೀರ?’ ಎಂದು ಆ ವ್ಯಕ್ತಿಯನ್ನು ಕೇಳಲಾಗುತ್ತದಂತೆ. ಅವರು ಅದಕ್ಕೆ ಒಪ್ಪಿಗೆ ನೀಡಿ, ಯಂತ್ರದ ಒಳಗೆ ಪ್ರವೇಶಿಸಿ ಅಲ್ಲಿರುವ ಗುಂಡಿ ಒತ್ತುತ್ತಿದ್ದಂತೆ, ಅದರ ತುಂಬೆಲ್ಲ ನೈಟ್ರೋಜನ್ ಅನಿಲ ತುಂಬಿಕೊಳ್ಳುತ್ತದೆ. ಒಂದೇ ನಿಮಿಷದಲ್ಲಿ ಆಮ್ಲಜನಕವೇ ಇಲ್ಲದಂತಾಗಿ ಪ್ರಜ್ಞೆ ತಪ್ಪುತ್ತದೆ, ಬಳಿಕ ಮೆದುಳಿಗೆ ಆಮ್ಲ ಜನಕದ ಪೂರೈಕೆ ತಪ್ಪಿಹೋಗಿ, ವ್ಯಕ್ತಿ ಯಾವುದೇ ರೀತಿ ನೋವಿಲ್ಲದೆ ಸಾವನಪ್ಪುತ್ತಾನಂತೆ.

ಆ ವ್ಯಕ್ತಿ ಸತ್ತ ಬಳಿಕ, ಇದೇ ಯಂತ್ರವನ್ನು ಶವಪೆಟ್ಟಿಗೆಯಾಗಿಯೂ ಪರಿವರ್ತಿಸಿಕೊಳ್ಳಬಹುದಂತೆ. ಆದರೆ, ಡಾಕ್ಟರ್ ಡೆತ್ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಫಿಲಿಪ್ ನಿಷ್ಕೆ ಎಂಬ ವೈದ್ಯ ಕಂಡುಹಿಡಿದಿರುವ ಈ ಯಂತ್ರದ ಬಗ್ಗೆ ವೈದ್ಯಕೀಯ ಸಮುದಾಯವೇ ಅಸಮಾಧಾನ ವ್ಯಕ್ತಪಡಿಸಿದೆ. ಈ ಯಂತ್ರ, ಆತ್ಮಹತ್ಯೆ ಅನ್ನುವುದನ್ನು ಮೋಹಕ ಮತ್ತು ಸಾಮಾನ್ಯವೆಂಬಂತೆ ಬಿಂಬಿಸುತ್ತದೆ  ಎಂಬ ಟೀಕೆಗಳು ಕೇಳಿಬಂದಿವೆ. ಹೀಗಿದ್ದರೂ ಕೂಡ, ನೆದರ್‌ಲೆಂಡ್, ಬೆಲ್ಜಿಯಮ್, ಕೆನಡ, ಕೊಲಂಬಿಯ ಇತ್ಯಾದಿ ಹಲವು ದೇಶಗಳು ಈಗಾಗಲೇ Euthanasia ಅಥವ ದಯಾಮರಣವನ್ನು ಕಾನೂನು ಬದ್ಧಗೊಳಿಸಿವೆ. ಮುಂದೊಂದುದಿನ ಭಾರತದಲ್ಲೂ ಇಂಥ ಅವಕಾಶಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ಮತ್ತು ಸತ್ಯಾಗ್ರಹಗಳು ನಡೆಯಬಹುದು. ಒಂದು ವೇಳೆ, ನಮ್ಮ ದೇಶದಲ್ಲೂ ದಯಾಮರಣಕ್ಕೆ ಅವಕಾಶ ಸಿಕ್ಕಿದರೆ ಈ ಡಾ.ಡೆತ್‌ ನಿರ್ಮಿಸಿರುವ ಪರಲೋಕ ಯಂತ್ರ ಬೇಕಾಗಬಹುದೇನೋ.ಸಂಬಂಧಿತ ಟ್ಯಾಗ್ಗಳು

suicide Machine ಡಾಕ್ಟರ್ ಡೆತ್ ಶವಪೆಟ್ಟಿಗೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ