ಪ್ರೇಮ ಹೆಚ್ಚಿಸಿದ ಹೊಗೆ...!

‘Viagra village causing ’excitement’

07-12-2017 378

ಅಬ್ಬಾ ಹೊಗೆ, ಧೂಳು, ನಮ್ಮ ಊರಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ, ನಾವು ಉಸಿರಾಡೋ ಗಾಳಿ ಸರಿ ಇಲ್ಲ ಇತ್ಯಾದಿ ಮಾತುಗಳನ್ನೇ ಕೇಳಿ ಕೇಳಿ ಬೇಸರ ಆಗಿದೆ ತಾನೇ? ಹಾಗಿದ್ರೆ, ಈ ಊರಿನ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಿ. ದ್ವೀಪ ದೇಶ ಐರ್‌ಲೆಂಡ್ ನ ರಿಂಗಸ್‌ಕಿಡ್ಡಿ ಅನ್ನೋ ಈ ಊರಲ್ಲೂ ಹೊಗೆಯದ್ದೇ ಪ್ರಾಬ್ಲಮ್ಮು. ಅದ್ರೆ, ಇದು ಅಂತಿಂಥ ಹೊಗೆ ಅಲ್ಲ ಬಿಡಿ, ಇದೊಂಥರ ಪ್ರೇಮದ ಅಲೆ ಎಬ್ಬಿಸೋ ಹೊಗೆ. ಇದೇನ್ರೀ ಹೀಗ್ ಹೇಳ್ತೀರಾ? ಪ್ರೇಮಕ್ಕೂ ಹೊಗೆಗೂ ಏನ್ರೀ ಸಂಬಂಧ ಅಂತೀರಾ? ಅಲ್ಲೇ ಸ್ವಾಮಿ ಇರೋದು ಪಾಯಿಂಟು. ರಿಂಗಸ್‌ಕಿಡ್ಡಿ ಅನ್ನೊ ಈ ಊರಿನ ಗಾಳಿಯಲ್ಲಿ ಸೇರಿಕೊಂಡಿರೋ ಹೊಗೆ, ಸದಾ ಶಿವನಿಗೆ ಅದೇ ಧ್ಯಾನ ಅನ್ನೋ ಹಾಗೇ, ಆ ಊರಿನ ಜನ, ಇಡೀ ದಿನ ಪ್ರೇಮಿಸೋದ್ರ ಬಗ್ಗೆನೇ ಯೋಚನೆ ಮಾಡೋ ಹಾಗೆ ಮಾಡ್ತಿದೆಯಂತೆ. ಇದೆಂಥ ಪ್ರೇಮದ ಹೊಗೆ? ಯಾರು ಹಾಕಿದ್ದು ಇದನ್ನಾ ಅಂತಿದ್ದೀರಾ? ಇದು, ಆ ಊರಿನ ಒಂದು ಕಾರ್ಖಾನೆಯಿಂದ ಬರುತ್ತಿರೋ ಹೊಗೆ. ಹೌದು, ರಿಂಗಸ್‌ಕಿಡ್ಡಿಯಲ್ಲಿ, ಪ್ರಖ್ಯಾತ ಔಷಧ ಕಂಪನಿ ಫೈಜರ್ ನ ಒಂದು ಫ್ಯಾಕ್ಟರಿ ಇದೆ.  ಆ ಫ್ಯಾಕ್ಟರಿಯಿಂದ ಬರೋ ಹೊಗೆ, ಇದೀಗ ಆ ಊರಿನ ಗಂಡಸರಿಗೆ, ಹೆಂಗಸರಿಗೆ ದೊಡ್ಡ ಫಜೀತಿ ತಂದೊಡ್ಡಿದೆಯಂತೆ. ಎಂಥ ಫಜೀತಿ ಅಂದ್ರೆ, ಆ ಫ್ಯಾಕ್ಟರಿಯಿಂದ ಬರೋ ಹೊಗೆ ಮೂಗಿಗೆ ಸೋಕಿದರೆ ಸಾಕು, ಅಲ್ಲಿನ ಗಂಡಸರಲ್ಲಿ ದಿಢೀರ್ ಅಂತ ಪುರುಷತ್ವ ಕೆರಳಿಬಿಡುತ್ತಂತೆ, ಮಹಿಳೆಯರೂ ಕೂಡ ಹೆಂಗೆಂಗೋ ಒಂಥರಾ ಆಡೋಕ್ಕೆ ಶುರುಮಾಡ್ತಾರಂತೆ.

ಇದು ಏಕೆ ಹೀಗೆ ಅಂದ್ರಾ? ಸ್ವಾಮಿ, ಆ ಊರಿನಲ್ಲಿರೋ ಫೈಜರ್ ಕಂಪನಿ ಫ್ಯಾಕ್ಟರಿಯಲ್ಲಿ ವಯಾಗ್ರ ತಯಾರು ಮಾಡ್ತಾರಂತೆ, ಅದೇ ಸ್ವಾಮಿ, ಪುರುಷರಲ್ಲಿನ ನಿಮಿರು ದೌರ್ಬಲ್ಯ ನಿವಾರಿಸೋ ಜಗತ್ ಪ್ರಸಿದ್ಧ ಮಾತ್ರೆ. ಹೀಗಾಗಿ, ಆ ವಯಾಗ್ರ ಫ್ಯಾಕ್ಟರಿಯಿಂದ ಬರೋ ಹೊಗೆ ಕುಡಿದ ಜನರೆಲ್ಲ, ಕಾಮದೇವನ ಹೂ ಬಾಣ ತಗುಲಿದೋರ ಥರಾ ಆಡೋಕ್ಕೆ ಶುರುಮಾಡ್ತಾರಂತೆ. ಇದು ಇಷ್ಟಕ್ಕೇ ನಿಂತಿಲ್ಲ, ವಯಾಗ್ರ ಫ್ಯಾಕ್ಟರಿ ಹೊಗೆ ಕುಡಿದ, ಆ ಊರಿನ ಬೌಬೌ ಗಳೂ ಕೂಡ ಭಾರಿ ಉನ್ಮಾದ, ಉದ್ರೇಕ ತೋರಿಸುತ್ತಿವೆಯಂತೆ. ಸರಿ, ಇದೆಲ್ಲ ಆಗ್ತಿರೋದ್ರಿಂದ ಏನ್ ಸಮಸ್ಯೆ ಅಂದ್ರಾ? ಏನೂ ಸಮಸ್ಯೆ ಇಲ್ಲ, ಆ ಊರಿನ ಜನ, ಇದನ್ನೆಲ್ಲ ಎಂಜಾಯ್ ಮಾಡ್ತಿದ್ದಾರೆಯೇ ಹೊರತು, ಹಿಂಗೆಲ್ಲಾ ಆಗೋದ್ರಿಂದ ನಮಗೆ ತೊಂದ್ರೆ ಆಗ್ತಿದೆ ಅಂತ ಕಂಪ್ಲೇಂಟ್ ಏನೂ ಮಾಡ್ತಿಲ್ಲ. ಈ ಊರಿನಲ್ಲಿ ಸುಳಿಯೋ ಪ್ರೇಮದ ಹೊಗೆ ಬಗ್ಗೆ ಸುದ್ದಿ ಹಬ್ಬಿದ ಮೇಲೆ, ಅಕ್ಕ ಪಕ್ಕದ ಸ್ಥಳಗಳಿಂದಲೂ ಜನ ಕುತೂಹಲಕ್ಕಾಗಿ ಈ ಊರಿಗೆ ಬರ್ತಾರಂತೆ, ಆದ್ರೆ, ಹಾಗೆ ಬಂದವರು ಅಲ್ಲಿಂದ ವಾಪಸ್ ಹೋಗೋ ಮನಸ್ಸೇ ಮಾಡ್ತಿಲ್ವಂತೆ, ಅದು ಸಮಸ್ಯೆ.

ಇದೆಲ್ಲ ಜನ ಹೇಳೋ ಮಾತು, ಆದ್ರೆ, ಫೈಜರ್ ಕಂಪನಿ ಅವರು ಮಾತ್ರ, ‘ಆ ಊರಿನ ಜನರಿಗೆ ಹೀಗೆಲ್ಲಾ ಆಗ್ತಿದೆ ಅನ್ನೋ ವಿಚಾರವನ್ನು, ಭಾರಿ ಉತ್ಪ್ರೇಕ್ಷೆ ಮಾಡಿ ಹೇಳಲಾಗ್ತಿದೆ ಅಷ್ಚೇ, ನಮ್ಮ ಫ್ಯಾಕ್ಟರಿಯಿಂದ ಬರೋ ಹೊಗೆ, ಆ ಊರಿನ ಜನರ ಮೇಲಾಗಲಿ ಪರಿಸರದ ಮೇಲಾಗಲಿ ಯಾವುದೇ ರೀತಿ ಪರಿಣಾಮ ಬೀರದಹಾಗೆ ನಾವು ಎಚ್ಚರಿಕೆ ವಹಿಸಿದ್ದೇವೆ’ ಅಂತ ಹೇಳಿಕೆ ನೀಡಿದ್ದಾರೆ. ಅವರೇನಾದ್ರೂ ಹೇಳಿಕೊಳ್ಳಲಿ ಬಿಡಿ,  ಆ ಊರಿನ ಜನ ಮಾತ್ರ ತಮಗೆ ಪುಕ್ಕಟ್ಟೆಯಾಗಿ ಸಿಗ್ತಿರೋ ಪ್ರೇಮದ ಹೊಗೆ ಬಗ್ಗೆ, ಅದರ ಜೊತೆಗೆ ವಯಾಗ್ರ ವಿಲೇಜ್ ಅನ್ನಿಸಿಕೊಂಡಿರೋ ತಮ್ಮ ಊರಿಗೆ ಪುಕ್ಕಟ್ಟೆ ಪ್ರಚಾರ ಸಿಗ್ತಿರೋದ್ರ ಬಗ್ಗೆ ತುಂಬಾ ಖುಷಿಯಾಗಿದ್ದಾರಂತೆ. ಏನಂದ್ರಿ, ಈ ಊರಿಗೆ ಹೇಗೆ ಹೋಗೋದು ಅಂದ್ರಾ? ಹುಡುಕಿ ಸ್ವಾಮಿ, ಇದ್ದೇ ಇದೆಯಲ್ಲ ಗೂಗಲ್ಲು.ಸಂಬಂಧಿತ ಟ್ಯಾಗ್ಗಳು

Viagra village Ringaskiddy ಪ್ರಖ್ಯಾತ ಔಷಧ ವಯಾಗ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ