ಸ್ಮಾರ್ಟ್‌ಫೋನ್ ನಿಂದ ಆರೋಗ್ಯ ಡೌನ್… 

Smartphone is Ruining Your Health

05-12-2017 464

ನಿಮ್ಮ ಆರೋಗ್ಯ ಹಾಳಾಗಲು ಅನೇಕ ಕಾರಣಗಳಿರಬಹುದು, ಅವುಗಳಲ್ಲಿ ಸ್ಮಾರ್ಟ್‌ಫೋನ್‌ ಕೂಡ ಒಂದು ಅಂತ ಅಂದ್ರೆ, ನೀವು ನಂಬುವುದು ಕಷ್ಟ, ಆದರೆ, ಆ ಮಾತು ಸತ್ಯ. ಸ್ಮಾರ್ಟ್‌ಫೋನ್‌ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ವಿಚಾರ ಸಾಕಷ್ಟು ವಿವಾದಾತ್ಮಕ, ವಿಪರೀತ ಅನ್ನುವಷ್ಟರಮಟ್ಟಿಗೆ ಫೋನ್ ಬಳಕೆ ಮಾಡುವಂಥವರು ಮಾತ್ರ ಆ ಬಗ್ಗೆ ತಲೆಕೆಡಿಸಿಕೊಳ್ಳಬೇಕೇ ಹೊರತು ಸಾಮಾನ್ಯ ರೀತಿಯಲ್ಲಿ ಬಳಸುವವರು ಚಿಂತೆಮಾಡುವ ಅಗತ್ಯವಿಲ್ಲ.

ಆದರೆ, ನಿಮ್ಮ ಸ್ಮಾರ್ಟ್ ಫೋನ್, ಇತರೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ಇಡೀ ದಿನ ಸ್ಮಾರ್ಟ್‌ಫೋನ್ ಅನ್ನು ಪ್ಯಾಂಟ್ ಜೇಬಿನಲ್ಲೇ ಇಟ್ಟುಕೊಂಡಿರುವುದು ಪುರುಷರಲ್ಲಿ ವೀರ್ಯಾಣುಗಳ ನಾಶಕ್ಕೆ ಕಾರಣವಾಗಬಹುದು. ಅಮೆರಿಕದ ಕ್ಲೀವ್ ಲ್ಯಾಂಡ್ ಕ್ಲಿನಿಕ್ ನವರು, ದೊಡ್ಡ ಮಟ್ಟದ ಅಧ್ಯಯನ ನಡೆಸಿ ಈ ವಿಚಾರ ಖಚಿತ ಪಡಿಸಿದ್ದಾರೆ. ಹೀಗಾಗಿ, ಒಂದೇ ಸಮನೆ, ನಿಮ್ಮ ಫೋನ್ ಅನ್ನು ಪ್ಯಾಂಟ್ ಜೇಬಿನಲ್ಲಿಟ್ಟುಕೊಳ್ಳಬೇಡಿ. ಒಂದು ವೇಳೆ, ನೀವು ಇಯರ್ ಫೋನ್ ಬಳಸುತ್ತಿದ್ದರೆ, ಆ ಸಮಯದಲ್ಲಿ ಫೋನ್ ಅನ್ನು ತೊಡೆ ಮೇಲೆ ಇಟ್ಟುಕೊಳ್ಳುವುದರ ಬದಲು, ನಿಮ್ಮ ಮುಂದಿರುವ ಟೇಬಲ್ ಮೇಲಿಡುವುದು ಒಳ್ಳೆಯದು.

ಪ್ರತಿದಿನ ನಿಮ್ಮ ಸ್ಮಾರ್ಟ್‌ಫೋನ್‌, ಸೆಲೆಬ್ರಿಟಿಗಳ ರಂಗಿನ ಬದುಕು, ಯಶಸ್ವಿ ಜನರ ಸಾಧನೆಯ ಕಥೆಗಳನ್ನು ನಿಮ್ಮ ಮುಂದಿಡುತ್ತಾ ಹೋಗುತ್ತದೆ. ಇದನ್ನೆಲ್ಲ ನೋಡುತ್ತಾ ಹೋದಂತೆ ನಿಮ್ಮ ಬದುಕು ಎಷ್ಟು ನಿರರ್ಥಕ ಎಂಬ ಭಾವನೆ ಮೂಡಿ, ನಿಮ್ಮಲ್ಲಿನ ಆತ್ಮ ಗೌರವಕ್ಕೆ ಧಕ್ಕೆ ಉಂಟಾಗಬಹುದು. ಈ ವಿಚಾರದಲ್ಲೂ ನೀವು ಸಮಾಧಾನವಾಗಿ ಚಿಂತಿಸಿ, ನಿಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡಬೇಕಾಗುತ್ತದೆ.

ಹಿಂದೆ, ಎಲ್ಲರ ಮನೆಯಲ್ಲೂ  ಭಾರತ್ ಸಂಚಾರ್ ನಿಗಮ್ ಅಥವ ಬಿಎಸ್ಎನ್‌ಎಲ್ ಲ್ಯಾಂಡ್ ಲೈನ್ ಫೋನ್ ಗಳಿದ್ದ ದಿನಗಳನ್ನು ನೆನಪಿಸಿಕೊಳ್ಳಿ. ಆ ದಿನಗಳಲ್ಲಿ ನಿಮಗೆ ಎಷ್ಟೊಂದು ಜನರ ಫೋನ್ ನಂಬರ್ ಗೊತ್ತಿತ್ತು. ಈಗ ಮನೆಯವರ ಫೋನ್ ನಂಬರ್ ಕೂಡ ನೆನಪಿನಲ್ಲಿರುವುದಿಲ್ಲ. ಏಕೆಂದರೆ ಎಲ್ಲವೂ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸ್ಟೋರ್ ಆಗಿದೆ, ತಲೆಯಲ್ಲಿಟ್ಟುಕೊಳ್ಳುವ ತಾಪತ್ರಯ ಇಲ್ಲ. ಆದರೆ, ಇದು ನಿಮ್ಮ ಸ್ಮರಣ ಶಕ್ತಿಯ ಬಳಕೆಗೆ ಅವಕಾಶವೇ ಇಲ್ಲದಂತೆ ಮಾಡಿ, ನಿಮ್ಮ ಮೆಮೊರಿ ತುಕ್ಕುಹಿಡಿಯುವಂತೆ ಮಾಡಬಹುದು.

ನೀವು ಕೊನೆಬಾರಿ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಸ್ವಚ್ಛಗೊಳಿಸಿದ್ದು ಯಾವಾಗ ಹೇಳಿ? ಒಂದು  ಬಾರಿಯೂ ಆ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲವೇ? ಸರಿಹೋಯ್ತು ಬಿಡಿ. ನಿಮ್ಮ ಸ್ಮಾರ್ಟ್ ಫೋನ್ ಅನ್ನುವುದು, ಕೀಟಾಣುಗಳ ಹಾಟ್ ಸ್ಪಾಟ್ ಆಗಿರುತ್ತದೆ. ನೀವು ಏನೆಲ್ಲವನ್ನೂ ಮುಟ್ಟುತ್ತೀರೋ ಅದೆಲ್ಲದರ ಸ್ಯಾಂಪಲ್ ನಿಮ್ಮ ಫೋನ್ ನ ಸ್ಕ್ರೀನ್ ಮತ್ತು ಇತರೆ ಭಾಗಗಳಲ್ಲಿ ಸಿಗುತ್ತದೆ. ಒಂದು ಸಂಶೋಧನೆ ಪ್ರಕಾರ, ಶೌಚಾಲಯದ ಸೀಟ್‌ ನಲ್ಲಿ ಇರಬಹುದಾದಕ್ಕಿಂತ 10 ಪಟ್ಟು ಹೆಚ್ಚಿನ ಬ್ಯಾಕ್ಟೀರಿಯಗಳು ನಿಮ್ಮ ಫೋನ್ ನಲ್ಲಿರುತ್ತವೆ.

ಸ್ಮಾರ್ಟ್ ಫೋನ್ ಗಳು ನಿಮಗೆ ಮಾತ್ರವಲ್ಲ, ನಿಮ್ಮ ಮಕ್ಕಳಿಗೂ ಸಮಸ್ಯೆ ತಂದೊಡ್ಡಬಹುದು. ಒಂದುಲಕ್ಷ ತಾಯಂದಿರು ಮತ್ತು 30 ಸಾವಿರ ಮಕ್ಕಳಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ಯಾರು ಗರ್ಭಿಣಿಯರಾಗಿದ್ದಾಗ ಮತ್ತು ಮಗು ಹುಟ್ಟಿದ್ದ ನಂತರದ ದಿನಗಳಲ್ಲಿ ಹೆಚ್ಚುಹೊತ್ತು ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದರೋ ಅಂಥವರ ಮಕ್ಕಳು, ವರ್ತನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಶೇ.50ಕ್ಕಿಂತ ಹೆಚ್ಚಾಗಿರುತ್ತದಂತೆ.

ಒಂದೇ ಸಮನೆ ಸ್ಮಾರ್ಟ್ ಫೋನ್ ನಲ್ಲಿ ಕಣ್ಣು ತೂರಿಸಿಕೊಂಡೇ ಇರುವುದು ನಿಮ್ಮ ಕಣ್ಣುಗಳನ್ನು ದಣಿಯುವಂತೆ ಮಾಡಿ, ವಿವಿಧ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರ ಜೊತೆಗೆ, ಬೆನ್ನು ನೋವು ಮತ್ತು ಅದಕ್ಕಿಂತ ಹೆಚ್ಚಾಗಿ ಕುತ್ತಿಗೆ ನೋವಿನ ಸಮಸ್ಯೆ ತಂದೊಡ್ಡುತ್ತದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ಸದಾಕಾಲ ಸ್ಮಾರ್ಟ್ ಫೋನ್ ಜೊತೆಯಲ್ಲಿಟ್ಟುಕೊಂಡು ಅಭ್ಯಾಸ ಆಗಿರುವವರಲ್ಲಿ ಅದಿಲ್ಲದೆ ಒಂದು ಕ್ಷಣವೂ ಇರಲು ಸಾಧ್ಯವಾಗದಂಥ ಅವಲಂಬನೆ ಬೆಳೆದುಬಿಟ್ಟಿರುತ್ತದೆ. ಒಂದು ಕ್ಷಣ ಅವರಬಳಿ ಫೋನ್ ಇಲ್ಲವೆಂದರೂ ಕೂಡ ಆತಂಕಕ್ಕೊಳಗಾಗುತ್ತಾರೆ, ಚಡಪಡಿಸುತ್ತಾರೆ. ಫೋನ್ ಇಲ್ಲದಿದ್ದರೆ ನಾವು ಸುರಕ್ಷಿತರೇ ಅಲ್ಲವೇನೋ ಅನ್ನುವ ಸುಳ್ಳುಭಾವನೆ ಅನುಭವಿಸುತ್ತಾರೆ. ಇದನ್ನು Nomophobia ಎಂದು ಕರೆಯುತ್ತಾರೆ. ಈ ರೀತಿಯ ಅವಲಂಬನೆ ಮನುಷ್ಯರನ್ನು ಅಂಜುಬುರುಕನ್ನಾಗಿಸುವುದರ ಜೊತೆಗೆ ಖಿನ್ನತೆಯನ್ನೂ ಮೂಡಿಸಬಹುದು. ಹೀಗಾಗಿ, ಸ್ಮಾರ್ಟ್‌ಫೋನ್ ಅನ್ನುವುದನ್ನು ನಿಮ್ಮ ಅಸಿಸ್ಟೆಂಟ್ ರೀತಿ ಬಳಸಿಕೊಳ್ಳಬೇಕೇ ಹೊರತು, ಅದನ್ನೇ ನಿಮ್ಮ ಬಾಸ್ ಆಗಿಸಿಕೊಳ್ಳಬಾರದು. 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ