ಸಚಿನ್ ‘ನಂ.10’ ಜೆರ್ಸಿಗೆ ನಿವೃತ್ತಿ…

29-11-2017 531
ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ 4 ವರ್ಷಗಳ ಬಳಿಕ, ಸಚಿನ್ ಧರಿಸುತ್ತಿದ್ದ 10ನೇ ನಂಬರ್ ಜೆರ್ಸಿಯನ್ನು ಬಿಸಿಸಿಐ ನಿವೃತ್ತಿಗೊಳಿಸಿದೆ. ಹೌದು, ಇನ್ನು ಮುಂದೆ ಟೀಮ್ ಇಂಡಿಯದ ಯಾವುದೇ ಆಟಗಾರ ಜೆರ್ಸಿ ನಂಬರ್ 10ನ್ನು ಧರಿಸುವಂತಿಲ್ಲ.
ಸಚಿನ್ ತೆಂಡುಲ್ಕರ್ ಮತ್ತು ಅವರು ಧರಿಸುತ್ತಿದ್ದ ನಂ.10 ಜೆರ್ಸಿ, ಕ್ರಿಕೆಟ್ ಪ್ರೇಮಿಗಳ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿತ್ತು. ಸಚಿನ್ ವಿದಾಯ ಹೇಳಿದ ಬಳಿಕ ಇತ್ತೀಚಿನವರೆಗೂ ಟೀಮ್ ಇಂಡಿಯದ ಯಾವುದೇ ಆಟಗಾರ 10ನೇ ನಂಬರ್ ಜೆರ್ಸಿ ಧರಿಸಿರಲಿಲ್ಲ. ಆದರೆ, ಕಳೆದ ಆಗಸ್ಟ್ ನಲ್ಲಿ ಕೊಲೊಂಬೊದಲ್ಲಿ ಶ್ರೀಲಂಕಾ ವಿರುದ್ಧ ಪಾದಾರ್ಪಣೆ ಮಾಡಿದ ಶಾರ್ದೂಲ್ ಥಾಕೂರ್ ನಂ.10 ಜೆರ್ಸಿ ಧರಿಸಿ ಕಣಕ್ಕಿಳಿದಿದ್ದರು. ಇದಕ್ಕೆ ಸಚಿನ್ ಅಭಿಮಾನಿಗಳಿಂದ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಮುಂಬೈನವರೇ ಆಗಿರುವ ಟೀಮ್ ಇಂಡಿಯ ಸದಸ್ಯ ರೋಹಿತ್ ಶರ್ಮ ಕೂಡ ಶಾರ್ದೂಲ್ ಅವರು 10ನೇ ನಂಬರ್ ಜೆರ್ಸಿ ಧರಿಸಿದ್ದನ್ನು ಆಕ್ಷೇಪಿಸಿದ್ದರು. ‘ನಾನು ಸಂಖ್ಯಾ ಶಾಸ್ತ್ರದ ಅನುಸಾರ ಈ ಜೆರ್ಸಿ ಧರಿಸಿದ್ದೆ’ ಎಂದು ಶಾರ್ದೂಲ್ ಸಮಜಾಯಿಷಿ ಕೊಟ್ಟಿದ್ದರು.
ಸಚಿನ್ ಧರಿಸುತ್ತಿದ್ದ ಜೆರ್ಸಿ, ಅನಗತ್ಯ ವಿವಾದ ಸೃಷ್ಟಿಸುತ್ತಿರುವುದರ ಬಗ್ಗೆ ಯೋಚಿಸಿದ ಬಿಸಿಸಿಐ, ಜೆರ್ಸಿ ನಂ.10ನ್ನು ನಿವೃತ್ತಿಗೊಳಿಸಲು ನಿರ್ಧರಿಸಿದೆ. ಆದರೆ, ಐಸಿಸಿ ನಿಯಮಗಳ ಪ್ರಕಾರ ಹಾಗೆ ಮಾಡುವಂತಿಲ್ಲ, ಹೀಗಾಗಿ ಜೆರ್ಸಿ ನಂ.10ನ್ನು ಅನಧಿಕೃತವಾಗಿ ನಿವೃತ್ತಿಗೊಳಿಸಲಾಗಿದೆ.
ಒಂದು ಕಮೆಂಟನ್ನು ಹಾಕಿ