ಮಿಸ್ಸಾಯ್ತು…ಮಿಸ್ ಯೂನಿವರ್ಸ್ ಪಟ್ಟ

Missed...Miss Universe Title

27-11-2017 775

ಇತ್ತೀಚೆಗೆ ಹರಿಯಾಣ ಮೂಲದ ವೈದ್ಯಕೀಯ ವಿದ್ಯಾರ್ಥಿ ಮಾನುಷಿ ಚಿಲ್ಲರ್ ವಿಶ್ವ ಸುಂದರಿ ಕಿರೀಟ ಧರಿಸಿ ಇಡೀ ಜಗತ್ತು ಮತ್ತೊಮ್ಮೆ ಭಾರತದತ್ತ ನೋಡುವಂತೆ ಮಾಡಿದ್ದರು. ಭಾರತದ ಈ ಹೆಣ್ಣುಮಗಳ ಸಾಧನೆಗೆ, ಆಕೆ ಸೌಂದರ್ಯದ ಜೊತೆಜೊತೆಗೆ ತನ್ನ ವ್ಯಕ್ತಿತ್ವವನ್ನು ಬಿಂಬಿಸಿಕೊಂಡ ರೀತಿಗೆ ಎಲ್ಲ ಭಾರತೀಯರು ಮಾರುಹೋಗಿದ್ದರು. ಇದು ಮಿಸ್ ವರ್ಲ್ಡ್‌ ವಿಚಾರ. ಆದರೆ, ಇದೀಗ ಮಿಸ್ ಯೂನಿವರ್ಸ್ ಸ್ಪರ್ಧೆಯೂ ಮುಗಿದಿದೆ. ಅಮೆರಿಕದ ಲಾಸ್ ವೇಗಾಸ್ ನಲ್ಲಿ  ನಡೆದ ಈ ಸ್ಪರ್ಧೆಯಲ್ಲಿ 2017ರ ಮಿಸ್ ದಿವಾ ವಿಜೇತೆ ಶ್ರದ್ಧಾ ಶಶಿಧರ್ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ, ಒಟ್ಟಾರೆ 92 ಸ್ಪರ್ಧಿಗಳು ಭಾಗವಹಿಸಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ಕಡೆಯ 16ರ ಹಂತ ತಲುಪಲು ಶ್ರದ್ಧಾ ಶಶಿಧರ್ ವಿಫಲರಾದರು. ದಕ್ಷಿಣ ಆಫ್ರಿಕದ ಡೆಮಿ ಲೇ ನೆಲ್ ಪೀಟರ್ಸ್ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದರು.

ಮಿಸ್ ಯೂನಿವರ್ಸ್ ಸ್ಪರ್ಧೆಯ ಈಜುಡುಗೆ ಸುತ್ತಿನಲ್ಲಿ ತಮ್ಮ ಅದ್ಭುತ ಮೈಮಾಟ ಪ್ರದರ್ಶಿಸಿದ್ದ ಶ್ರದ್ಧಾ ಎಲ್ಲರನ್ನೂ ದಂಗುಬಡಿಸಿದ್ದರು, ಬಳಿಕ ರಾಷ್ಟ್ರೀಯ ವೇಷ ಭೂಷಣ ಸ್ಪರ್ಧೆಯಲ್ಲಿ ರಾಧೆಯಂತೆ ಉಡುಪು ಧರಿಸಿದ್ದ ಶ್ರದ್ಧಾ ಶಶಿಧರ್, ತೀರ್ಪುಗಾರರ ಮನ ಸೆಳೆದಿದ್ದರು. ಶ್ರದ್ಧಾ ಸಾಧನೆಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ರೂಪದರ್ಶಿ ಆಗಿ ಹೆಸರುಮಾಡಿರುವ ಶ್ರದ್ಧಾ ಚೆನ್ನೈ ಮೂಲದವರು. ಮಹಾರಾಷ್ಟ್ರದ ನಾಸಿಕ್‌ನ ಆರ್ಮಿ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ ಶ್ರದ್ಧಾ, ಮುಂಬೈನ ಸೋಫಿಯ ಕಾಲೇಜಿನಲ್ಲಿ ಓದಿ ಸಮೂಹ ಮಾಧ್ಯಮ ವಿಷಯದಲ್ಲಿ ಪದವಿ ಪಡೆದಿದ್ದಾರೆ.  ಓಟಗಾರ್ತಿ ಮತ್ತು ರಾಷ್ಟ್ರಮಟ್ಟದ ಬ್ಯಾಸ್ಕೆಟ್ ಬಾಲ್ ಆಟಗಾರ್ತಿಯೂ ಆಗಿದ್ದ ಶ್ರದ್ಧಾ, ಶಾಸ್ತ್ರೀಯ ನೃತ್ಯವನ್ನೂ ಕಲಿತಿದ್ದಾರೆ. ಪ್ರವಾಸ ಹೋಗುವುದೆಂದರೆ ಇವರಿಗೆ ತುಂಬಾ ಇಷ್ಟವಂತೆ.  ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಶ್ರದ್ಧಾ, ಹಿಮಾಚಲ ಪ್ರದೇಶದ ಧರ್ಮಶಾಲದಲ್ಲಿರುವ ಟಿಬೆಟ್ ನಿರಾಶ್ರಿತರ ಶಿಬಿರದಲ್ಲಿ ಮಕ್ಕಳಿಗೆ ಪಾಠ ಹೇಳುತ್ತಾರಂತೆ.

ಒಟ್ಟಿನಲ್ಲಿ, 1994 ಮತ್ತು 2000ದಲ್ಲಿ ನಡೆದ ಡಬಲ್ ಧಮಾಕ ರಿಪೀಟ್ ಆಗಬಹುದು ಎಂದು ನಿರೀಕ್ಷಿಸಿದ್ದ ಭಾರತೀಯರಿಗೆ ಒಂದಿಷ್ಟು ನಿರಾಸೆ ಆಗಿರುವುದಂತೂ ಸತ್ಯ. 1994ರಲ್ಲಿ ಸುಷ್ಮಿತಾ ಸೇನ್ ಮಿಸ್ ಯೂನಿವರ್ಸ್ ಕಿರೀಟ ಪಡೆದಿದ್ದರೆ, ಐಶ್ವರ್ಯ ರೈ ಮಿಸ್ ವರ್ಲ್ಡ್ ಕಿರೀಟ ಧರಿಸಿ ಭಾರತೀಯರ ಖುಷಿಯನ್ನು ದ್ವಿಗುಣಗೊಳಿಸಿದ್ದರು. 2000ದಲ್ಲಿ ಲಾರಾ ದತ್ತ ಮಿಸ್ ಯೂನಿವರ್ಸ್ ಆದರೆ, ಪ್ರಿಯಾಂಕ ಚೋಪ್ರ ಮಿಸ್ ವರ್ಲ್ಡ್‌ ಆಗುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದರು. ಆದರೆ, ದುರದೃಷ್ಟವಶಾತ್ ಈ ಬಾರಿ ಅದು ಆಗಲಿಲ್ಲ.

ಇರಲಿ ಬಿಡಿ, ಭಾರತದಲ್ಲಿ ಸುಂದರಿಯರಿಗೇನೂ ಕೊರತೆಯಿಲ್ಲ, ಮುಂದಿನ ಬಾರಿ ನಮ್ಮ ದೇಶದ ಮತ್ತಿಬ್ಬರು, ವಿಶ್ವ ಸುಂದರಿ ಮತ್ತು ಭುವನ ಸುಂದರಿಯಾಗಿ ಆಯ್ಕೆಯಾಗಲಿ ಎಂದು ಈಗಿನಿಂದಲೇ ಕನಸು ಕಾಣುವ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ