ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ನಿಧನ

Senior journalist Rajasekhar Kote died

23-11-2017 567

ಬೆಂಗಳೂರು: ಮೈಸೂರಿನ ಹಿರಿಯ ಪತ್ರಿಕೋದ್ಯಮಿ ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಬೆಂಗಳೂರಿನಲ್ಲಿಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಪತ್ನಿ ಇಬ್ಬರು ಪುತ್ರಿಯರು ಒಬ್ಬ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಹಲವಾರು ಉದಯೋನ್ಮುಖ ಪತ್ರಕರ್ತರಿಗೆ ಅವಕಾಶ, ಪ್ರೊತ್ಸಾಹ ನೀಡಿ ಬೆಳೆಸಿದ ರಾಜಶೇಖರ ಕೋಟಿ ಅವರ ನಿಧನ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ. ರಾಜಶೇಖರ್ ಕೋಟಿ ಅವರು ಪತ್ರಿಕೋದ್ಯಮದಲ್ಲಿ ಏಳು ಬೀಳುಗಳನ್ನ ಕಂಡು ಬೆಳೆದು ಬಂದ ಹಿರಿಯ ಪತ್ರಿಕೋದ್ಯಮಿಯಾಗಿದ್ದಾರೆ.

ಮೂಲತಃ ಗದಗ್ ಜಿಲ್ಲೆ ಹುಯಿಲಗೋಳದವರು. ಜಮೀನ್ದಾರ್ ಕುಟುಂಬದಲ್ಲಿ ಜನಿಸಿದ್ದ ಇವರು, ಗದಗ್ ನಲ್ಲಿ ವಿದ್ಯಾಭ್ಯಾಸ ಮುಗಿಸುತ್ತಾರೆ. ನಂತರ ಅಚ್ಚು ಮೊಳೆ ಸಹಾಯಕರಾಗಿ ಕೆಲಸ ಆರಂಭಿಸುತ್ತಾರೆ. ಶಾಲಾ ದಿನದಿಂದಲೇ ಪತ್ರಿಕೆ ಬಗ್ಗೆ ಆಸಕ್ತಿ ಹೊಂದಿದ್ದ ರಾಜಶೇಖರ್ ಕೋಟಿ ಅವರು ಪಾಟೀಲ್ ಪುಟ್ಟಪ್ಪ ಅವರ ವಿಶ್ವವಾಣಿ ಪತ್ರಿಕೆಗೆ ವರದಿಗಾರಿಕೆ, 2 ವರ್ಷ ಪ್ರಪಂಚ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. 

ನಂತರ 1972ರಲ್ಲಿ ಆಂದೋಲನ ಪತ್ರಿಕೆ ಆರಂಭಿಸುತ್ತಾರೆ. ಯುವಜನರ ವಾರಪತ್ರಿಕೆಯಾಗಿ ಆರಂಭವಾದ ಆಂದೋಲನ ಪತ್ರಿಕೆಗೆ ಕನ್ನಡಪರ ಹೆಸರು ಇಡಲು ಕೋಟಿ ಚಿಂತನೆ ನಡೆಸಿದ್ದರು. ಹೀಗಾಗಿ ಕನ್ನಡದ ಸಾಕಷ್ಟು ಹೆಸರುಗಳನ್ನು ನೋಂದಾಣಿಗೆ ಕಳುಹಿಸಿದ್ದರು. ಆದರೆ ಅಂತಿಮವಾಗಿ ಸಿಕ್ಕಿದ ಹೆಸರು ಆಂದೋಲನ. ಈ ಪತ್ರಿಕೆ ಅವರ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದುಕೊಟ್ಟಿತ್ತು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ