ಉದಯ ಟಿವಿ 2ನೇ ಸ್ಥಾನಕ್ಕೆ….

Kannada News

27-10-2017 1258

ಸತತವಾಗಿ ಹಳಸಲು ಮತ್ತು ಕಳಪೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ವೀಕ್ಷಕರ ಅವಕೃಪೆಗೆ ಪಾತ್ರವಾಗಿ, ಸುಮಾರು 2 ವರ್ಷಗಳ ಕಾಲ ಕನ್ನಡ ಮನರಂಜನಾ ವಾಹಿನಿಗಳ ಪೈಕಿ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಉದಯ ಟಿವಿ ಈ ವಾರ ಚೇತರಿಸಿಕೊಂಡು 2ನೇ ಸ್ಥಾನಕ್ಕೆ ಜಿಗಿದಿದೆ. ಇದು ವೀಕ್ಷಕರಿಗೆ ಆಶ್ಚರ್ಯ ಉಂಟುಮಾಡಿರುವುದರ ಜೊತೆಗೆ, ಉದಯ ಟಿವಿ ಬಳಗದಲ್ಲಿ ಹರ್ಷೋಲ್ಲಾಸವನ್ನೂ ತಂದಿದೆ. ಏನೆಲ್ಲಾ ಪ್ರಯತ್ನವನ್ನು ಮಾಡಿದರೂ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಆಗದೇ ಮುಗ್ಗರಿಸುತ್ತಿದ್ದ ಕನ್ನಡದ ಪ್ರಥಮ ಖಾಸಗಿ ವಾಹಿನಿ ಉದಯ ಟಿವಿ, ಈ ವಾರ 558 ಜಿಆರ್‌ಪಿ ಗಳಿಸಿ 2ನೇ ಸ್ಥಾನಕ್ಕೆ ಏರಿರುವುದು ತಾತ್ಕಾಲಿಕ ಬೆಳವಣಿಗೆ ಇರಬಹುದೇ ಅಥವ ಹೀಗೇ ಮುಂದುವರಿಯುವ ಸಾಧ್ಯತೆಗಳಿವೆಯೇ ಎಂದು ಮಾಧ್ಯಮ ತಜ್ಞರು ಯೋಚಿಸುತ್ತಿದ್ದಾರೆ.

ಉದಯ ಟಿವಿ ಕಳೆದ ವಾರ ಪ್ರಸಾರ ಮಾಡಿದ ‘ರಾಜಕುಮಾರ’ ಸಿನೆಮಾ ಮತ್ತು ಆ ಸಿನೆಮಾದ ಮೇಕಿಂಗ್ ಎಪಿಸೋಡ್‌ ಗಳು ಬಹಳಷ್ಟು ಪಾಯಿಂಟ್‌ಗಳನ್ನು ಗಳಿಸಿ ಉದಯ ಟಿವಿಯ ಟಿಆರ್‌ಪಿಯನ್ನು ಉಬ್ಬಿಸಿವೆ ಎಂದು ಹೇಳಲಾಗುತ್ತಿದೆ.  ಈ ಬೆಳವಣಿಗೆ, ಉದಯ ಟಿವಿಗೆ ಅವಶ್ಯಕವಾಗಿದ್ದ ಉತ್ತೇಜನವನ್ನು ನೀಡಿದ್ದರೂ, ಇದು ಹೀಗೆ ಮುಂದುವರಿಯುತ್ತದೆ ಎಂದು ಹೇಳಲಾಗುವುದಿಲ್ಲ.

ಬರೀ ಸಿನೆಮಾವನ್ನೇ ಆಧರಿಸಿ ಒಂದು ಚಾನಲ್ ನಡೆಸಲಾಗುವುದಿಲ್ಲ, ಅದರೊಂದಿಗೆ ಬೇರೆ ಒಳ್ಳೆಯ ಕಾರ್ಯಕ್ರಮಗಳೂ ಬೇಕು ಎಂಬ ಅರಿವಿನೊಂದಿಗೆ, ಉದಯ ಟಿವಿ ತನ್ನ ಎಲ್ಲಾ ಕಾರ್ಯಕ್ರಮಗಳ ಗುಣಮಟ್ಟ ಹೆಚ್ಚಿಸುವ ಪ್ರಯತ್ನಕ್ಕೆ, ಇನ್ನು ಮುಂದಾದರೂ ಆಸಕ್ತಿ ತೋರಿಸಬೇಕು ಎಂಬುದು ಉದಯ ಟಿವಿ ವೀಕ್ಷಕರ ಆಶಯವಾಗಿದೆ.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ