ಕಲರ್ಸ್ ಕನ್ನಡಕ್ಕೆ ಕುತ್ತಾಗಲಿದೆಯಾ ಕಲರ್ಸ್ ಸೂಪರ್ ?

Kannada News

21-10-2017 1230

ಬಿಗ್ ಬಾಸ್ ಕನ್ನಡ ಈ ಬಾರಿ ಕಲರ್ಸ್ ಸೂಪರ್ ನಲ್ಲಿ ಎಂದು ಬಹಳಷ್ಟು ಪ್ರಚಾರ ನೀಡಿ ಜನರಿಗೆ ಮಾಹಿತಿ ನೀಡಿಯಾಯಿತು. ಕಲರ್ಸ್ ಸೂಪರ್ ಚಾನಲ್ ಯಾವುದು ಎಲ್ಲಿದೆ ಎಂದು ಗೊತ್ತಿಲ್ಲದಿದ್ದವರೂ ಕೂಡ ಹುಡುಕಿಕೊಂಡು ಹೋಗಿ ಅದನ್ನು ಆನ್ ಮಾಡುವಂತೆ ಆಯಿತು. ಅದಲ್ಲದೆ ಬರೀ ಕಲರ್ಸ್ ಕನ್ನಡ ನೋಡುತ್ತಿದ್ದವರಿಗೆ ಕಲರ್ಸ್ ಸೂಪರ್ ಅನ್ನು ಪರಿಚಯಿಸಿಕೊಟ್ಟು ಅಲ್ಲಿ ಬಹಳ ಒಳ್ಳೆಯ ಕಾರ್ಯಕ್ರಮವಾದ ಬಿಗ್ ಬಾಸ್ ಆಡಂಬರದೊಂದಿಗೆ ಬರುತ್ತಿದೆ ಎಂಬ ಆಮಿಷ ಒಡ್ಡಿ ಅಲ್ಲಿಗೆ ಕಳುಹಿಸಿಯಾಗಿದೆ. 

ಸುದೀಪ್ ನ ಜನಪ್ರಿಯತೆ ಎಷ್ಟಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಕನ್ನಡದ ನಂ  ಚಾನಲ್ ಆಗಿರುವ ಕಲರ್ಸ್ ಕನ್ನಡದಲ್ಲಿ ಹೇಳಿದ ಮೇಲೆ ಜನ ಕಲರ್ಸ್ ಸೂಪರ್ ಗೆ ಹೋಗೇ ಹೋಗುತ್ತಾರೆ ಎಂಬ ನಂಬಿಕೆಯೊಂದಿಗೆ ಸೂಪರ್ ನಲ್ಲಿ ಬಿಗ್ ಬಾಸ್ ಅನ್ನು ಈ ಬಾರಿ ಹಾಕಿದ್ದಾರೆ. ಅದಕ್ಕೆ ಕಾರಣ ಇಷ್ಟೇ - ಕಲರ್ಸ್ ಕನ್ನಡ ಎಲ್ಲಾ ಚಾನಲ್ ಗಳಿಗಿಂತ ಹೆಚ್ಚು ಟಿ ಆರ್ ಪಿ ಗಳಿಸಿ ಮೊದಲ ಸ್ಥಾನದಲ್ಲಿರುವಾಗ ಅದೇ ಬಳಗದ ಇನ್ನೊಂದು ಚಾನಲ್ ಅನ್ನು ಮೂರನೆಯ ಅಥವಾ ನಾಲ್ಕನೆಯ ಸ್ಥಾನದಲ್ಲಿರಿಸಿದರೆ ಬಹಳಷ್ಟು ಭಾಗ ಕನ್ನಡದ  ಟಿವಿ ಮಾರುಕಟ್ಟೆಯನ್ನು ಕಬಳಿಸಿದಂತೆಯೇ ಎಂಬ ಲೆಕ್ಕಾಚಾರ. ಆದರೆ ಈಗ ಬಿಗ್ ಬಾಸ್ ಎಲ್ಲದಕ್ಕಿಂತ ದೊಡ್ಡ ಕಾರ್ಯಕ್ರಮ, ಅದನ್ನು ನೋಡಲು ಸೂಪರ್ ಗೆ ಹೋಗಿ ಅಂತ ಜನರಿಗೆ ಹೇಳಿದ ಮೇಲೆ ಜನ ಕಲರ್ಸ್ ಸೂಪರ್ ಕಡೆ ಮುಖ ಮಾಡಿದ್ದಾರೆ. 

ಬಹಳಷ್ಟು ಮಂದಿ ಕಲರ್ಸ್ ಕನ್ನಡದಲ್ಲಿ ಸೀರಿಯಲ್ ನೋಡುತ್ತಿದ್ದವರು ಆ ಸೀರಿಯಲ್ ಗಳನ್ನೂ ಬಿಟ್ಟು ಬಿಗ್ ಬಾಸ್ ನೋಡಲು ಶುರು ಮಾಡಿದ್ದಾರೆ. ಈ ಕಡೆ ಕಲರ್ಸ್ ಕನ್ನಡದ ಅನೇಕ ಸೀರಿಯಲ್ ಗಳೂ ಹಳಿ ತಪ್ಪಿದ ರೈಲಿನಂತಾಗಿ ಯದ್ವಾ ತದ್ವಾ ಓಡುತ್ತಾ ವೀಕ್ಷಕರನ್ನು ಕಳೆದುಕೊಳ್ಳುತ್ತಿವೆ. ಇನ್ನು ಕೆಲವು ಜನಪ್ರಿಯ ಧಾರಾವಾಹಿಗಳು ಒಂದೋ ಮುಗಿವ ಹಂತದಲ್ಲಿವೆ ಇಲ್ಲಾ ಈಗಾಗಲೇ ಸೂಪರ್ ಚಾನಲ್ ಗೆ ಪಲಾಯನ ಮಾಡಿವೆ. ಕಲರ್ಸ್ ಕನ್ನಡ ಎಚ್ ಡಿ ಚಾನಲ್ ನಲ್ಲೂ ಬಿಗ್ ಬಾಸ್ ಪ್ರಸಾರವಾಗುತ್ತಿರುವುದರಿಂದ ಕಲರ್ಸ್ ಕನ್ನಡದ ಮಾಮೂಲಿ ಚಾನಲ್ ಕಳೆಗುಂದಿದಂತೆ ಕಂಡು ಬಂದಿದೆ. 

ಬಿಗ್ ಬಾಸ್ ಗೆ ನೀಡಿರುವ ವಿಪರೀತ ಪ್ರಾಮುಖ್ಯತೆ ಮತ್ತು ಪ್ರಚಾರದ ಕಾರಣದಿಂದಾಗಿ ಕಲರ್ಸ್ ಕನ್ನಡ ಒಂದು ಮಟ್ಟಕ್ಕೆ ಕುಗ್ಗಲಿದೆಯಾ ಮತ್ತು ಅದರ ಟಿ ಆರ್ ಪಿ ತಗ್ಗಲಿದೆಯಾ ಎಂಬ ಲೆಕ್ಕಾಚಾರ ಟಿವಿ ಮಾಧ್ಯಮ ತಜ್ಞರ ಮಧ್ಯೆ ನಡೆಯುತ್ತಿದೆ. ಇದರ ಮಧ್ಯೆ ಬಿಗ್ ಬಾಸ್ ಕೂಡ ಅಷ್ಟೊಂದು ಜನಪ್ರಿಯವಾಗುವ ಲಕ್ಷಣಗಳನ್ನು ತೋರಿಸುತ್ತಿಲ್ಲ. ಮುಂದಿನ ದಿನ ಈ ಚಾನಲ್ ಗಳ ವಿಷಯದಲ್ಲಿ ಏನೆಲ್ಲಾ ಆಗಬಹುದು ಅನ್ನೋದೇ ರೋಚಕ ಮನರಂಜನೆಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ