ಯೊ ಯೊ ಟೆಸ್ಟ್ ಫೇಲಾದ್ರೆ ಟೀಮಿಂದ ಔಟ್..!

Kannada News

11-10-2017 810

ನೀವೇನಾದ್ರೂ ಟೀಮ್ ಇಂಡಿಯಾಗೆ ಸೆಲೆಕ್ಟ್ ಆಗಿ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಥರ ಮಿಂಚಬೇಕು ಅನ್ನೋ ಆಸೆ ಇದೆಯೇ..? ಹಾಗಿದ್ರೆ ನೀವು ಯೊ ಯೊ ಟೆಸ್ಟ್ ನಲ್ಲಿ ಪಾಸಾಗಲೇ ಬೇಕು. ಯಾವುದಪ್ಪಾ ಈ ಟೆಸ್ಟು, ಇದನ್ನು ಪಾಸಾಗೋದ್ರೆ ಸಾಕಾ ಅಂತೀರಾ..? ಅದು ಹಾಗಲ್ಲ, ನೀವು ಬ್ಯಾಟಿಂಗ್, ಬೌಲಿಂಗ್, ವಿಕೆಟ್ ಕೀಪಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾದ್ರಲ್ಲೂ ಅತ್ಯುತ್ತಮ ಕೌಶಲ್ಯ ಬೆಳೆಸಿಕೊಂಡರಷ್ಟೇ ಟೀಮ್ ಇಂಡಿಯಾಗೆ ಪ್ರವೇಶ ಪಡೆಯೋದಕ್ಕೆ ಸಾಧ್ಯ.

ಆದರೆ, ಇದರ ಜೊತೆಗೆ ನಿಮ್ಮ ಫಿಟ್‌ ನೆಸ್‌ ಯಾವ ಮಟ್ಟದಲ್ಲಿದೆ ಅನ್ನೋದರ ಬಗ್ಗೆನೂ ಒಂದು ಟೆಸ್ಟ್ ನಡೆಯುತ್ತೆ, ಅದೇ ಯೊ ಯೊ ಟೆಸ್ಟ್. ಬೇರೆ ಎಲ್ಲಾದ್ರಲ್ಲೂ ನೀವು ಎಷ್ಟೇ ಸೂಪರ್ ಆಗಿದ್ದರೂ ಕೂಡ, ಈ ಯೊ ಯೊ ಟೆಸ್ಟ್ ನಲ್ಲಿ ಪಾಸಾಗದೇ ಇದ್ರೆ ನಿಮಗೆ ಟೀಮ್ ಇಂಡಿಯಾದಲ್ಲಿ ಆಡೋ ಅವಕಾಶ ಸಿಗೋದಿಲ್ಲ. ಇನ್ನುಮುಂದೆ ತಂಡದಲ್ಲಿರೋ ಎಲ್ಲರೂ ಕೂಡ ಯೊ ಯೊ ಟೆಸ್ಟ್ ನಲ್ಲಿ ಪಾಸಾಗಲೇಬೇಕು, ಇಲ್ಲದಿದ್ರೆ ಫೀಲ್ಡಿಗೆ ಇಳಿಯೋ ಹಾಗಿಲ್ಲ. ಈ ವಿಚಾರವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸಿಇಒ ರಾಹುಲ್ ಜೋಹ್ರಿ ಸ್ಪಷ್ಟಪಡಿಸಿದ್ದಾರೆ.

ಒಬ್ಬ ಆಟಗಾರ ಎಂಥ ಅದ್ಭುತವಾದ ಫಾರಂನಲ್ಲೇ ಇರಲಿ, ಯಾವುದೇ ರೀತಿ ಗಾಯಗಳೂ ಇಲ್ಲದೇ ಇರಲಿ, ಆತ ಯೊ ಯೊ ಟೆಸ್ಟ್‌ ನಲ್ಲಿ ಪಾಸಾಗದಿದ್ರೆ, ಆತನ ಬದಲು ಬೇರೆ ಆಟಗಾರನನ್ನು ಆಯ್ಕೆ ಮಾಡ್ತೀವಿ ಅಂತ ತಂಡದ ಆಡಳಿತ ಮಂಡಳಿ ತಿಳಿಸಿದೆ.

ಅಷ್ಟಕ್ಕೂ ಈ ಯೊ ಯೊ ಟೆಸ್ಟ್‌ ಅಂದ್ರೆ ಏನಪ್ಪಾ ಅಂತೀರಾ. ಮೈದಾನದಲ್ಲಿ 20 ಮೀಟರ್ ದೂರದವರೆಗೂ ಎರಡು ಸಾಲಿನಲ್ಲಿ ಶಂಖಾಕಾರದ ಆಕೃತಿಗಳನ್ನು ಸಾಲಾಗಿ ಇರಿಸಲಾಗಿರುತ್ತದೆ. ಆಟಗಾರರು ಈ ಆಕೃತಿಗಳ ನಡುವೆ ಓಡಬೇಕಾಗಿರುತ್ತದೆ. ಆದ್ರೆ ಸುಮ್ಮನೆ ಓಡೋದು ಮಾತ್ರ ಅಲ್ಲ, ಮೊದಲು ಒಂದು ಬೀಪ್ ಸದ್ದು ಮಾಡಿದಾಗ ಜೋರಾಗಿ ಓಡಲು ಶುರು ಮಾಡಬೇಕು, ಮತ್ತೊಂದು ಬೀಪ್ ಸದ್ದು ಕೇಳಿದಾಗ ಹಿಂದಕ್ಕೆ ತಿರುಗಬೇಕು, ನಂತರ ಮತ್ತೊಂದು ಬೀಪ್ ಸದ್ದಿಗೆ ಮತ್ತೆ ಓಡಬೇಕು. ಈ ಬೀಪ್‌ ಸದ್ದು ಕಡಿಮೆ ಸಮಯದಲ್ಲಿ ಅಂದರೆ, ಬೇಗ ಬೇಗ ಕೇಳುತ್ತಾ ಹೋದಂತೆ ಆಟಗಾರರಿಗೆ ತಕ್ಷಣ ವೇಗವಾಗಿ ಓಡಲು, ಮತ್ತೊಂದು ಕ್ಷಣದಲ್ಲಿ ನಿಂತು ಹಿಂದಿರುಗಲು ಮತ್ತು ಮತ್ತೆ ಓಡಲು ಶ್ರಮ ಹೆಚ್ಚಾಗುತ್ತಾ ಹೋಗುತ್ತದೆ. ಬೀಪ್ ಸದ್ದು ಕೇಳಿದ ಕೂಡಲೇ ನಿಲ್ಲದಿದ್ದರೆ, ಹಿಂದಕ್ಕೆ ತಿರುಗದಿದ್ದರೆ ಟೆಸ್ಟ್‌ನಲ್ಲಿ ವಿಫಲರಾದಂತೆ. ಈ ರೀತಿ ಎರಡು ಬಾರಿ ವಿಫಲರಾದರೆ ಅಲ್ಲಿಗೆ ಮುಗಿಯಿತು, ಅವರು ಫಿಟ್‌ನೆಸ್ ಪರೀಕ್ಷೆಯಲ್ಲಿ ಸೋತಿದ್ದಾರೆ ಎಂದು ಅರ್ಥ. 

ಈ ಯೊ ಯೊ ಟೆಸ್ಟ್‌ನಲ್ಲಿ ಎಷ್ಟು ಸುತ್ತು ಓಡಿದ್ದಾರೆ, ಯಾವ ವೇಗದಲ್ಲಿ ಓಡಿದ್ದಾರೆ ಅನ್ನುವುದರ ಆಧಾರದ ಮೇಲೆ ಅಂತಿಮ ಸ್ಕೋರ್‌ ಲೆಕ್ಕ ಹಾಕಲಾಗುತ್ತದೆ. ಡೆನ್ಮಾರ್ಕ್‌ನ ಶರೀರಶಾಸ್ತ್ರ ವಿಜ್ಞಾನಿ ಜೆನ್ಸ್ ಬಾಂಗ್ಸ್‌ಬೊ ಈ ಯೊ ಯೊ ಟೆಸ್ಟ್ ಅನ್ನು ರೂಪಿಸಿದವನು.  

ಟೀಮ್ ಇಂಡಿಯಾದಲ್ಲಿ 2012ರಿಂದಲೂ ಯೊ ಯೊ ಟೆಸ್ಟ್ ನಡೆಸುತ್ತಿದ್ದು, ಯುವರಾಜ್ ಸಿಂಗ್, ಸುರೇಶ್ ರೈನಾ ರಂಥ ಆಟಗಾರರೂ ಕೂಡ ಇದರಲ್ಲಿ ಫೇಲ್ ಆಗಿದ್ದರಂತೆ.

ಈ ಟೆಸ್ಟ್‌ನಲ್ಲಿ 19.5 ಕನಿಷ್ಟ ಸ್ಕೋರ್ ಆಗಿದ್ದು ವಿರಾಟ್ ಕೊಹ್ಲಿ, ಮನೀಶ್ ಪಾಂಡೆ ಉತ್ತಮ ಸಾಧನೆ ತೋರುತ್ತಿದ್ದಾರಂತೆ. ಆಸ್ಟ್ರೇಲಿಯದ ಆಟಗಾರರು ಯೊ ಯೊ ಟೆಸ್ಟ್‌ನಲ್ಲಿ 21 ಅಂಕ ಸ್ಕೋರ್ ಮಾಡಿ, ನಾವು ಬೇರೆ ತಂಡದವರಿಗಿಂತ ಹೆಚ್ಚು  ಫಿಟ್ ಆಗಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರಂತೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ