ಕಾಂಗ್ರೆಸ್ ನಲ್ಲಿ ‘ರಮ್ಯ’ ಚೈತ್ರ ಕಾಲ…!

Kannada News

09-10-2017 632

ನಿಮಗೆ ದಿವ್ಯಸ್ಪಂದನ ಅನ್ನೋ ಹೆಣ್ಣು ಮಗಳು ಗೊತ್ತೇ? ಗೊತ್ತಿಲ್ಲವೇ? ಆದರೆ ಚಿತ್ರ ನಟಿ, ಮಂಡ್ಯದ ಹೆಣ್ಣು, ಮಾಜಿ ಸಂಸದೆ ರಮ್ಯಾ ಗೊತ್ತು ತ್ತಾನೆ…? ಖಂಡಿತಾ ಗೊತ್ತು ಅಂದ್ರಾ...ಹೂಂ, ನಿಮಗೆಲ್ಲಾ ಗೊತ್ತಿರೋ ಈ ರಮ್ಯಾನೇ ಆ ದಿವ್ಯ ಸ್ಪಂದನ.

ಆಯ್ತು ಬಿಡಿ ಹೆಸರಿನಲ್ಲೇನಿದೆ…ಈಗ ವಿಚಾರ ಏನಪ್ಪಾ ಅಂದ್ರೆ…ರಾಹುಲ್ ಗಾಂಧಿ ಆಪ್ತವಲಯದಲ್ಲಿರೋರ ಪೈಕಿ ಒಬ್ಬರಾದ ಈ ರಮ್ಯಾ ಮೇಡಮ್‌ನೋರನ್ನ  ಕೆಲವು ತಿಂಗಳುಗಳ ಹಿಂದೆ, ಎಐಸಿಸಿ ಅಂದ್ರೆ, ಸಿಂಪಲ್ ಆಗಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಆಗಿ ನೇಮಕ ಮಾಡಿದ್ರು. ಸಾಮಾಜಿಕ ಜಾಲ ತಾಣ ಅಂದ್ರೆ ಗೊತ್ತಲ್ಲಾ ಫೇಸ್ ಬುಕ್ಕು, ವಾಟ್ಸಾಪು, ಟ್ವಿಟ್ಟರ್ ಇತ್ಯಾದಿಗಳು.

ಈ ಸಾಮಾಜಿಕ ಜಾಲ ತಾಣಗಳನ್ನು ಚೆನ್ನಾಗಿ ಬಳಸಿಕೊಂಡೇ ಮೋದಿ ಅವರು ಪ್ರಧಾನಿ ಆಗಿದ್ದು ಅನ್ನೋದು ಹೆಚ್ಚಿನವರ ಅಭಿಪ್ರಾಯ. ಅದಿರಲಿಬಿಡಿ, ಸಾಮಾನ್ಯವಾಗಿ ರಮ್ಯಾ ಅವರು, ಪ್ರಧಾನಿ ಮೋದಿ ಅವರನ್ನ ಅವರ ಸರ್ಕಾರವನ್ನ ಟೀಕೆ ಮಾಡೋ ಸಂದೇಶಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕ್ತಿರ್ತಾರೆ. ಅದೇ ರೀತಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಳ್ಳೋ ಸಂದೇಶಗಳನ್ನೂ ಹಾಕ್ತಾರೆ. ಕೆಲವೊಮ್ಮೆ ರಮ್ಯಾ ಅವರ ಸಂದೇಶಗಳಿಗೆ ಟೀಕೆಗಳೂ ವ್ಯಕ್ತ ಆಗ್ತವೆ, ಮತ್ತೆ ಕೆಲವೊಂದು ಬಾರಿ ಪರವಾಗಿಲ್ಲ ಚೆನ್ನಾಗಿ ಸಮರ್ಥಿಸಿಕೊಂಡಿದ್ದಾರೆ ಅನ್ನೋ ಮಾತುಗಳೂ ಕೇಳಿ ಬಂದು, ಸಾಕಷ್ಟು ‘ಲೈಕುಗಳೂ’ ಸಿಕ್ಕಿವೆ. ಆದರೆ, ರಮ್ಯಾ ಅವರು ಈ ಜವಾಬ್ದಾರಿ ವಹಿಸಿಕೊಂಡ ನಂತರ, ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಪಕ್ಷದ ವಿಚಾರಗಳು ಹೆಚ್ಚು ಜನರನ್ನು ತಲುಪುತ್ತಿವೆ ಅನ್ನೋದಂತೂ ನಿಜ. ಇದು ಕಾಂಗ್ರೆಸ್ ಪಕ್ಷ ಮತ್ತು ಅದರ ಯುವರಾಜ ಅಂತ ಕರೆಸಿಕೊಳ್ಳೋ ರಾಹುಲ್ ಗಾಂಧಿ ಅವರು, ದೇಶದ ಜನರ ಜೊತೆ ಹೆಚ್ಚಿನ ರೀತಿಯಲ್ಲಿ ಸಂಪರ್ಕ ಸಾಧಿಸೋದಕ್ಕೂ ನೆರವಾಗುತ್ತಿದೆ. ಅದರ ಜೊತೆಗೆ ಕಾಂಗ್ರೆಸ್ ಪಕ್ಷ ಹೊಸ ರೀತಿಯಲ್ಲಿ ಗರಿ ಬಿಚ್ಚಿಕೊಳ್ಳುತ್ತಿರುವುದರ ಸಂಕೇತವೂ ಆಗಿ ಕಂಡುಬರುತ್ತಿದೆ.

ಕಾಂಗ್ರೆಸ್ ಪಕ್ಷದವರು, ಒಂದು ಕಾಲದಲ್ಲಿ ಡಿಜಿಟಲ್ ಮೀಡಿಯಾದ ಶಕ್ತಿಯನ್ನು ಅನುಮಾನದಿಂದ ನೋಡುತ್ತಿದ್ದರು. ಐದಾರು ವರ್ಷಗಳ ಹಿಂದೆ, ಕೇವಲ ಶಶಿ ತರೂರ್‌ ಅಂಥವರು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿ ಕಂಡು ಬರುತ್ತಿದ್ದರು.  

ಆದರೆ, ಇವತ್ತು ಎಲ್ಲವೂ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಹಿಂಬಾಲಕರ ಸಂಖ್ಯೆ ಭಾರಿ ಹೆಚ್ಚಳ ಕಂಡಿದೆ. ಪ್ರಧಾನಿ ಮೋದಿ, ಅವರ ಸರ್ಕಾರ ಮತ್ತು ಬಿಜೆಪಿಯವರಿಗೆ ಅವರದ್ದೇ ದಾಟಿಯಲ್ಲೇ ಉತ್ತರ ಕೊಡುವಲ್ಲಿ ರಮ್ಯಾ ಮತ್ತು ಅವರ ತಂಡ ಸಾಕಷ್ಟು ಯಶಸ್ಸನ್ನೂ ಸಾಧಿಸಿದೆ. ಇದರ ಫಲವಾಗಿ, ಕಾಂಗ್ರೆಸ್  ಪಕ್ಷವೂ ಸಾಕಷ್ಟು ಚೇತರಿಕೆ ಕಾಣುತ್ತಿದೆ.

ಹಿಂದೆಲ್ಲಾ ಸಾಮಾಜಿಕ ಜಾಲ ತಾಣಗಳ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡುತ್ತಿದ್ದ ಬಿಜೆಪಿ ಮತ್ತು ಮೋದಿ ಹಿಂಬಾಲಕರಿಗೆ, ಇದೀಗ ತಾವೂ ಕೂಡ ಅದರ ಟೇಸ್ಟ್‌ ನೋಡೋ ಸಮಯ ಬಂದಿದೆ. ಇದಕ್ಕೆ ಮುಖ್ಯ ಕಾರಣ ರಮ್ಯಾ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ