ಯಾರಿವರು ರೋಹಿಂಗ್ಯಾಗಳು..?

Kannada News

03-10-2017 1759

ಇತ್ತೀಚಿನ ದಿನಗಳಲ್ಲಿ ನಮ್ಮ ನೆರೆಯ ಮ್ಯಾನ್ಮಾರ್ ದೇಶ ಮತ್ತು ಸತ್ತೆನೋ ಕೆಟ್ಟೆನೋ ಎಂದು ಅಲ್ಲಿಂದ ಓಡಿಬಂದು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ರೋಹಿಂಗ್ಯಾಗಳು ಸಾಕಷ್ಟು ಸುದ್ದಿಮಾಡುತ್ತಿದ್ದಾರೆ. ಸದ್ಯಕ್ಕೆ ಹೆಚ್ಚಿನ ರೋಹಿಂಗ್ಯಾಗಳು ಬಾಂಗ್ಲಾ ದೇಶದ ಗಡಿಯಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ, ಈ ರೋಹಿಂಗ್ಯಾಗಳು ಯಾರು? ಇವರೇನು ಸ್ವಂತ ಅನ್ನುವ ದೇಶವೇ ಇಲ್ಲದ ಮನುಷ್ಯರೇ? ಇವರು ಮ್ಯಾನ್ಮಾರ್ ನಿಂದ ವಲಸೆ ಬರುತ್ತಿರುವುದಾದರೂ ಏಕೆ?  ಬೌದ್ಧ ಧರ್ಮ ಪಾಲಿಸುವ ಬರ್ಮೀಯರು, ಇವರ ವಿರುದ್ಧ ಕಿಡಿಕಾರುವುದು ಏಕೆ? ಮುಸ್ಲಿಮರಾದ ರೋಹಿಂಗ್ಯಾಗಳಿಗೆ ಇತರೆ ಮುಸ್ಲಿಮ್ ದೇಶಗಳು ಏಕೆ ಆಶ್ರಯ ನೀಡುತ್ತಿಲ್ಲ? ಈ ರೋಹಿಂಗ್ಯಾಗಳಿಗೆ ಭಾರತದಲ್ಲಿ ಆಶ್ರಯ ನೀಡಬೇಕೇ? ಇವರಿಗೆ ಆಶ್ರಯ ನೀಡುವುದರಿಂದ ಭಾರತಕ್ಕೆ ಎದುರಾಗಬಹುದಾದ ಸಮಸ್ಯೆಗಳೇನು? ಇತ್ಯಾದಿ ಎಲ್ಲಾ ವಿಚಾರಗಳ ಬಗ್ಗೆ ಒಂದು ಸ್ಪೆಷಲ್ ರಿಪೋರ್ಟ್.  

ನಮ್ಮಲ್ಲಿ ಬಹುತೇಕರಿಗೆ ನಮ್ಮ ನೆರೆಯ ದೇಶ ಬರ್ಮಾ ಅಥವಾ ಮ್ಯಾನ್ಮಾರ್ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ, ಆ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ತರಬೇಕು ಎಂದು 25 ವರ್ಷಗಳ ಕಾಲ ಹೋರಾಟ ನಡೆಸಿ, ಇಪ್ಪತ್ತಕ್ಕೂ ಹೆಚ್ಚು ವರ್ಷ ಗೃಹ ಬಂಧನದಲ್ಲೇ ಕಳೆದ ಆಂಗ್ ಸಾನ್ ಸೂ ಚಿ ಬಗ್ಗೆ ಮತ್ತು ಅವರಿಗೆ ನೊಬೆಲ್ ಶಾಂತಿ ಪಾರಿತೋಷಕ ಬಂದಿದೆ ಅನ್ನುವುದರ ಬಗ್ಗೆ ಒಂದಷ್ಟು ಜನರಿಗೆ ಗೊತ್ತು. 1962ರಿಂದಲೂ ದೇಶದಲ್ಲಿ ಆಡಳಿತ ನಡೆಸುತ್ತಿದ್ದ ಮ್ಯಾನ್ಮಾರ್‌ ನ ಮಿಲಿಟರಿ ಜುಂತಾ ಸರ್ಕಾರ, 2016ರಲ್ಲಿ ಚುನಾವಣೆ ನಡೆಯಲು ಅವಕಾಶ ಕೊಟ್ಟಿತ್ತು. ಚುನಾವಣೆಯಲ್ಲಿ ಗೆಲುವು ಸಾಧಿಸಿದ, ಆಂಗ್ ಸಾನ್ ಸೂ ಕಿ ಅವರ ನ್ಯಾಷನಲ್ ಲೀಗ್ ಆಫ್ ಡೆಮಾಕ್ರೆಸಿ ಪಕ್ಷ ಅಧಿಕಾರಕ್ಕೆ ಬಂತು. ಆದರೆ, ಸೂ ಕಿ ಅವರು, ಮ್ಯಾನ್ಮಾರ್ ದೇಶದ ಸರ್ಕಾರದಲ್ಲಿ ಯಾವುದೇ ಹುದ್ದೆ ವಹಿಸಿಕೊಳ್ಳದಂತೆ ಮಿಲಿಟರಿ ಆಡಳಿತದವರು ಸಂವಿಧಾನಕ್ಕೆ ತಿದ್ದುಪಡಿತಂದಿದ್ದರು. ಹೀಗಾಗಿ, ಸೂ ಕಿ ಅವರು ಹಟಿನ್ ಕ್ಯಾವ್ ಎಂಬ ತಮ್ಮ ವಿಶ್ವಾಸಿಯನ್ನು ಮ್ಯಾನ್‌ಮಾರ್ ಅಧ್ಯಕ್ಷರಾಗಿಸಿದ್ದಾರೆ. ಆದರೆ, ಭದ್ರತೆ ವಿಚಾರದಲ್ಲಿ ಈಗಲೂ ಸೇನೆಯದ್ದೇ ಪಾರುಪತ್ಯ. ಇದಿಷ್ಟೂ ಮ್ಯಾನ್‌ಮಾರ್ ದೇಶದ ಆಡಳಿತದ ಕತೆ.

ಇದೀಗ ಮ್ಯಾನ್ಮಾರ್ ಮತ್ತು ಆಂಗ್ ಸಾನ್ ಸೂ ಚಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣವಾಗಿರುವುದೇ ಈ ರೋಹಿಂಗ್ಯಾಗಳ ಸಮಸ್ಯೆ.  

ಮ್ಯಾನ್ಮಾರ್‌ ಜನಸಂಖ್ಯೆಯ ಶೇಕಡ 80ರಷ್ಟು ಜನ ಬೌದ್ಧ ಧರ್ಮೀಯರು. ಸುಮಾರು ನೂರಕ್ಕೂ ಹೆಚ್ಚು ಇತರೆ ಜನಾಂಗೀಯ ಗುಂಪುಗಳೂ ಅಲ್ಲಿವೆ. ಇವರಲ್ಲಿ, ಸುಮಾರು 1 ಕೋಟಿಗೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರೂ ಇದ್ದಾರೆ. ಇವರು ಮ್ಯಾನ್ಮಾರ್ ದೇಶದ ಪಶ್ಚಿಮಭಾಗದ ರಾಖೈನ್ ರಾಜ್ಯದಲ್ಲಿ ನೆಲೆಸಿದ್ದಾರೆ.

ಬಾಂಗ್ಲಾ ದೇಶ, ಥೈಲ್ಯಾಂಡ್ ಮತ್ತು ಮಲೇಶಿಯಾ ದೇಶಗಳಲ್ಲೂ ಸಾಕಷ್ಟು ಜನ ರೋಹಿಂಗ್ಯಾಗಳಿದ್ದಾರೆ. ಇವರು ರೋಹಿಂಗ್ಯ ಅಥವ ರೊಯಿಗ್ಯ  ಭಾಷೆಯಲ್ಲಿ ಮಾತನಾಡುತ್ತಾರೆ. ವಿಶ್ವಬ್ಯಾಂಕ್ ವರದಿ ಪ್ರಕಾರ, ಮ್ಯಾನ್ಮಾರ್ ನಲ್ಲಿರುವ ರೋಹಿಂಗ್ಯಾಗಳಲ್ಲಿ ಸುಮಾರು ಶೇಕಡ 80ರಷ್ಟು ಜನರು ಕಡುಬಡತನದಲ್ಲಿ ಬದುಕು ಸಾಗಿಸುತ್ತಿದ್ದಾರೆ. ರೋಹಿಂಗ್ಯಾ ಮುಸ್ಲಿಮರು 11ನೇ ಶತಮಾನದಿಂದಲೂ ಮ್ಯಾನ್ಮಾರ್‌ನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಆದರೆ, ಬ್ರಿಟಿಷರು ಬರ್ಮಾದೇಶವನ್ನು ವಶಪಡಿಸಿಕೊಂಡ ನಂತರ, 1823ರಲ್ಲಿ, ಬಂಗಾಳೀ ಮುಸ್ಲಿಮ್ ಕೆಲಸಗಾರರನ್ನು ರಾಖೈನ್ ಪ್ರಾಂತ್ಯಕ್ಕೆ ಕರೆತಂದರು ಅವರೇ ಈ ರೋಹಿಂಗ್ಯಾಗಳು ಎಂದೂ ಹೇಳಲಾಗುತ್ತದೆ. ಮುಂದೆ, 1948ರಲ್ಲಿ ಮಯನ್ಮಾರ್‌ ಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಗುತ್ತದೆ. ಆದರೆ, 1962ರಿಂದ 2015ರ ವರೆಗೂ ಮಿಲಿಟರಿಯೇ ಆಡಳಿತ ನಡೆಸುತ್ತದೆ.

1971ರ ಬಾಂಗ್ಲಾ ಯುದ್ಧದ ಸಮಯದಲ್ಲಿ ಲಕ್ಷಾಂತರ ಮುಸ್ಲಿಮರು, ಮ್ಯಾನ್ಮಾರ್ ನೊಳಕ್ಕೆ ಬಂದು ಸೇರಿಕೊಂಡರು ಎಂದು ಹೇಳುವ ಮ್ಯಾನ್ಮಾರ್ ಸರ್ಕಾರ, ಈ ರೋಹಿಂಗ್ಯಾ ಜನರನ್ನು ‘ಬೆಂಗಾಲಿ’ಗಳು ಎಂದೇ ಕರೆಯುತ್ತದೆ ಮತ್ತು ಇವರಿಗೆ ಪೌರತ್ವ ನೀಡಲು ನಿರಾಕರಿಸುತ್ತದೆ. ಆ ಹೊತ್ತಿನಿಂದ ಈ ಹೊತ್ತಿನವರೆಗೂ ಇವರನ್ನೆಲ್ಲ ದೇಶದಿಂದ ಖಾಲಿ ಮಾಡಿಸುವ ಪ್ರಯತ್ನವನ್ನಂತೂ ನಡೆಸಿಯೇ ಇದೆ.  ಇತ್ತ ಬಾಂಗ್ಲಾದೇಶದವರೂ ಕೂಡ ಇವರನ್ನು ನಮ್ಮವರಲ್ಲ ಎಂದೇ ಪರಿಗಣಿಸುತ್ತಾರೆ. 1982ರಲ್ಲಿ ಮ್ಯಾನ್ಮಾರ್ ಸರ್ಕಾರ ಒಂದು ಕಾನೂನನ್ನು ಜಾರಿಗೆ ತರುತ್ತದೆ. ಯಾರ ಪೂರ್ವೀಕರು 1823ಕ್ಕಿಂತ ಮುಂಚೆ ಮ್ಯಾನ್ಮಾರ್ ಅಥವ ಬರ್ಮಾದಲ್ಲಿ ನೆಲೆಗೊಂಡಿದ್ದರೋ ಅವರಿಗಷ್ಟೇ ಬರ್ಮಾದ ನಾಗರಿಕರು ಎಂಬ ಸ್ಥಾನಮಾನ, ಉಳಿದವರಿಗೆ ಇಲ್ಲ ಎಂದು ಹೇಳುತ್ತದೆ.  2014ರಲ್ಲಿ ಬರ್ಮಾದಲ್ಲಿ ನಡೆದ ಜನಗಣತಿ ವೇಳೆ, ಇತರೆ 135 ಜನಾಂಗೀಯ ಗುಂಪುಗಳಿಗೆ ಮಾನ್ಯತೆ ನೀಡುವ ಬರ್ಮಾ ಸರ್ಕಾರ, ರೋಹಿಂಗ್ಯಾಗಳಿಗೆ ಮನ್ನಣೆ ನೀಡುವುದಿಲ್ಲ. ರೋಹಿಂಗ್ಯಾಗಳಿಗೆ ಜನನ ಪತ್ರ, ಮರಣ ಪತ್ರ, ನಿವಾಸ ದೃಢೀಕರಣ ಪತ್ರ ಸೇರಿದಂತೆ ಯಾವುದೇ ರೀತಿಯ ಪ್ರಮಾಣ ಪತ್ರಗಳನ್ನೂ ಕೊಡುವುದಿಲ್ಲ. ಬರ್ಮಾ ಸರ್ಕಾರದ ಈ ಕ್ರಮ ರೋಹಿಂಗ್ಯಾಗಳು, ಆ ದೇಶದ ಒಳಗೆ ಸಂಚರಿಸಲು, ವಿದ್ಯಾಭ್ಯಾಸ ಪಡೆಯಲು, ಕೆಲಸ ಮಾಡಲು, ಆರೋಗ್ಯ ಸೇವೆ ಪಡೆಯಲು ನಿರ್ಬಂಧಿಸುತ್ತದೆ. ಒಟ್ಟಿನಲ್ಲಿ ರೋಹಿಂಗ್ಯಾಗಳು, ತಮ್ಮದು ಎಂದು ಹೇಳಲು ಯಾವುದೇ ನೆಲೆಯೂ ಇಲ್ಲದ ಜನರು ಅನ್ನಬಹುದು. ರೋಹಿಂಗ್ಯಾಗಳ ಮೇಲೆ ಆಗಾಗ ದಾಳಿಗಳು ನಡೆಯುವುದೂ ಕೂಡ ಸರ್ವೇ ಸಾಮಾನ್ಯ.

ಆದರೆ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವುದನ್ನು ನೋಡಿದಾಗ ಇದು ಜನಾಂಗೀಯ ಕಾರಣಕ್ಕಾಗಿ ನಡೆಯುತ್ತಿರುವ ದೌರ್ಜನ್ಯ ಎಂದೇ ಹೇಳಬೇಕಾಗಿ ಬರುತ್ತದೆ. ಕಳೆದ ಆಗಸ್ಟ್ ತಿಂಗಳಲ್ಲಿ ಮ್ಯಾನ್ಮಾರ್‌ ಗಡಿ ಭದ್ರತಾ ಪಡೆಯ 12 ಪೊಲೀಸರು ಹತ್ಯೆಗೀಡಾದರು.

ಇವರನ್ನು ಕೊಂದವರು ಅರ್ಸಾಗಳು ಅಂದರೆ, ಅರಾಕನ್ ರೋಹಿಂಗ್ಯಾ ಸಾಲ್ವೇಷನ್ ಆರ್ಮಿ ಎಂಬ ರೋಹಿಂಗ್ಯಾ ಉಗ್ರರ ಗುಂಪು ಅನ್ನುವುದು ಮ್ಯಾನ್ಮಾರ್ ಸರ್ಕಾರದ ವಾದ. ಇದಾದ ನಂತರ ರೊಚ್ಚಿಗೆದ್ದ ಮ್ಯಾನ್‌ಮಾರ್ ಭದ್ರತಾಪಡೆಗಳು ರೋಹಿಂಗ್ಯಾ ಜನರ ಮೇಲೆ ಮುಗಿಬಿದ್ದವು. ರೋಹಿಂಗ್ಯಾಗಳು ನೆಲೆಸಿರುವ ಗ್ರಾಮಗಳ ಮೇಲೆ ದಾಳಿ, ಹತ್ಯೆ ಮತ್ತು ಹೆಂಗಸರ ಮೇಲೆ ಅತ್ಯಾಚಾರಗಳು ನಡೆದವು. ಈ ದಾಳಿಗಳಲ್ಲಿ ಕನಿಷ್ಟ ನೂರಕ್ಕೂ ಹೆಚ್ಚು ಜನ ರೋಹಿಂಗ್ಯಾಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇಂಥ ಸನ್ನಿವೇಶದಲ್ಲಿ ಮ್ಯಾನ್ಮಾರ್ ಸೇನೆಯ ಹಿಂಸಾಚಾರಕ್ಕೆ ಹೆದರಿ ಓಡಿ ಬಂದ ಸುಮಾರು 4 ಲಕ್ಷ ರೋಹಿಂಗ್ಯಾಗಳು, ಮ್ಯಾನ್ಮಾರ್-ಬಾಂಗ್ಲಾ ಗಡಿಗಳ ಮಧ್ಯೆ, ಎರಡೂ ದೇಶಗಳಿಗೆ ಸೇರದ ಖಾಲಿ ಪ್ರದೇಶ ‘ನೋ ಮ್ಯಾನ್ಸ್ ಲ್ಯಾಂಡ್’ ನಲ್ಲಿ ಬಂದು ನಿಂತಿದ್ದಾರೆ. ಅತ್ತ ಬಾಂಗ್ಲಾದೇಶದವರು ಇವರನ್ನು ತಮ್ಮ ದೇಶದೊಳಕ್ಕೆ ಬಿಟ್ಟುಕೊಳ್ಳುತ್ತಿಲ್ಲ, ಇತ್ತ ಮತ್ತೆ ಮ್ಯಾನ್ಮಾರ್‌ಗೆ ಹೋಗಲು ಭಯ. ಹೀಗಾಗಿ, ಈ ರೋಹಿಂಗ್ಯಾಗಳ ಪಾಡು ಯಾರಿಗೂ ಬೇಡದಂತಾಗಿದ್ದು ಇಡೀ ಜಗತ್ತಿನ ಗಮನ ಸೆಳೆದಿದೆ.

ಆದರೆ, ರೋಹಿಂಗ್ಯಾಗಳ ವಿರುದ್ಧ ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರೂ ಮೌನ ತಾಳಿದ್ದ ಬರ್ಮಾದ ನಾಯಕಿ, ಆಂಗ್ ಸಾನ್ ಸೂ ಚಿ ಬಗ್ಗೆ ವಿಶ್ವಾದ್ಯಂತ ಅಸಮಾಧಾನ ಸೃಷ್ಟಿಯಾಗಿತ್ತು. ತಡವಾಗಿಯಾದರೂ ಮಾತನಾಡಿರುವ ಸೂ ಚಿ, ರೋಹಿಂಗ್ಯಾಗಳು, ಪರಿಶೀಲನೆಗೊಳಪಟ್ಟು ದೇಶಕ್ಕೆ ಹಿಂತಿರುಗುವುದಾದರೆ ನಮ್ಮ ಆಕ್ಷೇಪಣೆ ಇಲ್ಲ ಎಂದು ಹೇಳಿದ್ದಾರೆ. ರೋಹಿಂಗ್ಯಾಗಳು ಎದುರಿಸುತ್ತಿರುವ ಈ ಸಮಸ್ಯೆಗೆ, ಅವರು ಬರ್ಮಾದ ಜನ ಮತ್ತು ಪೊಲೀಸರ ಮೇಲೆ ದಾಳಿ ನಡೆಸಿದ್ದೇ ಕಾರಣ ಎಂದು ಆರೋಪಿಸಿದ್ದಾರೆ. ಒಂದು ವೇಳೆ, ಮ್ಯಾನ್ಮಾರ್ ಭದ್ರತಾ ಪಡೆಗಳು ರೋಹಿಂಗ್ಯಾಗಳ ಮೇಲೆ ದೌರ್ಜನ್ಯ ನಡೆಸಿವೆ ಅನ್ನುವುದಾದರೆ, ಆ ಬಗ್ಗೆಯೂ ತನಿಖೆ ಆಗಲಿ ಎಂದು ಹೇಳಿದ್ದಾರೆ. ಮ್ಯಾನ್ಮಾರ್ ಸರ್ಕಾರ ಒಂದು ಶಾಂತಿ ಸಮಿತಿ ಸ್ಥಾಪಿಸಿದ್ದು, ವಿಶ್ವ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅಣ್ಣನ್ ಅವರನ್ನು ಇದರ ಮುಂದಾಳತ್ವ ವಹಿಸಲು ಕೋರಿಕೊಂಡಿದೆ.

ಈ ನಡುವೆ, ಇಂಥ ಸನ್ನಿವೇಶದಲ್ಲಿ ಭಾರತದ ಪಾತ್ರವೇನು ಅನ್ನುವುದರ ಬಗ್ಗೆಯೂ ದೇಶದಲ್ಲಿ ಮತ್ತು ಅಂತಾರಾಷ್ಚ್ರೀಯ ಮಟ್ಟದಲ್ಲೂ  ಸಾಕಷ್ಟು ಚರ್ಚೆಗಳು ನಡೆದಿವೆ.

ಭಾರತದಲ್ಲಿ ಸದ್ಯಕ್ಕೆ ಸುಮಾರು 40 ಸಾವಿರ ರೋಹಿಂಗ್ಯಾ ನಿರಾಶ್ರಿತರಿದ್ದು ಇವರಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಜಮ್ಮು-ಕಾಶ್ಮೀರದಲ್ಲಿನ ಶಿಬಿರಗಳಲ್ಲಿ ವಾಸಮಾಡುತ್ತಿದ್ದಾರೆ. ಆದರೆ, ಈಗಾಗಲೇ ದೇಶದ ಈಶಾನ್ಯ ರಾಜ್ಯಗಳಲ್ಲಿ ಮಾವೋವಾದಿಗಳು ಮತ್ತು ಇತರೆ ಬಂಡುಕೋರ ಗುಂಪಿನವರಿಂದ ಸಾಕಷ್ಟು ಕಷ್ಟ ನಷ್ಟ ಅನುಭವಿಸುತ್ತಿರುವ ಭಾರತ, ರೋಹಿಂಗ್ಯಾಗಳಿಗೆ ಆಶ್ರಯ ಕೊಟ್ಟು, ಮತ್ತೊಂದು ಸಮಸ್ಯೆಯನ್ನು ಮೇಲೆಳೆದುಕೊಳ್ಳುವುದು ಬೇಡ ಎನ್ನುವುದು ಭಾರತದ ಭದ್ರತಾ ಸಂಸ್ಥೆಗಳ ಅಭಿಪ್ರಾಯ. ರೋಹಿಂಗ್ಯಾಗಳು ದೇಶದ ಭದ್ರತೆಗೆ ಅಪಾಯ ತರಬಹುದು, ಇವರಲ್ಲಿ ಕೆಲವರು, ಐಸಿಸ್ ಮತ್ತು ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳ ಸಂಪರ್ಕದಲ್ಲಿದ್ದಾರೆ ಎಂದು ಎಚ್ಚರಿಸುತ್ತವೆ.

2013ರ ಜುಲೈ ನಲ್ಲಿ ಬಿಹಾರದ ಗಯಾದಲ್ಲಿನ ಪವಿತ್ರ ಮಹಾಬೋಧಿ ಸಂಕೀರ್ಣದಲ್ಲಿ 9 ಸ್ಫೋಟಗಳು ನಡೆದವು. ಶಾಂತಿ ದೂತ ಗೌತಮ ಬುದ್ಧನ ಜ್ಞಾನೋದಯದ ಸಂಕೇತವಾಗಿರುವ ಬೋಧಿ ವೃಕ್ಷವೂ ಸೇರಿದಂತೆ ಇಡೀ ದೇವಾಲಯವನ್ನೇ ಸ್ಫೋಟಿಸುವ  ಸಂಚು ಬಯಲಾಗಿತ್ತು. ಮ್ಯಾನ್ಮಾರ್‌ ನಲ್ಲಿ ರೋಹಿಂಗ್ಯಾಗಳ ವಿರುದ್ಧ ದೌರ್ಜನ್ಯ ನಡೆಯುತ್ತಿರುವುದಕ್ಕೆ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದೆವು ಎಂದು ಈ ಪ್ರಕರಣದಲ್ಲಿ ಬಂಧಿತರಾದವರು ಹೇಳಿದ್ದರು. ಹೀಗಾಗಿ, ರೋಹಿಂಗ್ಯಾಗಳಿಗೆ ಆಶ್ರಯ ನೀಡುವುದು, ದೇಶದ ಭದ್ರತೆಗೆ ಬೆದರಿಕೆ ಒಡ್ಡುತ್ತದೆ ಅನ್ನುವ ಭದ್ರತಾ ಸಂಸ್ಥೆಗಳ ಮಾತನ್ನೂ ಸಂಪೂರ್ಣವಾಗಿ ತಳ್ಳಿಹಾಕುವುದು ಸಾಧ್ಯವಿಲ್ಲ. ಗೃಹಸಚಿವ ರಾಜನಾಥ್ ಸಿಂಗ್, ರೋಹಿಂಗ್ಯಾಗಳನ್ನು ಅಕ್ರಮ ವಲಸಿಗರು ಎಂದೇ ಕರೆದಿದ್ದಾರೆ.

ಭಾರತದಲ್ಲಿ ಆಶ್ರಯ ಪಡೆದಿರುವ ರೋಹಿಂಗ್ಯಾಗಳು ನಕಲಿ ಆಧಾರ್ ಚೀಟಿಗಳನ್ನು ಪಡೆಯುತ್ತಿದ್ದಾರೆ, ಮಾನವ ಕಳ್ಳ ಸಾಗಣೆಯಲ್ಲೂ ತೊಡಗಿಸಿಕೊಂಡಿದ್ದಾರೆ, ಇವರಿಂದ ದೇಶದ ಭದ್ರತೆಗೆ ಆತಂಕ ಎದುರಾಗಿದೆ, ಹೀಗಾಗಿ ಭಾರತಕ್ಕೆ ವಲಸೆ ಬಂದಿರುವ ರೋಹಿಂಗ್ಯಾಗಳನ್ನು ಮ್ಯಾನ್ಮಾರ್‌ಗೆ ವಾಪಸ್ ಕಳಿಸುವುದೇ ಸೂಕ್ತ, ಎಂದು ಭಾರತ ಸರ್ಕಾರ ಸುಪ್ರೀಂಕೋರ್ಟಿಗೂ ಹೇಳಿಕೆ ನೀಡಿದೆ.

ಆದರೆ, ರೋಹಿಂಗ್ಯಾಗಳನ್ನು ಬಲವಂತವಾಗಿ ಮತ್ತೆ ಮ್ಯಾನ್ಮಾರ್‌ ನತ್ತ ಅಟ್ಟುವುದು ವಿಶ್ವಸಂಸ್ಥೆಯ ನಿಯಮಗಳಿಗೆ ವಿರುದ್ಧ ಅನ್ನುವುದನ್ನು ಭಾರತ ಮರೆಯಬಾರದು ಎಂದು ಕೆಲವರು ಎಚ್ಚರಿಸುತ್ತಾರೆ.

ಇದೇ ವೇಳೆ, ಭಾರತ ದೇಶ ಸಾವಿರಾರು ವರ್ಷಗಳಿಂದಲೂ ನಿರಾಶ್ರಿತರಿಗೆ ಆಶ್ರಯ ಕೊಡುತ್ತಾ ಬಂದಿದೆ, ಹೀಗಾಗಿ ರೋಹಿಂಗ್ಯಾಗಳಿಗೆ ಆಶ್ರಯ ನೀಡುವ ಬಗ್ಗೆಯೂ ಭಾರತ ಸಹಾನುಭೂತಿ ತೋರಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ತಮ್ಮದೇ ಸರ್ಕಾರದ ವಿರುದ್ಧ ಮಾತನಾಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಭಾರತ ರೋಹಿಂಗ್ಯಾಗಳನ್ನು ಗಡೀಪಾರು ಮಾಡಬಾರದು, ಆಶ್ರಯ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ರೋಹಿಂಗ್ಯಾ ನಿರಾಶ್ರಿತರಲ್ಲಿ ಬಹುತೇಕರು ಸಾಮಾನ್ಯರು. ಅವರು ಉಗ್ರರಲ್ಲ, ಇವರನ್ನು ಮಾನವೀಯತೆ ದೃಷ್ಟಿಯಿಂದ ನೋಡಬೇಕು”, ಎಂದು ಹೇಳಿದ್ದಾರೆ. ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾಗೂ ರೋಹಿಂಗ್ಯಾಗಳನ್ನು ವಾಪಸ್ ಕಳಿಸುವುದು ಇಷ್ಟವಿಲ್ಲ.

ಆದರೆ, ನಾವು ಬೇರೆಯವರಿಗೆ ಆಶ್ರಯ ನೀಡುವುದಕ್ಕೆ ಮುನ್ನ ನಮ್ಮ ಮನೆಯಲ್ಲಿರುವ ಎಲ್ಲರಿಗೂ ಸೂಕ್ತವ್ಯವಸ್ಥೆ ಕಲ್ಪಿಸಿದ್ದೇವೆಯೇ ಅನ್ನುವುದನ್ನು ನೋಡಬೇಕು. ಅಣೆಕಟ್ಟುಗಳನ್ನು ಕಟ್ಟಿದ್ದರಿಂದ, ರಸ್ತೆ ಯೋಜನೆಗಳಿಂದ ಮಾಡಿದ್ದರಿಂದ, ವಿಶೇಷ ವಿತ್ತ ವಲಯಗಳನ್ನು ನಿರ್ಮಿಸಿದ್ದರಿಂದ, ನಿರಾಶ್ರಿತರಾದ ಎಲ್ಲರಿಗೂ ಇನ್ನೂ ಸರಿಯಾದ ರೀತಿಯಲ್ಲಿ ಪುನರ್‌ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ. ಇಂಥದ್ದಕ್ಕೇ ನಮ್ಮಲ್ಲಿ ಹಣವಿಲ್ಲ. ಹೀಗಿರುವಾಗ ಎಲ್ಲಿಂದಲೋ ಬಂದವರಿಗೆ ಮರುಗುವುದಕ್ಕಿಂತ ಮೊದಲು ನಮ್ಮವರಿಗೆ ವ್ಯವಸ್ಥೆ ಕಲ್ಪಿಸಿಕೊಡುವುದಕ್ಕೆ ಆದ್ಯತೆ ನೀಡಬೇಕು ಅನ್ನುವುದು ಹೆಚ್ಚಿನವರ ಅಭಿಪ್ರಾಯ.

ಇದರ ಜೊತೆಗೆ, ಜಗತ್ತಿನಲ್ಲಿ ಹತ್ತಾರು ಶ್ರೀಮಂತ ಮುಸ್ಲಿಮ್ ದೇಶಗಳಿವೆ. ಅವರೆಲ್ಲಾ ರೋಹಿಂಗ್ಯಾ ಮುಸ್ಲಿಮರಿಗೆ ಏಕೆ ಆಶ್ರಯ ನೀಡುತ್ತಿಲ್ಲ, ಏಕೆ ಸಹಾಯ ಮಾಡುತ್ತಿಲ್ಲ ಎಂಬ ಪ್ರಶ್ನೆಗಳೂ ಕೇಳಿ ಬರುತ್ತಿವೆ.

ಒಂದು ವೇಳೆ, ಈ ರೋಹಿಂಗ್ಯಾ ಮುಸ್ಲಿಮ್ ನಿರಾಶ್ರಿತರಿಗೆ ಆಶ್ರಯ ಕೊಟ್ಟರೂ ಅವರು ಈ ನೆಲದ ಕಾನೂನನ್ನು ಪಾಲಿಸುತ್ತಾರಾ? ಇಲ್ಲಿನ ಸಂಸ್ಕೃತಿಯನ್ನು ಗೌರವಿಸುತ್ತಾರಾ? ಯಾವತ್ತಿಗಾದರೂ ಭಾರತಕ್ಕೆ ನಿಷ್ಠೆ ತೋರಿಸುತ್ತಾರಾ? ಅಥವ ಭಾರತದಲ್ಲಿ ಆಶ್ರಯ ಪಡೆದಿರುವ ಟಿಬೆಟ್ ನಿರಾಶ್ರಿತರಂತೆ ಯಾರಿಗೂ ತೊಂದರೆ ನೀಡದಂತೆ ತಮ್ಮಷ್ಟಕ್ಕೆ ತಾವು ಜೀವನ ನಡೆಸುತ್ತಾರ? ಎಂಬೆಲ್ಲಾ ಪ್ರಶ್ನೆಗಳಿಗೆ, ರೋಹಿಂಗ್ಯಾಗಳಿಗೆ ಆಶ್ರಯ ನೀಡಬೇಕು ಎಂದು ಹೇಳುವವರು ಉತ್ತರ ನೀಡಬೇಕು.

ಇಷ್ಟೆಲ್ಲಾ ಆದ ಮೇಲೂ ಕೂಡ, ಭಾರತದಂತ ಹಿರಿಯ ದೇಶ ಸಂಕುಚಿತ ವರ್ತನೆ ತೋರಿಸಬಾರದು, ಪ್ರಬುದ್ಧವಾದ ರೀತಿಯಲ್ಲಿ ನಡೆದುಕೊಳ್ಳಬೇಕು ಅನ್ನುವುದನ್ನು ಹೆಚ್ಚಿನ ಜನರು ಒಪ್ಪುತ್ತಾರೆ. ಹೀಗಾಗಿ, ಮ್ಯಾನ್ಮಾರ್ ಆಡಳಿತ ಮತ್ತು ಅಂತಾರಾಷ್ಟ್ರೀಯ ಸಮುದಾಯದವರು ರೋಹಿಂಗ್ಯಾಗಳ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವವರೆಗೂ, ತಾತ್ಕಾಲಿಕ ಆಶ್ರಯ ಕೊಡುವುದರ ಬಗ್ಗೆ ಪರಿಶೀಲಿಸಬಹುದು ಅನ್ನುವ ಮಾತಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.                                           

-ವ್ಯೋಮಕೇಶ.ಎಂ

 

                                                                         
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಮುಸ್ಲಿಂರಾದ ರೋಹಿಂಗ್ಯಗಳಿಗೆ ಇತರೆ ಮುಸ್ಲಿಂ ದೇಶಗಳು ಎಕೆ ಆಶ್ರಯ ನೀಡುತ್ತಿಲ್ಲ .? ಈ ಬಗ್ಗೆ ತಮ್ಮ ಲೇಖನದಲ್ಲಿ ಮಾಹಿತಿ ಯಿಲ್ಲ.
  • 50_50
  • Freelance