ವಿದ್ಯಾರ್ಥಿಗಳ ಸ್ವರ್ಗ..ಜೆಎನ್‌ಯು

Kannada News

23-09-2017 686

ಭಾರತದ ಅತ್ಯಂತ ಹೆಸರುವಾಸಿಯಾದ ವಿಶ್ವವಿದ್ಯಾಲಯಗಳಲ್ಲಿ ಜೆಎನ್‌ಯು ಎಂದು ಪ್ರಸಿದ್ಧವಾಗಿರುವ ದೆಹಲಿಯ ಜವಾಹರ್ ಲಾಲ್ ನೆಹರು ಯೂನಿವರ್ಸಿಟಿಯೂ ಒಂದು. ಈ ಜೆಎನ್‌ ಯು ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಏಕೆಂದರೆ, ರಾಷ್ಟ್ರ ರಾಜಧಾನಿಯಲ್ಲಿರುವ ಜೆಎನ್‌ಯು, ಒಂದಲ್ಲಾ ಒಂದು ಕಾರಣಕ್ಕಾಗಿ ಸದಾ ಸುದ್ದಿಯಲ್ಲಿರುತ್ತದೆ. ಇಂಥ ಜೆಎನ್‌ಯುವಿನ ಇತಿಹಾಸ, ಪ್ರಾಮುಖ್ಯತೆ, ಇಲ್ಲಿನ ವ್ಯವಸ್ಥೆಗಳು, ವಿದ್ಯಾರ್ಥಿ ಸಂಘಗಳು, ಎಡ ಪಂಥೀಯ ಚಿಂತನೆಗಳ ಪ್ರಭಾವ, ವಿವಾದಗಳು ಇತ್ಯಾದಿ ಎಲ್ಲದರ ಬಗ್ಗೆ ನಿಮಗಾಗಿ ಒಂದು ಸ್ಪೆಷಲ್ ರಿಪೋರ್ಟ್.

ಸಂಸತ್ತಿನ ಕಾಯ್ದೆ ಪ್ರಕಾರ 1966ರಲ್ಲಿ ಸ್ಥಾಪನೆಗೊಂಡ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ, 1969ರಿಂದ ಶೈಕ್ಷಣಿಕ ಚಟುವಟಿಕೆ ಆರಂಭಿಸಿತು. ಜೆಎನ್‌ಯು, ದಕ್ಷಿಣ ದೆಹಲಿಯ ಅರಾವಳಿ ಬೆಟ್ಟದ ಸಾಲಿನಲ್ಲಿದೆ. ಇದರ ಕ್ಯಾಂಪಸ್ 1019 ಎಕರೆಗಳಷ್ಟು ವಿಸ್ತಾರವಾಗಿದ್ದು, ವಿಸ್ತೀರ್ಣದ ವಿಚಾರದಲ್ಲೂ ಅತಿದೊಡ್ಡ ವಿವಿಗಳ ಸಾಲಿನಲ್ಲಿ ನಿಲ್ಲುತ್ತದೆ. ಜನನಿಬಿಡ ಪ್ರದೇಶವಾಗಿರುವಂಥ ದೆಹಲಿಯಲ್ಲಿ ಅಚ್ಚಹಸಿರಿನಿಂದ ಕಂಗೊಳಿಸುವ ಪ್ರದೇಶವನ್ನು ನಾವು ಜೆಎನ್‌ಯುವಿನಲ್ಲಿ ಕಾಣಬಹುದು. ಜೆಎನ್‌ಯು ಕ್ಯಾಂಪಸ್ 200 ವಿವಿಧ ಪ್ರಭೇದಗಳ ಪಕ್ಷಿಗಳಿಗೆ ಮನೆಯಾಗಿದೆ. ಕಡವೆ, ನರಿ, ಮುಂಗುಸಿ, ನವಿಲು ಮತ್ತು ವಿವಿಧ ರೀತಿಯ ಹಾವುಗಳನ್ನೂ ಜೆಎನ್‌ಯು ಪರಿಸರದಲ್ಲಿ ಕಾಣಬಹುದು. ಶಿಕ್ಷಣ ಮತ್ತು ಸಂಶೋಧನೆಗೆ ಹೆಸರಾಗಿರುವ ಜೆಎನ್‌ಯುವಿಗೆ, ಜವಾಹರ್ ಲಾಲ್ ನೆಹರು ಹೆಸರಿಡಬೇಕೆಂಬ ವಿಚಾರ, ಅವರು ಬದುಕಿದ್ದಾಗಲೇ ಪ್ರಸ್ತಾಪವಾಗಿತ್ತಂತೆ. ಆದರೆ, ಅದಕ್ಕೆ ನೆಹರು ಆಕ್ಷೇಪ ವ್ಯಕ್ತಪಡಿಸಿದ್ದರಂತೆ. ಆದರೆ, ನೆಹರು ನಿಧನದನಂತರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಅವರ ಹೆಸರನ್ನೇ ಇಡಲಾಯಿತಂತೆ. ಕೇಂದ್ರೀಯ ವಿಶ್ವವಿದ್ಯಾಲಯವಾಗಿರುವ ಜೆಎನ್‌ಯು 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, 650ಕ್ಕೂ ಹೆಚ್ಚು ಬೋಧಕರು ಮತ್ತು 1250 ಬೋಧಕೇತರ ಸಿಬ್ಬಂದಿಯನ್ನು ಹೊಂದಿದೆ.

NAAC ಅಂದರೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತಿನಿಂದ ಪ್ರಥಮ ರ್ಯಾಂಕ್ ಪಡೆದಿರುವ ಜೆಎನ್‌ಯುವಿಗೆ, 2017ರಲ್ಲಿ National Institutional Ranking Frameworkನವರು, ಅಖಿಲ ಭಾರತ ವಿವಿಗಳ ಮಟ್ಟದಲ್ಲಿ ಎರಡನೇ ಸ್ಥಾನ ನೀಡಿದ್ದಾರೆ. ರಾಷ್ಟ್ರಪತಿಯವರು ನೀಡುವ ಅತ್ಯುತ್ತಮ ವಿವಿ ಪ್ರಶಸ್ತಿಯನ್ನೂ ಜೆಎನ್‌ಯು ಇದೇ ವರ್ಷ ಪಡೆದುಕೊಂಡಿದೆ.

ಸಂಶೋಧನೆಯನ್ನೇ ಪ್ರಮುಖ ಉದ್ದೇಶವಾಗಿಹೊಂದಿರುವ ಜೆಎನ್‌ಯು, ಭಾರತದ ವಿಶ್ವವಿದ್ಯಾಲಯಗಳ ವ್ಯವಸ್ಥೆಗೆ ಹೊಸ ಆಯಾಮ ತಂದುಕೊಟ್ಟಿದೆ.

ಜೆಎನ್‌ಯುವಿನಲ್ಲಿ ತಾವು ಕೇಳಿದ್ದನ್ನೇ ಹುರುಹೊಡೆದು ಮತ್ತೆ ಅದನ್ನೇ ಬರೆಯುವಂಥ ಪದ್ಧತಿಯ ಬೋಧನಾ ಮಾಧ್ಯಮ ಅನುಸರಿಸುವುದಿಲ್ಲ, ಬದಲಿಗೆ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಗೆ ಉತ್ತೇಜನ ನೀಡಲಾಗುತ್ತದೆ. ಜ್ಞಾನದ ಸಮಗ್ರತೆಯಲ್ಲಿ ನಂಬಿಕೆಯಿಟ್ಟಿರುವ ಜೆಎನ್‌ಯುವಿನ ಶೈಕ್ಷಣಿಕ ರೀತಿನೀತಿಗಳು ಅಸಾಂಪ್ರದಾಯಕವಾಗಿವೆ. ಇಲ್ಲಿ ಸಾಂಪ್ರದಾಯಕ ವಿವಿಗಳಲ್ಲಿರುವಂತೆ ವಿಭಾಗಗಳನ್ನು ಸೃಷ್ಟಿಸಿಲ್ಲ, ಬದಲಿಗೆ ಒಂದಕ್ಕೊಂದು ಪೂರಕವಾಗುವ ವಿಷಯಗಳನ್ನು ಸ್ಕೂಲ್ ಅಥವ ಶಾಲೆಗಳೆಂಬ ವಿಶಾಲವಾದ ಘಟಕಗಳ ಅಡಿಯಲ್ಲಿ ತರಲಾಗಿದೆ. ಇವುಗಳ ಜೊತೆಗೆ,  ವಿವಿಧ ವಿಭಾಗಗಳನ್ನು ಒಳಗೊಳ್ಳುವ ಸಂಶೋಧನಾ ಸಮುದಾಯಗಳೂ ಜೆಎನ್‌ಯುವಿನಲ್ಲಿವೆ. ಸದ್ಯಕ್ಕೆ ಜೆ.ಎನ್‌.ಯು.ವಿನಲ್ಲಿ ಹತ್ತು ಸ್ಕೂಲ್‌ ಗಳು ಮತ್ತು ನಾಲ್ಕು ವಿಶೇಷ ಕೇಂದ್ರಗಳಿವೆ.

ಮೌಲ್ಯಮಾಪನದ ವಿಚಾರದಲ್ಲೂ ಕೂಡ  ಜೆ.ಎನ್‌.ಯು. ತನ್ನದೇ ಆದ ದಾರಿ ಹಿಡಿದಿದೆ. ವಿದ್ಯಾರ್ಥಿಯ ಸಾಧನೆಯನ್ನು ಅಳೆಯಲು ವರ್ಷದ ಕೊನೆಗೆ ಬರುವ ಪರೀಕ್ಷೆಯೊಂದನ್ನೇ ಮಾನದಂಡವಾಗಿ ಬಳಸುವ ಪದ್ಧತಿ ಜೆ.ಎನ್‌.ಯು.ವಿನಲ್ಲಿಲ್ಲ. ಇದರ ಬದಲಿಗೆ, ನಿರಂತರ ಕಲಿಕೆ ಪ್ರಕ್ರಿಯೆಗೆ ಇಲ್ಲಿ ಒತ್ತುಕೊಡಲಾಗುತ್ತದೆ, ಇದು ವಿದ್ಯಾರ್ಥಿಗಳ ಪಾಲುದಾರಿಕೆ ಮತ್ತು ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಜೆ.ಎನ್‌.ಯು.ವಿನಲ್ಲಿ ಹಲವಾರು ಅಧ್ಯಯನ ಪೀಠಗಳಿವೆ. ರಾಜೀವ್ ಗಾಂಧಿ ಪೀಠ, ನೆಲ್ಸನ್ ಮಂಡೇಲಾ ಪೀಠ, ಡಾ.ಅಂಬೇಡ್ಕರ್ ಪೀಠ, ಆರ್‌.ಬಿ.ಐ. ಅಧ್ಯಯನ ಪೀಠ, ಎಸ್‌.ಬಿ.ಐ. ಅಧ್ಯಯನ ಪೀಠ, ಸುಖೋಮಯ್ ಚಕ್ರವರ್ತಿ ಪೀಠ, ಪರಿಸರ ಕಾನೂನು ಪೀಠ, ಗ್ರೀಕ್, ತಮಿಳು ಮತ್ತು ಕನ್ನಡ ಅಧ್ಯಯನ ಪೀಠಗಳೂ ಜೆ.ಎನ್‌.ಯು.ನಲ್ಲಿವೆ.

ಇನ್ನು, ಇಷ್ಟೆಲ್ಲಾ ಹೆಸರುವಾಸಿಯಾಗಿರುವ ಜೆ.ಎನ್‌.ಯು.ವಿನ ಶುಲ್ಕ ಇತ್ಯಾದಿಗಳು ದುಬಾರಿಯಾಗಿರಬೇಕು ಅನ್ನುವುದು ನಿಮ್ಮ ನಿರೀಕ್ಷೆಯಾಗಿರಬಹುದು. ಆದರೆ,  ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈ ವಿಶ್ವವಿದ್ಯಾಲಯದ ವಾರ್ಷಿಕ ಶುಲ್ಕ ಎಷ್ಟು ಗೊತ್ತೇ? ಕೇವಲ ಮುನ್ನೂರು ರೂಪಾಯಿಗಳು, ಹೌದು ಮುನ್ನೂರೇ ರೂಪಾಯಿ. ಇವತ್ತು ಸಾಧಾರಣ ಹೋಟೆಲ್‌ನಲ್ಲಿ ಒಂದು ಹೊತ್ತಿನ ಊಟಕ್ಕೆ ಕೊಡಬೇಕಾದ ಹಣದಲ್ಲಿ, ಜೆಎನ್‌ಯುವಿನಲ್ಲಿ ಭರ್ತಿ ಒಂದು ವರ್ಷದ ಫೀಸ್ ಕಟ್ಟಬಹುದು. ಇದು ಇಷ್ಟಕ್ಕೇ ನಿಲ್ಲುವುದಿಲ್ಲ, ಜೆಎನ್‌ ಯು ಹಾಸ್ಟೆಲ್‌ ನ ಒಂದು ವರ್ಷದ ಫೀಸು, ತಿಂಗಳಿಗೆ ಎಷ್ಟಿರಬೇಕು ಊಹೆ ಮಾಡಿ, ಇಲ್ಲ ಬಿಡಿ, ಇದು ನಿಮ್ಮ ಊಹೆಗೆ  ನಿಲುಕದ ಸಂಗತಿ, ಏಕೆಂದರೆ ಇಲ್ಲಿನ ಹಾಸ್ಟೆಲ್ ಶುಲ್ಕ, ಪ್ರತಿ ತಿಂಗಳಿಗೆ 11 ರೂಪಾಯಿಗಳು ಅಥವ ಅರ್ಧ ಲೋಟ ಕಾಫಿಯ ಬೆಲೆ.  ಪರಿಶಿಷ್ಟ ಜಾತಿ, ವರ್ಗ ಮತ್ತು ಅಂಗವಿಕಲ ವಿದ್ಯಾರ್ಥಿಗಳು ಈ 11 ರೂಪಾಯಿಯನ್ನೂ ಕೊಡುವಂತಿಲ್ಲ.

ಇಲ್ಲಿನ ಹಾಸ್ಟೆಲ್‌ಗಳ ಊಟ, ತಿಂಡಿ ಶುಲ್ಕವೂ ಕೂಡ ತಿಂಗಳಿಗೆ 2 ಸಾವಿರ ರೂಪಾಯಿ ಮೀರುವುದಿಲ್ಲ. ಹೀಗಾಗಿ ಇಲ್ಲಿ ಊಟವೂ ಹೆಚ್ಚು ಕಮ್ಮಿ ಉಚಿತವೇ.  ಸದ್ಯಕ್ಕೆ  ಜೆಎನ್‌ಯುವಿನಲ್ಲಿ 22  ವಿದ್ಯಾರ್ಥಿ ನಿಲಯಗಳಿದ್ದು ಸುಮಾರು 7 ಸಾವಿರ ವಿದ್ಯಾರ್ಥಿಗಳು ಅಲ್ಲಿ ಆಶ್ರಯ ಪಡೆದಿದ್ದಾರೆ. ಈ ಹಾಸ್ಟೆಲ್‌ಗಳಿಗೆ ಭಾರತದ ಪ್ರಮುಖ ನದಿಗಳಾದ ಗಂಗಾ, ಯಮುನಾ, ಕಾವೇರಿ, ಗೋದಾವರಿ, ನರ್ಮದಾ, ಬ್ರಹ್ಮಪುತ್ರ ಇತ್ಯಾದಿ ಹೆಸರುಗಳನ್ನು ಇಡಲಾಗಿದೆ. 

ಜೆಎನ್‌ಯುವಿನ ಪ್ರತಿ ವಿದ್ಯಾರ್ಥಿಯ ಮೇಲೆ ಕೇಂದ್ರಸರ್ಕಾರ ಪ್ರತಿ ವರ್ಷ 3 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡುತ್ತದೆ. ಇಲ್ಲಿ ಪದವಿ ಪಡೆಯುವ  ಪ್ರತಿಯೊಬ್ಬ ವಿದ್ಯಾರ್ಥಿಯ ಒಟ್ಟಾರೆ ಖರ್ಚು, ಸುಮಾರು 11  ಲಕ್ಷ ಐವತ್ತು ಸಾವಿರ ರೂಪಾಯಿಗಳಾಗುತ್ತವಂತೆ. ಜೆಎನ್‌ಯು, ಜಗತ್ತಿನ ಹಲವು ಪ್ರಮುಖ ವಿವಿಗಳ ಜೊತೆ ಸಹಭಾಗಿತ್ವ ಹೊಂದಿದ್ದು, ವಿದ್ಯಾರ್ಥಿಗಳ ವಿನಿಮಯವೂ ಆಗುತ್ತದೆ.

ಜೆಎನ್‌ಯುವಿನ ವಿದ್ಯಾರ್ಥಿಯಾಗುವುದು, ‘ಬಿಡುಗಡೆ ಪಡೆದಂಥ ಮತ್ತು ದಿಗಿಲುಹುಟ್ಟಿಸುವಂಥ ಎರಡೂ ಅನುಭವಗಳನ್ನು ಏಕಕಾಲದಲ್ಲಿ ತಂದೊಡ್ಡುತ್ತದೆ’ ಅನ್ನುವುದು ಅಲ್ಲಿನ ಹಳೆಯ ವಿದ್ಯಾರ್ಥಿಗಳ ಮಾತು. ಆದರೆ, ಜೆಎನ್‌ಯು ಸೇರಿದ ಎಲ್ಲರಿಗೂ ಹೊಸರೀತಿಯ ಅನುಭವ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಜೆಎನ್‌ಯುವಿನಲ್ಲಿ ಮುಕ್ತ ಚಿಂತನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ.  ನೀವು ಏನನ್ನು ಓದಬೇಕು, ಹೇಗೆ, ಯಾವಾಗ ಓದಬೇಕು ಅನ್ನುವುದೆಲ್ಲವೂ ನಿಮಗೇ ಬಿಟ್ಟ ವಿಚಾರ. ಜೆಎನ್‌ಯುವಿನಲ್ಲಿ ಅಟೆಂಡೆನ್ಸ್ ಕಡ್ಡಾಯವಲ್ಲ. ಆದರೆ, ವಿದ್ಯಾರ್ಥಿಗಳು ತಮ್ಮ ಗುರಿಯಿಂದ ದೂರ ಸರಿಯಬಾರದು ಅಷ್ಟೇ.

ಜೆಎನ್‌ಯು ಕ್ಯಾಂಪಸ್ ಜೀವನ ಅತ್ಯಂತ ಮುಕ್ತ ರೀತಿಯಲ್ಲಿದೆ. ಇಲ್ಲಿ 24 ಗಂಟೆಯೂ ಯಾವುದೇ ಹಾಸ್ಟೆಲಿನ ಬಾಗಿಲು ಹಾಕುವುದಿಲ್ಲ. ಇಲ್ಲಿನ ಗ್ರಂಥಾಲಯಗಳು ಮಧ್ಯರಾತ್ರಿ 12 ರವರೆಗೆ ತೆರೆದಿರುತ್ತವೆ. ಇಲ್ಲಿನ ಬೃಹತ್ ಓದುವ ಅಂಗಣ, ಇಡೀ ದಿನ ತೆರೆದಿರುತ್ತದೆ.  ಇಲ್ಲಿ ಮಹಿಳಾ ವಿದ್ಯಾರ್ಥಿಗಳು ಮತ್ತು ಪುರುಷ ವಿದ್ಯಾರ್ಥಿಗಳ ನಡುವೆ ಯಾವುದೇ ಅಡೆ ತಡೆಗಳಲ್ಲದ ರೀತಿಯ ಸ್ನೇಹ ಸಂಬಂಧಗಳಿರುತ್ತವೆ. ಹಗಲು ರಾತ್ರಿಯ ಬೇಧವಿಲ್ಲದೆ, ಇಡೀ ಕ್ಯಾಂಪಸ್‌ನ ಯಾವುದೇ ಪ್ರದೇಶದಲ್ಲೂ ಕಾಲಕಳೆಯುವ ಸ್ವಾತಂತ್ರ್ಯ ಇಲ್ಲಿನ ವಿದ್ಯಾರ್ಥಿಗಳಿಗಿದೆ. ಜೆಎನ್‌ಯುವಿನಲ್ಲಿ ಹಾಸ್ಟೆಲ್ ಗಳ ಜೊತೆಗೆ ಹಲವಾರು ಕ್ಯಾಂಟೀನ್‌ಗಳು ಮತ್ತು ದಾಭಾಗಳೂ ಇವೆ. ಇಲ್ಲಿ ಇಡೀ ದಿನ ವಿದ್ಯಾರ್ಥಿಗಳ ಗುಂಪುಗಳು ಹಲವು ರೀತಿಯ ಚರ್ಚೆ ನಡೆಸಿರುತ್ತವೆ. 

ಜೆಎನ್‌ಯು ವಿನಲ್ಲಿ ಓದುವುದು ಕೇವಲ ಪುಸ್ತಕದ ಬದನೆಕಾಯಿ ತಿಂದಂತಲ್ಲ. ಇಲ್ಲಿ ಹಲವಾರು ವಿಚಾರ ಸಂಕಿರಣಗಳು, ಸಾಂಸ್ಕೃತಿಕ ಸಂಜೆಗಳು ನಡೆದೇ ಇರುತ್ತವೆ.

ದೇಶದ ಅತ್ಯಂತ ಪ್ರತಿಭಾವಂತ ವ್ಯಕ್ತಿಗಳು ಜೆಎನ್‌ಯು ಕ್ಯಾಂಪಸ್‌ಗೆ ಬಂದು ಭಾಷಣ ಮಾಡುತ್ತಾರೆ. ಜೆಎನ್‌ಯು ಕ್ಯಾಂಪಸ್‌ನಲ್ಲಿ ತಡ ರಾತ್ರಿಯವರೆಗೂ ಮಾತುಕತೆ, ಚರ್ಚೆಗಳು ನಡೆದೇ ಇರುತ್ತವೆ. ಯಾವುದೋ ಒಂದು ಆಡಿಟೋರಿಯಮ್‌ ನಲ್ಲಿ ಸಿನಿಮಾ ಪ್ರದರ್ಶನವಿರುತ್ತದೆ. ವಿಶ್ವವಿದ್ಯಾಲಯದ ನಾಟಕ ಸಂಘ, ಸಿನಿಮಾ, ಸಂಗೀತ, ಲಲಿತ ಕಲೆಗಳ ಸಂಘ, ಛಾಯಾಚಿತ್ರ ಸಂಘ, ಭಾಷಣ ಸಂಘ, ಪರಿಸರ ಮತ್ತು ವನ್ಯಜೀವಿ ಸಂಘಗಳ ಆಶ್ರಯದಲ್ಲಿ  ವರ್ಷವಿಡೀ ಒಂದಲ್ಲಾ ಒಂದು ಕಾರ್ಯಕ್ರಮಗಳು ಇದ್ದೇ ಇರುತ್ತವೆ.

ಜೆಎನ್‌ಯು, humanities coursesಗೆ ಅಂದರೆ ಮಾನವಿಕ ವಿಷಯಗಳ ಕೋರ್ಸ್‌ಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಆಧುನಿಕ ಭಾರತದ ಹಲವಾರು ಪ್ರಮುಖ ಚಿಂತಕರು, ಇತಿಹಾಸಕಾರರು ಮತ್ತು ಪತ್ರಕರ್ತರು ಜೆಎನ್‌ಯು ವಿನಲ್ಲೇ ಶಿಕ್ಷಣ ಪಡೆದವರು ಅನ್ನುವುದು ಹೆಮ್ಮೆಯ ವಿಚಾರ.

ಜೆಎನ್‌ಯು ಯಾವುದೇ ವಿದ್ಯಾರ್ಥಿಯನ್ನು ಮಗುವಿನಂತೆ ನೋಡುವುದಿಲ್ಲ ಬದಲಿಗೆ ಪ್ರೌಢ ವ್ಯಕ್ತಿಯನ್ನಾಗಿ ನೋಡುತ್ತದೆ, ತಮಗೆ ತಾವು ಜವಾಬ್ದಾರಿಯುತರಾಗುವುದನ್ನು ಕಲಿಸುತ್ತದೆ. ಈ ವರೆಗಿನ ತಮ್ಮ ಚಿಂತನೆಗಳನ್ನು ಪರಿಶೀಲಿಸಿಕೊಳ್ಳುವಂತೆ ಮಾಡುತ್ತದೆ, ತಮಗೆ ತಾವೇ ಸವಾಲೆಸೆದುಕೊಳ್ಳುವಂತೆ ಮಾಡುತ್ತದೆ, ಹೊಸ ಚಿಂತನೆಗಳು ಬೆಳೆಯಲು ಇಂಬು ನೀಡುತ್ತದೆ.

ಜೆಎನ್‌ಯುವಿನ ವಿದ್ಯಾರ್ಥಿಯಾಗುವುದೇ ಒಂದು ಅದ್ಭುತ ಅನುಭವವಾಗಿದ್ದು, ಅಲ್ಲಿನ ವಿದ್ಯಾರ್ಥಿ ಜೀವನ ಹೇಗಿರುತ್ತದೆ ಅನ್ನುವುದನ್ನು ಪದಗಳಲ್ಲಿ ಕಟ್ಟಿಕೊಡುವುದು ಸುಲಭದ ಕೆಲಸವಲ್ಲ. ಜೆಎನ್‌ಯು, ದೇಶದ ಇತರೆ ಎಲ್ಲಾ ವಿವಿಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಬೌದ್ಧಿಕ ಮತ್ತು ರಾಜಕೀಯ ಸ್ವಾತಂತ್ರ್ಯವಿದೆ.  ಹೀಗಾಗಿ, ಇಲ್ಲಿ ಒಂದಲ್ಲಾ ಒಂದು ಪ್ರತಿಭಟನೆ ಅಥವ ಸತ್ಯಾಗ್ರಹ ನಡೆದೇ ಇರುತ್ತದೆ.

ಜೆಎನ್‌ಯು ತನ್ನ ವಿದ್ಯಾರ್ಥಿಗಳನ್ನು ಶಕ್ತಿಶಾಲಿ ವ್ಯಕ್ತಿಗಳನ್ನಾಗಿಸಿ ಬೌದ್ಧಿಕ ಸಾಮರ್ಥ್ಯಗಳನ್ನು ಹಿಗ್ಗಿಸಿಕೊಳ್ಳುವಂತೆ ಮಾಡುತ್ತದೆ, ವೈಚಾರಿಕತೆ ಬೆಳೆಸುತ್ತದೆ.  

ವಿದ್ಯಾರ್ಥಿಗಳ ಸ್ವರ್ಗ ಎಂದೇ ಕರೆಯಲ್ಪಡುವ ಜೆಎನ್‌ಯುವಿನಲ್ಲಿ  ಭಾರತದ ಬಹುತೇಕ ಎಲ್ಲಾ ರಾಜ್ಯಗಳ ಮತ್ತು ನೆರೆಯ ದೇಶಗಳ ವಿದ್ಯಾರ್ಥಿಗಳನ್ನೂ ಕಾಣಬಹುದು.

ರಾಷ್ಟ್ರದ ಸಮಗ್ರತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾತಂತ್ರ ಮೌಲ್ಯಗಳು, ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಜವಾಹರ್ ಲಾಲ್ ವಿಶ್ವವಿದ್ಯಾಲಯದಿಂದ ಹೊಸ ಚಿಂತನೆಗಳು ಹೊರಹೊಮ್ಮಿವೆ.

ಜೆಎನ್‌ಯುವಿನ ಹಲವಾರು ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು, ತಮ್ಮ ಶೈಕ್ಷಣಿಕ ಸಾಧನೆಗಾಗಿ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಲವಾರು ಮಹತ್ವದ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.

ಜೆಎನ್‌ಯುವಿನ ಪ್ರಾಧ್ಯಾಪಕರು ಹಲವು ದೇಶಗಳ ರಾಯಭಾರಿಗಳಾಗಿ ಕೆಲಸಮಾಡಿದ್ದಾರೆ, ಯೋಜನಾ ಆಯೋಗದಂಥ ಸಂಸ್ಥೆಗಳ ಸದಸ್ಯರಾಗಿ ಕೆಲಸ ಮಾಡಿದ್ದಾರೆ, ಇತರೆ ವಿವಿಗಳ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಜೆಎನ್‌ಯುವಿನ ಹಳೆಯ ವಿದ್ಯಾರ್ಥಿಗಳಲ್ಲಿ, ವಿವಿಧ ದೇಶದ ಪ್ರಧಾನಿಗಳು, ಆರ್‌ಬಿಐನ ಡೆಪ್ಯುಟಿ ಗವರ್ನರ್‌ಗಳು, ಮಾಧ್ಯಮ ವ್ಯಕ್ತಿಗಳು, ರಾಜತಾಂತ್ರಿಕರು, ಬರಹಗಾರರು, ಪ್ರಾಧ್ಯಾಪಕರು, ಐಎಎಸ್, ಐಎಫ್‌ಎಸ್ ಅಧಿಕಾರಿಗಳೂ ಇದ್ದಾರೆ.

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಕಮ್ಯುನಿಸ್ಟ್ ಪಕ್ಷದ ಪ್ರಕಾಶ್ ಕಾರತ್, ಸೀತಾರಾಮ್ ಯೆಚೂರಿ, ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್, ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್, ನೇಪಾಳದ ಮಾಜಿ ಪ್ರಧಾನಿ ಬಾಬೂರಾಮ್ ಭಟ್ಟಾರೈ ಮೊದಲಾದವರು, ಜೆಎನ್‌ಯುವಿನ ಹಳೆಯ ವಿದ್ಯಾರ್ಥಿಗಳು. ಇವೆಲ್ಲವೂ ಜೆಎನ್‌ಯುವಿನ ಶೈಕ್ಷಣಿಕ ಹೆಗ್ಗಳಿಕೆಗಳು.

ಆದರೆ, ಕೆಲವು ಬಾರಿ ತಪ್ಪು ಕಾರಣಗಳಿಗಾಗಿಯೂ ಜೆಎನ್‌ಯು ಸುದ್ದಿಯಲ್ಲಿರುತ್ತದೆ. ಕಳೆದ ವರ್ಷ ಜೆಎನ್ಯುವಿನಲ್ಲಿ,  ಸಂಸತ್‌ ಮೇಲಿನ ಭಯೋತ್ಪಾದಕರ ದಾಳಿ ರೂವಾರಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದರ ಮೂರನೇ ವರ್ಷದ ಆಚರಣೆ ಹಿನ್ನೆಲೆ ‘ಎ ಕಂಟ್ರಿ ವಿತೌಟ್ ಎ ಪೋಸ್ಚ್ ಆಫೀಸ್’ ಎಂಬ ಹೆಸರಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿ, ಕೇಂದ್ರಸರ್ಕಾರದ ಕ್ರಮವನ್ನು ಹಾಡು ಮತ್ತು  ಚರ್ಚೆಗಳ ಮೂಲಕ ವಿರೋಧಿಸಲು ನಿರ್ಧರಿಸಲಾಗಿತ್ತು. ಆದರೆ, ಈ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆ ಕೂಗಲಾಯಿತು ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ, ದೇಶಾದ್ಯಂತ ಕೋಲಾಹಲ ಉಂಟಾಗಿತ್ತು. ಜೆಎನ್‌ಯು ವಿದ್ಯಾರ್ಥಿ ಸಂಘದ  ಮುಖಂಡ ಕನ್ಹಯ್ಯ ಕುಮಾರ್, ಉಮರ್ ಖಲೀದ್ ಮತ್ತಿತರರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿತ್ತು. ಈ ವಿಚಾರದಲ್ಲಿ ಎಡಪಕ್ಷಗಳು, ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ತಮ್ಮ ತಮ್ಮ ಧೋರಣೆಗೆ ಅನುಸಾರ ವಿಚಾರಗಳನ್ನು ಮಂಡಿಸುತ್ತಾ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದ್ದರು. ಆದರೆ, ಇಂಥ ಯಾವುದೇ ವಿವಾದಗಳೂ ಜೆಎನ್‌ಯುವಿನ ಜನಪ್ರಿಯತೆಗೆ ಧಕ್ಕೆ ಉಂಟುಮಾಡಲು ಸಾಧ್ಯವಾಗಲಿಲ್ಲ.

ತಾವು ಓದಿ ಉದ್ಧಾರವಾಗುವುದಕ್ಕಾಗಿ ದೇಶದಿಂದ ಇಷ್ಟೆಲ್ಲಾ ಅನುಕೂಲ ಪಡೆಯುವ ಇಲ್ಲಿನ ವಿದ್ಯಾರ್ಥಿಗಳಲ್ಲಿ ಕೆಲವರು, ದೇಶ ವಿರೋಧಿ ನಿಲುವು ತಳೆದರೆ ಅದು ತಪ್ಪು. ಆದರೆ, ಅಭಿಪ್ರಾಯ ಬೇಧಗಳನ್ನೇ ದೇಶ ವಿರೋಧಿ ಕೃತ್ಯಗಳು ಎಂದು ಬಿಂಬಿಸುವುದು ಕೂಡ ಅಸಹಿಷ್ಣುತೆಯಾಗುತ್ತದೆ.

ಜೆಎನ್‌ಯುವಿಗೆ ಎಡಪಂಥೀಯ ಚಿಂತನೆಯನ್ನು ಹೊಂದಿರುವ ಹಿಂದೂ ವಿರೋಧಿ ವಿಶ್ವವಿದ್ಯಾಲಯ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಆದರೆ, ನಿಜವಾಗಿ ಅರ್ಥಮಾಡಿಕೊಳ್ಳುವುದಾದರೆ, ಜೆಎನ್‌ಯುವಿನಲ್ಲಿ ಯಾರೂ ಹಿಂದೂ ದ್ವೇಷಿಗಳಿಲ್ಲ. ಹಿಂದೂ ಧರ್ಮದ ಕೆಲವು ವಿಚಾರಗಳನ್ನು ಒಪ್ಪದೇ ಇರುವವರಿರಬಹುದು ಅಷ್ಟೇ. ಹಿಂದೂ ಧರ್ಮದಲ್ಲಿನ ಲೋಪದೋಷಗಳನ್ನು ಪ್ರಶ್ನೆ ಮಾಡುವವರನ್ನೇ ಹಿಂದೂ ವಿರೋಧಿಗಳೆಂದು ಬಣ್ಣಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ.

ಇವೆಲ್ಲಾ ವಿಚಾರಗಳು ಮತ್ತು ವಿವಾದಗಳ ನಡುವೆಯೂ ಜವಾಹರ್ ಲಾಲ್ ನೆಹರು ವಿವಿ ಅಥವ ಜೆಎನ್‌ಯು ಅನ್ನುವುದು, ಭಾರತೀಯ ಸಮಾಜಕ್ಕಿಂತ ಕನಿಷ್ಟ 30 ವರ್ಷಗಳಷ್ಟು ಮುಂದಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನೇ ಮೊಟಕುಗೊಳಿಸುವ ಪ್ರಯತ್ನಗಳು ನಡೆಯುತ್ತಿರುವ ಇಂಥ ಸಂದರ್ಭದಲ್ಲಿ,  ಮುಕ್ತ ಚಿಂತನೆಗಳನ್ನು ಮತ್ತು ವೈಚಾರಿಕತೆಯನ್ನು ಬೆಳೆಸುವ ಜೆಎನ್‌ಯುವಿನಂಥ ಇನ್ನೂ ಹಲವಾರು ವಿಶ್ವವಿದ್ಯಾಲಯಗಳ ಅಗತ್ಯ ಭಾರತ ದೇಶಕ್ಕಿದೆ.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ