ಭಾರತಕ್ಕೆ ಬುಲೆಟ್ ರೈಲು ಬೇಕಿತ್ತಾ..?

Kannada News

23-09-2017 603

ದೇಶದಲ್ಲಿ ಯಾರೂ ಕೂಡ ನಮಗೆ ಇಂಥದ್ದೊಂದು ಬೇಕು ಎಂದು ಇವರನ್ನು ಕೇಳಿರಲಿಲ್ಲ. ನಾವು ಇಂಥ ವ್ಯವಸ್ಥೆಯಲ್ಲಿ ಓಡಾಡಲೇಬೇಕು ಎಂದು ಇವರಿಗೆ ದುಂಬಾಲು ಬಿದ್ದಿರಲಿಲ್ಲ. ಹೀಗಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಅತ್ಯಂತ ಅನಗತ್ಯವೆಂದು ಬಣ್ಣಿಸಲ್ಪಟ್ಟ ಈ ಯೋಜನೆಗೆ, ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಎಂಬ ಹೆಸರಿನಲ್ಲಿ ಚಾಲನೆ ನೀಡಲಾಗಿದೆ. ಹೌದು ನಾವು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ಬಗ್ಗೆ ಮಾತನಾಡುತ್ತಿದ್ದೇವೆ.

ಗುಜರಾತ್ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಬುಲೆಟ್ ರೈಲು ಯೋಜನೆಗೆ ಹಸಿರುನಿಶಾನೆ ತೋರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ,  ಈ ಯೋಜನೆಗೆ ಚಾಲನೆ ನೀಡಿದ ನಂತರ ವ್ಯಕ್ತವಾದ ಅಭಿಪ್ರಾಯಗಳಲ್ಲಿ ಬಹುತೇಕರು, ಈ ಯೋಜನೆ ಭಾರತ ಸರ್ಕಾರದ ತಪ್ಪು ಆದ್ಯತೆಗೆ ಹಿಡಿದ ಕೈಗನ್ನಡಿ ಎಂದೇ ಹೇಳಿದ್ದಾರೆ.

ಇದೇ ವೇಳೆ, ಈ ಯೋಜನೆ ಬಗ್ಗೆ ಸಾಕಷ್ಟು ಜೋಕುಗಳೂ ಸೃಷ್ಟಿಯಾಗಿವೆ. ಗುಜರಾತ್‌ ನಲ್ಲಿ ಪಾನನಿಷೇಧ ಜಾರಿಯಲ್ಲಿದೆ, ಹೀಗಾಗಿ ಅದರ ಸೇವನೆ ಅಗತ್ಯಬಿದ್ದವರೆಲ್ಲಾ ಸಂಜೆ 5 ಗಂಟೆವರೆಗೆ ಅಹಮದಾಬಾದ್‌ ನಲ್ಲಿ ಕೆಲಸ ಮಾಡಿ ಆನಂತರ ಬುಲೆಟ್ ರೈಲುಹತ್ತಿ, ಸಂಜೆ 7ಕ್ಕೆ ಮುಂಬೈ ತಲುಪಬಹುದು. ರಾತ್ರಿ 9ರ ವರೆಗೂ ಅಲ್ಲಿ ಬೇಕಾದದ್ದೆಲ್ಲವನ್ನೂ ತಿಂದು,ಕುಡಿದು ರೈಲು ಹತ್ತಿ, ರಾತ್ರಿ 11ಕ್ಕೆ ಮತ್ತೆ ಅಹಮದಾಬಾದ್ ಸೇರಿ ಮಲಗಬಹುದು ಎಂಬ ಜೋಕ್ ಹೆಚ್ಚಾಗಿ ಕೇಳಿ ಬರುತ್ತಿದೆ. ಜೋಕುಗಳು ಹಾಗಿರಲಿ, ಯಾವುದೇ ಹೊಸ ಯೋಜನೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಆ ಯೋಜನೆಯ ಲಾಭ ಮತ್ತು ನಷ್ಟಗಳ ಬಗ್ಗೆ ಚರ್ಚೆಯಾಗುವುದು ಸಹಜ. ಹೀಗಾಗಿ, ಮೊದಲು ಈ ಬುಲೆಟ್ ರೈಲು ಯೋಜನೆಯಿಂದ ಯಾವ ರೀತಿಯ ಲಾಭ ಆಗಬಹುದು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಬುಲೆಟ್ ರೈಲು ಯೋಜನೆಯಿಂದ 505 ಕಿಲೋಮೀಟರ್ ಅಂತರದ ಮುಂಬೈ-ಅಹಮದಾಬಾದ್ ರೈಲು ಮಾರ್ಗದ ಪ್ರಯಾಣ ಅವಧಿ ಸುಮಾರು ಎಂಟು ಗಂಟೆಗಳಿಂದ ಎರಡೂವರೆ ಘಂಟೆಗಳಿಗೆ ಇಳಿಕೆಯಾಗುತ್ತದೆ. ಅಹಮದಾಬಾದ್ ಮತ್ತು ಮುಂಬೈ ನಡುವಿನ ಈ ಯೋಜನೆಯಿಂದ ಸಾಕಷ್ಟು ಆರ್ಥಿಕ ಬೆಳವಣಿಗೆಯೂ ಆಗುತ್ತದೆ. ಈ ಪ್ರದೇಶದಲ್ಲಿನ ಇತರೆ ನಗರಗಳಲ್ಲೂ ವಾಣಿಜ್ಯ ಚಟುವಟಿಕೆ ಹೆಚ್ಚುತ್ತದೆ ಮತ್ತು ಆ ನಗರಗಳಲ್ಲಿ ನೆಲೆಸುವ ಜನರ ಸಂಖ್ಯೆ ಹೆಚ್ಚಾಗಿ, ಮುಂಬೈ ಮತ್ತು ಅಹಮದಾಬಾದ್ ನಗರಗಳ ಮೇಲಿನ ಒತ್ತಡ ಕಡಿಮೆ ಆಗುವ ಸಾಧ್ಯತೆಗಳಿವೆ. ಹೀಗಾಗಿ, ಈ ಮಾರ್ಗ ಜನಪ್ರಿಯವಾಗಬಹುದು ಮತ್ತು ದಿನಗಳು ಕಳೆದಂತೆ ಲಾಭದಾಯಕವೂ  ಆಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಆರಂಭದ ದಿನಗಳಲ್ಲಿ ಹತ್ತು ಬೋಗಿಗಳನ್ನು ಹೊಂದಲಿರುವ ಈ ರೈಲಿನಲ್ಲಿ ಸುಮಾರು 750 ಜನರು ಪ್ರಯಾಣ ಮಾಡಬಹುದಾಗಿದೆ. ಒಂದು ದಿನದಲ್ಲಿ ಎರಡೂ ಕಡೆಯಿಂದ ಒಟ್ಟಾರೆ 36 ಸಾವಿರ ಜನ ಪ್ರಯಾಣಿಸಲು ಅವಕಾಶವಿದೆ.  ಈ ಬುಲೆಟ್ ರೈಲು ಯೋಜನೆ ಕಾರ್ಯಗತವಾದ ಮೇಲೆ, ಅದರ ಉಸ್ತುವಾರಿ ಮತ್ತು ನಿರ್ವಹಣೆಯಲ್ಲಿ ನಾಲ್ಕುಸಾವಿರ ಜನರಿಗೆ ನೇರ ಉದ್ಯೋಗ ಮತ್ತು 20 ಸಾವಿರ ಜನರಿಗೆ ಪರೋಕ್ಷ ಉದ್ಯೋಗ ದೊರೆಯುತ್ತದೆ ಎಂದು ಹೇಳಲಾಗಿದೆ.

Shinkansen’ ಎಂದು ಜಪಾನೀ ಭಾಷೆಯಲ್ಲಿ ಕರೆಯಲ್ಪಡುವ ಬುಲೆಟ್ ರೈಲು ಯೋಜನೆ, ಭಾರತ ಸ್ವಾತಂತ್ರ್ಯ ಪಡೆದಿದ್ದರ 75ನೇ ವರ್ಷಾಚರಣೆ ವೇಳೆಗೆ ಅಂದರೆ, 2022ರ ಆಗಸ್ಟ್ 15ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಆದರೆ, ಭಾರತದಲ್ಲಿ ಕೈಗೊಳ್ಳುವ ಯಾವುದೇ ಯೋಜನೆಗಳೂ ಕೂಡ ಅಂದುಕೊಂಡ ಸಮಯದಲ್ಲಿ ಪೂರ್ಣವಾಗಿಲ್ಲ ಅನ್ನುವ ವಿಚಾರವೂ ಸತ್ಯ ಅನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

ಆದರೆ, ಈ ಯೋಜನೆಗೆ ಸಂಬಂಧಪಟ್ಟಂತೆ ಮೋದಿ ಸರ್ಕಾರ ಸಾಕಷ್ಟು ಸುಳ್ಳುಗಳನ್ನು ಹೇಳುತ್ತಿದೆ. ಜಪಾನ್ ದೇಶ, ಭಾರತದ ಮೇಲೆ ಭಾರಿ ಪ್ರೀತಿ ತೋರಿಸುತ್ತಿದೆ, ಈ ಯೋಜನೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ ಎಂಬೆಲ್ಲಾ ಮಾತುಗಳನ್ನು ಹೇಳುವ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ, ಆದರೆ ವಸ್ತು ಸ್ಥಿತಿಯೇ ಬೇರೆ ಇದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಜಪಾನ್ ದೇಶದವರು ಕಳೆದ ಐವತ್ತು ವರ್ಷಗಳಿಂದಲೂ ಬುಲೆಟ್ ರೈಲು ತಂತ್ರಜ್ಞಾನ ರೂಪಿಸಿ, ರೈಲುಗಳನ್ನು ಓಡಿಸುತ್ತಿದ್ದಾರೆ. ಆದರೆ, ತಮ್ಮ ಹೆಗ್ಗಳಿಕೆಯ ಈ Shinkasen ಅಂದರೆ, ಬುಲೆಟ್ ರೈಲು ತಂತ್ರಜ್ಞಾನವನ್ನು ಇತರ ದೇಶಗಳಿಗೆ ತಲುಪಿಸಿ ಲಾಭ ಮಾಡಿಕೊಳ್ಳಲು ಅವರಿಗೆ ಇಲ್ಲಿಯವರೆಗೂ ಸಾಧ್ಯವಾಗಿರಲಿಲ್ಲ. ಈ ಹಿಂದೆ, ಅಮೆರಿಕ, ಚೀನಾ ಮತ್ತಿತರ ದೇಶಗಳಿಗೆ ಬುಲೆಟ್ ರೈಲು ತಂತ್ರಜ್ಞಾನವನ್ನು ತಲುಪಿಸಲು ಪ್ರಯತ್ನಿಸಿದ್ದರಾದರೂ ಸಾಧ್ಯವಾಗಿರಲಿಲ್ಲ. ಇದೀಗ ಭಾರತ, ಜಪಾನೀಯರ ಮೊದಲ ಗ್ರಾಹಕನಾಗಿ ಸಿಕ್ಕಿದೆ. ಜಪಾನ್ ದೇಶ ನೀಡುತ್ತಿರುವ 88 ಸಾವಿರ ಕೋಟಿ ರೂಪಾಯಿಗಳ ಸಾಲಕ್ಕೆ ಕೇವಲ ಶೇಕಡ 0.1 ರಷ್ಟು ಮಾತ್ರ ಬಡ್ದಿ ವಿಧಿಸಲಾಗುತ್ತದೆ, ಇದು  ಹೆಚ್ಚೂಕಡಿಮೆ ಬಡ್ಡಿಯೇ ಇಲ್ಲದ ಸಾಲ ಎಂದು ಪ್ರಧಾನಿ  ಮೋದಿ ಹೇಳುತ್ತಿರುವುದು ಮಾತ್ರ ಸರಿಯಲ್ಲ.

ಈ ಸಾಲ ಮರುಪಾವತಿಗೆ 50 ವರ್ಷಕ್ಕೂ ಹೆಚ್ಚು ಸಮಯ ಇರಬಹುದು, ಆದರೆ, ಮರುಪಾವತಿಯಾಗುವ ಸಾಲದ ಮೌಲ್ಯ, ಭಾರತ ಪಡೆಯುವ ಸಾಲದ ಮೊತ್ತಕ್ಕಿಂತ ತುಂಬಾ ಹೆಚ್ಚಾಗಲಿದೆ. ಏಕೆಂದರೆ, ಅದು ಭಾರತ ಮತ್ತು ಜಪಾನ್ ದೇಶಗಳಲ್ಲಿನ ಹಣದುಬ್ಬರ ದರಗಳ ವ್ಯತ್ಯಾಸವನ್ನು ಅವಲಂಬಿಸಿರುತ್ತದೆ. ಮುಂದಿನ ವರ್ಷಗಳಲ್ಲಿ ಭಾರತದ ರೂಪಾಯಿ ಮೌಲ್ಯ ಜಪಾನ್ ದೇಶದ ಯೆನ್‌ ಗಿಂತ ಸಾಕಷ್ಟು ಕಡಿಮೆಯಾಗುತ್ತಾ ಹೋಗುವ ನಿರೀಕ್ಷೆ ಇದೆಯೇ ಹೊರತು ಮೇಲಕ್ಕೇರುವ ಸಾಧ್ಯತೆಗಳು ಕಡಿಮೆ.

ಇಲ್ಲಿ ಮತ್ತೊಂದು ವಿಚಾರವೇನೆಂದರೆ, ಶೇಕಡ 0.1 ರಷ್ಟು ಮಾತ್ರ ಬಡ್ಡಿ ಅನ್ನುವ ವಿಚಾರ, ಭಾರತದಲ್ಲಿನ ಜನರಿಗೆ ಅಬ್ಬಾ ಎಷ್ಟೊಂದು ಕಡಿಮೆ ಬಡ್ಡಿ ದರ ಎಂದು ಅನ್ನಿಸುತ್ತದೆ, ಆದರೆ, ಆದರೆ ಜಪಾನ್‌ ದೇಶದ ಪರಿಸ್ಥಿತಿಗೆ ಬಂದರೆ, ಈ ಬಡ್ಡಿದರ ಕಡಿಮೆಯೇನೂ ಅಲ್ಲ. ಏಕೆಂದರೆ, ಜಪಾನ್ ದೇಶ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಭಾರತಕ್ಕೆ ಯಾವುದೇ ಲಾಭ ಮಾಡಿಕೊಟ್ಟಿಲ್ಲ, ಬದಲಿಗೆ ಭಾರತವೇ ಜಪಾನ್ ದೇಶಕ್ಕೆ ದೊಡ್ಡ ಲಾಭ ಮಾಡಿಕೊಟ್ಟಿದೆ.

ಜಪಾನ್ ದೇಶದ ಬಹುತೇಕ ಬ್ಯಾಂಕ್‌ ಗಳ ತಿಜೋರಿ ತುಂಬಿಹೋಗಿದ್ದು, ಸಾಲವನ್ನು ನೆಗೆಟಿವ್ ಇಂಟರೆಸ್ಟ್, ಅಂದರೆ ಗ್ರಾಹಕರು ಪಡೆಯುವ ಸಾಲಕ್ಕೆ ಬ್ಯಾಂಕಿನವರೇ ಬಡ್ಡಿಕೊಡುವ ಪರಿಸ್ಥಿತಿಯಲ್ಲಿದ್ದಾರಂತೆ. ಇದರಿಂದಲಾದರೂ ಬ್ಯಾಂಕುಗಳಿಗೆ ಒಂದಿಷ್ಟು ವ್ಯವಹಾರವಾಗಲಿ, ದೇಶದಲ್ಲಿ ಒಂದಿಷ್ಟು ವಹಿವಾಟುಗಳು ನಡೆಯಲಿ ಎಂಬ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರಂತೆ. ಈ ರೀತಿ ಮಾಡುವುದು ತೀರಾ ಅಸಾಂಪ್ರದಾಯಕ ಪದ್ಧತಿ. ಆದರೆ, ಜಪಾನ್ ದೇಶದ ಆರ್ಥಿಕತೆಯನ್ನು ಕಾಡುತ್ತಿರುವ ಹಣದ ಮೌಲ್ಯ ಕುಸಿತವನ್ನು ನೀಗಿಸಿಕೊಳ್ಳಲು ಹೀಗೆ ಮಾಡಬೇಕಾಗಿದೆಯಂತೆ. ಆದರೆ, ಈ ಎಲ್ಲಾ  ವಿಚಾರಗಳನ್ನು ಭಾರತದ ಜನತೆಯಿಂದ ಮರೆಮಾಚುತ್ತಿರುವ ಮೋದಿ ಸರ್ಕಾರ, ಶೇಕಡ 0.1ರಷ್ಟು ಬಡ್ಡಿದರದಲ್ಲಿ ಸಾಲಸಿಗುತ್ತಿರುವುದನ್ನೇ ಏನೋ ಒಂದು ಸಾಧನೆ ಎಂಬಂತೆ ತೋರಿಸಿಕೊಳ್ಳುತ್ತಿದೆ.

ಜಪಾನ್ ದೇಶದಲ್ಲಿ ಕಡಿಮೆ ಅವಧಿ ಬಡ್ಡಿ ದರ ಸದ್ಯಕ್ಕೆ ಶೇ 0.06ರಷ್ಟರ ಮಟ್ಟದಲ್ಲಿದೆ. ಹತ್ತು ವರ್ಷಗಳ ಬಾಂಡ್ ಮೇಲೆ ಜಪಾನ್ ಸರ್ಕಾರ ಕೇವಲ ಶೇ.0.04ರಷ್ಟು ಬಡ್ಡಿ ನೀಡುತ್ತಿದೆ, ಆದರೆ ಭಾರತ ಸರ್ಕಾರ 10 ವರ್ಷಗಳ ಬಾಂಡ್ ಮೇಲೆ ಶೇ 6.5 ರಷ್ಟು ಬಡ್ಡಿ ಕೊಡುತ್ತದೆ. ಈ ವ್ಯತ್ಯಾಸಗಳು ಎರಡೂ ದೇಶಗಳಲ್ಲಿನ ಹಣದುಬ್ಬರ ದರಗಳನ್ನು ಅವಲಂಬಿಸಿರುತ್ತವೆ. ಹೀಗಾಗಿ, ನಾವು ಜಪಾನ್ ದೇಶದಿಂದ ಪಡೆಯುವ ಸಾಲದ ಹಣಕ್ಕಿಂತ ಹೆಚ್ಚು ಹಣವನ್ನು ಅವರಿಗೆ ವಾಪಸ್ ನೀಡಬೇಕಾಗಿರುತ್ತದೆ.  ಅಲ್ಲಿಗೆ, ನಮಗೆ ತುಂಬಾ ಕಡಿಮೆ ದರದಲ್ಲಿ ಸಾಲ ಸಿಗುತ್ತಿದೆ ಎಂಬುದು ದೊಡ್ಡ ಸುಳ್ಳು ಅನ್ನುವುದು ಗೊತ್ತಾಗುತ್ತದೆ.

ಇದರ ಜೊತೆಗೆ ಜಪಾನ್ ದೇಶ, ಕೇವಲ ಬುಲೆಟ್ ರೈಲು ಯೋಜನೆಯನ್ನು ಮಾತ್ರ ಇಲ್ಲಿ ಅಳವಡಿಸುತ್ತಿಲ್ಲ. ಬುಲೆಟ್ ರೈಲಿಗೆ ಬೇಕಾದ ಬೋಗಿಗಳೂ ಸೇರಿದಂತೆ, ಸಂಪೂರ್ಣ ವ್ಯವಸ್ಥೆಯೆಲ್ಲವನ್ನೂ ಜಪಾನ್ ದೇಶದವರೇ ಕೊಡುತ್ತಿದ್ದಾರೆ.

ಏಕೆಂದರೆ, ನೀವು ಸಂಪೂರ್ಣವಾಗಿ ನಮ್ಮ ಬೋಗಿಗಳು ಮತ್ತು ವ್ಯವಸ್ಥೆಯನ್ನು ಪಡೆದುಕೊಳ್ಳದೆ ಹೋದರೆ, ಭಾರತದಲ್ಲಿ ಓಡುವ ಬುಲೆಟ್ ರೈಲಿನ ಸುರಕ್ಷತೆ ಬಗ್ಗೆ ನಾವು ಖಾತ್ರಿ ಕೊಡಲು ಸಾಧ್ಯವಿಲ್ಲ ಎಂದು ಜಪಾನ್ ದೇಶ ಸ್ಪಷ್ಟವಾಗಿ ಹೇಳಿಬಿಟ್ಟಿದೆ. ಹೀಗಾಗಿ, ಬೋಗಿಗಳೂ ಸೇರಿದಂತೆ ಎಲ್ಲವೂ ಜಪಾನ್ ನಿಂದಲೇ ಬರುತ್ತದೆ. ಇಲ್ಲಿ ಪ್ರಧಾನಿ ಮೋದಿಯವರು ತುಂಬಾ ದೊಡ್ಡದಾಗಿ ಹೇಳುವ ‘ಮೇಕ್ ಇನ್ ಇಂಡಿಯಾ’ ಎಂಬ ಮಾತಿಗೆ  ಈ ಬುಲೆಟ್ ರೈಲು ಯೋಜನೆಯಲ್ಲಿ ಅವಕಾಶವೇ ಇಲ್ಲ.

ಹಿಂದೆ, ಜಪಾನ್ ದೇಶದಿಂದ ಬುಲೆಟ್ ರೈಲು ತಂತ್ರಜ್ಞಾನವನ್ನು ಪಡೆಯಲು ಪ್ರಯತ್ನಿಸಿದ್ದ ಚೀನಾ ದೇಶ, ಜಪಾನ್ ಪ್ರಸ್ತಾಪಿಸಿದ್ದ ನಿಬಂಧನೆಗಳನ್ನು ಒಪ್ಪಲು ನಿರಾಕರಿಸಿತ್ತು ಮತ್ತು ತನ್ನದೇ ಆದ ತಂತ್ರಜ್ಞಾನ ರೂಪಿಸಿಕೊಳ್ಳಲು ಮುಂದಾಗಿ ಅದರಲ್ಲಿ ಯಶಸ್ಸನ್ನೂ ಪಡೆದಿತ್ತು. ಆದರೆ, ಇದೀಗ ಸುರಕ್ಷತೆ ವಿಚಾರ ಮುಂದಿಟ್ಟುಕೊಂಡು ಜಪಾನ್ ದೇಶ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದೆ.

ಇದರ ಜೊತೆಗೆ, ಜಪಾನ್ ದೇಶ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನ ಗೊಳಿಸುತ್ತದೆಯೇ ಹೊರತು, ಬುಲೆಟ್ ರೈಲು ತಂತ್ರಜ್ಞಾನವನ್ನು ಭಾರತಕ್ಕಾಗಲಿ ಬೇರೆ ಯಾವುದೇ ದೇಶಕ್ಕಾಗಿ ವರ್ಗಾಯಿಸುವುದಿಲ್ಲ ಎಂಬ ವಿಚಾರವನ್ನೂ ಸ್ಪಷ್ಟಪಡಿಸಿದೆ. ಹೀಗಾಗಿ, ಮುಂಬೈ ಮತ್ತು ಅಹಮದಾಬಾದ್ ಬುಲೆಟ್ ರೈಲು ಆರಂಭದ ಕೆಲವೇ ವರ್ಷಗಳಲ್ಲಿ, ಇತರೆ ನಗರಗಳ ನಡುವೆ ಭಾರತವೇನೂ ತನ್ನದೇ ಆದ ಬುಲೆಟ್ ರೈಲುಗಳನ್ನು ಓಡಿಸುವುದು ಸಾಧ್ಯವಿಲ್ಲ. ಅದಕ್ಕಾಗಿ, ಮತ್ತೆ ಜಪಾನ್ ದೇಶದವರನ್ನೇ ಆಶ್ರಯಿಸಬೇಕು ಅಥವ ಬೇರೆಯವರನ್ನು ಕೇಳಬೇಕು. ಇಲ್ಲವೇ, ಸಾಕಷ್ಟು ಪರಿಶ್ರಮಪಟ್ಟು ತನ್ನದೇ ಆದ ತಂತ್ರಜ್ಞಾನವನ್ನು ರೂಪಿಸಿಕೊಳ್ಳಲು ಮುಂದಾಗಬೇಕು. ಹೀಗಾಗಿ, ಈ ಬುಲೆಟ್ ರೈಲು ಯೋಜನೆ, ಭಾರತಕ್ಕಿಂತ ಜಪಾನ್ ದೇಶಕ್ಕೆ ಬಂಪರ್ ಕೊಡುಗೆ ಆಗಲಿದೆ ಅನ್ನುವುದಂತೂ ನಿಜ.  

ಈ ಬುಲೆಟ್ ರೈಲಿನ ಟಿಕೆಟ್ ದರ ಸಾಕಷ್ಟು ದುಬಾರಿಯಾಗಿದ್ದು, ಸುಮಾರು 3 ಸಾವಿರ ರೂಪಾಯಿಗಳಿಂದ 5 ಸಾವಿರ ರೂಪಾಯಿಗಳವರೆಗೆ ನಿಗದಿಯಾಗಬಹುದು ಎಂದು ಹೇಳಲಾಗಿದೆ. ಹಾಗಾದಲ್ಲಿ, ಕೇವಲ ಶ್ರೀಮಂತರಷ್ಚೇ ಬುಲೆಟ್ ರೈಲಿನಲ್ಲಿ ಪ್ರಯಾಣ ಮಾಡಲು ಸಾಧ್ಯ. ಇಂಥ ಬೆಳವಣಿಗೆಯಿಂದ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಿ ಸಾಮಾಜಿಕ ಒಡಕು ಉಂಟಾಗಬಹುದು.  ಬುಲೆಟ್ ರೈಲಿನ ಟಿಕೆಟ್ ದರ ತೀರಾ ಹೆಚ್ಚಾಗುವುದರಿಂದ ಬುಲೆಟ್  ರೈಲುಗಳು ಖಾಲಿ ಓಡಬಹುದು. ಬುಲೆಟ್ ರೈಲಿನಲ್ಲಿ ಪ್ರಯಾಣಿಸುವುದರ ಬದಲು, ಅದಕ್ಕಿಂತ ಕಡಿಮೆ ಹಣದಲ್ಲಿ ಮತ್ತು ಒಂದೇ ಒಂದು ಗಂಟೆ ಸಮಯದಲ್ಲಿ, ವಿಮಾನದಲ್ಲಿ ಪ್ರಯಾಣಿಸುವುದೇ ಉತ್ತಮ ಎಂದು ಜನರು ಚಿಂತಿಸಬಹುದು.

ಆದರೆ, ಬುಲೆಟ್ ರೈಲು ಯೋಜನೆಗೆ ಆಗುವ ಅವಮಾನ ತಪ್ಪಿಸಿಕೊಳ್ಳಲು, ಟಿಕೆಟ್ ದರ ಕಡಿಮೆ ಇರಿಸಬಹುದು. ಆದರೆ, ಅದಕ್ಕಾಗಿ ಕೇಂದ್ರ ಸರ್ಕಾರ ಸಹಾಯಧನ ನೀಡಬೇಕಾಗಿಬರಬಹುದು. ಇಂಥ ಒಂದುಕ್ರಮ, ಮುಂದಿನ ಐವತ್ತು ವರ್ಷಗಳವರೆಗೆ ಭಾರತದ ಆರ್ಥಿಕತೆಗೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ. ಇದರ ಜೊತೆಗೆ, ಜಪಾನ್ ನಲ್ಲಿ ಸಂಚರಿಸುತ್ತಿರುವ ಬುಲೆಟ್ ರೈಲುಗಳು ಯಾವುದೇ ರೀತಿಯಲ್ಲಿ ಲಾಭ ಮಾಡುತ್ತಿಲ್ಲ ಅನ್ನುವುದೂ ಕೂಡ ವಾಸ್ತವ.

ಅಹಮದಾಬಾದ್ Indian Institute of Managementನ ಸಮೀಕ್ಷೆಯಂತೆ ಬುಲೆಟ್ ರೈಲು ಪ್ರತಿದಿನ ಕನಿಷ್ಟ 100 ಟ್ರಿಪ್ ಮಾಡಬೇಕು ಮತ್ತು ದಿನಕ್ಕೆ 88 ಸಾವಿರ ಜನರಿಂದ ಒಂದು ಲಕ್ಷ ಹದಿನೆಂಟು ಸಾವಿರ ಜನ ಪ್ರಯಾಣಮಾಡಿದರೆ ಈ ಯೋಜನೆ ಲಾಭದಾಯಕ ಆಗಬಹುದಂತೆ. ಆದರೆ, ಈ ಸಾಧ್ಯತೆ ತುಂಬಾ ಕಡಿಮೆ.

ಮುಂಬೈನ ತುಂಬಿತುಳುಕುವ ರೈಲುಗಳು, ಭಯೋತ್ಪಾದಕ ಕೃತ್ಯ ಎಸಗುವವರಿಗೆ ಸುಲಭದ ತುತ್ತು. ಇದೀಗ ಬುಲೆಟ್ ರೈಲಿಗಾಗಿ 21 ಕಿಲೋ ಮೀಟರ್ ಸುರಂಗ ಮಾರ್ಗ ನಿರ್ಮಿಸಲಾಗುತ್ತದೆ, ಅದರಲ್ಲೂ ಥಾಣೆಯಲ್ಲಿ ಏಳು ಕಿಲೋಮೀಟರ್ ದೂರ ಸಮುದ್ರದ ಕೆಳಭಾಗದಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತದೆ. ಈ ಮಾರ್ಗದ ಭದ್ರತೆಗೆ ಸಂಬಂಧಿಸಿದಂತೆಯೂ ಆತಂಕಗಳು ವ್ಯಕ್ತವಾಗಿವೆ.

ಬುಲೆಟ್ ರೈಲು ಮಾರ್ಗಕ್ಕಾಗಿ ಭೂಮಿ ಸ್ವಾಧೀನದ ವಿಚಾರವೂ ಸುಲಭವಲ್ಲ.  ಇದರ ಜೊತೆಗೆ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಬರುವ ಸೂರತ್, ಭರೂಚ್, ವಡೋದರ, ಆನಂದ್ ಇತ್ಯಾದಿ ಬೇರೆ ನಗರಗಳಲ್ಲಿ ಬುಲೆಟ್ ರೈಲಿಗೆ ನಿಲುಗಡೆ ನೀಡಲು ಹೊರಟರೆ, ಬುಲೆಟ್ ರೈಲಿನ ಒಟ್ಟಾರೆ ವೇಗವೇ ತಗ್ಗಿ ಇಡಿ ಯೋಜನೆಯೇ ನಿರರ್ಥಕವಾಗಬಹುದು.

ಇದೇ ವೇಳೆ, ಬುಲೆಟ್ ರೈಲಿನಂಥ ಯೋಜನೆಗೆ ಆದ್ಯತೆ ನೀಡುವುದು ಭಾರತೀಯ ರೈಲ್ವೆಯ ಬೆಳವಣಿಗೆ, ಸುಧಾರಣೆ ಮತ್ತು ವಿಸ್ತರಣೆಯನ್ನು ಕುಂಠಿತಗೊಳಿಸುತ್ತದೆ ಎಂಬ ದೊಡ್ಡ ಆರೋಪವೂ ಕೇಳಿ ಬರುತ್ತಿದೆ.

ಭಾರತೀಯ ರೈಲ್ವೆ, ಜಗತ್ತಿನ ನಾಲ್ಕನೇ ಅತಿ ದೊಡ್ಡ ರೈಲ್ವೆ ಸಂಪರ್ಕ ಜಾಲ ಹೊಂದಿದೆ. 1853ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ಆರಂಭವಾದ ಭಾರತೀಯ ರೈಲ್ವೆ ಇಲಾಖೆ, ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಪ್ರತಿದಿನ ಸುಮಾರು ಎರಡೂವರೆ ಕೋಟಿ ಜನ ಪ್ರಯಾಣಿಸುವ ರೈಲ್ವೆ ಇಲಾಖೆಗೆ ತುರ್ತು ಕಾಯಕಲ್ಪ ಅಗತ್ಯವಿದೆ. ಹಲವಾರು ದಶಕಗಳ ಅಸಮರ್ಪಕ ಮತ್ತು ಅದಕ್ಷ ನಿರ್ವಹಣೆಯಿಂದ ರೈಲ್ವೆ ಇಲಾಖೆ ಕಂಗೆಟ್ಟಿದೆ. ಸದ್ಯಕ್ಕೆ, ರೈಲ್ವೆ ಇಲಾಖೆಯಲ್ಲಿ ತನ್ನ ವ್ಯವಸ್ಥೆಯನ್ನು ತಾನು ನಿರ್ವಹಿಸಲು ಅಗತ್ಯವಿರುವಷ್ಟು ಹಣವೇ ಇಲ್ಲ, ಇನ್ನು ಆಧುನೀಕರಣ ಮತ್ತು ಸುರಕ್ಷತೆಯ ವಿಚಾರಗಳಿಗೆ ಹಣ ತರುವುದಾದರೂ ಎಲ್ಲಿಂದ.

ಹೀಗಾಗಿ, ಮೇಲಿಂದ ಮೇಲೆ ರೈಲ್ವೇ ಅಪಘಾತಗಳು ಸಂಭವಿಸುತ್ತಲೇ ಇವೆ.

ಇತ್ತೀಚೆಗೆ ಹೆಚ್ಚೂಕಮ್ಮಿ ಪ್ರತಿದಿನವೂ ರೈಲು ಹಳಿ ತಪ್ಪಿದ ಘಟನೆ ವರದಿಯಾಗುತ್ತಿದೆ, ಹೀಗಾಗಿ ಭಾರತದಲ್ಲಿ, ರೈಲುಗಳು ಹಳಿಯ ಮೇಲೆ ಚಲಿಸುವುದೇ ಕಡಿಮೆ ಅನ್ನುವ ಹಾಗಾಗಿದೆ.

2013ರಿಂದ 2017ರ  ವರೆಗಿನ ಅವಧಿಯಲ್ಲಿ ದೇಶದಲ್ಲಿ 450ಕ್ಕೂ ಹೆಚ್ಚು ರೈಲು ಅಪಘಾತಗಳು ಸಂಭವಿಸಿದ್ದು ಸುಮಾರು 800 ಜನ ಮೃತಪಟ್ಟಿದ್ದಾರೆ. ಇದಕ್ಕೆ ಅಸಮರ್ಪಕ ನಿರ್ವಹಣೆ, ಹಳೆಯ ಬೋಗಿಗಳು, ತುಕ್ಕು ಹಿಡಿದು ಹಾಳಾದ ಶತಮಾನದಷ್ಟು ಹಳೆಯದಾದ ರೈಲ್ವೇ ಹಳಿಗಳು ಪ್ರಮುಖ ಕಾರಣವೆಂದು ಹೇಳಲಾಗಿದೆ. ಪ್ರತಿವರ್ಷ ಸುಮಾರು 15 ಸಾವಿರ ಜನ ರೈಲ್ವೆ ಹಳಿದಾಟುವಾಗ ರೈಲಿಗೆ ಸಿಲುಕಿ ಸಾಯುತ್ತಾರೆ. ದೇಶದಲ್ಲಿ ಇನ್ನೂ ಸುಮಾರು 7701 ಮಾನವ ರಹಿತ ಲೆವೆಲ್ ಕ್ರಾಸಿಂಗ್ ಇವೆ, ಇವು ಸುರಕ್ಷತೆಗೆ ಅಪಾಯ ತಂದೊಡ್ಡುತ್ತಿವೆ.

ಕೋಟ್ಯಂತರ ಜನರು ಪ್ರಯಾಣಿಸುವ ರೈಲ್ವೆ ಇಲಾಖೆ ಪರಿಸ್ಥಿತಿ ಹೀಗಿರುವಾಗ ಬುಲೆಟ್ ರೈಲಿನಂಥ ಒಂದೇ ಒಂದು ಯೋಜನೆಗೆ ಅಷ್ಟೊಂದು ಹಣ ವೆಚ್ಚಮಾಡುವ ಅಗತ್ಯವೇನಿದೆ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. 

1 ಲಕ್ಷ 10 ಸಾವಿರ ಕೋಟಿ ರೂಪಾಯಿ ವೆಚ್ಚದ ಬುಲೆಟ್ ರೈಲು ಯೋಜನೆ ಬದಲಿಗೆ, ಇದೇ ಹಣವನ್ನು ಐದು ವರ್ಷಗಳ ಕಾಲ, ಭಾರತೀಯ ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಮತ್ತು ರೈಲ್ವೇ ಸುರಕ್ಷತೆಗೆ ಸಂಬಂಧ ಪಟ್ಟ ಕೆಲಸಗಳನ್ನು ಮಾಡಲು ಬಳಸಿಕೊಂಡಿದ್ದರೆ, ದೇಶಕ್ಕೆ ಮತ್ತು ದೇಶದ ಎಲ್ಲಾ ನೂರಿಪ್ಪತ್ತೈದುಕೋಟಿ ಜನಗಳಿಗೆ ಲಾಭವಾಗುತ್ತಿತ್ತು.

ಭಾರತ ದೇಶ ಪ್ರಜಾತಂತ್ರ ವ್ಯವಸ್ಥೆಗೆ ಬಂದು 70 ವರ್ಷಗಳು ಕಳೆದರೂ ಸಾವಿರಾರು ಗ್ರಾಮಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಇಲ್ಲ, ರಸ್ತೆ ಇಲ್ಲ, ಆಸ್ಪತ್ರೆ ಇಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಕುಡಿಯವ ನೀರೇ ಗತಿ ಇಲ್ಲ.

ಇನ್ನು ನಗರಗಳಿಗೆ ಬಂದರೆ, ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವುದಕ್ಕೇ ನಮ್ಮಿಂದ ಆಗಿಲ್ಲ. ದೇಶದ ಯುವಜನತೆಯನ್ನು ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ, ನಮ್ಮ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯಿಂದ  ಒಂದೇ ದಿನ ನೂರಾರು ಮಕ್ಕಳು ಸಾಮೂಹಿಕವಾಗಿ ಸಾವನ್ನಪ್ಪುತ್ತಿವೆ.

ದೇಶದ ಪರಿಸ್ಥಿತಿ ಹೀಗೆಲ್ಲಾ ಇರುವಾಗ, ಮೋದಿ ಸರ್ಕಾರ ಬುಲೆಟ್ ರೈಲು ಯೋಜನೆಯನ್ನೇ ಒಂದು ಮಹಾಸಾಧನೆ ಎಂಬಂತೆ ಬಿಂಬಿಸುತ್ತಿದೆ. ಈ ಬುಲೆಟ್ ರೈಲು ಓಡಿಸುವುದರಿಂದ ದೇಶದ ಜನರಿಗೆ ಏನು ಲಾಭ ಅನ್ನುವುದನ್ನು ಪ್ರಧಾನಿ ಮೋದಿ ಅವರೇ ಹೇಳಬೇಕು.

ಹೀಗಾಗಿ, ಮೋದಿಯವರ ಕನಸುಗಳು, ಜನಸಾಮಾನ್ಯರ ಕನಸುಗಳಲ್ಲ, ಅವರ ಕನಸುಗಳು ಶ್ರೀಮಂತರ ಕನಸುಗಳು. ಮೋದಿ ಮತ್ತು ಅಮಿತ್ ಷಾ ಸೇರಿಕೊಂಡು ಕಾರ್ಪೊರೇಟ್ ಕುಳಗಳು, ದೊಡ್ಡ ದೊಡ್ಡ ಉದ್ಯಮಿಗಳ ಬೆಂಬಲ ಪಡೆದು, ದೊಡ್ಡ ದೊಡ್ಡ ಯೋಜನೆಗಳನ್ನು ಪ್ರಕಟಿಸುತ್ತಾ ಜನರನ್ನು ಬೇಸ್ತು ಬೀಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಭಾರತದ ನೂರಿಪ್ಪತ್ತೈದುಕೋಟಿ ಜನರಿಗೆ ಕಿರಿಕಿರಿ, ಹಿಂಸೆ, ನಷ್ಟಗಳನ್ನು ತಂದಿಟ್ಟ ಮತ್ತು ಸಣ್ಣ ಉದ್ಯಮಗಳನ್ನು ಮಕಾಡೆ ಮಲಗಿಸಿದ, ಐದುನೂರು ಮತ್ತು ಸಾವಿರ ರೂಪಾಯಿಗಳ ಹಳೆಯ ನೋಟುರದ್ದತಿ ನಿರ್ಧಾರದ ರೀತಿಯಲ್ಲೇ, ಮೋದಿ ಸರ್ಕಾರದ ಈ ಬುಲೆಟ್ ರೈಲು ಯೋಜನೆ ಕೂಡ ಆಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ