ಮೈಸೂರಿನ ಅಲಮೇಲಮ್ಮನ ಕತೆ..?

Kannada News

23-09-2017 400

ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ದೊರೆಗೆ ಮಕ್ಕಳಾಗದಿರಲಿ...

ಎಂಬ ಶಾಪಕೊಟ್ಟ ಅಲಮೇಲಮ್ಮನಿಗೆ ಒಡೆಯರ್ ಮನೆತನದವರು, ಅಮಲ ದೇವತೆ ಎಂಬ ಹೆಸರಿಟ್ಟು ದೇವತೆಯ ಸ್ಥಾನ ಕೊಟ್ಟು ತೆರೆಮರೆಯಲ್ಲಿಟ್ಟೇ ದಸರ ಸಂದರ್ಭದಲ್ಲಿ ಪೂಜೆ ಸಲ್ಲಿಸುತ್ತಿರುವುದುಂಟು.

 ಶ್ರೀರಂಗಪಟ್ಟಣದ ಅರಸನಾಗಿದ್ದ ಶ್ರೀರಂಗರಾಯ ಮತ್ತು ಮೈಸೂರಿನ ರಾಜರಾಗಿದ್ದ ರಾಜ ಒಡೆಯರ್‍ ಗೂ ಸ್ನೇಹವಿತ್ತು. ಬೆನ್ನುಫಣಿ ರೋಗದಿಂದಾಗಿ ತನ್ನ ರಾಜ್ಯವನ್ನ ರಾಜ ಒಡೆಯರಿಗೆ ಒಪ್ಪಿಸಿದ  ಶ್ರೀರಂಗರಾಯ, ತನ್ನ ಪತ್ನಿ ಅಲಮೇಲಮ್ಮ ಜೊತೆಯಲ್ಲಿ ತಲಕಾಡು ಬಳಿಯ ಮಾಲಂಗಿಗೆ ಹೋಗಿ, ಅಲ್ಲಿ ನಿಧನರಾದರು ಎಂಬುದೊಂದು ಕತೆಯಾದರೆ, ರಾಜ ಒಡೆಯರ್ ಯುದ್ಧ ಮಾಡಿ ಶ್ರೀರಂಗರಾಯರನ್ನು ಸೋಲಿಸಿದ್ದರಿಂದ ಅವರು ಮಾಲಂಗಿಗೆ ಹೋಗಿಬಿಟ್ಟರು ಎಂಬುದು ಇನ್ನೊಂದು ಕತೆ.

ಇದೇನೇ ಇರಲಿ, ಶ್ರೀರಂಗರಾಯನ ಹೆಂಡತಿ ಅಲಮೇಲಮ್ಮರ ಒಡವೆಯ ಮೇಲೆ ರಾಜ ಒಡೆಯರ್ ಕಣ್ಣುಹಾಕಿ ಅದನ್ನ ಶ್ರೀರಂಗನಾಥಸ್ವಾಮಿ ದೇವಾಲಯದ ರಂಗನಾಯಕಿ ಅಮ್ಮನವರಿಗೆ ಕೊಡುವಂತೆ ಒತ್ತಾಯ ಹೇರಿದ್ದರಿಂದ, ಕೋಪಗೊಂಡ ಅಲಮೇಲಮ್ಮ, ಆ ಒಡವೆಗಳನ್ನೆಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಾಲಂಗಿ ಮಡುವಿನಲ್ಲಿ ಮುಳುಗುವ ಮುನ್ನ ಮೈಸೂರರಸರಿಗೆ ಶಾಪವಿತ್ತರು ಎಂಬ ಕತೆಗಳಿವೆ.

ನಾನು ಆ ಅಲಮೇಲಮ್ಮನ ಆತ್ಮದ ಜತೆ ಮಾತಾಡುತ್ತೇನೆ ಎಂದು ದಿವಂಗತ ಶ್ರೀಕಂಠದತ್ತ ಒಡೆಯರ್ ಹೇಳಿಕೆ ನೀಡಿದ್ದೂ ಉಂಟು. ಆದರೆ, ಆ ಅಲಮೇಲಮ್ಮನಿಗೆ ದಸರ ವೇಳೆಯಲ್ಲಿ ಈಗಲೂ ಪೂಜೆ ಸಲ್ಲಿಸಲಾಗುತ್ತಿದೆ.

ಅಲಮೇಲಮ್ಮನಿಗೆ ಅಮಲದೇವತೆ ಎಂಬ ಹೆಸರನ್ನಿಟ್ಟು ಆಕೆಯ ಮುಕ್ಕಾಲು ಅಡಿ ಎತ್ತರದ ಶಿಲಾ ವಿಗ್ರಹವನ್ನ ಅರಮನೆಯ ಆಗ್ನೇಯ ಮೂಲೆಯಲ್ಲಿನ ಪುಟ್ಟ ಕೋಣೆಯಲ್ಲಿಡಲಾಗಿದೆ. ನವರಾತ್ರಿ ಸಮಯದಲ್ಲಿ  ಈ ವಿಗ್ರಹವನ್ನು ಹಳೇ ಬೆತ್ತದ ಬುಟ್ಟಿಯಲ್ಲಿಟ್ಟು, ಅರಮನೆಗೆ ತಂದು, ಶಾರದೆಯ ಗೊಂಬೆಯನ್ನಿಟ್ಟ ಮಂಟಪದ ಕೆಳಗೆ ಇರಿಸಿ ಸುತ್ತಲೂ ಬಟ್ಟೆ ಕಟ್ಟಿ ಮರೆಮಾಡಲಾಗುತ್ತೆ.

ನವರಾತ್ರಿ ಆಚರಣೆಯ ಕಂಕಣ ಕಟ್ಟಿಕೊಂಡ ರಾಜಮನೆತನದವರು ಈ ಶಾರದೆಗೆ ಪೂಜೆ ಸಲ್ಲಿಸಿದರೂ, ಪರದೆ ಸರಿಸಿ ಅಲಮೇಲಮ್ಮನನ್ನು ನೋಡುವುದಿಲ್ಲ. ಇಲ್ಲಿ ಶಾರದೆಗೆ ಪೂಜೆ ಸಲ್ಲಿಸುತ್ತಲೇ ಅಪರೋಕ್ಷವಾಗಿ ಅಲಮೇಲಮ್ಮನಿಗೆ ಪೂಜೆ ಸಲ್ಲಿಸಿದಂತಾಗುತ್ತೆ. ಈ ಅಲಮೇಲಮ್ಮನ ಪೂಜಾ ಕಾಲದಲ್ಲಿ ತಮ್ಮಡಿ ಬಾಯಿಗೆ ಬಟ್ಟೆ ಕಟ್ಟಿಕೊಂಡಿರುತ್ತಾನೆ. ಒಂದು ದಿನ ಈ ರೀತಿ ಪೂಜೆ ಸಲ್ಲಿಸಿದ ನಂತರ, ಅಲಮೇಲಮ್ಮ ವಿಗ್ರಹವನ್ನ ಅರಮನೆ ಆವರಣದಲ್ಲಿನ ಈ ತಮ್ಮಡಿಯ ಮನೆಯ ಕೋಣೆಗೆ ಕೊಂಡೊಯ್ದು ಇಡಲಾಗುತ್ತೆ.

ವಿಚಿತ್ರವೋ, ಕಾಕತಾಳಿಯವೋ ಅಲಮೇಲಮ್ಮ ಕೊಟ್ಟ ಶಾಪದ ಪರಿಣಾಮವಾಗಿಯೇ ಮೈಸೂರು ರಾಜರಿಗೆ ಮಕ್ಕಳಾಗುತ್ತಿಲ್ಲ ಎಂಬ ಮಾತುಗಳಿವೆಯಾದರೂ(ಇದು ತೀರಾ ವಾಸ್ತವವಲ್ಲ) ಅಲಮೇಲಮ್ಮ ವಿಗ್ರಹವನ್ನ ಮನೆಯಲ್ಲಿಟ್ಟುಕೊಂಡು ಪೂಜೆ ಮಾಡುತ್ತಿರುವ ತಮ್ಮಡಿ ವಂಶದಲ್ಲೂ ಒಂದು ಸಂತತಿಗೆ ಮಕ್ಕಳಾಗುತ್ತಿಲ್ಲ.

ವರದಿ: ಜಿ.ಆರ್.ಸತ್ಯಲಿಂಗರಾಜು

 ಸಂಬಂಧಿತ ಟ್ಯಾಗ್ಗಳು

ಮೈಸೂರಿನ ಅಲಮೇಲಮ್ಮನ ಕತೆ..? ಕತೆ..?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ