ಹಿಂದೂಸ್ತಾನಿ ಸಂಗೀತದ ಹೊಸ ತಾರೆ..

Kannada News

16-09-2017 951

22 ವರ್ಷಗಳ ಹಿಂದೆ ಇವರ ಪ್ರತಿಭೆಯನ್ನು ಗುರುತಿಸಿ ದೊಡ್ಡ ವೇದಿಕೆಯಲ್ಲಿ ಹಾಡಲು ಅವಕಾಶ ಕಲ್ಪಿಸಿಕೊಟ್ಟವರು ಭಾರತರತ್ನ ಪಂಡಿತ್ ಭೀಮ್ ಸೇನ್ ಜೋಷಿ. ಗಾನಕೋಗಿಲೆ, ಭಾರತರತ್ನ ಲತಾ ಮಂಗೇಶ್ಕರ್, ಇವರ ಗಾಯನಕ್ಕೆ ಮಾರುಹೋಗಿದ್ದಾರೆ. ‘ಇವರು ಹಾಡುತ್ತಿದ್ದರೆ, ಭೀಮ್ ಸೇನ್ ಜೋಷಿ ಅವರು ತಮ್ಮ ಹರೆಯದಲ್ಲಿದ್ದಾಗ ಹಾಡುತ್ತಿದ್ದಂತೆ ಭಾಸವಾಗುತ್ತದೆ’ ಎಂದು ಇವರನ್ನು ಬಾಯಿತುಂಬಾ ಹೊಗಳಿದ್ದವರು, ಮತ್ತೊಬ್ಬ ಮೇರುಗಾಯಕ ಪಂಡಿತ್ ಜಸ್ ರಾಜ್. ‘ಈ ವ್ಯಕ್ತಿ ಹಾಡುವುದನ್ನು ಕೇಳುತ್ತಿದ್ದರೆ, ಮೈಯ್ಯಲ್ಲಿ ವಿದ್ಯುತ್ ಸಂಚಾರವಾದಂತಾಗುತ್ತದೆ’ ಎಂದವರು. ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರಹಮಾನ್. ಯಾರೀ ವ್ಯಕ್ತಿ? ಯಾರು ಈ ಸಾಧಕ? ಅನ್ನುವುದು ನಿಮ್ಮಲ್ಲಿ ಬಹುತೇಕರಿಗೆ ಈಗಾಗಲೇ ಗೊತ್ತಾಗಿದೆ. ಹೌದು, ನಾವು ಪಂಡಿತ್ ಜಯತೀರ್ಥ ಮೇವುಂಡಿ ಅವರ ಬಗ್ಗೆ ಮಾತನಾಡುತ್ತಿದ್ದೇವೆ. ಭಾರತದ ಶಾಸ್ತ್ರೀಯ ಸಂಗೀತ ಕ್ಷೇತ್ರದ ಹೊಸ ನಕ್ಷತ್ರವಾಗಿ ಉದಯಿಸಿ ಪ್ರಕಾಶಮಾನವಾಗಿ ಮಿನುಗುತ್ತಿರುವ ಪಂಡಿತ್ ಜಯತೀರ್ಥ ಮೇವುಂಡಿ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಒಂದು ಸ್ಪೆಷಲ್ ರಿಪೋರ್ಟ್.

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು, ಹಿಂದಿನಿಂದಲೂ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಹೆಸರಾಗಿವೆ. ಈ ಭಾಗದ ಮಣ್ಣು, ನೀರು ಮತ್ತು ಗಾಳಿಯಲ್ಲೇ ಇವೆಲ್ಲದರ ಗಂಧವಿದೆ. ಶಿಕ್ಷಣ ತಜ್ಞ ಡಾ.ಡಿ.ಸಿ.ಪಾವಟೆ, ವರಕವಿ ದ.ರಾ.ಬೇಂದ್ರೆ, ಭಾರತ ರತ್ನ ಭೀಮಸೇನ್ ಜೋಷಿ, ಕುಮಾರ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್ ರಂಥ ಮಹಾನ್ ತಾರೆಗಳು ಈ ನೆಲದಲ್ಲಿ ಉದಯಿಸಿ ಭಾರತವನ್ನು ಬೆಳಗಿದ್ದಾರೆ. ಈ ದಿಗ್ಗಜರು ನಡೆದ ದಾರಿಯಲ್ಲಿ ಸಾಗಿರುವ ಮತ್ತೊಂದು ಪ್ರತಿಭೆ ಹುಬ್ಬಳ್ಳಿಯ ಜಯತೀರ್ಥ ಮೇವುಂಡಿ.

ಜಯತೀರ್ಥ ಮೇವುಂಡಿ ಅವರು ಹುಟ್ಟಿದ್ದು, 1972ರ ಮೇ ತಿಂಗಳ 11 ರಂದು. ತಂದೆ ವಸಂತ್‌ ರಾವ್, ತಾಯಿ ಸುಧಾಬಾಯಿ. ವಸಂತ್ ರಾವ್ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಂಚಿಕೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ದಾಸರ ಪದಗಳನ್ನು ಹಾಡುತ್ತಿದ್ದ ತಾಯಿಯಿಂದ ಹಾಡಲು ಕಲಿತ ಜಯತೀರ್ಥ, ಅಮ್ಮನ ಜೊತೆ ದನಿಗೂಡಿಸುತ್ತಿದ್ದರು. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಪಂಡಿತ್ ಭೀಮಸೇನ್ ಜೋಷಿಯವರ ಹಾಡುಗಾರಿಕೆಯಿಂದ ಪ್ರಭಾವಿತರಾದ ಬಾಲಕ ಜಯತೀರ್ಥನಲ್ಲಿ ತಾನೂ ಕೂಡ, ಅದೇ ರೀತಿ ಹಾಡಲು ಕಲಿಯಬೇಕು ಎಂಬ ಆಸೆ ಹುಟ್ಟಿತ್ತು. ಇದಕ್ಕೆ ಪೂರಕವಾಗಿ, ಜಯತೀರ್ಥರ ತಾಯಿ, ಹುಬ್ಬಳ್ಳಿ-ಧಾರವಾಡ ಪರಿಸರದಲ್ಲಿ ನಡೆಯುವ ಎಲ್ಲಾ ಸಂಗೀತ ಕಾರ್ಯಕ್ರಮಗಳಿಗೆ ಮಗನನ್ನೂ ಕರೆದುಕೊಂಡುಹೋಗುತ್ತಿದ್ದರು.

ಕುಂದಗೋಳದ ಸವಾಯಿ ಗಂಧರ್ವ ಸಂಗೀತ ಮಹೋತ್ಸವದಲ್ಲಿ, ಹಗಲು ರಾತ್ರಿ ನಡೆಯುತ್ತಿದ್ದ ಸಂಗೀತ ಕಚೇರಿಗಳನ್ನು ಕೇಳುತ್ತಿದ್ದ ಜಯತೀರ್ಥರಿಗೆ, ಸಂಗೀತವೇ ಒಂದು ಗಿಳ್ಳಿನಂತಾಯಿತು. ಮನೆಯ ಬಳಿ ನಡೆಯುತ್ತಿದ್ದ ಭಜನೆ ಕಾರ್ಯಕ್ರಮಗಳಲ್ಲಿ ಬಾಲಕ ಜಯತೀರ್ಥನ ಹಾಡುಗಾರಿಕೆಯೂ ಆರಂಭವಾಯಿತು. ಇಷ್ಟಾದ ಮೇಲೆ ಸುಮ್ಮನಿರಲು ಸಾಧ್ಯವೇ, ಜಯತೀರ್ಥರ ತಾಯಿ, ತಮ್ಮ ಮನೆ ಬಳಿಯ ಬ್ಯಾಂಕರ್ ಮಾಸ್ತರ್ ಎಂಬ ಸಂಗೀತದ ಗುರುಗಳ ಬಳಿಗೆ ಮಗನನ್ನು ಪಾಠಕ್ಕೆ ಕಳಿಸಿದರು. ಅವರ ಬಳಿ ಒಂದು ವರ್ಷದ ಕಾಲ ಸಂಗೀತದ ಆರಂಭಿಕ ಪಾಠಗಳನ್ನು ಕಲಿತ ಜಯತೀರ್ಥ, ಆನಂತರ ಅರ್ಜುನ್‍ ಸಾ ನಾಕೋಡ್ ಅವರ ಬಳಿ ಸಂಗೀತಾಭ್ಯಾಸ ಮಾಡಿದರು. ಅಲ್ಲಿಂದ ಮುಂದಕ್ಕೆ, ಪಂಡಿತ್ ಭೀಮಸೇನ ಜೋಶಿ ಅವರ ಪ್ರಮುಖ ಶಿಷ್ಯರಾದ ಶ್ರೀಪತಿ ಪಾಡಿಗಾರ್ ಬಳಿ ಹದಿನೈದು ವರ್ಷಗಳವರೆಗೆ ಶಿಷ್ಯವೃತ್ತಿ ನಡೆಸಿದರು. ಜನಪ್ರಿಯ ಹಿಂದೂಸ್ತಾನಿ ಸಂಗೀತ ಪ್ರಕಾರವಾದ ಕಿರಾಣಾ ಘರಾಣೆಗೆ ಸೇರಿದ್ದ ಶ್ರೀಪತಿ ಪಾಡಿಗಾರ್ ಅವರು, ಶಿಷ್ಯ ಜಯತೀರ್ಥ ಮೇವುಂಡಿ ಅವರಿಗೂ ಅದನ್ನು ಧಾರೆಯೆರೆದರು. ಕಿರಾಣಾ ಘರಾಣಾ ಪದ್ಧತಿಯ ಸೂಕ್ಷ್ಮಗಳನ್ನು ಮತ್ತು ರಾಗ ವಿಸ್ತಾರದ ಶೈಲಿಯನ್ನು ಸವಿವರವಾಗಿ ಹೇಳಿಕೊಟ್ಟರು. ಇತರೆ ಕಲಾವಿದರುಗಳ ಸಂಗೀತವನ್ನೂ ಕೇಳಿ, ಅದರಲ್ಲಿನ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಯುವ ಮತ್ತು ಉತ್ಸಾಹಿ ಸಂಗೀತಗಾರನಾಗಿ ಬೆಳೆದು ನಿಂತ ಜಯತೀರ್ಥರಿಗೆ, ಇಪ್ಪೈದು ವರ್ಷಗಳ ಹಿಂದೆ, ಇವತ್ತಿನಷ್ಟು ಹೆಚ್ಚು ಅವಕಾಶಗಳು, ಮಾಧ್ಯಮಗಳು, ಪ್ರಚಾರ ಇತ್ಯಾದಿ ಸಿಗಲಿಲ್ಲ. ಸಂಗೀತದಲ್ಲಿ ಸಾಕಷ್ಟು ಸಾಧನೆ ಮಾಡಿದ್ದರೂ, ಅಪಾರ ಪ್ರತಿಭೆ ಇದ್ದರೂ ಕೂಡ, ಜೀವನೋಪಾಯಕ್ಕೆ ಒಂದು ಮಾರ್ಗ ಹುಡುಕಿಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗಾಗಿ, ಜಯತೀರ್ಥ ಮೇವುಂಡಿ ಅವರು, 1995ರಲ್ಲಿ ಗೋವಾ ಆಕಾಶವಾಣಿಯಲ್ಲಿ ನಿಲಯದ ಕಲಾವಿದರಾಗಿ ಸೇರಿಕೊಂಡರು. ಅಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲೇ ಜಯತೀರ್ಥರ ಬದುಕನ್ನು ಬದಲಾಯಿಸುವಂಥ ಘಟನೆ ನಡೆದಿದ್ದು.

ಒಂದು ದಿನ, ಗೋವಾ ಆಕಾಶವಾಣಿ ನಿಲಯಕ್ಕೆ ದೂರವಾಣಿ ಕರೆ ಮಾಡಿದ ಪಂಡಿತ್ ಭೀಮಸೇನ್ ಜೋಶಿ ಅವರು, ಪುಣೆಯ ‘ಸವಾಯಿ ಗಂಧರ್ವ ಸಂಗೀತ ಮಹೋತ್ಸವ’ದಲ್ಲಿ ಹಾಡಬೇಕು ಎಂದು ಆದೇಶಿಸಿದರು. ಭೀಮ್ ಸೇನ್ ಜೋಷಿ ಅವರು, ತಮ್ಮ ಗುರುಗಳಾದ ಸವಾಯಿ ಗಂಧರ್ವರ ಸಂಸ್ಮರಣಾರ್ಥ ಆಯೋಜಿಸಿದ್ದ ಆ ಕಾರ್ಯಕ್ರಮದಲ್ಲಿ, ಜಯತೀರ್ಥರಿಗೆ 40 ನಿಮಿಷಗಳ ಸಮಯಾವಕಾಶ ಕಲ್ಪಿಸಲಾಗಿತ್ತು. ಆದರೆ, ಜಯತೀರ್ಥರು ಹಾಡುತ್ತಿದ್ದಂತೆ, ಒಂದು, ಮತ್ತೊಂದು ಹೀಗೆ, ಕೇಳುಗರ ಒತ್ತಾಯದ ಮೇರೆಗೆ ಹಾಡುತ್ತಾ ಹೋಗಬೇಕಾಯಿತು. ಕಡೆಗೆ ಭೀಮ್ ಸೇನ್ ಜೋಷಿ ಅವರ ಸೂಚನೆ ಮೇರೆಗೆ ಒಂದು ಭಜನೆ ಹಾಡಿ, ನಿಲ್ಲಿಸಿದರಂತೆ.

ಇದಾದ ಬಳಿಕ, ‘ಜಯತೀರ್ಥ ಮೇವುಂಡಿ ಕಿರಾಣಾ ಘರಾಣ ಶೈಲಿಯ ಹಾಡುಗಾರಿಕೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುತ್ತಾರೆ’ ಎಂಬ ಭರವಸೆ ನನಗಿದೆ ಎಂದು ಪಂಡಿತ್  ಭೀಮ್ ಸೇನ್ ಜೋಷಿಯವರು ಹೇಳಿದ್ದರಂತೆ. ಅವರ ಭರವಸೆಯನ್ನು ನೂರಕ್ಕೆ ನೂರರಷ್ಟು ಪ್ರಮಾಣದಲ್ಲಿ ಈಡೇರಿಸುವ ರೀತಿಯಲ್ಲೇ ಬೆಳೆದು ಬಂದಿರುವ ಜಯತೀರ್ಥ ಮೇವುಂಡಿಯವರು, ಭಾರತದ ಇವತ್ತಿನ ಪೀಳಿಗೆಯ ಪ್ರಮುಖ ಹಿಂದೂಸ್ತಾನಿ ಗಾಯಕರಲ್ಲಿ ಒಬ್ಬರು ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕೆಲವು ವರ್ಷಗಳ ಕಾಲ ಗೋವಾ ಆಕಾಶವಾಣಿ ನಿಲಯದಲ್ಲಿ ಮತ್ತು ನಂತರ ಬೆಂಗಳೂರು ಆಕಾಶವಾಣಿಯಲ್ಲೂ ಸೇವೆ ಸಲ್ಲಿಸಿದ ಜಯತೀರ್ಥ ಮೇವುಂಡಿ, ತದನಂತರ ಅಲ್ಲಿಂದಲೂ ಬಿಡುಗಡೆ ಪಡೆದು, ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಹಕ್ಕಿಯಂತೆ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

‘ನೀವು ಹುಬ್ಬಳ್ಳಿಯನ್ನು ಬಿಟ್ಟು, ಮಹಾನಗರವೊಂದರಲ್ಲಿ ವಾಸಮಾಡುವುದು ಸೂಕ್ತ, ಮತ್ತು ಅನುಕೂಲಕರ’ ಎಂದು ಹೇಳುವವರ ಮಾತುಗಳನ್ನು ಒಪ್ಪದ ಜಯತೀರ್ಥರು, ಹುಟ್ಟಿಬೆಳೆದ ಊರಿನಲ್ಲೇ ನೆಲೆಸಿದ್ದಾರೆ.  ಪತ್ನಿ ಮಧುವಂತಿ, ಜಯತೀರ್ಥರ ಸಂಗೀತ ಸಾಧನೆಗೆ ಬೆಂಬಲವಾಗಿ ನಿಂತಿದ್ದಾರೆ. ಈ ದಂಪತಿಯ ಪುತ್ರ ಲಲಿತ್‌ ಕೂಡ ತಂದೆಯಂತೆಯೇ ತಾನೂ ಒಬ್ಬ ಸಂಗೀತಗಾರನಾಗುವ ಹಂಬಲ ಹೊಂದಿದ್ದಾನೆ.

ಬಂಗಾರದ ಪೀಳಿಗೆಯ ಮಹಾನ್ ತಾರೆಗಳು ಎಂದೇ ಕರೆಸಿಕೊಳ್ಳುವ ಉಸ್ತಾದ್ ಅಲ್ಲಾ ರಖಾ. ಉಸ್ತಾದ್ ವಿಲಾಯತ್ ಖಾನ್, ಪಂಡಿತ್ ಕಿಶನ್ ಮಹಾರಾಜ್, ಉಸ್ತಾದ್ ಅಲಿ ಅಕ್ಬರ್ ಖಾನ್, ಪಂಡಿತ್ ಭೀಮ್ ಸೇನ್ ಜೋಷಿ, ಪ್ರಸಿದ್ಧ ಸಿತಾರ್ ವಾದಕ ಭಾರತರತ್ನ ಪಂಡಿತ್ ರವಿಶಂಕರ್ ತೆರೆಮರೆಗೆ ಸರಿದಿದ್ದಾರೆ. ಇವರೆಲ್ಲಾ ಆಗಿ ಹೋದಮೇಲೆ, ಭಾರತ ಸಂಗೀತ ಕ್ಷೇತ್ರದ ಭವಿಷ್ಯವೇನು ಎಂಬ ಪ್ರಶ್ನೆಗೆ ಉತ್ತರವಾಗಿ ಕಂಡುಬಂದಿರುವ ಪ್ರತಿಭಾವಂತ ಗಾಯಕರಲ್ಲಿ, ಜಯತೀರ್ಥ ಮೇವುಂಡಿ ಅಗ್ರ ಸ್ಥಾನದಲ್ಲಿದ್ದಾರೆ.

ಬಿಲಾಸ್ ಖಾನಿ ತೋಡಿ, ಅಭೋಗಿ, ಕಾನಡಾ, ಬಸಂತ್, ಯಮನ್‌, ಮಾರ್ವಾ, ಲಲತ್‌, ಗುಣಕಲಿ ರಾಗಗಳಿರುವ ಹಿಂದೂಸ್ತಾನಿ ಗಾಯನದ ಧ್ವನಿಮುದ್ರಿಕೆಗಳನ್ನು ಹೊರತಂದಿದ್ದಾರೆ. ಹಿಂದೂಸ್ತಾನಿ ಗಾಯನದ ಜೊತೆ ಜೊತೆಗೆ ಸಂತ ವಾಣಿ, ದಾಸರ ಪದಗಳನ್ನೂ ಹಾಡುವ ಜಯತೀರ್ಥರು ‘ರಂಗಬಾರೋ ಪಾಂಡುರಂಗ ಬಾರೊ’ ಎಂಬ ಶೀರ್ಷಿಕೆಯ ದಾಸರ ಪದಗಳ ಸಿಡಿ ಮತ್ತು ‘ನಾರಾಯಣ ನಮೋ ನಮೊ’ ಸಿಡಿಯನ್ನೂ ಹೊರತಂದಿದ್ದಾರೆ. ಕನ್ನಡದ ‘ಕಲ್ಲರಳಿ ಹೂವಾಗಿ’, ಮರಾಠಿಯ ‘ಆಜ್‌ ಚಾ ದಿವಸ್‌ ಮಾಜಾ’ ಸಿನಿಮಾಗಳಲ್ಲೂ ಹಾಡಿರುವ ಜಯತೀರ್ಥರು, ಆಕಾಶವಾಣಿ ಹಾಗೂ ದೂರದರ್ಶನದ ‘ಎ’ ಗ್ರೇಡ್‌ ಕಲಾವಿದರಾಗಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಜಯತೀರ್ಥ ಅವರು ಮಾಡಿರುವ ಈವರೆಗಿನ ಸಾಧನೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. 1995ರಲ್ಲಿ ಪಂ.ಜಸ್‌ ರಾಜ್‌ ಗೌರವ ಪುರಸ್ಕಾರ, 2005ರಲ್ಲಿ ಶಣ್ಮುಗಾನಂದ ಸಂಗೀತ ಶಿರೋಮಣಿ ಪ್ರಶಸ್ತಿ, 2007ರಲ್ಲಿ Young Maestro ಅಂದರೆ, ಯುವ ಸಂಗೀತಗಾರ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಮ್ ಅವರಿಂದ ಸ್ವೀಕರಿಸಿದ್ದಾರೆ. ಜಯತೀರ್ಥ ಮೇವುಂಡಿ ಅವರಿಗೆ, ಭೀಮಸೇನ ಜೋಶಿ ಅವರ ಹೆಸರಿನಲ್ಲಿ ನೀಡುವ ‘ಸ್ವರಭಾಸ್ಕರ ಪುರಸ್ಕಾರ’,  ಪುಣೆಯ ಪುಲ ದೇಶ್‌ ಪಾಂಡೆ ಶಾಸ್ತ್ರೀಯ ಸಂಗೀತ ಪ್ರಶಸ್ತಿ, 2009ರಲ್ಲಿ ಆದಿತ್ಯ ಬಿರ್ಲಾ ಸಂಗೀತ ಕಲಾ ಕಿರಣ ಪುರಸ್ಕಾರಗಳೂ ದೊರಕಿವೆ. ಕರ್ನಾಟಕ ಸರ್ಕಾರ ಪಂಡಿತ್ ಬಸವರಾಜ ರಾಜಗುರು ಪ್ರಶಸ್ತಿ ನೀಡಿ ಗೌರವಿಸಿದೆ.
ಟಿವಿ ಮಾಧ್ಯಮಗಳು,  ಸಿನಿಮಾ ಮತ್ತು ಸುಗಮ ಸಂಗೀತಕ್ಕೆ ಕೊಡುವಷ್ಟೇ ಪ್ರೋತ್ಸಾಹ ಮತ್ತು ಮನ್ನಣೆಯನ್ನು ಶಾಸ್ತ್ರೀಯ ಸಂಗೀತಗಾರರಿಗೂ ಕೊಡಬೇಕು ಅನ್ನುವುದು ಜಯತೀರ್ಥರ ಆಗ್ರಹ. ‘ಟಿವಿ ಮತ್ತು ಆಕಾಶವಾಣಿ ಮಾಧ್ಯಮಗಳನ್ನು ಬಳಸಿಕೊಂಡು ಹಿಂದುಸ್ತಾನಿ ಸಂಗೀತವನ್ನು ಇನ್ನೂ ಹೆಚ್ಚಿನ ಜನರಿಗೆ ತಲುಪಿಸಬಹುದು, ಜನಪ್ರಿಯಗೊಳಿಸಬಹುದು’ ಅನ್ನುವುದು ಜಯತೀರ್ಥರ ಅಭಿಪ್ರಾಯ. ಶಾಸ್ತ್ರೀಯ ಸಂಗೀತಗಾರರಿಗೆ ಪ್ರತಿಭೆಯ ಪ್ರದರ್ಶನಕ್ಕೆ ವಿಪುಲ ಅವಕಾಶಗಳು ಮತ್ತು ಅವರ ಸಾಧನೆಗೆ ತಕ್ಕ ಮನ್ನಣೆ ದೊರಕಿದಲ್ಲಿ, ಇನ್ನೂ ಹತ್ತಾರು ಮಕ್ಕಳು ಅದರತ್ತ ಆಕರ್ಷಿತರಾಗುತ್ತಾರೆ, ಪರಂಪರೆ ಮುಂದುವರಿಸುತ್ತಾರೆ. ಹೀಗೆ ಮಾಡದಿದ್ದರೆ, ಹೆಚ್ಚಿನವರು ರಿಯಾಲಿಟಿ ಶೋಗಳ ಗ್ಲಾಮರ್‌ಗೆ ಮಾರುಹೋಗುತ್ತಾರೆ, ಸಿನಿಮಾ ಮತ್ತು ಲಘು ಗಾಯನದಕಡೆ ಮುಖಮಾಡುತ್ತಾರೆ ಅನ್ನುವುದು ಜಯತೀರ್ಥರ ಅಭಿಮತ.

ಜನರಲ್ಲಿ ಹಿಂದಿನ ಕಾಲದವರಂತೆ ಗಂಟೆಗಟ್ಟಲೇ ಕುಳಿತು ಶಾಸ್ತ್ರೀಯ ಸಂಗೀತ ಕೇಳುವ ಹವ್ಯಾಸ ಕಡಿಮೆಯಾಗುತ್ತಿದೆ ಅನ್ನುವುದನ್ನು ಒಪ್ಪುವ ಜಯತೀರ್ಥರು, ಶಾಸ್ತ್ರೀಯ ಸಂಗೀತವನ್ನು ಎಲ್ಲರಿಗೂ ಇಷ್ಟವಾಗುವಂತೆ ಮಾಡುವುದಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಹೊಸ ಪ್ರಯೋಗವನ್ನೂ ಮಾಡುತ್ತಿದ್ದಾರೆ. ಅರ್ಧ ಮುಕ್ಕಾಲು ಘಂಟೆಯ ಅವಧಿಯಲ್ಲಿ, ಮೂಲ ಸಂಪ್ರದಾಯವನ್ನು ಉಳಿಸಿಕೊಂಡೇ ರಾಗದ ಶ್ರೀಮಂತಿಕೆಯನ್ನು  ಬಿಂಬಿಸಲು ಸಾಧ್ಯವಾಗುವಂಥ ಸಂಯೋಜನೆಗಳನ್ನು ಮಾಡುವ ಪ್ರಯತ್ನ ನಡೆಸುತ್ತಿದ್ದೇನೆ ಅನ್ನುತ್ತಾರೆ.

ಅಮೆರಿಕ, ಸಿಂಗಾಪುರ, ದುಬೈ, ದೋಹಾ, ಕುವೈತ್, ಯೂರೋಪ್ ದೇಶಗಳಲ್ಲಿನ ಹಲವಾರು ನಗರಗಳಲ್ಲಿ ಹಿಂದೂಸ್ತಾನಿ ಗಾಯನವನ್ನು ಪ್ರಸ್ತುತಪಡಿಸಿರುವ ಜಯತೀರ್ಥ ಮೇವುಂಡಿ, ಭಾರತದಲ್ಲಿ ನಡೆಯುವ ಬಹುತೇಕ ಎಲ್ಲಾ ಪ್ರಮುಖ ಸಂಗಿತೋತ್ಸವಗಳಲ್ಲೂ ಹಾಡಿದ್ದಾರೆ.

ಮೈಸೂರು ದಸರಾ ಮಹೋತ್ಸವ,  ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವ, ಕುಮಾರ್ ಗಂಧರ್ವ  ಸಂಗೀತೋತ್ಸವ, ಗ್ವಾಲಿಯರ್‌ ನ ತಾನ್‌ ಸೇನ್ ಸಮಾರೋಹ, ಜಲಂಧರ್‌ನ ಹರಿವಲ್ಲಭ ಸಂಗೀತೋತ್ಸವ, ದೆಹಲಿಯ ಗುಣಿದಾಸ್ ಸಂಗೀತ ಸಮಾರಂಭ. ಕೊಲ್ಕತ್ತಾದ ಡೋವರ್ ಲೇನ್ ಫೆಸ್ಟಿವಲ್, ಬೋಸ್ಟನ್ ನಲ್ಲಿ ನಡೆಯುವ  ಲರ್ನ್‌ಕ್ವೆಸ್ಟ್  ಫೆಸ್ಟಿವಲ್ ಗಳಲ್ಲಿ ಹಾಡಿ ಕಲಾರಸಿಕರ ಮನತಣಿಸಿದ್ದಾರೆ.

ಶಕ್ತಿಯುತ ಮತ್ತು ಸರ್ವತೋಮುಖ ಹಾಡುಗಾರಿಕೆಯ ಸಾಮರ್ಥ್ಯ ಹೊಂದಿರುವ ಜಯತೀರ್ಥರು ಖ್ಯಾಲ್, ಥುಮ್ರಿ, ಅಭಂಗ್ ಮತ್ತು ಭಜನ್‌ಗಳನ್ನು ಅತ್ಯಂತ ಸುಲಲಿತವಾಗಿ ಹಾಡಬಲ್ಲ ಗಾಯಕ.

ಮಹಾನ್ ಗಾಯಕರು ಬೆಳಗಿದ ಕಿರಾಣಾ ಘರಾಣದ ಸಂಗೀತ ಜ್ಯೋತಿಯನ್ನು ಮುಂದಿನ ಪೀಳಿಗೆಯವರೆಗೂ ಒಯ್ಯುವಂಥ ಸಮರ್ಥನೆಂದು ಬಣ್ಣಿಸಲ್ಪಟ್ಟಿರುವ ಜಯಯತೀರ್ಥ ಮೇವುಂಡಿಯವರ ಬಗ್ಗೆ, ಪ್ರಸಿದ್ಧ ತಬಲಾ ವಾದಕ ಉಸ್ತಾದ್  ಝಾಕಿರ್ ಹುಸೇನ್ ಮತ್ತು ಸರೋದ್ ವಾದಕರಾದ ಉಸ್ತಾದ್ ಅಮ್ಜದ್ ಅಲಿ ಖಾನ್ ಕೂಡ ಅಭಿಮಾನ ವ್ಯಕ್ತಪಡಿಸಿದ್ದಾರೆ.  

ಭಾರತ ಸಂಗೀತ ಕ್ಷೇತ್ರದಲ್ಲಿ ಈಗಾಗಲೇ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸಿರುವ ಜಯತೀರ್ಥ ಮೇವುಂಡಿ ಅವರು, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಇನ್ನೂ ಹತ್ತಾರು ವರ್ಷಗಳ ಕಾಲ ದೇಶ ವಿದೇಶಗಳ ಸಂಗೀತ ಪ್ರೇಮಿಗಳನ್ನು ರಂಜಿಸಲಿ, ಅವರ ಸಾಧನೆಗೆ ತಕ್ಕ ಮನ್ನಣೆ ದೊರೆಯಲಿ ಅನ್ನುವುದೇ ನಮ್ಮ ಆಶಯ.  

 

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ