ಉಕ್ಕಿನ ಸೇತುವೆಗೆ ವಿರೋಧ, ಈಗ ನಗರದಲ್ಲಿ ಸುರಂಗ ಮಾರ್ಗ !08-06-2017 206

ಬೆಂಗಳೂರು: - ನಗರದಲ್ಲಿ ಸುರಂಗ ಮಾರ್ಗ ನಿರ್ಮಾಣ ಸಂಬಂಧ ಬಲ್ಗೇರಿಯಾ ಮೂಲದ ಕಂಪನಿಯೊಂದಿಗೆ ಆರಂಭಿಕ ಚರ್ಚೆ ನಡೆದಿದೆ. ಮುಂದಿನ ವಾರದೊಳಗೆ ಈ ಸಂಬಂಧ ಹೆಚ್ಚಿನ ವಿವರಗಳು ಲಭ್ಯವಾಗಲಿದೆ ಎಂದು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಕೆ.ಜೆ. ಜಾರ್ಜ್ ಅವರು ವಿಧಾನ ಪರಿಷತ್ ನಲ್ಲಿ ಇಂದು ತಿಳಿಸಿದರು. ಕಾಂಗ್ರೆಸ್ ನ ಕೆ.ಸಿ. ಕೊಂಡಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದು ಕಿ.ಮೀ.ನ ನಾಲ್ಕು ಲೇನ್ + ಎರಡು ಲೇನ್ ಗಳ ಕಾಮಗಾರಿಗೆ ಟೆಂಡರ್ ಮೂಲಕ 800 ಕೋಟಿ ರೂ. ಆಗಲಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸುವಂತೆ ಆ ಸಂಸ್ಥೆಗೆ ಮನವಿ ಮಾಡಲಾಗಿದೆ ಎಂದು ಹೇಳಿದರು. ಮುಂದಿನ ವಾರ ಸಮಗ್ರ ಮಾಹಿತಿ ಸಿಗುತ್ತಿದ್ದಂತೆ, ಸಾರ್ವಜನಿಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಸಚಿವ ಜಾರ್ಜ್ ಅವರು ತಿಳಿಸಿದರು. ನಗರದಲ್ಲಿ ಸುಗಮ ಸಂಚಾರಕ್ಕೆ ಮರ ಕಡಿಯಲೇ ಬೇಕು. ಆದರೆ ಇದಕ್ಕೆ ತೀವ್ರ ವಿರೋಧ ಎದುರಾಗುತ್ತದೆ. ಮರ ಕಡಿಯದಿದ್ದರೆ, ಅಭಿವೃದ್ಧಿ ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು. ಹೆಬ್ಬಾಳದಿಂದ ಬಸವೇಶ್ವರ ವೃತ್ತದವರೆಗೆ 1900 ಕೋಟಿ ರೂ. ವೆಚ್ಚದಲ್ಲಿ ಉಕ್ಕಿನ ಸೇತುವೆಯನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿತ್ತು. ಅದಕ್ಕೆ ಭಾರಿ ವಿರೋಧ ಎದುರಾಯಿತು. ಅದರ ಬದಲು ಸುರಂಗ ಮಾರ್ಗ ರಸ್ತೆಯನ್ನು ನಿರ್ಮಿಸಲು ಮುಂದಾಗಿದ್ದೇವೆ. ಯಾವ ಭಾಗದಲ್ಲಿ ಸುರಂಗ ಮಾರ್ಗ ನಿರ್ಮಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದರು


ಒಂದು ಕಮೆಂಟನ್ನು ಬಿಡಿ