ಉಗ್ರಪ್ಪ ಕೃಪೆಯಿಂದ ನಾನು ಕುರ್ಚಿಯಲ್ಲಿ ಕುಳಿತಿಲ್ಲ !05-06-2017 218

ಬೆಂಗಳೂರು:-  ಸಭಾಪತಿ ಹುದ್ದೆಯಿಂದ ತಮ್ಮನ್ನು ಪದಚ್ಯುತಗೊಳಿಸಲು ಕಾಂಗ್ರೆಸ್ ಯತ್ನ ಆರಂಭವಾಗಿರುವ ಬೆನ್ನಲ್ಲೇ ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ತಿರುಗೇಟು ನೀಡಿದ್ದಾರೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ರಾಜ್ಯಪಾಲರಾಗಿದ್ದ ಕಾಂಗ್ರೆಸ್‍ನ ರೋಸಯ್ಯ ಅವರನ್ನು ರಾಜ್ಯಪಾಲ ಪದವಿಯಿಂದ ಪದಚ್ಯುತಗೊಳಿಸಿರಲಿಲ್ಲ ಎಂಬುದನ್ನು  ಕಾಂಗ್ರೆಸ್ ನೆನಪಿಸಿಕೊಳ್ಳಬೇಕು ಎಂದಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದೊಡನೆ ರಾಜ್ಯಪಾಲ ಹುದ್ದೆಯಲ್ಲಿದ್ದ ಬಿಜೆಪಿಯ ರಾಮಾಜೋಯ್ಸ್ ಅವರನ್ನು ಪದಚ್ಯುತಗೊಳಿಸಿತು. ಆದರೆ ಮೋದಿ ಸರ್ಕಾರ ಆ ಕೆಲಸ ಮಾಡಲಿಲ್ಲ ಎಂದು ಹೇಳಿದರು. ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಪ್ರತಿಕ್ರಿಯಿಸಿದ ಅವರು, ಸಭಾಪತಿ ವಿರುದ್ಧ ನಿಯಮ 165 ರ ಪ್ರಕಾರ ಅವಿಶ್ವಾಸ ನಿರ್ಣಯ ಬಂದರೆ 14 ದಿನಗಳ ಬಳಿಕ ಯಾವುದಾದರೂ ಒಂದು ದಿನ ನಿರ್ಣಯ ಮಂಡಿಸಲು ಸಭಾಪತಿ ಇಚ್ಛಿಸಿದರೆ ಅವಕಾಶ ದೊರೆಯುತ್ತದೆ ಎಂದರು. ನಿರ್ಣಯ ಮಂಡನೆಗೆ ಕನಿಷ್ಠ ಹತ್ತು ಮಂದಿ ಸದಸ್ಯರು ಎದ್ದು ನಿಲ್ಲಬೇಕು. ನಿರ್ಣಯ ಮಂಡನೆಗೆ ಒಪ್ಪಿಗೆ ಕೊಟ್ಟರೆ, ಐದು ದಿನದೊಳಗೆ ಮತದಾನ ನಡೆಸಬೇಕು ಎಂದರು ಅಲ್ಲದೆ ತಮ್ಮ ವಿರುದ್ಧ ಕಾಂಗ್ರೆಸ್‍ನ ವಿ.ಎಸ್. ಉಗ್ರಪ್ಪ ಮಂಡಿಸಲಾಗಿರುವ ಅವಿಶ್ವಾಸ ನಿರ್ಣಯದ ಕುರಿತು ಪ್ರತಿಕ್ರಿಯಿಸಿದರು. 15 ದಿನದೊಳಗೆ ಸಭಾಪತಿ ಕುರ್ಚಿ ಬಿಡಿ ಎಂದು ಉಗ್ರಪ್ಪ ಹೇಳಿರುವುದಕ್ಕೆ ಕೆಂಡ ಮಂಡಲವಾಗಿರುವ ಶಂಕರ್‍ಮೂರ್ತಿ, ಉಗ್ರಪ್ಪ ಕೃಪೆಯಿಂದ ನಾನು ಕುರ್ಚಿಮೇಲೆ ಕುಳಿತಿಲ್ಲ. ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರ ಬೆಂಬಲದಿಂದ ಕುತಿದ್ದೇನೆ. ನಾನು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ನಾನು ಬಿಜೆಪಿಗೆ ಸೇರಿದ್ದೇನೆ. ಅದರಲ್ಲಿ ಮುಚ್ಚಿಡುವ ಅಂಶವೇನೂ ಇಲ್ಲ ಎಂದು ಕಟುವಾಗಿ ನುಡಿದರು.


ಒಂದು ಕಮೆಂಟನ್ನು ಬಿಡಿ