ನಾಲ್ಕು ವರ್ಷ ಪೂರ್ಣ.. ಸಾಧಿಸಿದ್ದು ಅಪೂರ್ಣ03-06-2017 1118

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಾಲ್ಕು ವರ್ಷದ ಆಡಳಿತಾವಧಿಯನ್ನು ಪೂರ್ಣಗೊಳಿಸಿದ್ದು 5ನೇ ವರ್ಷದಲ್ಲಿ ಅತ್ಯಂತ ಹುಮ್ಮಸ್ಸಿನಿಂದ ಚುನಾವಣೆ ಎದುರಿಸಲು ಸಜ್ಜುಗೊಳ್ಳುತ್ತಿದೆ. ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಎಲ್ಲಾ ಭರವಸೆ ಈಡೇರಿಸಲಾಗಿದೆ. ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡಿದ ಹೆಗ್ಗಳಿಕೆ ನಮ್ಮದು, ನುಡಿದಂತೆ ನಡೆದಿದ್ದೇವೆ ಅದಕ್ಕಾಗಿ ಕೂಲಿಕೊಡಿ ಎಂದು ಮತದಾರರ ಬಳಿ ಹೋಗಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಇದೇ ವರ್ಷ ಹಲವು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನ ಮಾಡಲಾಗಿದೆ. ಈ ಮೂಲಕ ಸರ್ಕಾರದ ಸಾಧನೆಯನ್ನು ಜನರ ಮುಂದಿಟ್ಟು ಮುಂಬರುವ ಚುನಾವಣೆಯನ್ನು ಎದುರಿಸಿ ಮತ್ತೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ತರುವ ವಿಶ್ವಾಸ ಹೊಂದಲಾಗಿದೆ.

ಕಾಂಗ್ರೆಸ್ ನಾಯಕರಲ್ಲಿ ಇಂತಹ ಆತ್ಮವಿಶ್ವಾಸ, ಸಾಧನೆಯ ಬಗ್ಗೆ ಅದಮ್ಯ ಉತ್ಸಾಹ, ಮತ್ತು ಜನರು ಮತ್ತೆ ಆಶೀರ್ವಾದ ಮಾಡಲಿದ್ದಾರೆಂದು ನಂಬಿಕೆ ಹೊಂದಿರುವ ಈ ಸಮಯದಲ್ಲಿ ಸ್ಪೆಶಲ್ ರಿಪೋರ್ಟ್ ತಂಡ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಸಾಧ£,É ಸಚಿವರ ಕಾರ್ಯವೈಖರಿ ಕೇಳಿಬಂದ  ಆರೋಪಗಳು, ನಡೆದಿರುವ ಹಗರಣಗಳ ಬಗ್ಗೆ ಸ್ಥೂಲ ವಿವರಣೆಯನ್ನು ವೀಕ್ಷಕರ ಮುಂದಿಡುವ  ಪ್ರಯತ್ನ  ಮಾಡುತ್ತಿದೆ. ಇದು ಯಾವುದೇ ಸಚಿವರನ್ನು ಹೊಗಳುವ ಅಥವಾ ತೆಗಳುವ ವರದಿಯಲ್ಲ ಬದಲಿಗೆ ಇಲಾಖೆಗಳಲ್ಲಿ ಮಾಡಿದ ಸಾಧನೆ ಮತ್ತು ವೈಫಲ್ಯ ಹಾಗೂ ಈ ಇಲಾಖೆಯ ಬಗ್ಗೆ ಜನರಿಗಿದ್ದ ನಿರೀಕ್ಷೆ ಮತ್ತು ಅವರ ಈಡೇರಿಕೆಯ ಒಂದು ವರದಿಯನ್ನಷ್ಟೇ ಮುಂದಿಡುತ್ತೇವೆ. ಉಳಿದಿದ್ದು ವೀಕ್ಷಕರಾದ ನಿಮಗೆ ಬಿಟ್ಟಿದ್ದು.

ರಾಜ್ಯದ ಗ್ರಾಮೀಣ ಜನರ ಬದುಕಿನ ಜತೆ ಬೆರೆತು ಹೋಗಿರುವ ಇಲಾಖೆ ಎಂದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ. ಸ್ಥಳೀಯ ಆಡಳಿತಕ್ಕೆ ಒತ್ತು ನೀಡಿದ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಗ್ರಾಮವಾಸ್ತವ್ಯದ ಕನಸಿನೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಈ ವ್ಯವಸ್ಥೆ ವಿಕೇಂದ್ರಿಕರಣ ವ್ಯವಸ್ಥೆಯ ಮೈಲಿಗಲ್ಲು. ರಾಜ್ಯಮಟ್ಟದಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸಿದರೆ ಅವುಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಪಂಚಾಯ್ತಿಗಳದ್ದು ಹೀಗಾಗಿ ಯಾವುದೇ ರಾಜ್ಯವಿರಲಿ ಅಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಆಡಳಿತ ವಿಕೇಂದ್ರಿಕರಣ ಆ ಸರ್ಕಾರದ ಸಾಧನೆಯನ್ನು ಹೇಳುತ್ತದೆ.

ನಮ್ಮ ಈ ಸಂಚಿಕೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ಸಾಧನೆ ಸಚಿವ ಎಚ್.ಕೆ. ಪಾಟೀಲ್ ಅವರ ಕಾರ್ಯವೈಖರಿಯ ಒಂದು ಸ್ಥೂಲ ಚಿತ್ರಣ ನೀಡುತ್ತಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಎಚ್.ಕೆ. ಪಾಟೀಲ್ ಮಂತ್ರಿಯಾಗುವುದು ಬಹುತೇಕ ಖಚಿತವಾಗಿತ್ತು. ಕಾಂಗ್ರೆಸ್ ಪಾಳಯದಲ್ಲಿ ಮುತ್ಸದ್ಧಿ ರಾಜಕಾರಣಿಗಳಲ್ಲಿ ಒಬ್ಬರು ಎಂದು ಗುರುತಿಸಲ್ಪಡುವ ಎಚ್.ಕೆ. ಪಾಟೀಲ್ ಅವರಿಗೆ ಮಹತ್ವದ ಮಂತ್ರಿ ಸ್ಥಾನ ನೀಡುವ ನಿರೀಕ್ಷೆ ಇತ್ತು. ಅದರಲ್ಲೂ ಈ ಹಿಂದೆ ಅವರು ಜಲಸಂಪನ್ಮೂಲ ಸಚಿವರಾಗಿ ಅವರು ಮಾಡಿದ ಸಾಧನೆ ಎಲ್ಲರ ಮುಂದಿತ್ತು. ಹೀಗಾಗಿ ಈ ಬಾರಿ ಮತ್ತೆ ಅವರು ಜಲಸಂಪನ್ಮೂಲ ಸಚಿವರಾಗಲಿದ್ದಾರೆಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಖಾತೆ ಹಂಚಿಕೆಯ ಸಮಯದಲ್ಲಿ ಮುಖ್ಯಮಂತ್ರಿಗಳ ಬಳಿ ಬೇಡಿಕೆಯಿಟ್ಟು ಅತ್ಯಂತ ಮಹತ್ವವೆನಿಸುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಇಲಾಖೆ ಪಡೆದುಕೊಂಡರು. ಈ ಇಲಾಖೆ ಉಸ್ತುವಾರಿ ವಹಿಸಿದ ನಂತರ ಅವರು ತಮ್ಮ ಕನಸು ಗಾಂಧೀಜಿ ಅವರ ಗ್ರಾಮಸ್ವರಾಜ್ಯ-ರಾಮರಾಜ್ಯದ ಕನಸು ನನಸು ಮಾಡುವುದು ಎಂದಾಗಿದೆ.

ಅದರಂತೆ ಕಾರ್ಯ ಆರಂಭಿಸಿದ ಅವರು ಪಂಚಾಯ್ತಿ ಕಾರ್ಯ ವೈಖರಿ ಸುಧಾರಣೆಗೆ ಎರಡು ಉನ್ನತ ಸಮಿತಿ ರಚನೆ ಮಾಡಿದರು. ಅದರಲ್ಲಿ ಪ್ರಮುಖವಾಗಿ ಪಂಚಾಯ್ತಿಗಳಿಗೆ ಹೆಚ್ಚು ಅಧಿಕಾರ ನೀಡುವ ದೃಷ್ಟಿಯಿಂದ ರಮೇಶ್‍ಕುಮಾರ್ ನೇತೃತ್ವದಲ್ಲಿ ಒಂದು ಸಮಿತಿ ಮತ್ತೊಂದು ಪಂಚಾಯ್ತಿಗಳ ಪ್ರದೇಶ ನಿಗದಿ ಕುರಿತಂತೆ ನಂಜುಡಯ್ಯನ ಮಠ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಿ ಈ ಮೂಲಕ ಪಂಚಾಯ್ತಿ ವ್ಯವಸ್ಥೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ ಅವರು ಮೆಚ್ಚುವ ರೀತಿ ಕೆಲಸ ಆರಂಭಿಸಿದರು.

ಇನ್ನು ಸಚಿವರಾಗುವ ಮುನ್ನ ತಮ್ಮ ತವರು ಜಿಲ್ಲೆ ಗದಗ್‍ನಲ್ಲಿ 2ರೂಪಾಯಿಗೆ 20 ಲೀಟರ್ ಶುದ್ದ ಕುಡಿಯುವ ನೀರು ನೀಡುವ ಯೋಜನೆ ರೂಪಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಸಚಿವರಾದ ನಂತರ ತಮ್ಮ ಇಲಾಖೆಯ ಮೂಲಕ ರಾಜ್ಯದ ಎಲ್ಲಾ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಪ್ರಕಟಿಸಿ ಅನುಷ್ಠಾನ ಆರಂಭಿಸಿದರು. ಸದ್ಯ ರಾಜ್ಯದಲ್ಲಿ ಸುಮಾರು 10,ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯಾರಂಭ ಮಾಡಿದೆ. ಆಸೈನಿಕ್, ಫ್ಲೋರೈಡ್ ಮಿಶ್ರಿತ ನೀರು ಕುಡಿಯುತ್ತಿದ್ದ ಹಲವಾರು ಗ್ರಾಮಗಳಲ್ಲಿ ಈ ಯೋಜನೆ ವರದಾನವಾಗಿ ಪರಿಣಮಿಸಿದೆ. ಕೇವಲ 2ರೂಪಾಯಿಗೆ ಸಂಸ್ಕರಿಸಿ ಶುದ್ಧಿಕರಿಸಿದ ಸ್ವಚ್ಛ ಕುಡಿಯುವ ನೀರು ಲಭ್ಯವಾಗುತ್ತಿದೆ.

ಗ್ರಾಮೀಣ ಪ್ರದೇಶದ ಜನರ ಬದುಕನ್ನು ಹಸನು ಮಾಡುವ ದೃಷ್ಠಿಯಿಂದ, ಗ್ರಾಮೀಣ ಜನರ ಜೀವನ ಶೈಲಿಯಲ್ಲಿ ಬದಲಾವಣೆ ತರುವ ದೃಷ್ಠಿಯಿಂದ 21 ಅಂಶಗಳ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಇದರಲ್ಲಿ ಈಗಾಗಲೇ 15 ಅಂಶಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಈ ವರ್ಷದಲ್ಲಿ ಉಳಿದ ಆರು ಅಂಶಗಳನ್ನು ಜಾರಿಗೊಳಿಸುವ ಮೂಲಕ 21 ಅಂಶ ಜಾರಿಗೊಳಿಸಿದ ಕೀರ್ತಿಗಳಿಸುವ ದಿಕ್ಕಿನಲ್ಲಿ ಇಲಾಖೆ ಸಾಗಿದೆ.

ನಿರುದ್ಯೋಗ ಸಮಸ್ಯೆ ದೂರ ಮಾಡುವ ದೃಷ್ಟಿಯಿಂದ ಈ ಹಿಂದಿನ ಕೇಂದ್ರ ಸರ್ಕಾರ ರೂಪಿಸಿದ ಗ್ರಾಮೀಣ ಉದ್ಯೋಗ ಖಾತ್ರಿ ಅತ್ಯಂತ ಮಹತ್ವದ ಯೋಜನೆ. ವರ್ಷದಲ್ಲಿ ಪ್ರತಿಯೊಬ್ಬ  ವ್ಯಕ್ತಿಗೆ ಕನಿಷ್ಠ 100 ದಿನ ಉದ್ಯೋಗ ನೀಡುವ ಈ ಯೋಜನೆ ಅನುಷ್ಟಾನದ ಗುರುತರ ಜವಾಬ್ದಾರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಇಲಾಖೆಯದ್ದು. ಇದಕ್ಕಾಗಿ ಕೇಂದ್ರ ಸರ್ಕಾರ ನೇರವಾಗಿ ಪಂಚಾಯ್ತಿಗಳಿಗೆ ಹಣ ಬಿಡುಗಡೆ ಮಾಡಲಿದೆ.

ಪಂಚಾಯ್ತಿ ಅಧಿಕಾರಿಗಳು ಅರ್ಹ ಫಲಾನುಭವಿಗಳಿಂದ ಉದ್ಯೊಗದ ಕಾರ್ಡ್ ಮಾಡಿಸಬೇಕು ಆ ನಂತರ  ಅವರು ಯಾವ ಕೆಲಸ ಮಾಡಿದ್ದಾರೆಂದು ಆ ಕಾರ್ಡ್‍ನಲ್ಲಿ ನಮೂದಿಸಿ ತಲುಪಿಸಿದರೆ ಆ ಫಲಾನುಭವಿಗೆ ಕೂಲಿ ಹಣ ಪಾವತಿಯಾಗಲಿದೆ. ಇಂತಹ ಅತ್ಯುತ್ತಮ ಯೋಜನೆಯನ್ನು ಅಧಿಕಾರಿಗಳು ಮಧ್ಯಮವರ್ತಿಗಳು ದುರ್ಬಳಕೆ  ಮಾಡಿಕೊಳ್ಳಲು ಆರಂಭಿಸಿದರು. ಇಲ್ಲಿನ ಫಲಾನುಭವಿಯ ಹೆಸರಲ್ಲಿ ಅಧಿಕಾರಿಗಳೇ ಉದ್ಯೋಗದ ಕಾರ್ಡ್ ಮಾಡಿದರು. ಇದಕ್ಕೆ ಸ್ಥಳೀಯ ಪುಢಾರಿಗಳು, ಪಂಚಾಯ್ತಿಗಳ ಚುನಾಯಿತ ಪ್ರತಿನಿಧಿಗಳು ಸಹಕಾರ ನೀಡಿದರೆ, ಮಧ್ಯವರ್ತಿಗಳು ಬೆಂಗಾವಲಾಗಿ ನಿಂತರು. ಇದರ ಪರಿಣಾಮ ಬಡವರನ್ನು ತಲುಪಸಬೇಕಾದ ಹಣ ಈ ದುಷ್ಟಕೂಟದ ಜೇಬು ಸೇರಲಾರಂಭಿಸಿತು. ಕಳೆದ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಇದೊಂದು ದೊಡ್ಡ ಭ್ರಷ್ಟಾಚಾರವಾಗಿ ಬೆಳಕಿಗೆ ಬಂದಿತು.

ಎಚ್.ಕೆ. ಪಾಟೀಲ್ ಸಚಿವರಾಗುತ್ತಿದ್ದಂತೆ ಈ ಅಕ್ರಮವನ್ನು ತಡೆಗಟ್ಟಲು ಮುಂದಾದರು. ಇದಕ್ಕಾಗಿ ಕಾಯಕ ಎಂಬ ತಂತ್ರಾಂಶ ರೂಪಿಸಿದರು. ಈ ಮೂಲಕ ಪಂಚಾಯ್ತಿ ಎಲ್ಲಾ ಪಾವತಿಗಳು ಈ ತಂತ್ರಾಶದ ಮೂಲಕವೇ ಸಂದಾಯವಾಗುವಂತಹ ವ್ಯವಸ್ಥೆ ರೂಪಿಸಿದರು.

ಪಂಚಾಯ್ತಿ ಮಟ್ಟದಲ್ಲಿ ನಡೆಯುತ್ತಿರುವ ವಿವಿಧ ರಸ್ತೆ, ಒಳಚರಂಡಿ ಕುಡಿಯುವ ನೀರು ಯೋಜನೆಯ ಕಾಮಗಾರಿ ಮತ್ತು ಅದರ ಪಾವತಿಯನ್ನು ಕೂಡಾ ಈ ತಂತ್ರಾಂಶದ ಮೂಲಕವೇ ಸಂದಾಯವಾಗುವ ವ್ಯವಸ್ಥೆ ಮಾಡಿದರು. ಈ ರೀತಿ ಮೊತ್ತ ಸಂದಾಯವಾಗುವ ಮುನ್ನ ಕೈಗೊಂಡ ಕಾಮಗಾರಿಯ ಎಲ್ಲಾ ವಿವರಗಳನ್ನು ಕಾಯಕ ತಂತ್ರಾಂಶದಲ್ಲಿ ಅಡಕ ಮಾಡುವುದು ಕಡ್ಡಾಯವಾಯಿತು. ಇದರಿಂದ ಕಾಮಗಾರಿಗಳ ವಿಷಯದಲ್ಲಿ ಪಂಚಾಯ್ತಿಗಳಲ್ಲಿ  ಪಾರದರ್ಶಕತೆ ಉಂಟಾಗಿ ಭ್ರಷ್ಟಾಚಾರ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ.

ಇನ್ನು ಉದ್ಯೋಗ ಖಾತ್ರಿಯ ಫಲಾನುಭವಿಗಳನ್ನು ಕೂಡಾ ಕಾಯಕ ತಂತ್ರಾಂಶದಲ್ಲಿ ಸೇರಿಸಲಾಗಿದೆ. ಪ್ರತಿಯೊಬ್ಬ ಫಲಾನುಭವಿಯೂ ತಮ್ಮ ಉದ್ಯೋಗ ಕಾರ್ಡ್‍ಗೆ ಆಧಾರ ಸಂಖ್ಯೆ  ಜೋಡಿಸುವುದನ್ನು ಕಡ್ಡಾಯಗೊಳಿಸಿದ ಪರಿಣಾಮ ಲಕ್ಷಾಂತರ ಬೋಗಸ್ ಉದ್ಯೋಗಕಾರ್ಡ್‍ಗಳು ರದ್ದುಗೊಂಡು ಅರ್ಹರಿಗೆ ಕೂಲಿ ಸಿಗುವಂತಾಗಿದೆ. ಯೋಜನೆ ರೂಪಿಸುವರು ಚಾಪೆ ಕೆಳಗೆ ತೂರಿದರೆ, ಅದನ್ನು ಅನುಷ್ಠಾನಗೊಳಿಸುವವರು ರಂಗೋಲಿ ಕೆಳಗೆ ನುಸುಳುತ್ತಾರೆಂಬುವುದು ಆಡಳಿತ ವ್ಯವಸ್ಥೆಯನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಆಧಾರ ಸಂಖ್ಯೆಯ ಜತೆ ಸಂಪರ್ಕ ಮಾಡಿದ ನಂತರ ಅಧಿಕಾರಿಗಳು ಇದೀಗ ಕಮೀಷನ್ ವ್ಯವಹಾರ ಆರಂಭಿಸಿದ್ದಾರೆ. ಉದ್ಯೋಗದ ಕಾರ್ಡ್ ಪಡೆದಾತನನ್ನು ಸಂಪರ್ಕಿಸಿ ಇಲ್ಲದ ಕೆಲಸವನ್ನು ಮಾಡಿದ್ದಾರೆಂದು ನಮೂದು ಮಾಡುತ್ತಾರೆ.  ಆ ವ್ಯಕ್ತಿ ಇದಕ್ಕಾಗಿ ಕೂಲಿಯ ರೂಪದಲ್ಲಿ ಪಡೆಯುವ ಹಣದಲ್ಲಿ ಶೇಕಡಾ 20ರಷ್ಟನ್ನು ಜೇಬಿಗಿಳಿಸುತ್ತಿದ್ದಾರೆ. ಅದೇ ರೀತಿ ಕಾಮಗಾರಿ ವಿಷಯದಲ್ಲೂ ಕಮಿಷನ್ ದಂದೆ ಆರಂಭವಾಗಿದೆ. ಕಾಯಕ ತಂತ್ರಾಂಶ ರೂಪಿಸಿ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾದ ಸಚಿವರು ಇದೀಗ ಕಮಿಷನ್ ವ್ಯವಹಾರ ತಡೆಗಟ್ಟಲು ಸಾಧ್ಯವಾಗದೆ ಅಸಹಾಯಕರಾಗಿದ್ದಾರೆ.

ಗ್ರಾಮೀಣ ಪ್ರದೇಶದ ಜನತೆ ಪಹಣಿಪತ್ರ, ಭೂದಾಖಲೆ, ಜನನ-ಮರಣ ಪ್ರಮಾಣ ಪತ್ರ, ವಾಸದ ಧೃಡೀಕರಣ ಪತ್ರ ಸೇರಿದಂತೆ ವಿವಿಧ ಸೌಲಭ್ಯಗಳಿಗಾಗಿ ತಾಲೂಕು ಕೇಂದ್ರಗಳಿಗೆ ಎಡತಾಕುವ ಪರಿಸ್ಥಿತಿ ಇದೆ. ನೆಮ್ಮದಿ ಕೇಂದ್ರಗಳ ಮುಂದೆ ಜನ ಸಾಲುಗಟ್ಟಿ ನಿಲ್ಲುವ ಸ್ಥಿತಿ ಇದೆ. ಇದನ್ನು ನಿವಾರಿಸುವ ದೃಷ್ಟಿಯಿಂದ ಗ್ರಾಮೀಣ ಪ್ರದೇಶದಲ್ಲಿ ಒಂದೇ ಸೂರಿನಡಿ ನೂರು ಸೇವೆ ಸಿಗುವ ಬಾಪೂಜಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರ ಮೂಲಕ ಗ್ರಾಮೀಣ ಪ್ರದೇಶದ ಜನ ತಮ್ಮ ದೈನಂದಿನ ಬದುಕು ಬಿಟ್ಟು ತಾಲೂಕು ಕೇಂದ್ರಕ್ಕೆ ಬರುವುದು ತಪ್ಪಿದಂತಾಗಿದೆ. ಇದೊಂದು ಉತ್ತಮವಾದ ಯೋಜನೆ ಇದಕ್ಕೆ ಅಪಾರ ಜನ  ಮೆಚ್ಚುಗೆ ಲಭಿಸಿದ್ದು, ಕೇಂದ್ರ ಸರ್ಕಾರದ ಪ್ರಶಸ್ತಿ ಕೂಡಾ ಬಂದಿದೆ. ಆದರೆ ಈ ಯೋಜನೆ ಕಾರ್ಯ ನಿರ್ವಹಿಸುವುದು ಇಂಟರ್‍ನೆಟ್ ಮೂಲಕ ಹೀಗಾಗಿ ವೈಫೈ ಸೌಲಭ್ಯ ವಿಲ್ಲದ ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. ಮತ್ತೆ ಕೆಲವು ಕಡೆ ದುರ್ಬಲ ನೆಟ್‍ವರ್ಕ್ ಪರಿಣಾಮ ಈ ಕೇಂದ್ರಗಳು ಸಮರ್ಪಕ ಕಾರ್ಯ ನಿರ್ವಹಣೆ ಮಾಡದೆ, ಮತ್ತೆ ಗ್ರಾಮೀಣ ಜನ ತಾಲೂಕು ಕೇಂದ್ರ ದತ್ತ ಬರುವಂತಾಗಿದೆ. ಈ ನಿಟ್ಟಿನಲ್ಲಿ ಸಚಿವರು ಗಮನ ಹರಿಸಬೇಕಾಗಿದೆ.

ಗ್ರಾಮೀಣ ಪ್ರದೇಶದಲ್ಲಿನ ಸ್ವತ್ತುಗಳ ಬಗ್ಗೆ ಸಮರ್ಪಕವಾದ ದಾಖಲೆಗಳೇ ಇರಲಿಲ್ಲ. ಹೀಗಾಗಿ ಸಚಿವರು ಪಂಚಾಯ್ತಿ ಆಸ್ತಿಗಳ ಪತ್ತೆ ಕಾರ್ಯಕ್ಕೆ ಆದ್ಯತೆ ನೀಡಿದರು. ಇನ್ನು ಕೆಲವು ಕಡೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ಒಂದು ಆಸ್ತಿಗೆ ಮೂರು-ನಾಲ್ಕು ಮಂದಿಗೆ ಒಡೆತನ ಇರುವಂತೆ ಪತ್ರ ದಾಖಲೆ ಮಾಡಿ ಗ್ರಾಮೀಣ ಮಟ್ಟದಲ್ಲಿ ಅನಗತ್ಯ ಕಲಹಕ್ಕೆ ಅವಕಾಶ ನೀಡುತ್ತಿದ್ದರು. ಇದನ್ನು ಸರಿಪಡಿಸುವ ದೃಷ್ಠಿಯಿಂದ ಇ-ಖಾತಾ ಎಂಬ ವ್ಯವಸ್ಥೆಯನ್ನು ಜಾರಿಗೆಗೊಳಿಸಿದರು. ಇದರ ಮೂಲಕ ಒಂದು ಆಸ್ತಿಗೆ ಹಲವಾರು ಮಂದಿ ಮಾಲಿಕತ್ವ ಹೊಂದುವುದು ತಪ್ಪಿತು.

 

ಕೆಲವು ಪ್ರದೇಶಗಳಲ್ಲಂತೂ ಈ ವ್ಯವಸ್ಥೆ ಇನ್ನಿಲ್ಲದಂತೆ ಮೆಚ್ಚುಗೆ ವ್ಯಕ್ತವಾಯಿತು. ಯಾರು ಆಸ್ತಿಯ ನಿಜವಾದ ಮಾಲೀಕ ಇರುತ್ತಾನೋ ಆತ ತನ್ನ ಆಸ್ತಿಯ ಮುಂದೆ ನಿಂತು ಭಾವಚಿತ್ರ ತೆಗೆಸಿಕೊಂಡು ಬೆರಳಚ್ಚು ನೀಡಿದ ನಂತರ ಆ ಆಸ್ತಿಯ ಜೊತೆ ಅವನ ಹೆಸರಿಗೆ ಬರುತ್ತಿತ್ತು. ಇದರಿಂದ ಒಂದೇ ಆಸ್ತಿಗೆ ಹತ್ತಾರು ಮಂದಿ ಖಾತೆದಾರರು ಇರುವುದು ತಪ್ಪಿತು. ಗ್ರಾಮೀಣ ಪ್ರದೇಶಕ್ಕೆ ಇದು ಅತ್ಯಂತ ವರದಾನವಾಗಿ ಪರಿಣಮಿಸಿತು. ಆದರೆ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಹೊಂದಿಕೊಂಡ ಪಂಚಾಯ್ತಿಗಳಲ್ಲಿ ಬಾರಿ ಪ್ರಮಾಣದ ಅಕ್ರಮಕ್ಕೆ ದಾರಿ ಮಾಡಿಕೊಟ್ಟಿತು.

ಅದರಲ್ಲೂ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವು ನಗರಗಳ ವ್ಯಾಪ್ತಿಗೆ ಬರುವ ಪಂಚಾಯ್ತಿಗಳಲ್ಲಿ ಅಧಿಕಾರಿಗಳು ಇ-ಸ್ವತ್ತಿನ ಹೆಸರಲ್ಲಿ ದೊಡ್ಡ ಕರ್ಮಕಾಂಡವನ್ನೇ ನಡೆಸಿದರು. ಭೂಗಳ್ಳರಿಂದ ಹಣಪಡೆಯಲು ಸರ್ಕಾರದ ಆಸ್ತಿಯನ್ನು ಅವರೇ ಮಾಲೀಕರು ಎಂಬಂತೆ ಇ-ಸ್ವತ್ತಿನ ಮೂಲಕ ದಾಖಲೆ ನಿರ್ಮಿಸಿದರು. ಬೆಂಗಳೂರು ಸುತ್ತ-ಮುತ್ತವಂತೂ ಸಾವಿರಾರು ಎಕರೆ ಸರ್ಕಾರಿ ಭೂಮಿಗೆ ಇ-ಸ್ವತ್ತಿನ ಮೂಲಕ ವಾರಸುದಾರರು ಹುಟ್ಟಿಕೊಂಡರು. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿ ಖಾಸಗಿಯವರ ಪಾಲಾಯಿತು. ಸದುದ್ದೇಶದಿಂದ ರೂಪಿಸಿದ ಇಂತಹ ವ್ಯವಸ್ಥೆ ದುರ್ಬಳಕೆಯಾಗುತ್ತಿರುವುದನ್ನು ಕಂಡ ಸಚಿವರು ಅದನ್ನು ಸರಿಪಡಿಸುವ ಗೋಜಿಗೆ ಹೋಗದೆ ಇ-ಸ್ವತ್ತು ಯೋಜನೆಯನ್ನು ರದ್ದುಪಡಿಸಿದರು.

ಇದರಿಂದ ನಗರ ಪ್ರದೇಶದಲ್ಲಿನ ಹಲವು ಆಸ್ತಿಗಳು ಮತ್ತೆ ಸರ್ಕಾರದ ಸ್ವಾಧೀನಕ್ಕೆ ಬಂದರೆ ಗ್ರಾಮೀಣ ಪ್ರದೇಶದಲ್ಲಿ ಆಸ್ತಿಯ ಮಲೀಕತ್ವ ಕುರಿತಂತೆ ಮತ್ತೆ ವಿವಾದ ಸೃಷ್ಠಿಯಾದವು ಸಚಿವರು ವ್ಯವಸ್ಥೆಯಲ್ಲಿನ ಲೋಪ ಪತ್ತೆ ಹಚ್ಚಿ ಅದನ್ನು ಸರಿಪಡಿಸಿದರೆ ಉತ್ತಮವಾಗುತ್ತಿತ್ತು. ಆದರೆ ನೆಗಡಿಯಾಯಿತು ಎಂದು ಮೂಗನ್ನೇ ಕತ್ತರಿಸಿದ ಕೆಲಸ ಇಲ್ಲಿ ನಡೆಯಿತು. ಪಂಚಾಯ್ತಿಗಳನ್ನು ಸಶಕ್ತಿಕರಣಗೊಳಿಸುವ ದೃಷ್ಠಿಯಿಂದ ಜನರಿಗೆ ಅಧಿಕಾರ ಎಂಬ ತತ್ವವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕರ್ನಾಟಕ ಪಂಚಾಯ್ತಿ ಕಾಯಿದೆಯನ್ನು ರಮೇಶ್ ಕುಮಾರ್ ಅವರ ವರದಿಯನ್ನಾಧರಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯ್ತ್ ರಾಜ್ ಅಧಿನಿಯಮ ಎಂದು ಬದಲಾಯಿಸಲಾಗಿದೆ

ಈ ಮೂಲಕ ಸಚಿವಾಲಯಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರದಲ್ಲಿ 20 ತಿಂಗಳಿಂದ 5 ವರ್ಷಕ್ಕೆ ನಿಗಧಿಪಡಿಸಲಾಗಿದೆ. ಚುನಾವಣೆಗೆ ಸದಸ್ಯರ ಮೀಸಲಾತಿಯನ್ನು 2 ಅವಧಿಗೆ ನಿಗಧಿ ಪಡಿಸಲಾಗಿದೆ. ಈ ಮೂಲಕಿ 10 ವರ್ಷಗಳ ಅವಧಿಯವರೆಗೆ ಮೀಸಲಾತಿ ಕುರಿತ ಗೊಂದಲ ಉಂಟಾಗದಂತೆ ನೋಡಿಕೊಳ್ಳಲಾಗಿದೆ. ಅಧಿಕಾರ ವಿಕೇಂದ್ರೀಕರಣದ ತತ್ವಕ್ಕನುಗುಣವಾಗಿ ಸ್ಥಳೀಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲು ತಾಲೂಕು ಯೋಜನೆ ಅಭಿವೃದ್ಧಿ ಸಮಿತಿ, ಜಿಲ್ಲಾ ಯೋಜನಾ ಸಮಿತಿ ಮತ್ತು ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ರಚಿಸಲಾಗಿದೆ.

ಗ್ರಾಮ ಪಂಚಾಯ್ತಿಗಳ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ತೆರಿಗೆ ವಿಧಿಸುವ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಗ್ರಾಮದಿಂದ ದೂರ ಇರುವ ಕಡಿಮೆ ಜನಸಂಖ್ಯೆಯ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಅಲ್ಲಿನ ನಿವಾಸಿಗಳ ಅಭಿಪ್ರಾಯ ಪಡೆಯಲು ಆ ಸ್ಥಳಗಳಲ್ಲಿ ಜನವಸತಿ ಸಭೆ ನಡೆಸುವುದು ಕಡ್ಡಾಯ ಮಾಡಲಾಗಿದೆ. ಇದರ ಮೂಲಕ 60 ಸಾವಿರ ಗ್ರಾಮಸಂಖ್ಯೆಗಳನ್ನು ನಡೆಸಿ 2 ಲಕ್ಷ ಅಭಿವೃದ್ಧಿ ಚಟುವಟಿಕೆಗಳೂ ಗುರುತಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ರಕ್ಷಣೆ, ಕೋಮು ಸೌಹಾರ್ದತೆ ಪರಿಸರ ಅಭಿವೃದ್ಧಿ, ಜೈವಿಕ ಸಂರಕ್ಷಣೆಯ ಜವಾಬ್ದಾರಿಯನ್ನು ಈ ಕಾಯಿದೆಯ ಮೂಲಕ ಪಂಚಾಯ್ತಿಗಳಿಗೆ ನೀಡಲಾಗಿದೆ. ಗ್ರಾಮ ಪಂಚಾಯ್ತಿಯ ಚುನಾಯಿತ ಪ್ರತಿನಿಧಿ ತನ್ನ ಹಾಗೂ ತನ್ನ ಕುಟುಂಬದ ಆಸ್ತಿ ಮೌಲ್ಯ 2 ಲಕ್ಷ ರೂ ಮೀರಿದ್ದರೆ ಪ್ರತಿವರ್ಷ ತನ್ನ ಆಸ್ತಿ-ಪಾಸ್ತಿ ವಿವರಗಳನ್ನು ಘೋಷಿಸುವುದು, ಕಡ್ಡಾಯಗೊಳಿಸಲಾಗಿದೆ. ಒಟ್ಟಾರೆಯಾಗಿ ಈ ಮಸೂದೆ ಗ್ರಾಮೀಣ ಬದುಕಿನಲ್ಲಿ ಸ್ವಾವಲಂಬನೆ ಪರಸ್ಪರ ಗೌರವ ಘನತೆ ಕಾಪಾಡುವ ಸಮಾನತೆ ಸಾಧಿಸುವ ಪಾರದರ್ಶಕ ವ್ಯವಸ್ಥೆ ಮೂಲಕ ಜನಸಾಮಾನ್ಯರ ಕಂದು-ಕೊರತೆಗೆ ಸ್ಪಂದಿಸುವ ಅಸ್ತ್ರವಾಗಿ ಪರಿಣಮಿಸಿದೆ.

ಇದರ ಹೊರತಾಗಿ ನಾಲ್ಕು ವರ್ಷದ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಠಿಗೆ ಒತ್ತು ನೀಡುವ ರಾಜೀವ್‍ಗಾಂಧಿ ಯುವ ಚೈತನ್ಯ ಯೋಜನೆ ಜಾರಿಗೆ ತರಲಾಗಿದೆ. ವಿಕೇಂದ್ರಿಕರಣ ನೀತಿ ಅನ್ವಯ ಶಾಸಕರ ಅಧ್ಯಕ್ಷತೆಯಲ್ಲಿ ರಸ್ತೆ ನಿರ್ವಹಣಾ ಟಾಸ್ಕ್‍ಫೋರ್ಸ್ ರಚಿಸಲಾಗಿದೆ. ಪಂಚಾಯ್ತಿಗಳಲ್ಲಿ ನೌಕರರ ಹಾಜರಾತಿ ಬಗ್ಗೆ ನಿಗಾ ಇಡುವ ದೃಷ್ಠಿಯಿಂದ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಬಂದಿದೆ. ಪ್ರತಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಪಾರದರ್ಶಕ ಆಡಳಿತ ನಿರ್ವಹಣೆಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗ್ರಾಮ ವಿಕಾಸ ಯೋಜನೆಯಡಿ 189 ವಿಧಾನಸಭಾ ಕ್ಷೇತ್ರಗಳಿಂದ ವಿಧಾನಸಭಾ ಸದಸ್ಯರು ಆಯ್ಕೆ ಮಾಡಿದ 935 ಗ್ರಾಮಗಳನ್ನು ಮಾದರಿ ಗ್ರಾಮಗಳಾಗಿ ಅಭಿವೃದ್ಧಿ ಪಡಿಸಲು 750 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

2012-13ನೇ ಸಾಲಿನಲ್ಲಿ 189 ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ರಸ್ತೆ ಅಭಿವೃದ್ಧಿ ಪಡಿಸಲು ನಮ್ಮ ಗ್ರಾಮ ನಮ್ಮ ರಸ್ತೆ ಎಂಬ ಯೋಜನೆ ರೂಪಿಸಿದ್ದು ಇದರ ಮೂಲಕ 5728 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಿದ್ದು ಇದಕ್ಕಾಗಿ 2413 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ಗಾಂಧಿಪಥ-ಗ್ರಾಮಪಥ ಎಂಬ ಮತ್ತೊಂದು ಯೋಜನೆ ರೂಪಿಸಿದ್ದು ಇದರ ಮೂಲಕ 3034 ಕೋಟಿ ವೆಚ್ಚದಲ್ಲಿ 4350 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗ್ರಾವiಸಡಕ್ ಯೋಜನೆಯಡಿ 2246 ಕಿ.ಮೀ ರಸ್ತೆಯನ್ನು 1044 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದು ಬಹುತೇಕ ಗ್ರಾಮಗಳಿಗೆ ಉತ್ತಮ ರಸ್ತೆ ಸೌಲಭ್ಯ ಲಭಿಸಿದೆ.

ಬಯಲು ಬಹಿರ್ದೆಸೆ ಮುಕ್ತ ಕರ್ನಾಟಕ ಇಲಾಖೆಯ ಮಹಾತ್ವಾಕಾಂಕ್ಷೆ ಕಾರ್ಯಗಳಲ್ಲಿ ಒಂದೆನಿಸಿದೆ. ಶೌಚಕರ್ಮಗಳಿಗಾಗಿ ಬಯಲು ಪ್ರದೇಶವನ್ನು ಆಶ್ರಯಿಸಿ ರೋಗ-ರುಜಿನ ಮತ್ತು ವಿಷಜಂತುಗಳ ಹಾವಳಿಯಿಂದ ನಲುಗುತ್ತಿದ್ದ ಸಮುದಾಯವನ್ನು ರಕ್ಷಿಸಿ ಸ್ವಚ್ಚ ಗ್ರಾಮೀಣ ಪ್ರದೇಶ ನಿರ್ಮಾಣಕ್ಕೆ ಇದು ದೊಡ್ಡ ಕೊಡುಗೆಯಾಗಿದೆ. ಈ ಮೂಲಕ ಮನೆಗೊಂದು ಶೌಚಾಲಯ ಯೋಜನೆ ಅನುಷ್ಠಾನಗೊಳ್ಳುತ್ತಿದೆ. 2013-14 ಸಾಲಿನಲ್ಲಿ 5 ಲಕ್ಷ ಶೌಚಾಲಯ, 2014-15ನೇ ಸಾಲಿನಲ್ಲಿ 7ಲಕ್ಷದ 8 ಸಾವಿರ, 2015-16ನೇ ಸಾಲಿನಲ್ಲಿ 8ಲಕ್ಷದ 76 ಸಾವಿರ, 2016-17ನೇ ಸಾಲಿನಲ್ಲಿ 7 ಲಕ್ಷದ 44 ಸಾವಿರ ಮತ್ತು ಈ ವರ್ಷ ಇಲ್ಲಿಯವರೆಗೆ ಒಂದೂವರೆ ಲಕ್ಷ ಶೌಚಾಲಯ ನಿರ್ಮಾಣ ಮಾಡಲಾಗಿದೆ.

ಇಲಾಖೆಯಲ್ಲಿ ಕೈಗೊಂಡ ಇಂತಹ ವಿನೂತನ ಕ್ರಮಗಳಿಂದಾಗಿ ಇಲಾಖೆಗೆ ಹಲವಾರು ಪ್ರಸಸ್ತಿಗಳು ಲಭಿಸಿದೆ. ಅದರಲ್ಲೂ ಇಲಾಖೆಯಲ್ಲಿ ಮಾಹಿತಿ ತಂತ್ರಜ್ಞಾನ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಪರಿಣಾಮ ಈ ವಲಯಕ್ಕೆ ಕೇಂದ್ರ ಸರ್ಕಾರದಿಂದ ಸತತ ಮೂರು ವರ್ಷ ಪ್ರಸಸ್ತಿ ಲಭಿಸಿದೆ. ಹಣಕಾಸು ಹಂಚಿಕೆಯಲ್ಲೂ ಪಾರದರ್ಶಕತೆ ಮತ್ತು ವೈಜ್ಞಾನಿಕ ನಿಯಮ ಅಳವಡಿಸಿಕೊಂಡ ಪರಿಣಾಮ ಸತತ ಎರಡು ವರ್ಷಳಿಂದ ಕೇಂದ್ರ ಸರ್ಕಾರ ಪ್ರಸಸ್ತಿ ನೀಡುತ್ತಿದೆ.

ಗ್ರಾಮೀಣ ಕರ್ನಾಟಕದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿವರಗಳಿರುವ ಕರ್ನಾಟಕ ಗ್ರಾಮ ಚರಿತ ಕೋಶವನ್ನು ಪ್ರಕಟಿಸಲಾಗಿದ್ದು, ಇದೊಂದು ರೀತಿಯಲ್ಲಿ ವಿಶ್ವಕೋಶದಂತಿದೆ. ಈ ಮೂಲಕ ಇತಿಹಾಸ ಮಾಹಿತಿ ಲಭ್ಯವಾಗಲಿದೆ. ಇಲಾಖೆಯಲ್ಲಿ ಮಿತಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 30,645 ಮಂದಿ ನೌಕರರಿಗೆ ಸೇವಾಭದ್ರತೆ ಲಭಿಸಿದೆ. ಪ್ರಥಮ ಬಾರಿಗೆ ಅರ್ಹತೆ ಮತ್ತು ಮೀಸಲಾತಿ ಯಾವುದೇ ವಿವಾದಗಳಿಗೆ ಅವಕಾಶ ನೀಡದೆ 762 ಮಂದಿ ಇಂಜಿನಿಯರ್‍ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಗ್ರಾಮೀಣಾಭಿವೃದ್ಧಿಯಲ್ಲಿ ಮತ್ತು ಪಂಚಾಯಿತಿಗೆ ಪ್ರತ್ಯೇಕ ವಿಶ್ವವಿದ್ಯಾಲಯವನ್ನೇ ಆರಂಭಿಸಲಾಗಿದ್ದು, ಇದು ದೇಶದಲ್ಲೇ ವಿನೂತನ ಎನಿಸಿದೆ.

ಇಷ್ಟೆಲ್ಲಾ ಸಾದ್ಯತೆಗಳಿದ್ದರೂ ಇಲಾಖೆ ಹಗರಣಗಳು, ಟೀಕೆಗಳಿಂದ ಮುಕ್ತವಾಗಿಲ್ಲ. ಸಚಿವರ ಕಾರ್ಯ ವೈಖರಿ ಬಗ್ಗೆಯೂ ಟೀಕೆಗಳೂ ಕೇಳಿ ಬಂದಿದೆ. ಆಶ್ರಯ ನಿವೇಶನ ಹಂಚಿಕೆ ವಿಷಯದಲ್ಲಿ ಶಾಸಕರ ಹಿತ ಕಾಯುತ್ತಿಲ್ಲ ಎಂಬ ಆರೋಪ ಮಾಮೂಲಿಯಾದರೆ, ರಾಜ್ಯದಲ್ಲಿ ತೀವೃ ಸ್ವರೂಪವಾದ ಬರಗಾಲ ಕಾಣಿಸಿಕೊಂಡಿದ್ದರೂ ಬರ ಪರಿಹಾರ ಕಾಮಗಾರಿಗಳಲ್ಲಿ ಇಲಾಖೆ ತೋರಬೇಕಾದ ಆಸಕ್ತಿ ತೋರಲಿಲ್ಲ, ಬರ ಪರಿಹಾರ ಎನ್ನುವುದು ಕಂದಾಯ ಇಲಾಖೆಗೆ ಸೇರಿದ ವಿಷಯವೇನೋ ಎಂಬಂತೆ ಇಲಾಖೆ ಅಧಿಕಾರಿಗಳು ವರ್ತನೆ ಮಾಡಿದರೆ, ಸಚಿವರೂ ಕೂಡ ಒಂದೆರಡು ಸಭೆ ಮಾಡಿದ್ದನ್ನೂ ಬಿಟ್ಟು ಬೇರೇನೂ ಮಾಡಲಿಲ್ಲ ಎಂಬ ಅಪವಾದವಿದೆ.

ಅದರಲ್ಲೂ ಕುಡಿಯುವ ನೀರಿನ ವಿಷಯವಾಗಿ ಸಚಿವರ ಕಾರ್ಯ ವೈಖರಿ ಸ್ವಪಕ್ಷಿಯರಿಂದಲೇ ಟೀಕೆಗೆ ಗುರಿಯಾಗಿದೆ. ಗ್ರಾಮೀಣ ಭಾಗದಲ್ಲಿ ಪಂಚಾಯ್ತಗಳು ಈ ವಿಷಯದಲ್ಲಿ ಸಂಪೂರ್ಣ ವಿಫಲ ಎಂಬ ಆರೋಪ ಮಾಮೂಲಿಯಾಗಿದ್ದರೂ, ಸಚಿವರು ಈ ಸಮಸ್ಯೆ ಬಗೆ ಹರಿಸುವತ್ತ ಆಸಕ್ತಿ ವಹಿಸಿಲ್ಲ. ರಾಜ್ಯದ ಇತರೆ ಕಡೆ ಇರಲಿ ಸ್ವತ: ತಮ್ಮ ತವರಿನಲ್ಲೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದರೂ ಅದರ ನಿವಾರಣೆಯತ್ತ ಗಮನ ಹರಿಸಿಲ್ಲ ಎಂಬ ಆರೋಪ ಯಡಿಯೂರಪ್ಪ ನೇತೃತ್ವಲ್ಲಿ ಬಿಜೆಪಿ ನಾಯಕರು ಒಂದು ದಿನ ಧರಣಿ ನಡೆಸುವ ಮೂಲಕ ಎಚ್ಚರಿಕೆ ನೀಡುವ ಹಂತ ತಲುಪಿದೆ.

ಗ್ರಾಮೀಣ ಪ್ರದೇಶದ ಜನರಿಗೆ ಸ್ವಚ್ಛ ಮತ್ತು ಶುದ್ದ ಕುಡಿಯುವ ನೀರು ಪೂರೈಸುವ ದೃಷ್ಠಿಯಿಂದ ಸ್ಥಾಪಿಸಲಾದ ಶುದ್ದ ನೀರಿನ ಘಟಕಗಳು ನಿರ್ವಹಣೆಯಲ್ಲದೆ ಸೊರಗಿದರೆ, ಅನೇಕವು ಕೆಟ್ಟು ನಿಂತಿದೆ. ಹೀಗಾಗಿ ಸದುದ್ದೇಶದಿಂದ ನಿರ್ಮಿಸಿದ ಯೋಜನೆ ಬೇಸಿಗೆಯ ಹಾಗು ಬರಗಾಲದ ಸಮಯದಲ್ಲಿ ಸೂಕ್ತ ಫಲಾನುಭವಿಗಳನ್ನು ತಲುಪದೇ ಹೋಗಿದ್ದು ನಿಜಕ್ಕೂ ವಿಪರ್ಯಾಸವೆನ್ನಬಹುದು. ಈ ವಿಷಯದಲ್ಲಿ ಸಚಿವರ ಕಾರ್ಯವೈಖರಿ ಈಗಲೂ ಪ್ರಶ್ನಾರ್ಹ.

ಇಂತಹ ಅಪಸ್ವರಗಳ ನಡುವೆ ಅಕ್ರಮಗಳ ಆರೋಪವೂ ಕೇಳಿ ಬಂದಿದೆ. ಇದರಲ್ಲಿ ಪ್ರಮುಖವಾಗಿದ್ದು ನಾಲ್ಕು ಸಾವಿರ ಕೋಟಿ ಹಗರಣ ಇಲಾಖೆಯ ವಿವಿಧ ಯೋಜನೆಗಳಿಗೆ ನೀಡಲಾಗಿದ್ದು ನಾಲ್ಕು ಸಾವಿರ ಕೋಟಿ ರೂಪಾಯಿ ಹಣ ವೆಚ್ಚವಾಗದೆ ಅದಕ್ಕೆ ಸಂಬಂಧಿಸಿದ ದಾಖಲೆಗಳೂ ಇಲ್ಲದೆ ಲೆಕ್ಕಕ್ಕೂ ಸಿಗದಿರುವ ಅಕ್ರಮ ನಡೆದಿದೆ.

ಒಂದು ಯೋಜನೆಗೆ ಒಂದೇ ಬ್ಯಾಂಕ್ ಖಾತೆ ಎಂಬ ನಿಯಮವಿದೆ. ಆದರೆ ಇಲಾಖೆಯಲ್ಲಿ ಪ್ರತಿ ಯೋಜನೆಗೆ 30ರಿಂದ 100 ಬ್ಯಾಂಕ್ ಖಾತೆಗಳು ತೆರೆಯಲಾಗಿದೆ. ಹೀಗಾಗಿ ಸುಮಾರು ಒಂದು ಸಾವಿರದ 123 ಬ್ಯಾಂಕ್ ಖಾತೆಗಳು ಇಲಾಖೆಯಲ್ಲಿರುವುದು ಬೆಳಕಿಗೆ ಬಂದಿತ್ತು. ಈ ಖಾತೆಗಳಲ್ಲಿದ್ದ ಹಣವನ್ನು ಕೆಲವು ಅಧಿಕಾರಿಗಳು ಬೇರೆ-ಬೇರೆ ಯೋಜನೆಗೆ ವರ್ಗಾಯಿಸಿದರೆ ಕೆಲವರು ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿ ಕೊಂಡಿದ್ದರು. ಮತ್ತೆ ಕೆಲವರು ಮ್ಯುಚುವಲ್ ಫಂಡ್‍ನಲ್ಲಿ ವಿನಿಯೋಗಿಸಿದ್ದರು. ಈ ಬಗ್ಗೆ ಅನುಮಾನಗಳು ಬಂದಾಗ ರಾಜ್ಯ ಲೆಕ್ಕ ಪರಿಶೋಧನಾ ಸಮಿತಿಯಿಂದ ತಪಾಸಣೆ ನಡೆಸಲಾಯಿತು. ಆಗ ಹಲವು ಅಕ್ರಮಗಳು ಪತ್ತೆಯಾದವು. ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದ ಅನುದಾನ ದುರ್ಬಳಕೆಗೆ 101 ಅಕ್ರಮ ಖಾತೆ ತೆರೆದಿರುವುದು ಪತ್ತೆಯಾಗಿತ್ತು. ಈ ಎಲ್ಲವೂ ಬೆಂಗಳೂರು ಜಲಮಂಡಳಿ ಕಟ್ಟಡದ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ತೆರೆಯಲಾಗಿತ್ತು ಹಿರಿಯ ಅಧಿಕಾರಿಗಳು, ಗುತ್ತಿಗೆದಾರರು ನೇರ ಶಾಮೀಲಾಗಿರುವಂತಹ ಈ ಪ್ರಕರಣ ಸಿಐಡಿ ತನಿಖೆಯಲ್ಲಿದೆ.

ಇನ್ನು ಕುಡಿಯುವ ನೀರು ಪೂರೈಕೆಗೆ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ವಾರ್ಷಿಕ ನಿರ್ವಹಣೆಯ ಗುತ್ತಿಗೆಯಿದ್ದು ಒಂದು ದೊಡ್ಡ ಕರ್ಮಕಾಂಡ ಸಚಿವರ ನೆರಳಲ್ಲಿಯೇ ಇದರ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದರೂ ಅದನ್ನು ಸಚಿವರು ಸ್ಪಷ್ಟವಾಗಿ ನಿರಾಕರಿಸುತ್ತಾರೆ.

ತಾಲೂಕು ಮಟ್ಟದಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಖಾಸಗಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಪಂಚಾಯತ್ ರಾಜ್ ಇಲಾಖೆಯ ಅನುದಾನದಲ್ಲಿ ಈ ಪ್ರಯೋಗಾಲಯಗಳು ಸ್ಥಾಪನೆಯಾಗಿದ್ದು ಇವುಗಳ ಸ್ಥಾಪನೆಗೆ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್‍ಮಾಲ್ ನಡೆದಿರುವ ಆರೋಪ ಕೇಳಿಬಂದಿದೆ. 186 ತಾಲೂಕುಗಳ ಪ್ರಯೋಗಾಲಯ ಸ್ಥಾಪನೆಗೆ ಗುತ್ತಿಗೆದಾರ ರಾಯಪಾಟಿ ಎನ್ನುವರಿಗೆ ನೀಡಲಾಗಿತ್ತು. ಇವರು ಸಚಿವರ ಆಪ್ತ ಎಂಬ ಆರೋಪ ಕೇಳಿ ಬಂದಿತ್ತು. ಇಂತಹ ಆರೋಪ ಬಂದ ಬೆನ್ನಲ್ಲೆ ಇದನ್ನು ನಿರಾಕರಿಸಿದ ಅವರು ಅಕ್ರಮ ಅಧಿಕಾರಿಗಳ ಸಂಘಟಿತ ಪ್ರಯತ್ನ ಇದರಲ್ಲಿ, ತಮ್ಮ ಪಾತ್ರ ಏನೂ ಇಲ್ಲ ಹೀಗಾಗಿ ಸಿಐಡಿ ತನಿಖೆ ಆದೇಶಿಸುತ್ತೇವೆ ಎಂದು ಪ್ರಕಟಿಸಿದರು.

ಇಲಾಖೆಯಲ್ಲಿ ಡಿಜಿಟಲ್ ಆಡಳಿತಕ್ಕೆ ಅಸ್ತು ನೀಡಲಾಗಿದೆ. ಪಂಚಾಯ್ತಿ ಆಡಳಿತ ವ್ಯವಹಾರವನ್ನು ಕಂಪ್ಯೂಟರೀಕರಣಗೊಳಿಸಲಾಗಿದೆ. ಹೀಗಾಗಿ ರಾಜ್ಯದ ತಮ್ಮ ಗ್ರಾಮಪಂಚಾಯ್ತಿಗಳಿಗೆ ಅತ್ಯುತ್ತಮ ಗುಣಮಟ್ಟದ ಕಂಪ್ಯೂಟರ್ ಮತ್ತು ಡೆಸ್ಕ್‍ಟಾಪ್‍ಗಳನ್ನು ಒದಗಿಸಲಾಗಿದೆ. ಜತೆಗೆ ವಿಡಿಯೋ ಕಾನ್ಫರೆನ್ಸ್ ಯೂನಿಟ್‍ಗಳನ್ನು ನೀಡಲಾಗಿದೆ. ಈ ಖರೀದಿ ಪ್ರಕ್ರಿಯೆಯಲ್ಲೂ ಭಾರೀ ಪ್ರಮಾಣದ ಗೋಲ್‍ಮಾಲ್ ನಡೆದಿದೆ. ಎಂಬ ಆರೋಪ ಕೇಳಿಬಂದಿದೆ. ಸಾವಿರಾರು ಉಪಕರಣ ಖರೀದಿ ವೇಳೆ ಗುಣಮಟ್ಟವನ್ನು ಮರೆಮಾಚಲಾಗಿದೆ. ಈ ಬಗ್ಗೆ ಕೆಳ ಹಂತದ ಅಧಿಕಾರಿಗಳು ಚಕಾರ ಎತ್ತದಂತೆ ಮಾಡಲಾಗಿದೆ. ಗುಣಮಟ್ಟದ ಬಗ್ಗೆ ಮಾತನಾಡಿದರೆ ಎಲ್ಲಿ ತಮ್ಮನ್ನು ಅಪರಾಧ ಸ್ಥಾನದಲ್ಲಿ ನಿಲ್ಲಿಸುತ್ತಾರೋ ಎಂಬ ಆತಂಕದಲ್ಲಿ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಅಧಿಕಾರಿಗಳು ಇದ್ದಾರೆ.

ಪ್ರತಿಷ್ಠಿತ ಸಂಸ್ಥೆಯ ಗುಣಮಟ್ಟದ ಉತ್ಪನ್ನಗಳ ಖರೀದಿಗೆ ಟೆಂಡರ್ ಅಂತಿಮಗೊಳಿಸಲಾಗಿದೆ. ಆದರೆ, ಇವುಗಳನ್ನು ಪೂರೈಸುವ ಸಮಯದಲ್ಲಿ ಕಡಿಮೆ ಸ್ಟೋರೇಜ್ ಮತ್ತು ಕಡಿಮೆ ಬ್ಯಾಟರಿ ಸಾಮರ್ಥ್ಯದ ಅತೀ ಕಡಿಮೆಗೆ ಸೇರಿದ ಉಪಕರಣಗಳನ್ನು ಪೂರೈಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಚಿವರಿಗೆ ಆಪ್ತರಾದವರೊಬ್ಬರು ಇವುಗಳನ್ನು ಪೂರೈಸುವ ಗುತ್ತಿಗೆ ಪಡೆದಿದ್ದು ಇದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂಬ ಆರೋಪ ಕೇಳಿಬಂದಿದೆ.

ಆದರೆ ಈ ಆರೋಪ ತಳ್ಳಿಹಾಕಿರುವ ಸಚಿವರು ಉಪಕರಣ ಯಾವ ಗುಣಮಟ್ಟದಲ್ಲಿರಲಿದೆ ಎಂಬ ವಿವರವನ್ನು ಎಲ್ಲರಿಗೂ ರವಾನೆ ಮಾಡಲಾಗಿದೆ,  ಅಲ್ಲದೆ ನಿಗದಿತ ಮಾನದಂಡದಲ್ಲಿ ಯಾವುದೇ ಉಪಕರಣ ಇಲ್ಲ ಎಂದರೆ ಅದನ್ನು ತಿರಸ್ಕರಿಸುವಂತೆ ಸೂಚಿಸಲಾಗಿದೆ. ಹೀಗಿದ್ದು ಕಡಿಮೆ ಗುಣಮಟ್ಟದ ಉಪಕರಣ ಸ್ವೀಕರಿಸಿದರೆ ಅವರೇ ಹೊಣೆಗಾರರು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ಇದನ್ನು ಮರೆಮಾಚಿ ತಮ್ಮ ವಿರುದ್ದ ಆರೋಪ ಮಾಡುವುದು ಸರಿಯಲ್ಲ ಎನ್ನುತ್ತಾರೆ.

ಇಂತಹ ಆರೋಪ ಬಂದ ಕೂಡಲೇ ಇಡೀ ಪ್ರಕ್ರಿಯೆಯನ್ನು ಪರಿಶೀಲಿಸಲಾಗಿದೆ. ಈ ಸಂಬಂಧ ಅಕ್ರಮವೆಸಗಿದ ಆರೋಪದಡಿ ಸಹಾಯಕ ಇಂಜಿನಿಯರ್ ರಮೇಶ್, ಸಹಾಯಕ ಕಾರ್ಯಪಾಲಕ ಅಧಿಕಾರಿ ಆರ್.ಸಿ. ಪಾಟೀಲ್ ತಂತ್ರಾಂಕಿತ ವ್ಯವಸ್ಥಾಪಕ ಬೆ.ಎಸ್. ರಾಯಗೇರಿ ಅವರನ್ನೂ ಅಮಾನತು ಮಾಡಿದ್ದು, ಪ್ರಕರಣವನ್ನು ಜಿಲ್ಲಾಮಟ್ಟದ ನ್ಯಾಯದೀಶರ ತನಿಕೆಗೆ ಆದೇಶಿಸಿದ್ದಾರೆ. ಇಂತಹ ತನಿಖೆಯ ಆದೇಶಗಳೇನೆ ಇರಲಿ ಅಕ್ರಮ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು ಇಲ್ಲವಾದರೆ ಉತ್ತಮ ಕೆಲಸ ಮಾಡಿದ ಇಲಾಖೆಯ ಸಾಧನೆ ಇಂತಹ ಆರೋಪಗಳಲ್ಲಿ ಮುಚ್ಚಿ ಹೋಗಬಾರದು.