ಒಳ ರಾಜಕೀಯ, ಗುಂಪುಗಾರಿಕೆ, ಭಿನ್ನಮತ ಎಲ್ಲವನ್ನೂ ಬದಿಗೊತ್ತಿ.23-05-2017 225

ಬೆಂಗಳೂರು:- ಒಳ ರಾಜಕೀಯ, ಗುಂಪುಗಾರಿಕೆ, ಭಿನ್ನಮತ ಎಲ್ಲವನ್ನೂ ಬದಿಗೊತ್ತಿ ಹೈಕಮಾಂಡ್ ನಿರ್ಧರಿಸುವ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಲು ಮುಂದಾಗಬೇಕು ಎಂದು ಇಂದು ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಹತ್ವದ ಚರ್ಚೆಯಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ವಿವಿಧ ಜಿಲ್ಲಾ ಮಟ್ಟದ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರು, ಉಸ್ತುವಾರಿ ಸಚಿವರು, ಸಂಸದರು, ಶಾಸಕರ ನೇತೃತ್ವದ ಸಭೆಯಲ್ಲಿ ಭಿನ್ನಮತ, ಒಳ ರಾಜಕೀಯ ಗುಂಪುಗಾರಿಕೆ ಮುಂತಾದವುಗಳನ್ನು ಬದಿಗೆ ಸರಿಸಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂಬ ಸಂದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಯಿತು. ಚುನಾವಣೆಗೆ ಅಭ್ಯರ್ಥಿಗಳನ್ನು ಹೈಕಮಾಂಡ್ ಅಂತಿಮಗೊಳಿಸುತ್ತದೆ. ಜನಪ್ರಿಯ ಅಭ್ಯರ್ಥಿಗಳನ್ನು ನೀವೇ ನಿರ್ಧರಿಸಿ. ಟಿಕೆಟ್ ನೀಡಿದ ನಂತರ ಯಾರೇ ಇರಲಿ ಅವರ ಪರವಾಗಿ ಒಗ್ಗಟ್ಟಾಗಿ ಕೆಲಸ ಮಾಡಿ. ಯಾವುದೇ ಒಡಕುಂಟಾಗಬಾರದು ಎಂಬ ಸಲಹೆಯನ್ನು ವೇಣುಗೋಪಾಲ್ ತಂಡ ನೀಡಿದೆ. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದವರನ್ನು ಮುಲಾಜಿಲ್ಲದೆ ಕೈಬಿಡಿ ಎಂಬ ಸೂಚನೆ ಸಭೆಯಿಂದ ಹೊರಬಂದಿದೆ. ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಳ್ಳದವರು, ಜಿಲ್ಲಾ, ತಾಲೂಕು, ರಾಜ್ಯ ಮಟ್ಟದ ಪಕ್ಷದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳದವರನ್ನು ಕೈಬಿಡುವಂತೆ ತಿಳಿಸಲಾಗಿದೆ.
ಜಿಲ್ಲಾಧ್ಯಕ್ಷರ ಬಗ್ಗೆ ಅಸಮಾಧಾನವಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೆ ನೀಡಿದರೆ ಪಕ್ಷದ ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ವೇಣುಗೋಪಾಲ್ ತಿಳಿಸಿದ್ದಾರೆ.