ಸರ್ಕಾರದ ಆದೇಶ ಪಾಲಿಸದಿರುವ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳ ಮೇಲೆ ಪ್ರೇಕ್ಷಕರ ಆಕ್ರೋಶ03-05-2017 234

ಬೆಂಗಳೂರು:-ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಗರಿಷ್ಠ 200 ರೂ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ಸರ್ಕಾರದ ಆದೇಶಕ್ಕೆ ಐನಾಕ್ಸ್ ಪಿವಿಆರ್ ಸೇರಿದಂತೆ ಮಲ್ಟಿಫ್ಲೆಕ್ಸ್‍ಗಳು ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದು ಪ್ರೇಕ್ಷಕರು ಆಕ್ರೋಶಗೊಳ್ಳುವಂತೆ ಮಾಡಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ತಮ್ಮ ಕೈಸೇರಿಲ್ಲ. ಹೀಗಾಗಿ ಹಳೆಯ ದರದಲ್ಲೇ ಟಿಕೆಟ್ ನೀಡಲಾಗುತ್ತಿದೆ ಎಂದು ಮಲ್ಟಿಫ್ಲೆಕ್ಸ್ಗಳು  ಸಬೂಬು ಹೇಳುತ್ತಿರುವುದು ಸಿನಿಮಾ ಪ್ರೇಕ್ಷಕರನ್ನು ರೊಚ್ಚಿಗೇಳುವಂತೆ ಮಾಡಿದೆ.
ಬಿನ್ನಿಮಿಲ್ ಬಳಿ ಇರುವ ಇಟಾ ಮಾಲ್ನಲ್ಲಿರುವ ಸಿನಿ ಪೊಲೀಸ್, ನಗರದ ವಿವಿಧೆಡೆ ಇರುವ ಪಿವಿಆರ್, ಐನಾಕ್ಸ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕನ್ನಡ ಮತ್ತು ಪರಭಾಷೆಯ ಚಿತ್ರಗಳ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಹಳೆಯ ದರದಲ್ಲೇ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ.
ಈ ಮೂಲಕ ರಾಜ್ಯ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಮಲ್ಟಿಫ್ಲೆಕ್ಸ್ಗಳು ನಡೆದುಕೊಳ್ಳುತ್ತಿದ್ದು, ಸರ್ಕಾರ ಮತ್ತು ಕನ್ನಡ ವಿರೋಧಿ ಧೋರಣೆಯನ್ನು ಅನುಸರಿಸುತ್ತಿವೆ.
ಪ್ರೇಕ್ಷಕರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಮಲ್ಟಿಫ್ಲೆಕ್ಸ್ಗಳಲ್ಲಿ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳ ಟಿಕೆಟ್ ದರಗಳನ್ನು ಗರಿಷ್ಠ 200 ರೂ.ಗೆ ನಿಗದಿ ಮಾಡಿ ನಿನ್ನೆಯಷ್ಟೇ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಮಲ್ಟಿಫ್ಲೆಕ್ಸ್ಗಳು  ಮಾನ್ಯತೆ ನೀಡದೆ ಸಿನಿ ಪ್ರೇಕ್ಷಕರಿಂದ ದುಬಾರಿ ಹಣ ವಸೂಲಿ ಮಾಡುತ್ತಿರುವುದು ಪ್ರೇಕ್ಷಕರನ್ನು ಸಿಟ್ಟಿಗೇಳುವಂತೆ ಮಾಡಿದೆ.
 

Links :