ಒಂದೇ ದಿನದಲ್ಲಿ 100ಕೋಟಿ ಆದಾಯ ಹೆಚ್ಚಳ..!03-01-2018 283

ಬೆಂಗಳೂರು: ಹೊಸ ವರ್ಷದ ಸಂಭ್ರಮದ ವೇಳೆ ಅಬಕಾರಿ ಇಲಾಖೆಯ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಾಗಿ ಹೆಚ್ಚಳಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ 100ಕೋಟಿ ಹೆಚ್ಚಳ ಕಂಡುಬಂದಿದೆ. ಹೊಸವರ್ಷಕ್ಕೆ ಕಾಲಿಡುವ 2017ರ ಡಿ.31ರಂದು ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ಅಬಕಾರಿ ಇಲಾಖೆಗೆ ಅಂದಾಜಿಸಿದಕ್ಕಿಂತಲೂ ಹೆಚ್ಚಿನ ಆದಾಯ ಹರಿದು ಬಂದಿದೆ.

ಹೊಸ ವರ್ಷಕ್ಕೆ ಮುನ್ನುಡಿ ಬರೆಯುವ ಡಿಸೆಂಬರ್‍ ನಲ್ಲಿ 1,400 ಕೋಟಿ ಆದಾಯವು ಅಬಕಾರಿ ಇಲಾಖೆಗೆ ಬಂದಿದೆ. ಹೊಸ ವರ್ಷದ ಸಂಭ್ರಮಾಚರಣೆಗೆ ಖರೀದಿಸಿದ ಮದ್ಯದಿಂದ ಅತಿ ಹೆಚ್ಚಿನ ಆದಾಯ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ 100 ಕೋಟಿ ಆದಾಯ ಒಂದೇ ದಿನದಲ್ಲಿ ಹೆಚ್ಚಳವಾಗಿದೆ. ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕದ ಬಾರ್‍ ಗಳನ್ನು ಮುಚ್ಚಿಸಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ಹೊಡೆತದಿಂದ ನಷ್ಟದಲ್ಲಿದ್ದ ಅಬಕಾರಿ ಇಲಾಖೆಯನ್ನು ಕಳೆದ ಭಾನುವಾರ ಕುಡುಕರು ಲಾಭದ ಗೆರೆ ದಾಟಿಸಿದ್ದಾರೆ.

ಆದಾಯದ ವಿವರ: ಕಳೆದ 2016ರಲ್ಲಿ ಬೆಂಗಳೂರಿನಲ್ಲಿ  ಒಟ್ಟು ದೇಶಿಯ ಮದ್ಯ 11.51 ಲಕ್ಷ ಕೇಸ್, ಬಿಯರ್ 7.56 ಲಕ್ಷ ಕೇಸ್ ಮಾರಾಟವಾಗಿದ್ದರೆ, ರಾಜ್ಯದಲ್ಲಿ ದೇಶೀಯ ಮದ್ಯ ಮತ್ತು ಬಿಯರ್ ತಲಾ 49.2 ಲಕ್ಷ ಕೇಸ್ ನಂತೆ ಮಾರಾಟವಾಗಿದ್ದವು. ಬೆಂಗಳೂರಿನಿಂದ 325 ಕೋಟಿ ರೂ, ಆದಾಯ ಬಂದರೆ, ಇಡೀ ರಾಜ್ಯದಿಂದ 1300 ಕೋಟಿ ರೂ.ಆದಾಯ ಬಂದಿತ್ತು.

ಈ ಬಾರಿ 2017 ಡಿಸೆಂಬರ್ 31ರಂದು ನಗರದಲ್ಲಿ ದೇಶಿಯ ಮದ್ಯ 11.59 ಲಕ್ಷ ಕೇಸ್ ಮಾರಾಟವಾದರೆ ಬಿಯರ್ 8.74 ಲಕ್ಷ ಕೇಸ್ ಮಾರಾಟವಾಗಿದೆ. ಕೇವಲ ಬೆಂಗಳೂರಿನಿಂದಲೇ 360 ಕೋಟಿ ಆದಾಯ ಹರಿದು ಬಂದಿದೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿ 50.17 ಲಕ್ಷ ಕೇಸ್ ದೇಶಿಯ ಮದ್ಯ ಮಾರಾಟವಾಗಿದ್ದು, 53.77 ಲಕ್ಷ ಕೇಸ್ ಮದ್ಯ ಮಾರಾಟವಾಗಿದೆ. ಹಾಗಾಗಿ ಒಟ್ಟು 1400 ಕೋಟಿ ರೂ. ಅಬಕಾರಿ ಇಲಾಖೆಯ ಖಜಾನೆ ಸೇರಿಕೊಂಡಿದೆ. ಬೆಂಗಳೂರು ಹೊರತುಪಡಿಸಿ ಮೈಸೂರು,ಮಂಗಳೂರು,ಬೆಳಗಾವಿ ಹುಬ್ಬಳ್ಳಿ ಧಾರವಾಡ ಕಲ್ಬುರ್ಗಿ ಹೆಚ್ಚಿನ ಆದಾಯ ತಂದುಕೊಟ್ಟ ರಾಜ್ಯದ ಇತರ ನಗರಗಳಾಗಿವೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

alcohol New year ಮಧ್ಯರಾತ್ರಿ ಆದಾಯ