ಬಂತು…ವೆಹಿಕಲ್ ನಂಬರ್ ಪೋರ್ಟಿಂಗ್ ಸೌಲಭ್ಯ03-01-2018 511

ಕಳೆದ ಕೆಲವು ವರ್ಷಗಳಿಂದ ನಿಮ್ಮ ಮೊಬೈಲ್ ಫೋನ್ ನಂಬರ್ ಪೋರ್ಟಬಿಲಿಟಿ ಜಾರಿಯಲ್ಲಿದೆ. ನೀವು ಬಿಎಸ್‌ಎನ್‌ಎಲ್, ಏರ್‌ಟೆಲ್, ಏರ್ ಸೆಲ್, ಐಡಿಯ, ಜಿಯೊ, ಡೊಕೊಮೊ, ವೊಡೊಫೋನ್ ಇತ್ಯಾದಿಗಳ ನಡುವೆ ಯಾವುದೇ ಕಂಪನಿ ಬಿಟ್ಟು ಮತ್ಯಾವುದಕ್ಕಾದರೂ ಬದಲಾಯಿಸಿಕೊಳ್ಳಬಹುದು ಮತ್ತು ಮುಖ್ಯವಾಗಿ ನಿಮ್ಮ ಹಳೆಯ ಫೋನ್ ನಂಬರ್ ಅನ್ನೇ ಉಳಿಸಿಕೊಳ್ಳಬಹುದು. ಇದು, ಗ್ರಾಹಕರಿಗೆ ತುಂಬಾ ಅನುಕೂಲದ ವಿಚಾರ. ಇದೀಗ, ಇದೇರೀತಿ ನಿಮ್ಮ ವಾಹನದ ರಿಜಿಸ್ಟ್ರೇಷನ್ ನಂಬರ್‌ಗೂ ಪೋರ್ಟಬಿಲಿಟಿ ಬಂದಿದೆ. ಅಂದರೆ, ನಿಮ್ಮ ಬಳಿ ಈಗಿರುವ ಟೂ ವೀಲರ್ ನಂಬರ್ ಅನ್ನೇ ಮತ್ತೊಂದು ಹೊಸ ಟೂ ವೀಲರಿನ ನಂಬರ್ ಆಗಿಸಿಕೊಳ್ಳಬಹುದು ಅಥವ ನೀವು ಕೊಳ್ಳಲಿರುವ ಹೊಸ ಕಾರಿಗೆ ನಿಮ್ಮ ಹಳೆಯ ಕಾರಿನ ರಿಜಿಸ್ಟ್ರೇಷನ್ ನಂಬರ್ ಪಡೆದುಕೊಳ್ಳಬಹುದು. ಹಳೆಯ ಕಾರಿನ ನಂಬರ್ ಅನ್ನು, ಹೊಸ ಕಾರಿಗೆ ಮತ್ತು ಹಳೆಯ ಟೂ ವೀಲರ್ ನಂಬರ್ ಅನ್ನು ಹೊಸ ಟೂ ವೀಲರ್‌ಗೆ ಮಾತ್ರವಲ್ಲ, ಕಾರಿನದನ್ನು ಟೂ ವೀಲರ್, ಟೂ ವೀಲರ್ ನಂಬರ್ ಅನ್ನು ಹೊಸ ಕಾರಿಗೂ ವರ್ಗಾಯಿಸಿಕೊಳ್ಳಬಹುದು. ಇಷ್ಟು ಮಾತ್ರವಲ್ಲ, ನೀವು ಬೇರೆಯವರಿಗೆ ನಿಮ್ಮ ವಾಹನ ಮಾರುವಾಗ, ಅದರ ನಂಬರ್ ಅನ್ನು ನೀವೇ ಉಳಿಸಿಕೊಂಡು ವಾಹನ ಮಾತ್ರ ಮಾರಾಟಮಾಡಬಹುದು.

ನೀವು ಬೇರೆಯವರಿಗೆ ಮಾರುವ ನಿಮ್ಮ ಹಳೆಯ ವಾಹನಕ್ಕೆ, ಸರ್ಕಾರದವರು ಹಾಲಿ ಚಾಲ್ತಿಯಲ್ಲಿರುವ ಹೊಸ ಶ್ರೇಣಿಯ ನಂಬರ್ ಕೊಡುತ್ತಾರಂತೆ. ಒಂದು ವೇಳೆ, ನೀವು ನಿಮ್ಮ ವಾಹನವನ್ನು ಗುಜರಿಗೆ ಹಾಕಿದರೂ ಕೂಡ, ನಿಮ್ಮ ವಾಹನದ ನಂಬರ್ ಅನ್ನು ನಿಮ್ಮ ಸ್ವತ್ತಾಗಿ ಉಳಿಸಿಕೊಂಡು ಮುಂದೊಂದುದಿನ ಕೊಳ್ಳಲಿರುವ ವಾಹನದ ನಂಬರ್ ಆಗಿ ಬಳಸಿಕೊಳ್ಳಬಹುದಂತೆ. ಈ ಯೋಜನೆ, ಖಾಸಗಿ ವಾಹನಗಳು ಮತ್ತು ಟ್ರಾನ್ಸ್‌ಪೋರ್ಟ್ ಸೇವೆಗೆ ಬಳಸದ ಅಂದರೆ, ಸಂಚಾರ ಮತ್ತು ಸರಕು ಸಾಗಣೆಗೆ ಬಳಸದ ವಾಹನಗಳಿಗೆ ಮಾತ್ರ ಅನ್ವಯವಾಗುತ್ತದೆ.

ವೆಹಿಕಲ್ ರಿಜಿಸ್ಟ್ರೇಷನ್ ನಂಬರ್ ಪೋರ್ಟಬಿಲಿಟಿ ಅನ್ನೋದು ಒಳ್ಳೆ ಐಡಿಯ, ತುಂಬಾ ಚೆನ್ನಾಗಿದೆ ಅಂತೀರಾ? ಅದು ಸರಿ, ಆದರೆ ಇದಕ್ಕಾಗಿ ನಿಗದಿಪಡಿಸುತ್ತಿರುವ ಶುಲ್ಕವನ್ನು ಕೇಳಿದ ಮೇಲೆ ಏನು ಹೇಳುತ್ತೀರೋ ಗೊತ್ತಿಲ್ಲ. ಟೂ ವೀಲರ್ ನಂಬರ್ ಪೋರ್ಟಬಿಲಿಟಿಗೆ 25 ಸಾವಿರ ಮತ್ತು ಕಾರ್‌ ನಂಬರ್ ಪೋರ್ಟಬಿಲಿಟಿಗೆ 50 ಸಾವಿರ ಶುಲ್ಕ ನಿಗದಿಪಡಿಸುವ ಸಾಧ್ಯತೆ ಇದೆಯಂತೆ. ಆಯಿತು, ನಾವು ಇಲ್ಲಿಯವರೆಗೂ ಹೇಳಿದ್ದೆಲ್ಲವೂ ಸದ್ಯದಲ್ಲೇ ಉತ್ತರ ಪ್ರದೇಶದಲ್ಲಿ ಜಾರಿಗೆ ಬರುತ್ತಿರುವ ಸೌಲಭ್ಯದ ಬಗ್ಗೆ. ಮತ್ತೊಂದು ವಿಚಾರವೇನೆಂದರೆ ಇಂಥ ಒಂದು ಸೌಲಭ್ಯ, ಈಗಾಗಲೇ ಮಹಾರಾಷ್ಟ್ರ, ದೆಹಲಿ ಮತ್ತು ಹರಿಯಾಣ ರಾಜ್ಯಗಳಲ್ಲಿ ಜಾರಿ ಇದೆಯಂತೆ. ‘ನೀವೂ ಕೂಡ ಈ ರೀತಿಯ ಸೌಲಭ್ಯ ಜಾರಿಗೆ ತರಬಹುದು’, ಎಂದು ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಕಳೆದ ವರ್ಷವೇ ಪತ್ರ ಬರೆದಿದೆಯಂತೆ. ಹೀಗಾಗಿ, ಕರ್ನಾಟಕದಲ್ಲೂ ಸದ್ಯದಲ್ಲೇ ಈ ವೆಹಿಕಲ್ ರಿಜಿಸ್ಟ್ರೇಷನ್ ನಂಬರ್ ಪೋರ್ಟಬಿಲಿಟಿ ಸ್ಕೀಮ್ ಜಾರಿಗೆ ಬರಬಹುದು. ಆದರೆ, ಶುಲ್ಕ ಮಾತ್ರ ಅಷ್ಟೊಂದು ದುಬಾರಿ ಆಗಬಾರದು ಅಷ್ಟೇ..ಏನಂತೀರಿ?


ಒಂದು ಕಮೆಂಟನ್ನು ಬಿಡಿ