‘ನಾನು ದಿಕ್ಕು ತಪ್ಪುವ ಮಗನಲ್ಲ’21-12-2017 329

ಬಾಗಲಕೋಟೆ: ಪರಿವರ್ತನಾ ರ‍್ಯಾಲಿಗೆ ನಿರ್ಧಿಷ್ಟ ಅಜೆಂಡಾನೇ ಇಲ್ಲ ಎಂದು, ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ. ಬಾಗಲಕೋಟೆಯಲ್ಲಿಂದು ಮಾತನಾಡಿದ ಅವರು, ಬಿಜೆಪಿ ಪರಿವರ್ತನಾ ಯಾತ್ರೆ ಕುರಿತು, ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಬಯ್ಯೋದೆ ರ‍್ಯಾಲಿಯ ಉದ್ದೇಶವಾಗಿದೆ, ಬಿಜೆಪಿಯವರು ತಾವೇ ಪರಿವರ್ತನೆಯಾದರೆ ಸಾಕು ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಜೆಡಿಎಸ್ ಅಧಿಕಾರಕ್ಕೆ ಬಂದರೆ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡಲಿದ್ದೇವೆ, ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಈ ಎಲ್ಲಾ ಕಾರ್ಯಕ್ರಮಗಳು ಮಾಡಲಿದ್ದೇವೆ ಎಂದರು.

ನಾನು ಧಿಕ್ಕು ತಪ್ಪುವ ಮಗನಲ್ಲ, ಕುಮಾರ ಬಂಗಾರಪ್ಪ ದಿಕ್ಕು ತಪ್ಪಿ ಬಿಜೆಪಿಗೆ ಹೋಗಿದ್ದಾರೆ. ಕುಮಾರ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿಗೆ ಯಾಕೆ ಹೋದರು ಎಂದು ಗೊತ್ತಿಲ್ಲ ಎಂದರು. ಯಡಿಯೂರಪ್ಪಗೆ ಕಚಡಾ ಮುಖ್ಯಮಂತ್ರಿ ಅಂದಿದ್ದು ನಿಜ, ಇವತ್ತಿಗೂ ನನ್ನ ಮಾತಿಗೆ ಬದ್ಧವಾಗಿರುತ್ತೇನೆ, ರಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ ಅಂದರೆ ಇವರ ನಿಲುವು ಯಾವುದು? ಒಬ್ಬರು ಜಾತಿ ಒಡೆಯುತ್ತಿದ್ದಾರೆ. ಇನ್ನೊಬ್ಬರು ಧರ್ಮ ಒಡೆಯುತ್ತಿದ್ದಾರೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಮುಂಬರುವ ಚುನಾವಣೆಯಲ್ಲಿ ಕಿಂಗ್ ಮೇಕರ್ ವಿಚಾರವಾಗಿ ಮಾತಾಡಿ, ನಾವು ಯಾರನ್ನೂ ಕಿಂಗ್ ಮಾಡೋಕೆ ಬಂದಿಲ್ಲ, ಇಲ್ಲಿ ನಾವೇ ನಾವೇ ಗೆಲ್ಲುತ್ತೇವೆ, ನಾವೇ ಕಿಂಗ್, ಕುಮಾರ ಸ್ವಾಮಿಯವರೆ ಕಿಂಗ್ ಎಂದರು. ಜೆಡಿಎಸ್ ನ ಬಂಡಾಯ ನಾಯಕರು ಬಿಟ್ಟು ಹೋಗಿದ್ದು ಪಕ್ಷ ಮತ್ತಷ್ಟು ಬೆಳೆದಿದೆ, ಅವರಿಂದ ದೂರ ಇರೋದು ಒಳ್ಳೇದು ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಟಿಕೆಟ್ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅಪೇಕ್ಷೆ ಪಡೋದರಲ್ಲಿ ಏನು ತಪ್ಪಿಲ್ಲ, ಪಕ್ಷದ ಮುಖಂಡರು ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು. ಗೀತಾ ಶಿವರಾಜಕುಮಾರ ಸ್ಪರ್ಧೆ ವಿಚಾರ, ಸದ್ಯ ಆ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಅವರು ನಮ್ಮ ಜೊತೆಗೆ ಇರುತ್ತಾರೆ, ಸದ್ಯ ಅವರ ಮೇಲೆ ಯಾವುದೇ ಒತ್ತಡ ಹೇರೋದಿಲ್ಲ ಎಂದರು. ಜೆಡಿಎಸ್ ಮುಖಂಡರ ಮೇಲೆ ಎಸಿಬಿ ದಾಳಿ ವಿಚಾರದ ಕುರಿತು, ಎಸಿಬಿ ದಾಳಿಗಳನ್ನೆಲ್ಲಾ ಕಸದ ಬುಟ್ಟಿಗೆ ಹಾಕುತ್ತೇವೆ, ಒಂದು ವೇಳೆ ಎಸಿಬಿ‌ ಕೇಸ್ ಹಾಕಿ ಜೈಲಿಗೆ ಕಳಿಸಿದರೂ ಜೈಲಲ್ಲಿದ್ದುಕೊಂಡು ಗೆಲ್ಲುತ್ತೇವೆ ಎಂದು ನುಡಿದಿದ್ದಾರೆ.


ಒಂದು ಕಮೆಂಟನ್ನು ಬಿಡಿ