ಪಾಂಡಾ ಕಕ್ಕದಿಂದ ಪೇಪರ್ ತಯಾರು…21-12-2017 324

ದನ, ಕರು, ಎಮ್ಮೆಗಳ ಸಗಣಿಯಿಂದ ಗೋಬರ್ ಗ್ಯಾಸ್ ತಯಾರಿಸುವುದು ಮತ್ತು ಅದನ್ನು ಅಡುಗೆ ಮಾಡಲು ಬಳಸುವುದು ನಿಮಗೆ ಗೊತ್ತು. ಆದರೆ, ಪಾಂಡ ಎಂಬ ಪುಟ್ಟ ಕರಡಿಯಂಥ ಪ್ರಾಣಿಯ ಕಕ್ಕ ಬಳಸಿ ಏನು ತಯಾರಿಸುತ್ತಾರೆ ಗೊತ್ತೇ?  ನಗಬೇಡಿ, ಪಾಂಡ ಕಕ್ಕ ಬಳಸಿ, ಟಾಯ್ಲೆಟ್ ಪೇಪರ್ ತಯಾರಿಸುತ್ತಾರಂತೆ. ಈ ಟಾಯ್ಲೆಟ್ ಪೇಪರ್ ಅಂದ್ರೇನು? ಮನುಷ್ಯರು ಅದನ್ನು ಯಾವ ಕೆಲಸಕ್ಕೆ ಬಳಸುತ್ತಾರೆ ಅನ್ನುವುದನ್ನು ಇಲ್ಲಿ ಬಿಡಿಸಿ ಹೇಳುವ ಅಗತ್ಯವಿಲ್ಲ.

ಚೀನಾ ದೇಶದ ಸಿಚುವಾನ್ ಪ್ರಾಂತ್ಯದ ‘ಕ್ವಿಯಾನ್‌ವೆಯ್ ಫೆಂಗ್ ಶೆಂಗ್’ ಪೇಪರ್ ಕಂಪನಿಯವರು ಪಾಂಡಾ ಪೂಪ್ ಅಂದ್ರೆ ಕಕ್ಕ ಮತ್ತು ಅದು ತಿನ್ನದೇ ಬಿಟ್ಟ ಆಹಾರ ಎರಡನ್ನೂ ಬಳಸಿ ಟಾಯ್ಲೆಟ್ ಪೇಪರ್, ನ್ಯಾಪ್‌ಕಿನ್ ಮತ್ತು ಇತರೆ ವಸ್ತುಗಳನ್ನು ತಯಾರಿಸುತ್ತಾರಂತೆ.

ಸಾಮಾನ್ಯವಾಗಿ ಪೇಪರ್ ತಯಾರಿಕೆಗೆ ಬಿದಿರನ್ನು ಬಳಸುತ್ತಾರೆ. ಇದರಲ್ಲಿ ಬಿದಿರನ್ನು ಪುಡಿ ಮಾಡಿ ಪಲ್ಪ್ ತಯಾರಿಸಿ, ನಾರಿನಂತಾದ ಅದರಿಂದ ಪೇಪರ್ ತಯಾರಿಸುತ್ತಾರೆ. ಆದರೆ, ಪಾಂಡಾಗಳು ಕೇವಲ ಬಿದಿರನ್ನು ತಿಂದು ಜೀವಿಸುವ ಪ್ರಾಣಿಗಳು. ಪೇಪರ್ ಉತ್ಪಾದನೆ ಕಾರ್ಖಾನೆಯಲ್ಲಿ ಆಗುವ ಕೆಲಸ ಪಾಂಡಾಗಳ ಹೊಟ್ಟೆಯಲ್ಲೇ ಸಹಜವಾಗಿ ಆಗುತ್ತದೆ. ಹೀಗಾಗಿ, ಪಾಂಡಾ ಕಕ್ಕದಿಂದ ಪೇಪರ್ ಉತ್ಪನ್ನಗಳನ್ನು ತಯಾರಿಸುವುದು ಸುಲಭವಂತೆ. ಈ ಕಂಪನಿಯವರು ಸಿಚುವಾನ್ ಪ್ರಾಂತ್ಯದ ಪಾಂಡ ಪೋಷಣೆ ಪ್ರದೇಶದಿಂದ, ವಾರಕ್ಕೆ ಎರಡು ಬಾರಿ ಪಾಂಡಾ ಪೂಪ್ ಸಂಗ್ರಹಿಸುತ್ತಾರಂತೆ. ಅದನ್ನು ಪೇಪರ್ ಆಗಿ ಪರಿವರ್ತಿಸಿ ಮಾರುಕಟ್ಟೆಗೆ ಬಿಡುವುದಕ್ಕೆ ಮುನ್ನ, ಆ ಪೇಪರ್‌ ನಲ್ಲಿ ಯಾವುದೇ ರೀತಿಯ ಬ್ಯಾಕ್ಟೀರಿಯ ಇಲ್ಲ ಅನ್ನುವುದನ್ನು ಖಚಿತ ಪಡಿಸಿಕೊಳ್ಳಲಾಗುತ್ತದಂತೆ.

ಒಟ್ಟಿನಲ್ಲಿ, ಪಾಂಡಾಗಳ ಸಗಣಿಯಿಂದ ಪೇಪರ್ ತಯಾರಿಸುವ ಕತೆ ಓದಿದ ನಂತರ,  ‘ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ನೀನಾರಿಗಾದೆಯೋ ಎಲೆ ಮಾನವ, ಹರಿಹರಿ ಗೋವು ನಾನು’ ಎಂಬ ಹಾಡು ಮತ್ತೊಮ್ಮೆ ನೆನಪಾಗುತ್ತಿದೆ ತಾನೆ? 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Chinese panda ಪೇಪರ್ ಕಾರ್ಖಾನೆ