ಕಾಶ್ಮೀರದಲ್ಲಿ ಸಿನೆಮಾ ನೋಡಂಗಿಲ್ವ!19-12-2017 330

ಸಂಪ್ರದಾಯವಾದಿ ದೇಶ ಸೌದಿ ಅರೇಬಿಯದಲ್ಲಿ 35 ವರ್ಷಗಳಿಗೂ ಹೆಚ್ಚು ಸಮಯದ ನಂತರ, ಮೊದಲ ಬಾರಿಗೆ ಸಾರ್ವಜನಿಕ ಸಿನೆಮಾ ಥಿಯೇಟರ್‌ಗಳ ಆರಂಭಕ್ಕೆ ನಿರ್ಧರಿಸಿರುವುದರ ಬಗ್ಗೆ ಇತ್ತೀಚೆಗೆ ನಿಮ್ಮ ಸೂಪರ್ ಸುದ್ದಿಯಲ್ಲಿ ಓದಿದ್ದಿರಿ ಅಲ್ಲವೇ? ಈ ಸುದ್ದಿ, ನಮ್ಮ ಜಮ್ಮು-ಕಾಶ್ಮೀರದ ಸರ್ಕಾರಕ್ಕೂ ಮುಟ್ಟಿರುವ ಹಾಗೆ ಕಾಣುತ್ತಿದೆ. ಏಕೆಂದರೆ, ಮೂರು ದಶಕದ ನಂತರ, ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಸಿನೆಮಾ ಥಿಯೇಟರ್‌ಗಳನ್ನು ಪುನಾರಂಭ ಮಾಡುವ ಬಗ್ಗೆ ಯೋಚಿಸಲಾಗುತ್ತಿದೆ.

90ರ ದಶಕದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ತೀವ್ರ ಸ್ವರೂಪದಲ್ಲಿತ್ತು. ‘ಅಲ್ಲಾಹ್ ಟೈಗರ್ಸ್’ ಎಂಬ ಉಗ್ರವಾದಿ ಸಂಘಟನೆ ಸಿನೆಮಾ ಥಿಯೇಟರ್‌ಗಳನ್ನು ಮುಚ್ಚದಿದ್ದರೆ, ದಾಳಿ ನಡೆಸುವ ಬೆದರಿಕೆ ಹಾಕಿತ್ತು, ಆ ಹೊತ್ತಿನಿಂದ ಇವತ್ತಿನವರೆಗೂ ಕಾಶ್ಮೀರದಲ್ಲಿ ಸಿನೆಮಾ ಹಾಲ್‌ಗಳ ಪುನಾರಂಭದ ಪ್ರಸ್ತಾಪ ಬಂದಾಗಲೆಲ್ಲ, ಅದಕ್ಕೆ ಕಟ್ಟರ್ ಪಂಥೀಯರಿಂದ ವಿರೋಧ ವ್ಯಕ್ತವಾಗುತ್ತಲೇ ಬಂದಿತ್ತು. ಹಾಗಾಗಿ, ಇಡೀ ಒಂದು ಪೀಳಿಗೆಯ ಜನರು, ಸಿನೆಮಾವನ್ನು ಕೇವಲ ಮನೆಯ ಟಿವಿ ಮತ್ತು ಡಿವಿಡಿ ಬಳಸಿ ನೋಡುವಂತಾಗಿತ್ತು. ಇದೀಗ ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರ ಸಿನೆಮಾ ಥಿಯೇಟರ್ ಪುನಾರಂಭದ ಬಗ್ಗೆ ಮಾತನಾಡುತ್ತಿದೆ. ಇದಕ್ಕೆ, ಮೈತ್ರಿ ಪಕ್ಷ ಬಿಜೆಪಿಯೂ ದನಿಗೂಡಿಸಿದೆ. ಆದರೆ, ಸರ್ಕಾರ, ಹೆಚ್ಚು ಪ್ರಾಮುಖ್ಯತೆ ಇರುವ ವಿಚಾರಗಳ ಬಗ್ಗೆ ಗಮನ ಹರಿಸಲಿ ಎಂದು ಒಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಹೇಳಿದೆ. ಸರ್ಕಾರದ ಪ್ರಸ್ತಾವಕ್ಕೆ ಹುರಿಯತ್ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಸೌದಿ ಅರೇಬಿಯವನ್ನೇ ಟೀಕಿಸಿರುವ ಪ್ರತ್ಯೇಕತಾವಾದಿ ಮುಖಂಡ ಸೈಯದ್ ಅಲಿ ಶಾ ಗಿಲಾನಿ, ಸೌದಿಯಲ್ಲಿ ಸಿನೆಮಾ ಥಿಯೇಟರ್ ಆರಂಭಕ್ಕೆ ಅವಕಾಶ ನೀಡುತ್ತಿರುವುದು ಇಸ್ಲಾಮ್ ಧರ್ಮಕ್ಕೆ ತಕ್ಕನಾದ ಕ್ರಮವಲ್ಲ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ಕಾಶ್ಮೀರದಲ್ಲಿ ಸಿನೆಮಾಗಳ ಶೂಟಿಂಗ್ ನಡೆಯುವುದರ ಬಗ್ಗೆ ಮಾತ್ರ ತಿಳಿದಿದ್ದ ದೇಶದ ಬಹುತೇಕ ಜನರಿಗೆ, ಕಳೆದ 30 ವರ್ಷಗಳಿಂದ ಅಲ್ಲಿ ಸಿನೆಮಾ ಥಿಯೇಟರ್‌ಗಳೇ ಚಾಲನೆಯಲ್ಲಿ ಇಲ್ಲ ಅನ್ನುವ ವಿಚಾರ ನಿಜವಾಗಲೂ ಆಘಾತಕಾರಿ.


ಒಂದು ಕಮೆಂಟನ್ನು ಬಿಡಿ