ನಾಯಿಗೊಂದು ಸ್ಟಾರ್ ಹೋಟೆಲ್...!05-12-2017 332

ನೀವೇನಾದ್ರೂ, ಈ ಹೋಟೆಲ್‌ಗಳು ಅನ್ನೋವು ಕೇವಲ ಮನುಷ್ಯರಿಗೆ ಮಾತ್ರ ಅಂದ್ಕೊಂಡಿದ್ರೆ ಅದನ್ನು ಬದಲಾಯಿಸಿಕೊಳ್ಳಿ. ಯಾಕೆ ಅಂದ್ರೆ ಭಾರತದ ಮೊಟ್ಟ ಮೊದಲ ಅಷ್ಟೇ ಏಕೆ, ದಕ್ಷಿಣ ಏಷ್ಯಾ ಪ್ರದೇಶದಲ್ಲೇ ಮೊಟ್ಟ ಮೊದಲ ಐಶಾರಾಮಿ ‘ನಾಯಿ ಹೋಟೆಲ್’ ದೆಹಲಿ ಸಮೀಪದ ಗುರುಗ್ರಾಮದಲ್ಲಿ ಆರಂಭವಾಗಿದೆ. ಒಂದು ದಿನಕ್ಕೆ, ಸುಮಾರು 5 ಸಾವಿರ ರೂಪಾಯಿಗಳನ್ನು ಕೊಡುವ ಮೂಲಕ ನಾಯಿಗಳ ಮಾಲೀಕರು, ಈ ಹೋಟೆಲ್ ಗಳನ್ನು ಬುಕ್ ಮಾಡಬಹುದು.

Critterati ಎಂದು ಕರೆಯುವ ಈ ಹೋಟೆಲ್ ನಲ್ಲಿ ನಾಯಿಗಳಿಗೆ ನಿಜವಾಗಲೂ ಸುಖದ ಸುಪ್ಪತಿಗೆಯೇ ಇರುತ್ತದೆ. ಈ ನಾಯಿ ಹೋಟೆಲ್ ನಲ್ಲಿ ವೆಲ್ವೆಟ್ ಬೆಡ್ ಅಂದರೆ ಮೃದುವಾದ ಮಖಮಲ್ ಬಟ್ಟೆಯ ಹಾಸಿಗೆ, ಟಿವಿ ಮತ್ತು ಖಾಸಗಿ ಬಾಲ್ಕನಿ ಕೂಡ ಇದೆ. ನಾಯಿಗಳಿಗಾಗಿಯೇ ರೂಪಿಸಲಾದ ಸ್ವಿಮ್ಮಿಂಗ್ ಪೂಲ್ ಜೊತೆಗೆ, ನಾಯಿಗಳಿಗೆ ಹೇರ್ ಕಟ್ ಮಾಡುವ ಸೌಲಭ್ಯ ಮತ್ತು ಸ್ಪಾ ಕೂಡ ಇದೆ. ನಾಯಿಗಳ ಆರೋಗ್ಯ ಸೇವೆಗಾಗಿ 24 ಗಂಟೆ ಕೆಲಸ ಮಾಡುವ ಆಸ್ಪತ್ರೆಯೂ ಇಲ್ಲಿದೆ. 

ಈ ನಾಯಿ ಹೋಟೆಲ್‌ನಲ್ಲಿ, ಸ್ಪೆಷಲ್ ಡಾಗ್ ಕೆಫೆ ಮತ್ತು ಬಾರ್ ಕೂಡ ಇದೆ. ಡಾಗ್ ಕೆಫೆಯಲ್ಲಿ ಅನ್ನ ಮತ್ತು ಚಿಕನ್ ಜೊತೆಗೆ, ನಾಯಿಗಳಿಗೆಂದೇ ಸಿದ್ಧಪಡಿಸಿರುವ ವಿವಿಧ ರೀತಿಯ ಕೇಕ್ ಮತ್ತು ಐಸ್ ಕ್ರೀಮ್ ಕೂಡ ಇರುತ್ತದೆ. ನಾಯಿಗಳ ಬಾರ್ ನಲ್ಲಿ ಬೆಲ್ಜಿಯಮ್ ನಿಂದ ಆಮದು ಮಾಡಿಕೊಂಡಿರುವ ಆಲ್ಕೊಹಾಲ್ ಇಲ್ಲದಂಥ ಬೀರ್ ಕೂಡ ದೊರೆಯುತ್ತದೆ.

ನಿಮ್ಮ ಪ್ರೀತಿಯ ನಾಯಿಗಳಿಗೆ, ಇಡೀ ದಿನ ಇಲ್ಲಿ ವಿವಿಧ ರೀತಿಯ ತಿಂಡಿ, ತೀರ್ಥಗಳ ಸೇವನೆ ಜೊತೆಗೆ ಆಟದ ಸಮಯವೂ ಇರುತ್ತದೆ. ಇಲ್ಲಿಗೆ ತಮ್ಮ ನಾಯಿಗಳನ್ನು ಕರೆದುಕೊಂಡು ಬರುವವರನ್ನು ನಾಯಿಗಳ ಮಾಲೀಕರು ಎಂದು ಕರೆಯುವುದಿಲ್ಲ, ಬದಲಿಗೆ ನಾಯಿಗಳ ಪೇರೆಂಟ್ಸ್ ಎಂದು ಕರೆಯಲಾಗುತ್ತದಂತೆ. ಅವರು, ತಮ್ಮ ಕುನ್ನಿಯನ್ನು ಮುನ್ನಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇದನ್ನೆಲ್ಲ ಕೇಳಿದ ಮೇಲೆ, ‘ಬಡವರ ಮನೆಯಲ್ಲಿ ಮನುಷ್ಯರಾಗಿ ಹುಟ್ಟುವುದಕ್ಕಿಂತ ಶ್ರೀಮಂತರ ಮನೆಯ ನಾಯಿಯಾಗಿ ಹುಟ್ಟಿದ್ದರೆ ಚೆನ್ನಾಗಿತ್ತು’ ಅಂತ ಯಾರಿಗಾದರೂ ಅನ್ನಿಸಿದ್ದರೆ, ತಪ್ಪೇನೂ ಇಲ್ಲ ಬಿಡಿ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

dog hotel Delhi ಐಶಾರಾಮಿ ಹೋಟೆಲ್