‘ನಮ್ಮ ಟೈಗರ್’ ಕ್ಯಾಬ್ ಸೇವೆಗೆ ಚಾಲನೆ29-11-2017 341

ಬೆಂಗಳೂರು: ಬೆಂಗಳೂರಿನ ಪುರಭವನದೆದುರು, 'ನಮ್ಮ ಟೈಗರ್' ಟ್ಯಾಕ್ಸಿ ಸೇವೆಯ, ಚಾಲನಾ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭಾಗವಹಿಸಿದ್ದು, ಪುರಭವನ ಎದುರು 'ನಮ್ಮ ಟೈಗರ್ ಟ್ಯಾಕ್ಸಿ'ಯಲ್ಲಿ ಕುಳಿತು ನೂತನ ಕ್ಯಾಬ್ ಸೇವೆಗೆ ಚಾಲನೆ ನೀಡಿದರು. ಈ ವೇಳೆ ಟ್ಯಾಕ್ಸಿಯ ಸಿಂಬಲ್ ಹುಲಿ ಮುಖ ಇದೆ, ಆದರೆ ಇದು ಯಾರನ್ನೂ ತಿನ್ನಲ್ಲ, ಲೂಟಿ ಮಾಡುವ ರಾಜಕಾರಣಿಗಳತ್ತ ಕಣ್ಣಿಡಲಿದೆ ಎಂದು ಚಟಾಕಿ ಹಾರಿಸಿದ ಮಾಜಿ ಪ್ರಧಾನಿ ದೇವೇಗೌಡರು, ನಮ್ಮ ಟೈಗರ್ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದರು.

ಇದೇ ಸಂದರ್ಭ ನಮ್ಮ ಟೈಗರ್ ಆ್ಯಪ್ ಮತ್ತು ಎಚ್ಡಿಕೆ‌ ರಕ್ತದಾನ ಸಮಿತಿಯ ಲಾಂಛನ ಲೋಕಾರ್ಪಣೆ ಮಾಡಿದರು. ಚಾಲಕರಿಗೆ ಸಾಕಷ್ಟು ಸೌಲಭ್ಯ ಕೊಡಲು ನಮ್ಮ ಟೈಗರ್ ನಿರ್ಧರಿಸಿದೆ, ಚಾಲಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಯೋಗ್ಯವಾದ ನಿರ್ಣಯ ಮಾಡಿದ್ದಾರೆ ಎಂದರು. ಕುಮಾರಸ್ವಾಮಿ ದೇವೇಗೌಡರ ಮಗ ಎಂದು ಎಲ್ಲರಿಗೂ ಗೊತ್ತಿದೆ, ಹೀಗಾಗಿ ಪುತ್ರವಾತ್ಸಲ್ಯದಿಂದ ಲಾಂಛನ ಬಿಡುಗಡೆಗೆ ದೇವೇಗೌಡರು ಹೋಗಿದ್ದಾರೆ ಎಂದು ಟೀಕೆ ಬರಬಹುದು ಅದಕ್ಕೆ ನಾನು ಭಯಪಡೋದಿಲ್ಲ ಎಂದಿದ್ದಾರೆ.

20 ತಿಂಗಳಲ್ಲಿ ಆಡಳಿತ ನಡೆಸಿ ಎಲ್ಲರ ಮನಸ್ಸು ಗೆದ್ದವರು ಕುಮಾರಸ್ವಾಮಿ, ನಮ್ಮ ಸರಕಾರ ದುಡಿಯುವ ಕೈಗಳಿಗೆ ಆರ್ಥಿಕ ಶಕ್ತಿ ಕಲ್ಪಿಸುತ್ತೇವೆ, ಸಂಸಾರವನ್ನು ನಡೆಸುವ ನಿಟ್ಟಿನಲ್ಲಿ ಉದ್ಯೋಗ ಕಲ್ಪಿಸುತ್ತೇವೆ, ಕೂತು ತಿನ್ನುವವರನ್ನು ಹಿಂದೆ ಸರಿಸುತ್ತೇವೆ ಎಂದರು.

ಕ್ಯಾಬ್ ಸೇವೆ ಶ್ರೇಷ್ಠ ಕಾರ್ಯಕ್ರಮ, ರಾಜ್ಯದ ಜನತೆ ಆಶೀರ್ವಾದದಿಂದ ಕುಮಾರಸ್ವಾಮಿ ಮತ್ತೆ  ಸಿಎಂ ಆಗುತ್ತಾರೆ, ಇದು ನಾನು ಕೊಡುವ ಭಾಗ್ಯ ಅಲ್ಲ, ಜನರು ಕುಮಾರಸ್ವಾಮಿಗೆ ಕೊಡುವ ಭಾಗ್ಯ ಎಂದರು. ಇಡೀ ರಾಜ್ಯದಲ್ಲಿ ಕುಮಾರಣ್ಣ, ಕುಮಾರಣ್ಣ ಎಂಬ ಕೂಗು ಎದ್ದಿದೆ, ರಾಜ್ಯದಲ್ಲಿ ಯಾರು ಯಾರು ಏನೇನ್ ಮಾಡಿದ್ದಾರೆ ಎನ್ನುವುದನ್ನು ಹೊರಗೆ ತೆಗೆಯುವ ಕಾಲ ಈಗ ಬಂದಿದೆ ಎಂದು ಮಾರ್ಮಿಕವಾಗಿ ನುಡಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

tiger taxi cab ಪುರಭವನ ಮಾರ್ಮಿಕ