‘ಮೊದಲು ನಿಮ್ಮಲ್ಲಿ ಬದಲಾವಣೆಯಾಗಬೇಕು’23-11-2017 609

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಆ ಭಾಗದ ಶಾಸಕರಿಗೆ ಆಸಕ್ತಿ ಇಲ್ಲ ಎಂದು ಸ್ಪೀಕರ್ ಕೆ.ಬಿ. ಕೋಳಿವಾಡ ವಿಧಾನ ಸಭೆಯಲ್ಲಿಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಿಯಮ 69ರಡಿ, ಬಿಜಾಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಿಂದ ಮುಳುಗಡೆಯಾಗಿರುವ ಪ್ರದೇಶದ ಗ್ರಾಮಗಳು ಹಾಗೂ ಈಗಾಗಲೇ ಪುನರ್ವಸತಿ ಕಲ್ಪಿಸಿರುವ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಪರಿಹರಿಸುವ ಕುರಿತ ಚರ್ಚೆಯ ಸಂದರ್ಭದಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ಮಾತನಾಡಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಒಂದುವಾರದ ವಿಶೇಷ ಅಧಿವೇಶನ ಕರೆಯಬೇಕೆಂದು ಹೇಳಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಯಾರೊಬ್ಬರಿಗೂ ಆಸಕ್ತಿಯೇ ಇಲ್ಲ. ಈಗ ನೀವು ಒಂದು ವಾರ ಅಧಿವೇಶನ ಕರೆಯಿರಿ ಎನ್ನುತ್ತಿದ್ದೀರಿ. ಇದು ಹೇಗೆ ಸಾಧ್ಯ?. ಮೊದಲು ನಿಮ್ಮಲ್ಲಿ ಬದಲಾವಣೆಯಾಗಬೇಕು ಎಂದರು.

ಉತ್ತರ ಕರ್ನಾಟಕದ ರೈತರು ಜೋಳದ ಬೆಲೆ ಕುಸಿತದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಈ ಬಗ್ಗೆ ಚರ್ಚೆ ನಡೆಸಲು ನಿಮಗೆ ಆಸಕ್ತಿ ಇಲ್ಲ. ದಕ್ಷಿಣ ಕರ್ನಾಟಕ ಭಾಗದ ಸದಸ್ಯರು ಅಡಿಕೆ, ತೆಂಗು ಮತ್ತಿತರ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸುತ್ತಾರೆ. ಆದರೆ ಉತ್ತರ ಕರ್ನಾಟಕ ಶಾಸಕರಲ್ಲಿ ನಿರುತ್ಸಾಹ ಕಂಡು ಬಂದಿದೆ ಎಂದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಅಲ್ಲೊಂದು ಇಲ್ಲೊಂದು ಪ್ರಸ್ತಾಪ ಮಾಡಿದರೆ ಚರ್ಚಿಸಿದಂತಾಗುವುದಿಲ್ಲ. ಸಮಗ್ರ ಚರ್ಚೆ ನಡೆದರೆ ಮಾತ್ರ ಅದಕ್ಕೆ ಅರ್ಥ ಇರುತ್ತದೆ ಎಂದು ಹೇಳಿದರು. ಜೆಡಿಎಸ್ ನಾಯಕ ಎಚ್.ಡಿ.ಕುಮಾರ ಸ್ವಾಮಿ, ಕಳೆದ ನಾಲ್ಕೂವರೆ ವರ್ಷಗಳಿಂದ ಸಾಕಷ್ಟು ಚರ್ಚೆ ಮಾಡಿದ್ದೇವೆ. ಸಮಸ್ಯೆ ಬಗೆಹರಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಾಗಲೇ ಬಜೆಟ್‍ಗೆ ಸದನ ಅಂಗಿಕಾರ ನೀಡಿದೆ. ಪೂರಕ ಅಂದಾಜುಗಳಿಗೂ ಅನುಮೋದನೆ ದೊರೆತಿದೆ. ಹೀಗಿರುವಾಗ ಚರ್ಚೆ ನಡೆಸಿದರೆ ಸರ್ಕಾರ ಸಮಸ್ಯೆ ಬಗೆಹರಿಸಲು ಈ ವರ್ಷ ಹಣ ಬಿಡುಗಡೆ ಮಾಡಲು ಸಾಧ್ಯವೆ ಎಂದು ಪ್ರಶ್ನಿಸಿದರು.


ಒಂದು ಕಮೆಂಟನ್ನು ಬಿಡಿ