ಮಗಳನ್ನೇ ಕೊಂದ ಪಾಪಿ ತಂದೆ ಅರೆಸ್ಟ್23-11-2017 446

ಬೆಂಗಳೂರು: ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿ ಮನೆ ಬಿಟ್ಟು ಆತನ ಜೊತೆ ಓಡಿಹೋಗಿದ್ದ ಅಪ್ರಾಪ್ತ ಮಗಳನ್ನು, ಆಕ್ರೋಶಗೊಂಡು ಹೊಡೆದು ಕೊಲೆ ಮಾಡಿ, ಮನೆಯ ಹಿಂದೆಯೇ ಬೆಂಕಿ ಹಚ್ಚಿ ಸುಟ್ಟು ಹಾಕಿ ಮರ್ಯಾದಾ ಹತ್ಯೆ ಮಾಡಿದ್ದ ತಂದೆಯನ್ನು ತ್ಯಾಮಗೊಂಡ್ಲು ಪೊಲೀಸರು ಬಂಧಿಸಿದ್ದಾರೆ.

ತ್ಯಾಮಗೊಂಡ್ಲುವಿನ ಲಕ್ಕಪ್ಪನಹಳ್ಳಿಯ ಚಿಕ್ಕ ನರಸಿಂಹಯ್ಯ(45)ಎಂದು ಬಂಧಿತ ಆರೋಪಿ ತಂದೆಯನ್ನು ಗುರುತಿಸಲಾಗಿದೆ. ಮಂಡಿಗೇರಿಯ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಮಗಳು ಲಕ್ಷ್ಮೀದೇವಿ(16)ಯನ್ನು ಆರೋಪಿಯು ಕಟ್ಟಿಗೆಯಿಂದ ಹೊಡೆದು ಕೊಲೆಮಾಡಿ ಮನೆಯ ಹಿಂಭಾಗದ ಖಾಲಿ ಜಾಗದಲ್ಲಿ ಸುಟ್ಟು ಹಾಕಿದ್ದನು.

ಮನೆಯಲ್ಲಿದ್ದ ಬಾಲಕಿ ಹಲವು ದಿನಗಳಿಂದ ಕಾಣಿಸದ್ದರಿಂದ ಅನುಮಾನಗೊಂಡು ಗ್ರಾಮದ ಹಿರಿಯರಿಗೆ ತಿಳಿಸಿದ್ದು, ಅಲ್ಲಿಂದ ವಿಷಯ ತಿಳಿದ ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತಳಾದ ಲಕ್ಷ್ಮೀ ದೇವಿಯು ತನ್ನದೇ ಗ್ರಾಮದ ಲಕ್ಷ್ಮೀನಾರಾಯಣ ಎಂಬ ಯುವಕನ ಜೊತೆ ಪ್ರೀತಿಸುತ್ತಿದ್ದಳು. ಇವರಿಬ್ಬರು ಒಂದೂವರೆ ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಈ ಸಂಬಂಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಪತ್ತೆ ಮಾಡಿ ಕರೆತಂದು ಲಕ್ಷ್ಮೀದೇವಿ ಅಪ್ರಾಪ್ತಳಾಗಿದ್ದರಿಂದ ಪೋಷಕರ ಸುಪರ್ದಿಗೆ ನೀಡಿ ಯುವಕನ ವಿರುದ್ದವೂ ಯಾವುದೇ ಪ್ರಕರಣ ದಾಖಲಿಸದೇ ಬುದ್ದಿ ಹೇಳಿ ಕಳುಹಿಸಲಾಗಿತ್ತು.

ಮಗಳ ವರ್ತನೆಯಿಂದ ಆಕ್ರೋಶಗೊಂಡು ಲಕ್ಷ್ಮೀದೇವಿಯನ್ನು ಮನೆಗೆ ಕರೆದುಕೊಂಡು ಬಂದ ಕೆಲ ದಿನಗಳು ಸುಮ್ಮನಿದ್ದು ಶಾಲೆಗೂ ಕಳುಹಿಸದೇ ಮನೆಯಲ್ಲಿ ಚೆನ್ನಾಗಿ ಹೊಡೆದು ಸಾಯಿಸಿ, ನಂತರ ಆಕೆಯ ಶವವನ್ನು ಸುಟ್ಟು ಹಾಕಿದ್ದಾಗಿ ಆರೋಪಿ ಹೇಳಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಎಸ್ಪಿ ಅಮಿತ್ ಸಿಂಗ್ ಅವರು ಪರಿಶೀಲನೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ