‘ಶೀಘ್ರ ಶಿಕ್ಷೆಯಾದರೆ ಉತ್ತಮ ಸಮಾಜ’02-11-2017 392

ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ವಿಚಾರಣೆ ನಡೆಸಿ ಆರೋಪಿಗಳಿಗೆ ತಕ್ಷಣವೇ ಶಿಕ್ಷೆಯಾಗುವ ವ್ಯವಸ್ಥೆ ನಿರ್ಮಾಣವಾಗಬೇಕಾದ ಅಗತ್ಯವನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಪ್ರತಿಪಾದಿಸಿದ್ದಾರೆ.

ರಾಜಾಜಿನಗರದ ಎಂಇಎಸ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಇಂದು ಮೈಸೂರು ಎಜುಕೇಶನ್ ಸೊಸೈಟಿ ಹಮ್ಮಿಕೊಂಡಿದ್ದ " ಬೋಧನಾ ವೃತ್ತಿಯ ಮೌಲ್ಯಗಳ ಕುರಿತ ವಿಚಾರಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಸನ್ಮಾನ ಮಾಡುವ ಸಮಾಜದಲ್ಲಿ ನಿರ್ಮಾಣವಾಗಿದೆ. ಇದರ ನಡುವೆ ಭ್ರಷ್ಟಾಚಾರ ಪ್ರಕರಣದ ಆರೋಪಿಗಳು ಹೈಕೋರ್ಟ್, ಸುಪ್ರೀಂ ಕೋರ್ಟ್ ಎಂದು ಸುತ್ತಿಕೊಂಡು ಶಿಕ್ಷೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಏನೇ ಆಗಿರಲಿ, ಭ್ರಷ್ಟಾಚಾರ ಆರೋಪಿಗಳಿಗೆ ಶೀಘ್ರದಲ್ಲಿಯೇ ಶಿಕ್ಷೆ ನೀಡುವ ವಾತಾವರಣ ನಿರ್ಮಾಣ ಆದರೆ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಸಂತೋಷ್ ಹೆಗಡೆ ನುಡಿದರು. ಭಾರತದಲ್ಲಿ ಅಭಿವೃದ್ಧಿಯ ಬದಲಾವಣೆ ಆಗಬೇಕು, ಅದಕ್ಕಾಗಿ ಭ್ರಷ್ಟಾಚಾರ ಮುಕ್ತ ಆಡಳಿತ, ವೈಜ್ಞಾನಿಕ ತಳಹದಿಯ ಶಿಕ್ಷಣ ಇವುಗಳು ಹೆಚ್ಚು ಪ್ರಚಲಿತಕ್ಕೆ ಬರಬೇಕು ಎಂದು ಹೇಳಿದರು.

ರಾಜಕಾರಣಿಗಳ ವಿರುದ್ಧ ಇರುವ ಅಪರಾಧ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸುಪ್ರೀಂ ಕೋರ್ಟ್ ಒಲವು ತೋರಿದೆ. ಇಂತಹ ನಿರ್ಧಾರ ಸ್ವಾಗತ  ಎಂದರು. ವಿಚಾರ ಸಂಕಿರಣದಲ್ಲಿ ಆರ್.ವಿ.ಕಾಲೇಜಿನ ನಿರ್ದೇಶಕ ಡಾ.ಟಿ.ವಿ.ರಾಜು, ಎಂಇಎಸ್ ಅಕಾಡೆಮಿ ಕಾರ್ಯದರ್ಶಿ ಡಾ.ಶಾಂಕುತಲಾ ಕಾಟ್ರೆ, ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಹೆಚ್.ಎಸ್.ಗಣೇಶ್ ಭಟ್, ಡಾ.ಆರತಿ ವಿ.ಬಿ, ಡಾ.ಶಾರದಾ ಎಸ್, ಹರಿಣಿ ಸೇರಿ ಪ್ರಮುಖರಿದ್ದರು.


ಒಂದು ಕಮೆಂಟನ್ನು ಬಿಡಿ