ಕಾಣೆಯಾಗಿದ್ದ ಮಕ್ಕಳು ತಾಯಿ ಮಡಿಲಿಗೆ !02-11-2017 490

ಬೆಂಗಳೂರು: ಸಂಜಯ್ ನಗರದ ಭೂಪಸಂದ್ರದಲ್ಲಿ ಆಟವಾಡುತ್ತಿದ್ದ ವೇಳೆ ಕಾಣೆಯಾಗಿದ್ದ ಯಾಗಿದ್ದ ಇಬ್ಬರು ಮಕ್ಕಳು ತಿರುಪತಿಯಲ್ಲಿ ಪತ್ತೆಯಾಗಿದ್ದು ಅವರನ್ನು ಸುರಕ್ಷಿತವಾಗಿ ನಗರಕ್ಕೆ ಕರೆತಂದ ಪೊಲೀಸರು ಪೋಷಕರ ಮಡಿಲಿಗೆ ಒಪ್ಪಿಸಿ ನಿಟ್ಟುಸಿರು ಬಿಟ್ಟಿದ್ದಾರೆ.

ಸಂಜಯನಗರದ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿದ್ದ ಮಕ್ಕಳಾದ ನಮ್ರತಾ (7), ನಮಿತ್ (5)ನನ್ನು ಗುರುವಾರ ಮಧ್ಯಾಹ್ನ ತಂದೆ ಪ್ರಶಾಂತ್ ತಾಯಿ ಶೈಲಜಾ ದಂಪತಿಗೆ ನೀಡಿದ ಉತ್ತರ ವಲಯ ಡಿಸಿಪಿ ಚೇತನ್‍ ಸಿಂಗ್ ರಾತೋರ್ ಅವರು ಮಕ್ಕಳು ಪತ್ತೆಗೆ ನೆರವಾದ ಸ್ಥಳೀಯ ಯುವಕರಾದ ಅವಿನಾಶ್ ಹಾಗೂ ವಿಜಯ್ ಅವರನ್ನು ಅಭಿನಂದಿಸಿದರು.

ಮಕ್ಕಳನ್ನು ಅಪಹರಿಸಿಕೊಂಡು ಹೋಗಿದ್ದ ವಿನೋದ್(25)ತಲೆಮರೆಸಿಕೊಂಡಿದ್ದು ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಮಾನಸಿಕ ಸ್ಥಿತಿ ಸರಿಯಿಲ್ಲದ ಆರೋಪಿ ವಿನೋದ್ ಮಕ್ಕಳನ್ನು ಅವರ ಮಾವನ ಸ್ನೇಹದ ಮೇಲೆ ಪರಿಚಯ ಮಾಡಿಕೊಂಡಿದ್ದು ಆಗಾಗ ಸಿಹಿ ತಿಂಡಿ ಕೊಡಿಸುತ್ತಿದ್ದನು.

ಅದೇ ಪರಿಚಯದ ಮೇಲೆ ಕಳೆದ ಅ.25ರಂದು ಸಂಜೆ 7.30ರ ವೇಳೆ ಭೂಪಸಂದ್ರ ಮುಖ್ಯರಸ್ತೆಯ 5ನೇ ಕ್ರಾಸ್‍ನಲ್ಲಿ ಮಕ್ಕಳ ಅಜ್ಜ ಎಳನೀರು ವ್ಯಾಪಾರ ಮಾಡುತ್ತಿದ್ದಾಗ ನಮ್ರತಾ ಹಾಗೂ ನಮಿತ್ ಜೊತೆ ಕೆಲ ಸಮಯದವರೆಗೆ ಆಟವಾಡುವ ನೆಪ ಮಾಡಿ ಇಬ್ಬರನ್ನು ಅಪಹರಿಸಿಕೊಂಡು ಪರಾರಿಯಾಗಿದ್ದನು.

ಆಟವಾಡುತ್ತಿದ್ದ ಮಕ್ಕಳು ರಾತ್ರಿ 9 ಗಂಟೆ ಕಳೆದರೂ ಪತ್ತೆಯಾಗದಿದ್ದರಿಂದ ಹುಡುಕಾಟ ನಡೆಸಿ ನಮತರ ಆತಂಕಗೊಂಡು ಸಂಜಯನಗರ ಪೊಲೀಸರಿಗೆ ಮಕ್ಕಳ ತಂದೆ ಪ್ರಶಾಂತ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಪರಿಶೀಲನೆ ನಡೆಸಿದಾಗ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಪತ್ತೆಯಾಗಿದೆ. ಈ ದೃಶ್ಯಗಳನ್ನು ಪ್ರಶಾಂತ್ ಕುಟುಂಬಕ್ಕೆ ಪರಿಚಯಸ್ಥ ಸ್ಥಳೀಯ ಯುವಕರಾದ ಅವಿನಾಶ್ ಹಾಗೂ ವಿಜಯ್ ಸಿಸಿ ಟಿವಿ ಪುಟೇಜ್‍ಗಳನ್ನು ಸಂಬಂಧಿಕರಿಗೆ ವಾಟ್ಸಾಪ್‍ನಲ್ಲಿ ಕಳುಹಿಸಿದ್ದಾರೆ.

ಅವಿನಾಶ್ ಸಂಬಂಧಿಕರೊಬ್ಬರು ತಿರುಪತಿಯಲ್ಲಿದ್ದು ಅವರು ಮಕ್ಕಳನ್ನು ನೋಡಿ ಅವಿನಾಶ್‍ಗೆ ವಿಷಯ ತಿಳಿಸಿದ್ದು ಪೊಲೀಸರೊಂದಿಗೆ ತೆರಳಿದ ಅವಿನಾಶ್ ಮಕ್ಕಳನ್ನು ಪತ್ತೆ ಹಚ್ಚಿ ರಕ್ಷಿಸಿದ್ದು ಪೊಲೀಸರನ್ನು ನೋಡಿದ ಆರೋಪಿ ವಿನೋದ್ ಪರಾರಿಯಾಗಿದ್ದಾನೆ.

ಆರೋಪಿ ವಿನೋದ್ ಮಕ್ಕಳನ್ನು ಏಕೆ ಅಪಹರಿಸಿದ್ದಾನೆ ಎನ್ನುವುದು ಗೊತ್ತಾಗಿಲ್ಲ, ಆತನನ್ನು ಬಂಧಿಸಿದ ನಂತರ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಡಿಸಿಪಿ ಚೇತನ್‍ಸಿಂಗ್ ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kannada News Karnataka ತಿರುಪತಿ ಅಪಹರಣ