'ಜಾರ್ಜ್ ಇಂದ ರಾಜಕೀಯ ಧ್ರುವೀಕರಣ…!’27-10-2017 400

ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐನವರು ಎಫ್ಐಆರ್ ದಾಖಲಿಸಿರುವ ಹಿನ್ನೆಲೆ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕು ಅನ್ನುವ ಬಿಜೆಪಿ ಆಗ್ರಹವನ್ನು ಕಾಂಗ್ರೆಸ್ ಪಕ್ಷ ತಳ್ಳಿಹಾಕಿದೆ.

ಸಚಿವ ಜಾರ್ಜ್ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ. ಬಿಜೆಪಿಯವರಿಗೆ ಕೆ.ಜೆ.ಜಾರ್ಜ್ ಅವರನ್ನು ಕಂಡರೆ ಆಗದು, ಹೀಗಾಗಿ ಅವರನ್ನೇ ಗುರಿಯಾಗಿಸಿಕೊಂಡು ಪದೇ ಪದೇ ಆರೋಪ ಮಾಡುತ್ತಾರೆ, ರಾಜೀನಾಮೆಗೆ ಒತ್ತಾಯಿಸುತ್ತಾರೆ, ಒಟ್ಟಿನಲ್ಲಿ ಜಾರ್ಜ್ ಅವರನ್ನು ತಮ್ಮ ಸ್ಥಾನದಿಂದ ಇಳಿಸಬೇಕು ಅನ್ನುವುದೇ ಬಿಜೆಪಿಯವರ ಹುನ್ನಾರ. ಹೀಗಾಗಿ, ಇಂಥದ್ದಕ್ಕೆಲ್ಲಾ ನಾವು ಬಗ್ಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದೆ.

ಈ ನಡುವೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರ ಸ್ವಾಮಿಯವರೂ ಕೂಡ, ಎಫ್‌ಐಆರ್ ದಾಖಲಾದ ಕೂಡಲೇ ಜಾರ್ಜ್ ರಾಜೀನಾಮೆ ಕೊಡಬೇಕು ಅನ್ನುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಚುನಾವಣೆಗೆ ಮುನ್ನ ರಾಜ್ಯದಲ್ಲಿ ಅಲ್ಪಸಂಖ್ಯಾತರ ಧೃವೀಕರಣ ಆಗುತ್ತಿದ್ದು, ಈಗಾಗಲೇ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುವ ಮೂಲಕ, ಮುಸ್ಲಿಮರನ್ನು ಮತ್ತಷ್ಟು ದೂರಮಾಡಿಕೊಂಡಿರುವ ಬಿಜೆಪಿಯವರು, ಜಾರ್ಜ್ ರಾಜೀನಾಮೆಗೆ ಪಟ್ಟುಹಿಡಿದು, ಕ್ರೈಸ್ತ ಸಮುದಾಯದವರಲ್ಲಿ ತಮ್ಮ ಬಗ್ಗೆ ಇದ್ದ ಅಲ್ಪಸ್ವಲ್ಪ ಸಹಾನುಭೂತಿಯನ್ನೂ ಕಳೆದುಕೊಳ್ಳುವುದು ಖಚಿತ ಎಂದು ವಿಶ್ಲೇಷಿಸಲಾಗಿದೆ.

 

 


ಒಂದು ಕಮೆಂಟನ್ನು ಬಿಡಿ