ಪೊಲೀಸ್ ಪೇದೆಗೆ ಇರಿದ ಕಳ್ಳ !12-10-2017 372

ಬೆಂಗಳೂರು: ರೈಲಿನಲ್ಲಿ ಕಳವು, ಸರಗಳವು, ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕುಖ್ಯಾತ ಕಳ್ಳನೊಬ್ಬ ಬೆನ್ನಟ್ಟಿ ಹಿಡಿಯಲು ಬಂದ ಸಿಟಿ ರೈಲ್ವೆ ಪೊಲೀಸ್ ಪೇದೆ ಅಲ್ಲಾವುದ್ದೀನ್‍ ಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ದುರ್ಘಟನೆ, ಯಶವಂತಪುರದಲ್ಲಿ ನಡೆದಿದೆ. ಚಾಕು ಇರಿತದಿಂದ ಕುತ್ತಿಗೆಗೆ ಗಂಭೀರವಾಗಿ ಗಾಯಗೊಂಡು ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಲ್ಲಾವುದ್ದೀನ್ (23) , ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳ್ಳತನ, ಸರಗಳವು, ಬೆದರಿಕೆ ಇನ್ನಿತರ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೊಹ್ಮದ್ ಅಲಿ, ಯಶವಂತಪುರದ ಶರೀಫ್ ನಗರದಲ್ಲಿ ಅಡಗಿರುವ ಖಚಿತ ಮಾಹಿತಿಯಾಧರಿಸಿ ಅಲ್ಲಾವುದ್ದೀನ್ ಸೇರಿ ಮೂವರು ಸಿಟಿ ರೈಲ್ವೆ ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ. ಶರೀಫ್ ನಗರದ ಮೂರು ಕಡೆಗಳಲ್ಲಿ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಅಲ್ಲಾವುದ್ದೀನ್‍ ಗೆ ಮೊಹ್ಮದ್ ಅಲಿ ಕಂಡು ಬಂದಿದ್ದಾನೆ. ಕೂಡಲೇ ಆತನನ್ನು ಬೆನ್ನಟ್ಟಿ ಹಿಡಿಯಲು ಹೋದ ಅಲ್ಲಾವುದ್ದೀನ್ ಗೆ ಜೇಬಿನಲ್ಲಿದ್ದ ಚಾಕು ತೆಗೆದು ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಲ್ಲಾವುದ್ದೀನ್ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೊಹ್ಮದ್‍ ಅಲಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ರೈಲ್ವೆ ಎಸ್ಪಿ ಚೈತ್ರ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಯಶವಂತಪುರ ಪೊಲೀಸ್ ಇನ್ಸ್ ಪೆಕ್ಟರ್ ಮುದ್ದುರಾಜು ಅವರು, ಆರೋಪಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ