ಅಪಘಾತ ಜಗಳ: ಕೊಲೆಯಲ್ಲಿ ಅಂತ್ಯ !18-09-2017 464

ಬೆಂಗಳೂರು: ಕಾರು, ಬೈಕ್‍ ಗೆ ಡಿಕ್ಕಿ ಹೊಡೆದಿದ್ದರಿಂದ ಸಿಟ್ಟಿಗೆದ್ದ ಬೈಕ್ ಸವಾರರು ಚಾರ್ಟಡ್ ಅಕೌಂಟೆಂಟ್‍ ನನ್ನು ಕೊಲೆ ಮಾಡಿ ಪರಾರಿಯಾಗಿರುವ ಪ್ರಕರಣ ಘಟನೆ ನಿನ್ನೆ ರಾತ್ರಿ ಬೆಂಗಳೂರು-ತುಮಕೂರು ರಸ್ತೆಯ ಚಿಕ್ಕಬಿದಿರು ಕಲ್ಲು ಗ್ರಾಮದಲ್ಲಿ ನಡೆದಿದೆ.

ಚಿಕ್ಕ ಬಿದಿರು ಕಲ್ಲು ಗ್ರಾಮದ ವಿನಾಯಕನಗರ ನಿವಾಸಿ ಪವನ್ (25) ಕೊಲೆಯಾದ ಯುವಕ. ಕೊಲೆಯಾದ ಪವನ್ ಖಾಸಗಿ ಕಂಪನಿಯಲ್ಲಿ ಚಾರ್ಟಡ್ ಅಕೌಂಟೆಂಟ್ ಆಗಿದ್ದು, ಭಾನುವಾರ ರಜೆ ಇದ್ದ ಕಾರಣ ತನ್ನ ಸ್ನೇಹಿತರ ಜೊತೆ ದಾಸರಹಳ್ಳಿಯ ಚಿತ್ರಮಂದಿರದಲ್ಲಿ 'ಭರ್ಜರಿ' ಸಿನಿಮಾ ನೋಡಿ ಮನೆಗೆ ವಾಪಸ್ಸಾಗುತ್ತಿದ್ದಾಗ ಇವರ ಐ-20 ಕಾರು ರಸ್ತೆಯಲ್ಲಿ ಬೈಕ್‍ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಸಿಟ್ಟಿಗೆದ್ದ ಬೈಕ್ ಸವಾರರು ಕಾರು ಚಾಲನೆ ಮಾಡುತ್ತಿದ್ದ ಪವನ್ ಜೊತೆ ಜಗಳ ತೆಗೆದು ಏಕಾ ಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಾಕುವಿನಿಂದ ಪವನ್‍ ನ್ ಕತ್ತು ಸೀಳಿ, ಕೊಲೆ ಗೈದು ಪರಾರಿಯಾಗಿದ್ದಾರೆ ಎಂದು, ಪೊಲೀಸರು ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ