ಮನೆಗೆ ನುಗ್ಗಿ ಹಲ್ಲೆ: ಇಬ್ಬರ ಬಂಧನ !04-09-2017 231

ಬೆಂಗಳೂರು: ರಸ್ತೆಯಲ್ಲಿ ಕಾರು ಅಡ್ಡವಾಗಿ ನಿಲ್ಲಿಸಿ, ಇಳಿದು ಹೋಗುತ್ತಿದ್ದವರ ಮನೆಗೆ ನುಗ್ಗಿ ಮೂವರಿಗೆ ಡ್ರ್ಯಾಗರ್ ನಿಂದ, ಹಲ್ಲೆ ಮಾಡಿರುವ ಘಟನೆ ಕಳೆದ ರಾತ್ರಿ ರಾಜಾಜಿನಗರದಲ್ಲಿ ನಡೆದಿದೆ. ಗಾಯಗೊಂಡಿರುವ ಶಿಲ್ಪಾ, ಅರ್ಜುನ್, ದೀಪಕ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿ ಅರ್ಜುನ್ ಬಾಡಿಗೆ ಕಾರೊಂದರಲ್ಲಿ ಮನೆಯ ಬಳಿ ಬಂದು ಇಳಿದು ಕಾರು ಚಾಲಕನಿಗೆ ಬಾಡಿಗೆ ಹಣ ನೀಡುತ್ತಿದ್ದರು. ಈ ವೇಳೆ ಎದುರುಗಡೆಯಿಂದ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರು ತೆಗೆಯುವಂತೆ ಬೆದರಿಕೆ ಹಾಕಿದ್ದಾರೆ.

ಇದಕ್ಕೆ ಬಗ್ಗದ  ಅರ್ಜುನ್ ಹಣ ನೀಡಿ ಹೋಗುತ್ತೀನಿ. ನಾನು ಇದೇ ಏರಿಯಾದವನು ಎಂದು ಹೇಳಿ ಮನೆಯ ಒಳಗೆ ಹೋಗಿದ್ದಾರೆ. ಇದಾದ ಸ್ವಲ್ಪ ಹೊತ್ತಲ್ಲೇ ಏಕಾಏಕಿ ಅರ್ಜುನ್ ಮನೆಗೆ ನುಗ್ಗಿದ ಇಬ್ಬರು, ಡ್ರ್ಯಾಗರ್ ನಿಂದ ಅರ್ಜುನ್, ಶಿಲ್ಪಾ, ದೀಪಕ್ ಮೂವರಿಗೆ ಇರಿದು ಹಲ್ಲೆ ನಡೆಸಿದ್ದಾರೆ. ಗಲಾಟೆ ಶಬ್ಧ ಕೇಳಿದ ಧಾವಿಸಿದ ಅಕ್ಕಪಕ್ಕದ ಮನೆಯವರು ಇಬ್ಬರನ್ನು ಹಿಡಿದು ಧರ್ಮದೇಟು ನೀಡಿ ರಾಜಾಜಿನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ