ಹೇ..ವಿಶ್ವನಾಥ...!26-07-2017 549

ರಾಜ್ಯ ರಾಜಕಾರಣದಲ್ಲಿ ಕಾಣಸಿಗುವ ಅತ್ಯಂತ ಅಪರೂಪದ ವ್ಯಕ್ತಿತ್ವ, ಕವಿ ಮನಸ್ಸು, ಸಾಹಿತ್ಯ ಸಂಗೀತದ ಬಗ್ಗೆ ತುಡಿತ, ಟೀಕೆಯನ್ನು ಎದುರಿಸುವಾಗ ಅತ್ಯಂತ ಸಂಕೋಚ, ಎದುರಾಳಿಗಳ ವಿರುದ್ದ ಮುಗಿಬೀಳುವಾಗ ಮುಂದೇನಾಗಲಿದೆ ಎಂದು ಯೋಚಿಸದೆ ಮುನ್ನಡೆಯುವ ನಾಯಕ ಎಂದರೆ ಯಾರಾದರೂ ತಟ್ಟನೆ ಹೇಳಬಹುದು ಅದು ಅಡಗೂರು ವಿಶ್ವನಾಥ್ ಎಂದು.

ಅಧಿಕಾರವಿರಲಿ, ಇಲ್ಲದಿರಲಿ ಸದಾ ವಿವಾದವನ್ನು ಹಾಸಿಕೊಂಡು, ಹೊದ್ದುಕೊಂಡು ಮಲಗುವ ವಿಶ್ವನಾಥ್ ತಮ್ಮ ಸುದೀರ್ಘ ನಾಲ್ಕು ದಶಕದ ರಾಜಕೀಯ ಪಯಣವನ್ನು ಸಾಗಿಸಿದ್ದು ಕಾಂಗ್ರೆಸ್‍ನಲ್ಲಿ. ಸಂಸದರಾಗಿ ಹಳ್ಳಿ ಹಕ್ಕಿ ಹಾಡು ಕೃತಿಯ ಮೂಲಕ ಗಮನ ಸೆಳೆಯುವವರೆಗೂ ಎಚ್. ವಿಶ್ವನಾಥ್ ಎಂದೇ ಗುರುತಿಸಲ್ಪಡುತ್ತಿದ್ದವರು ಇವರು. ಇಡೀ ದೇಶವೇ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರು ಹೇರಿದ ತುರ್ತುಪರಿಸ್ಥಿತಿಯನ್ನು ವಿರೋಧಿಸಿದರೆ, ಇವರು ಮಾತ್ರ ಅದನ್ನು ಬಲವಾಗಿ ಸಮರ್ಥಿಸುವ ಮೂಲಕ ಎಂತಹವರೂ ಕೂಡ, ಇದೂ ನಿಜವಲ್ಲವೇ ಎಂದು ಬಾಯಿ ಮೇಲೆ ಬೆರಳಿಡುವಂತೆ ಮಾಡಬಲ್ಲರು.

ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಹಳ್ಳಿಗಾಡಿನ ಬಡತನ, ಮುಗ್ಧತೆ ಮೈಗೂಡಿಸಿಕೊಂಡು ಕಾನೂನು ಪದವೀಧರರಾದ ಪಧವಿದರರಾದ ವಿಶ್ವನಾಥ್ ಉಳುವವನೇ ಹೊಲದೊಡೆಯ ಎಂಬ ತತ್ವದಲ್ಲಿ ನಂಬಿಕೆಯಿಟ್ಟು, ಭೂಮಿಯ ಹಕ್ಕು ಕೊಡಿಸುವ ವಕೀಲನಾಗಿ ಬಡ ರೈತರ ಪಾಲಿಗೆ ಆಶಾಕಿರಣವಾದರೆ, ಭೂಮಾಲಿಕರ ಪ್ರಭಲ ವಿರೋಧಿಯಾದರು. ಇವರ ವಾದ ಸರಣಿಯಿಂದ ಹಲವರು ಭೂಮಿ ಹಕ್ಕು ಪಡೆದುಕೊಂಡರೆ, ಭೂಮಿ ಕಳೆದುಕೊಂಡ ಕುಟುಂಬಗಳವರು ಹಾಕಿದ ಶಾಪಗಳಿಗೂ ಲೆಕ್ಕವಿಲ್ಲ.

ರಾಜ್ಯ ರಾಜಕಾರಣದಲ್ಲಿ ಸಾಮಾಜಿಕ ನ್ಯಾಯದ ಹರಿಕಾರನಾಗಿ ಇಂದಿಗೂ ಶೋಷಿತ ಸಮುದಾಯಗಳ ಆರಾಧ್ಯ ದೈವವಾಗಿರುವ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜು ಅರಸು ಅವರ ರಾಜಕೀಯ ಗರಡಿಯಲ್ಲಿ ಪಳಗಿದವರು ಎಚ್. ವಿಶ್ವನಾಥ್. ಅಡಗೂರಿನ ವಕಿಲ ವಿಶ್ವನಾಥ್, ಭೂಮಿಯ ಹಕ್ಕು ಕೊಡಿಸುವ ವಾದ ಸರಣಿಯ ಮೂಲಕ ರೈತಾಪಿ ವರ್ಗದ ಜನಪ್ರಿಯತೆಗಳಿಸಿದ್ದನ್ನು ಕಂಡ ಅಂದಿನ ಪ್ರಭಾವಿ ರಾಜಕಾರಣಿ ದೇವರಾಜ ಅರಸು, ಹಿಂದೆ ಮುಂದೆ ನೋಡದೆ ವಿಶ್ವನಾಥ್ ಅವರನ್ನು ಸಕ್ರಿಯ ರಾಜಕಾರಣಕ್ಕೆ ಪರಿಚಯಿಸಿದರು.

1978ರಿಂದ ಸಕ್ರಿಯ ರಾಜಕಾರಣಿಯಾಗಿರುವ ವಿಶ್ವನಾಥ್ ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ಜನರ ಆಶೀರ್ವಾದ ಪಡೆದರೆ, ಅರಣ್ಯ ಇಲಾಖೆ, ಕನ್ನಡ ಮತ್ತು ಸಂಸ್ಕøತಿ, ಶಿಕ್ಷಣ ಮತ್ತು ಸಹಕಾರ ಇಲಾಖೆಗಳ ಮಂತ್ರಿಯಾಗಿ ತಮ್ಮದೇ ಛಾಪು ಉಳಿಸಿದ್ದಾರೆ. ರಾಜಕಾರಣ ಎಂದರೆ ರಜಾ ಕಾಲದಲ್ಲಿ ಹೋಗಿಬರುವ ರಮ್ಯ ತಾಣವಲ್ಲ, ಅದು ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಆಪೇಕ್ಷಿಸುವ ಕ್ಷೇತ್ರ ಎಂದು ಬಲವಾಗಿ ಪ್ರತಿಪಾದನೆ ಮಾಡುವ ವಿಶ್ವನಾಥ್ ತಮ್ಮ ಎದುರಾಳಿಗಳನ್ನು ಅತ್ಯಂತ ಮೊನಚು ಭಾಷೆಯ ಮೂಲಕ ಟೀಕಿಸುವುದರಲ್ಲಿ ಸಿದ್ಧ ಹಸ್ತರು. ಕಾಂಗ್ರೆಸ್‍ನಲ್ಲಿದ್ದರೂ ಕಾಂಗ್ರೆಸ್ ನಾಯಕರ ವಿರುದ್ದವೇ ಮುಗಿ ಬೀಳುತ್ತಿದ್ದ ವಿಶ್ವನಾಥ್ ಎಷ್ಟು ಮಂದಿ ಸ್ನೇಹಿತರನ್ನು ಹೊಂದಿದ್ದಾರೆಯೋ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಶತ್ರುಗಳನ್ನೂ ಹೊಂದಿದ್ದಾರೆ. ಅದೇ ಕಾರಣಕ್ಕಾಗಿ ರಾಜಕೀಯದಲ್ಲಿ ಹಲವು ಏಳು-ಬೀಳುಗಳನ್ನೂ ಕಂಡಿದ್ದಾರೆ, ಸೋತು ಸುಣ್ಣವಾಗಿದ್ದಾರೆ. ಆದರೂ ಕೂಡ ತಮ್ಮ ನಿಲುವು ಬದಲಾಯಿಸಿಕೊಂಡಿಲ್ಲ.

ತಾವು ಕಂಡ ಅಥವಾ ತಾವು ಸತ್ಯವೆಂದು ತಿಳಿದ ಸಂಗತಿಯನ್ನು ಕೊಂಚವೂ ಮರೆಮಾಚದೆ ನೇರವಾಗಿ ಹೇಳುವ ರಾಜಕಾರಣಿ ಎಂದೇ ಗುರುತಿಸಲ್ಪಡುವ ಎಚ್. ವಿಶ್ವನಾಥ್, ಹಿಂದೆ ಒಂದು ಬಾರಿ, ಜೆಡಿಎಸ್ ಪರಮೊಚ್ಛ ನಾಯಕ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಆಧುನಿಕ ಭಸ್ಮಾಸುರ ಎಂದು ಕರೆಯುವ ಮೂಲಕ ಬಾರಿ ಟೀಕೆ ಹಾಗೂ ಒಂದು ಸಮುದಾಯದ ಪ್ರಬಲ ವಿರೋಧವನ್ನೂ ಕಟ್ಟಿಕೊಂಡಿದ್ದರು.

ಇದೀಗ ಅದೇ ದೇವೇಗೌಡರ ಸಾರಥ್ಯದಲ್ಲೇ ಜೆಡಿಎಸ್ ಮೂಲಕ ತಮ್ಮ ರಾಜಕೀಯ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ವೇಳೆ ಕಾಂಗ್ರೆಸ್ಸಿಗರಿಗೆ ಕಾಲುಬಾಯಿ ರೋಗ ಎಂದು ಹೇಳಿ ಹಲವರ ವಿರೋಧ ಕಟ್ಟಿಕೊಂಡಿದ್ದರು. ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಅವರು ಸಿನಿಮಾ ನಟಿ ರಮ್ಯಾ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಸುತ್ತಿದ್ದಾಗ ಕಾಂಗ್ರೆಸ್‍ನಲ್ಲಿ ಸಖಿ ಸಂಸ್ಕøತಿ ಬೆಳೆಯುತ್ತಿದೆ ಎಂದು, ಹೇಳುವ ಮೂಲಕ ಹಲವರ ಹುಬ್ಬೇರುವಂತೆ ಮಾಡಿದ್ದರು. ಅಷ್ಟೇ ಅಲ್ಲಾ ತಮ್ಮ ಈ ಹೇಳಿಕೆಯಿಂದ ಯಾರಿಗಾದರೂ ಕೋಪ ಬಂದಿದ್ದರೆ ಅವರು ನೇರವಾಗಿ ಹೈಕಮಾಂಡ್‍ಗೆ ದೂರು ಕೊಡಬಹುದು, ಹೈಕಮಾಂಡ್ ನವರು, ರಾಜ್ಯದಲ್ಲಿ ಯಾರು ಸಖಿ ಸಂಸ್ಕøತಿಯನ್ನು ಹುಟ್ಟುಹಾಕುತ್ತಿದ್ದಾರೆ ಅವರ ರಾಜಕೀಯ ಒಲವು-ನಿಲುವುಗಳೇನು ಎಂದು ನಿರ್ಧರಿಸಲಿ ಎಂದು ಸವಾಲು ಹಾಕಿದ್ದರು. ಹೀಗೆ, ಹಲವರ ಪಾಲಿಗೆ ವಿಶ್ವನಾಥ್ ಎಂಬ ಹೆಸರು ಉಗುಳಲೂ ಆಗದ, ನುಂಗಲೂ ಆಗದ ಬಿಸಿ ತುಪ್ಪದಂತಿದೆ.

ರಾಜಕಾರಣ ಅಷ್ಟೇ ಅಲ್ಲ, ವೈಯಕ್ತಿಕ ಬದುಕಿನಲ್ಲೂ ಕೂಡ ತಮಗೆ ಸರಿ ಅನ್ನಿಸಿದ್ದನ್ನು ಮಾಡಲು ಹಿಂದೆ-ಮುಂದೆ ನೋಡದ ವ್ಯಕ್ತಿತ್ವ ಇವರದ್ದು. ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ವಿಷಯದಲ್ಲೂ ಕೂಡ ಇವರು ಕೈಗೊಂಡ ನಿಷ್ಠುರ ನಿರ್ಧಾರಗಳು ಹಲವರನ್ನು ಬೆಚ್ಚುವಂತೆ ಮಾಡಿದೆ. ಕೆಲವರು ಇದನ್ನು ತೋರಿಕೆಯ ನಿಷ್ಠುರತೆ, ಜನ ಮೆಚ್ಚಲಿ ಎಂದು ಹೀಗೆ ಮಾಡುತ್ತಾರೆ, ಪುತ್ರ ವ್ಯಾಮೋಹದಿಂದಾಗಿ ಹೋದಲ್ಲೆಲ್ಲಾ ಮಗನಿಗೆ ಬೇಕಾದ್ದನ್ನು ಮಾಡಲುಬಿಡುತ್ತಾರೆ, ಅದು ಜನರಿಗೆ ಗೊತ್ತಾಯಿತು ಎನ್ನುವಾಗ, ತಾವು ಇದಕ್ಕೆ ಸಹಕಾರ ನೀಡುವುದಿಲ್ಲ ಎಂಬಂತೆ ತೋರಿಸಿಕೊಳ್ಳುತ್ತಾರೆ, ಎಲ್ಲವೂ ತಂದೆಯ ನೆರಳಿನಲ್ಲೇ ನಡೆಯುತ್ತದೆ. ಇವರು ಇಷ್ಟೊಂದು ಕಠೋರವಾಗಿದ್ದರೆ ಆರಂಭದಲ್ಲಿಯೇ ಇದನ್ನು ಯಾಕೆ ಚಿವುಟಿ ಹಾಕಲಿಲ್ಲ ಎಂದು ಪ್ರಶ್ನಿಸುತ್ತಾರೆ.

ಇದರ ಬೆನ್ನಲ್ಲಿಯೇ ತಮ್ಮ ಮಗ ಅನ್ಯ ಧರ್ಮದ ಯುವತಿಯನ್ನು ಪ್ರೀತಿಸಿ ಮದುವೆಯಾಗುತ್ತೇನೆಂದು ಹೇಳಿದಾಗ ಯಾವುದೇ ವಿರೋಧವಿಲ್ಲದೆ ಅತ್ಯಂತ ಸರಳ ರೀತಿಯಲ್ಲಿ ಮಗನ ಮದುವೆಯನ್ನೂ ನೆರವೇರಿಸಿ ಪ್ರೀತಿ ಪಾತ್ರರಾಗುತ್ತಾರೆ. ಅಷ್ಟೇ ಅಲ್ಲ ಮದುವೆ ಎನ್ನುವುದು ಎರಡು ವ್ಯಕ್ತಿತ್ವಗಳ ಮಿಲನ, ಎರಡು ಕುಟುಂಬಗಳ ಸಮ್ಮಿಲನ, ಇದಕ್ಕೆ ಯಾಕೆ ಆಡಂಬರ, ಇದಕ್ಕೆ ಏಕೆ ಸಂಪತ್ತಿನ ಪ್ರದರ್ಶನ ಎಂದು ಪ್ರಶ್ನಿಸಿ ಎಲ್ಲರೂ ಕೂಡ ಅಚ್ಚರಿ ಪಡುವಂತೆ ಮದುವೆ ಮಾಡಿ ಮುಗಿಸಿದ ವ್ಯಕ್ತಿತ್ವ ವಿಶ್ವನಾಥ್ ಅವರದ್ದು. ತಾವು ಆಡಿದ ಮಾತಿನಿಂದ ಕಟ್ಟಿಕೊಂಡ ದ್ವೇಷದ ಪರಿಣಾಮವಾಗಿ ಚುನಾವಣಾ ರಾಜಕಾರಣದಲ್ಲಿ ಇನ್ನಿಲ್ಲದಂತೆ ನೆಲ ಕಚ್ಚಿದರೂ ಕೂಡ, ಅಷ್ಟೇ ಬೇಗ ಸಾವರಿಸಿಕೊಂಡು ಜನರ ಮದ್ಯೆ ತಮಾಷೆ ಮಾಡುತ್ತಾ ಮತ್ತೊಂದು ವಿವಾದವನ್ನು ಮೈಮೇಲೆಳೆದುಕೊಂಡು ಮುನ್ನಡೆಯುತ್ತಾರೆ.

ವಿಶ್ವನಾಥ್ ಹುಟ್ಟಿದ್ದು 1949ರಲ್ಲಿ ಅವರದ್ದು ಮೈಸೂರಿನ ಕೆ.ಆರ್. ನಗರ ತಾಲೂಕಿನ ಅಡಗೂರು ಗ್ರಾಮದ ಸಾಮಾನ್ಯ ರೈತ ಕುಟುಂಬ. ಪ್ರಾಥಮಿಕ ಶಿಕ್ಷಣವನ್ನು ಅಡಗೂರಿನಲ್ಲೇ ಪೂರ್ಣಗೊಳಿಸಿ, ನಂತರ ಪಿಯುಸಿವರೆಗೆ ಕೆಆರ್ ನಗರದಲ್ಲಿ ಕಲಿತು, ಉನ್ನತ ಶಿಕ್ಕಣಕ್ಕಾಗಿ ಮೈಸೂರು ನಗರ ಪ್ರವೇಶಿಸಿದರು. ಅಲ್ಲಿನ ಶಾರದಾ ವಿಲಾಸ್ ಕಾಲೇಜಿನಲ್ಲಿ ಬಿಎಸ್‍ಸಿ ಪದವಿ ಪಡೆದ ವಿಶ್ವನಾಥ್, ನಂತರ ಕಾನೂನು ಪದವಿ ಗಳಿಸಿದರು. ಕಾನೂನು ಪದವಿ ಬಳಿಕ ವಕೀಲಿ ವೃತ್ತಿ ಆರಂಭಿಸಿದ ಅವರು, ಬಿಡುವಿನ ಸಮಯದಲ್ಲಿ ಕೃಷಿಯಲ್ಲೂ ತೊಡಗುತ್ತಿದ್ದರು. ಇದರ ಪರಿಣಾಮ ವಿಶ್ವನಾಥ್ ಹುಟ್ಟುವಾಗ ಸಾಮಾನ್ಯ ಕುಟುಂಬವಾಗಿದ್ದ ಇವರ ಮನೆ, ನಂತರದ ದಿನಗಳಲ್ಲಿ ಸ್ವಲ್ಪ ಸ್ಥಿತಿವಂತ ಕುಟುಂಬ ಎಂದು ಪರಿಗಣಿಸುವಂತಾಯಿತು.

ಉಳುವವನೇ ಭೂಮಿ ಒಡೆಯ ಎಂಬ ತತ್ವದಿಂದ ಪ್ರೇರಿತರಾದ ಇವರು, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡು ಅಂದಿನ ಪ್ರಭಾವಿ ನಾಯಕ ದೇವರಾಜ ಅರಸು ಆಪ್ತವಲಯಕ್ಕೆ ಸೇರ್ಪಡೆಯಾದರು. ಈ ಸಮಯದಲ್ಲಿ ದೇಶಾದ್ಯಂತ ಜಾರಿಯಾದ ತುರ್ತುಪರಿಸ್ಥಿತಿ ವಿರೋಧಿಸಿ ದೊಡ್ಡ ಮಟ್ಟದಲ್ಲಿ ಆಂದೋಲನ ನಡೆಯುತ್ತಿದ್ದರೆ, ವಿಶ್ವನಾಥ್ ತಮ್ಮದೇ ಆದ ಯುವ ಪಡೆಯನ್ನು ಕಟ್ಟಿಕೊಂಡು ತುರ್ತುಪರಿಸ್ಥಿತಿಯನ್ನು ಬಲವಾಗಿ ಸಮರ್ಥಿಸತೊಡಗಿದರು. ತುರ್ತುಪರಿಸ್ಥಿತಿ ಬೆಂಬಲಿಸಿ ಹೋರಾಟವನ್ನೂ ಮಾಡಿದರು.

ಕೆಲವು ಹಿರಿಯ ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರು, ಚಿಂತಕರು ಮತ್ತು ಬರಹಗಾರರು ತುರ್ತುಪರಿಸ್ಥಿತಿಯನ್ನು  ಒಂದು ದು:ಸ್ವಪ್ನ ಎಂದು ಹೇಳಿದರೆ, ವಿಶ್ವನಾಥ್ ಇಂದಿಗೂ ಕೂಡಾ ಅದೊಂದು ಅತ್ಯುತ್ತಮ ಪ್ರಯೋಗ, ಭಾರತದಂತಹ ಸಾಂಪ್ರದಾಯಿಕ ರಾಷ್ಟ್ರಕ್ಕೆ ಇದರ ಆಗತ್ಯವಿತ್ತು ಎನ್ನುತ್ತಾರೆ. ತುರ್ತುಪರಿಸ್ಥಿತಿಯಿಂದ ಯಾರಿಗೆ ಎಷ್ಟು ನಷ್ಟ, ಅನ್ಯಾಯವಾಗಿದೆಯೋ ಆ ಬಗ್ಗೆ ತಮಗೆ ಅಷ್ಟೊಂದು ಕಾಳಜಿಯಿಲ್ಲ ಆದರೆ ತುರ್ತುಪರಿಸ್ಥಿತಿಯಿಂದ ಕರ್ನಾಟಕಕ್ಕೆ ಮಾತ್ರ ಭಾರಿ ಅನುಕೂಲವಾಗಿದೆ, ರಾಜ್ಯದ ಗೇಣಿದಾರರು, ಬಡವರ ಪಾಲಿಗೆ ತುರ್ತುಪರಿಸ್ಥಿತಿ ಎನ್ನುವುದು ವರದಾನವಾಯಿತು, ಇದಕ್ಕೆ ಪ್ರಮುಖ ಕಾರಣ ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಎನ್ನುತ್ತಾರೆ.

ಸಾಮಾಜಿಕ ಕಳಕಳಿಯುಳ್ಳ ಓರ್ವ ದಾರ್ಶನಿಕ, ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದರೆ, ಎಂತಹ ಕ್ಲಿಷ್ಟ ಪರಿಸ್ಥಿತಿಯನ್ನೂ ಹೇಗೆ ಬಳಸಿಕೊಳ್ಳಬಹುದು ಎನ್ನುವುದಕ್ಕೆ ದೇವರಾಜ ಅರಸು ಮತ್ತು ತುರ್ತುಪರಿಸ್ಥಿತಿಗಿಂತ ದೊಡ್ಡ ಉದಾಹರಣೆ ಮತ್ತೊಂದು ಸಿಗುವುದಿಲ್ಲ ಎಂದು ವಿಶ್ವನಾಥ್ ಹೇಳುತ್ತಾರೆ. ತುರ್ತುಪರಿಸ್ಥಿತಿಯನ್ನು ಸಮರ್ಥವಾಗಿ ಬಳಸಿಕೊಂಡ ದೇವರಾಜ ಅರಸು, ಭೂಸುಧಾರಣೆ ಪದ್ಧತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದರು. ಬಡ್ಡಿ, ಚಕ್ರಬಡ್ಡಿ  ಹೆಸರಲ್ಲಿ ರೈತರ ಸುಲಿಗೆಯನ್ನು ತಪ್ಪಿಸಿ, ಎಲ್ಲಾ ರೈತರನ್ನು ಋಣಮುಕ್ತರನ್ನಾಗಿ ಮಾಡಿದರು. ಇದರಿಂದ ಅನೇಕ ಕುಟುಂಬಗಳ ಶಾಪ ವಿಮೋಚನೆಯಾಯಿತು. ತುರ್ತುಪರಿಸ್ಥಿತಿ ಇಲ್ಲದೆ ಹೋಗಿದ್ದರೆ ಇಂತಹ ಕ್ರಾಂತಿಕಾರಕ ಸುಧಾರಣೆ ಸಾಧ್ಯವೇ ಇರಲಿಲ್ಲ ಎಂದು ವಿಶ್ವನಾಥ್ ವಾದಿಸುತ್ತಾರೆ.  ಹೀಗಾಗಿ ಕರ್ನಾಟಕದ ಮಟ್ಟಿಗೆ ತುರ್ತುಪರಿಸ್ಥಿತಿ ವರದಾನವಾಯಿತು. ಇಡೀ ದೇಶದಲ್ಲೇ ಭೂ ಸುಧಾರಣೆ ಕಾಯಿದೆ ಮೂಲಕ ರೈತರಿಗೆ ಭೂಮಿಯ ಹಕ್ಕು ನೀಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಪಡೆಯಲು ಸಾಧ್ಯವಾಯಿತು. ಲಕ್ಷಾಂತರ ಕುಟುಂಬಗಳು ಋಣಮುಕ್ತವಾದವು. ಹೀಗಾಗಿ ಇಂತಹ ನಿಷ್ಠುರ ಕ್ರಮವೊಂದರ ಆಗತ್ಯವಿತ್ತು ಎನ್ನುತ್ತಾರೆ.

ಇಂತಹ ಪ್ರತಿಪಾದನೆ ಫಲವಾಗಿ ಮೈಸೂರಿನ  ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಿಂದ 1978ರಲ್ಲೇ ಶಾಸಕರಾಗಿ ಆಯ್ಕೆಯಾಗಿ ಗಮನ ಸೆಳೆದ ವಿಶ್ವನಾಥ್, 1984ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಆಲೆಯಲ್ಲಿ ಕೊಚ್ಚಿಹೋಗುತ್ತಾರೆ. ಅದಕ್ಕೆ ಪ್ರಮುಖ ಕಾರಣ ವಿಶ್ವನಾಥ್ ವಿರುದ್ದ ಇರುವ ಸಾಂಪ್ರದಾಯಿಕ ದೂರು. ವಿಶ್ವನಾಥ್ ಜನಪ್ರತಿನಿದಿಯಾಗಿ ಆಯ್ಕೆಯಾದ ನಂತರ ತಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ಸುಲಭವಾಗಿ ಸಿಗುವುದಿಲ್ಲ. ತಮ್ಮ ಪ್ರತಿನಿಧಿಯ ಬೇಟಿಗಾಗಿ ಮತದಾರರು ದಿನಗಟ್ಟಲೆ ಕಾಯಬೇಕು ಎನ್ನುವ ಆರೋಪ ಈಗಲೂ ಇದ್ದಿದ್ದೆ. ವಿಶ್ವನಾಥ್ ತಮ್ಮ ಸುತ್ತ ಕೆಲವೇ ಮಂದಿಯ ಕೋಟೆ ನಿರ್ಮಿಸಿಕೊಳ್ಳುತ್ತಾರೆ. ಹೀಗಾಗಿ ಯಾರೂ ಅವರನ್ನು ಸುಲಭವಾಗಿ ಭೇಟಿಮಾಡಲು ಸಾಧ್ಯವಿಲ್ಲ ಎನ್ನುವ ದೂರು ಜನಜನಿತ. ತಾವು ಆಯ್ಕೆ ಮಾಡಿದ ಪ್ರತಿನಿಧಿ ತಮ್ಮ ಎಲ್ಲಾ ಕಷ್ಟ ಸುಖಗಳಿಗೆ ಸ್ಪಂದಿಸಬೇಕು ಎನ್ನುವುದು ಮತದಾರರ ತುಡಿತ ಆದರೆ, ವಿಶ್ವನಾಥ್ ಧೋರಣೆ ಇದಕ್ಕೆ ವ್ಯತಿರಿಕ್ತ, ತಾವು ತಮ್ಮನ್ನು ಆಯ್ಕೆ ಮಾಡಿದ ಮತದಾರ ಪ್ರಭುವಿನ ಸೇವಕ ಎಂದು ಹೇಳಿದರೂ ಕೂಡ, ಕೃತಿಯಲ್ಲಿ ಅವರ ವರ್ತನೆ ಹಾಗಿಲ್ಲ ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರ ಅನಿಸಿಕೆ.

ಶಾಸಕರಾಗಿ ಆಯ್ಕೆಯಾಗುವವರೆಗೂ ವಿಶ್ವನಾಥ್, ಬೇಕೆಂದಾಗಲೆಲ್ಲಾ ಮತದಾರರಿಗೆ ಸಿಗುತ್ತಾರೆ. ಆಯ್ಕೆಯಾದ ನಂತರ ಜನರ ಸಂಪರ್ಕಕ್ಕೆ ಬರುವುದಿಲ್ಲ. ಕ್ಷೇತ್ರಕ್ಕೆ ಬರುವುದೇ ಅಪರೂಪ, ಬೆಂಗಳೂರು ಅಥವಾ ಮೈಸೂರು ಇವರ ಕೇಂದ್ರಗಳಾಗುತ್ತವೆ. ಇವರ ಭೇಟಿಗಾಗಿ ಮತದಾರ ಬೆಂಗಳೂರು ಇಲ್ಲವೇ ಮೈಸೂರಿಗೆ ಬರಬೇಕು, ಅಲ್ಲಿಗೆ ಬಂದರೂ ಕೂಡಾ ಇವರು ಸಿಗುವುದು ಅಪರೂಪ. ಇವರ ಸುತ್ತಲೂ ಇರುವ ಕೆಲವೇ ಸ್ನೇಹಿತರಿಗೆ ಮಾತ್ರ ಇವರು ಎಲ್ಲಿರುತ್ತಾರೆ ಎಂಬ ಮಾಹಿತಿ ಇರುವುದು ಬಿಟ್ಟರೆ, ಬೇರೆ ಯಾರಿಗೂ ಇವರು ಎಲ್ಲಿರುತ್ತಾರೆ ಎನ್ನುವುದು ಗೊತ್ತಿರುವುದಿಲ್ಲ ಎಂಬ ಆರೋಪ ಇದೆ. ಇದಕ್ಕಾಗಿಯೇ ಮತದಾರರು ಇವರನ್ನು ಹಲವು ಬಾರಿ ಮಾಜಿ ಮಾಡಿದ್ದಾರೆ. ಮತ್ತೆ ನಡೆದ ಚುನಾವಣೆಯಲ್ಲಿ ಮತ್ತೆ ಆಯ್ಕೆ ಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ಇವರ ನ್ಯಾಯಪರತೆ ಮತ್ತು ಭ್ರಷ್ಟಾಚಾರ ರಹಿತ ವ್ಯಕ್ತಿತ್ವ. ಶಾಸಕರಾಗಿ ಮತದಾರರ ವೈಯಕ್ತಿಕ ಕಷ್ಟ-ಸುಖಗಳಿಗೆ ಸ್ಪಂದಿಸದೇ ಹೋದರೂ, ಇಡೀ ಕ್ಷೇತ್ರದ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾರೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿರುವ ಅಧಿಕಾರಿಗಳು ಕೆಲಸ ಮಾಡಲು ಬಿಡುವುದಿಲ್ಲ. ಕೆ.ಆರ್.ನಗರ ಸುತ್ತ ಮುತ್ತ ವ್ಯಾಪಕ ಅಕ್ರಮ ಮರಳು ದಂಧೆಯಂತಹ ಕೃತ್ಯಗಳಿಗೆ ಇವರು ಸಿಂಹಸ್ವಪ್ನ ಎಂಬ ಗುಣಗಾನ ಇವರನ್ನು ಶಾಸಕರನ್ನಾಗಿ ಆಯ್ಕೆ ಮಾಡುತ್ತದೆ. ವಿಶ್ವನಾಥ್ ಕಷ್ಟ ಅಥವಾ ಹಿನ್ನಡೆ ಅನುಭವಿಸಿದರೆ, ಅದಕ್ಕೆ ಅವರ ಬಾಯಿ ಕಾರಣಕ್ಕೆ ಹೊರತು ಗುಣ ಅಥವಾ ವ್ಯಕ್ತಿತ್ವ ಕಾರಣವಲ್ಲ.

ಹೀಗಾಗಿ, ಇವರು ಏನೇ ಅಂದರೂ ಕೂಡಾ ಜನ ಇವರನ್ನು ಪ್ರೀತಿಸುತ್ತಾರೆ, ಆಯ್ಕೆ ಮಾಡುತ್ತಾರೆ. ಇದೇ ರೀತಿ ವಿಶ್ವನಾಥ್ ಕೂಡಾ ತಮ್ಮ ಬಳಿ ಬರುವ ಮತದಾರನನ್ನು ಗದರಿಸಿದರೂ ಕೂಡ, ಅವರ ಕಷ್ಟಕ್ಕೆ ಮರುಗುತ್ತಾರೆ. ಶಾಸಕರಿಂದ ಬೈಸಿಕೊಂಡ ಮತದಾರ ತನ್ನ ಮನೆ ತಲುಪುವಷ್ಟರಲ್ಲಿ ಆತನ ಕಷ್ಟ ಬಗೆಹರಿದಿರುತ್ತದೆ. ತನ್ನ ಅರಿವಿಗೆ ಬಾರದಂತೆಯೇ ಕಷ್ಟ ತೀರಿಸುತ್ತಾರೆಂಬ ಕಾರಣಕ್ಕೆ ಮತದಾರ ವಿಶ್ವನಾಥ್ ಅವರ ಕೈಹಿಡಿಯುತ್ತಿದ್ದಾನೆ. ಆದರೆ, ಜಾತಿ ಮತ್ತು ವ್ಯವಸ್ಥೆ ಪರಿಣಾಮವಾಗಿ ವಿಶ್ವನಾಥ್ ಸಾಕಷ್ಟು ಹೊಡೆತ ಅನುಭವಿಸಿದ್ದಾರೆ. ತೀರಾ ಹಿಂದುಳಿದ ಸಮುದಾಯಗಳು ಸದಾ ವಿಶ್ವನಾಥ್ ಬೆನ್ನಿಗೆ ನಿಂತರೆ, ಪ್ರಭಾವಿ ಸಮುದಾಯಗಳು ವಿರೋಧಿಸುತ್ತಲೇ ಬಂದಿವೆ. ರಾಜಕೀಯವಾಗಿ ಏಳಿಗೆ ಪಡೆಯಲು ಪ್ರಭಾವಿ ಸಮುದಾಯಗಳನ್ನು ಒಲೈಸುವ ವಿಶ್ವನಾಥ್, ಚುನಾವಣೆ ಮುಗಿದ ನಂತರ ಮತ್ತೆ ತಮ್ಮ ಹಳೆಯ ಚಾಳಿ ಮುಂದುವರೆಸುತ್ತಾರೆ. ಮೇಲ್ವರ್ಗಗಳನ್ನು ಎದುರು ಹಾಕಿಕೊಳ್ಳುತ್ತಾರೆ. ತಮ್ಮ ರಾಜಕೀಯ ಗುರು ದೇವರಾಜು ಅರಸು ಅವರ ಕನಸಿನಂತೆ ಶೋಷಿತ ಸಮುದಾಯಗಳ ಪರ ನಿಲ್ಲುತ್ತಾರೆ. ಹೀಗಾಗಿ ಮತ್ತೆ ಬರುವ ಚುನಾವಣೆಯಲ್ಲಿ ಪ್ರಭಾವಿ ಸಮುದಾಯಗಳು ಇವರ ವಿರುದ್ಧ ಕೆಲಸ ಮಾಡುತ್ತವೆ. ಹೀಗಾಗಿ ಮತ್ತೆ ಇವರು ಮಾಜಿಯಾಗುತ್ತಾರೆ. ಇದರಿಂದಾಗಿಯೇ, ನಾಲ್ಕು ದಶಕದ ಸುದೀರ್ಘ ರಾಜಕೀಯ ಬದುಕಿನಲ್ಲಿ ವಿಶ್ವನಾಥ್, ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಮಾತ್ರ ಸಂಸದರಾಗಿ ಆಯ್ಕೆಯಾಗಲು ಸಾಧ್ಯವಾಗಿರುವುದು.

1989ರಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ವಿಶ್ವನಾಥ್, ಅಂದು ಮುಖ್ಯಮಂತ್ರಿಯಾಗಲು ಎಸ್.ಎಂ.ಕೃಷ್ಣ ನಡೆಸಿದ ಪ್ರಯತ್ನಗಳ ವಿರುದ್ಧ ನಿಲ್ಲುವ ಮೂಲಕ ಗಮನ ಸೆಳೆದರು. ಹೀಗಾಗಿ ವಿಶ್ವನಾಥ್ ಅವರು, ಒಕ್ಕಲಿಗ ಸಮುದಾಯದ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡರು. ಇವರ ತತ್ವ ಸಿದ್ಧಾಂತದಿಂದ ಪ್ರೇರಿತರಾದ ಅಂದಿನ ಸಿಎಂ ವೀರಪ್ಪ ಮೊಯ್ಲಿ ಇವರನ್ನು ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜವಾಬ್ದಾರಿ ನೀಡಿದರು. ಮಂತ್ರಿಯಾಗುತ್ತಿದ್ದಂತೆ ಸರ್ಕಾರದ ನಿಧಿ ಪಡೆಯಲೆಂದೇ ಕಟ್ಟಿಕೊಂಡ ಸಂಘ-ಸಂಸ್ಥೆಗಳಿಗೆ ಅನುದಾನ ನಿಲ್ಲಿಸಿದ ವಿಶ್ವನಾಥ್, ಹಲವರ ಕೆಂಗಣ್ಣಿಗೆ ಗುರಿಯಾದರು. ಪರಿಣಾಮ 1994ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ತಿರಸ್ಕರಿಸಲ್ಪಟ್ಟರು.

1999ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಆಯ್ಕೆಯಾದ ವಿಶ್ವನಾಥ್, ಅಂದು ಪಕ್ಷ ಮುನ್ನಡೆಸಿದ ಎಸ್‍ಎಂ ಕೃಷ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಮಂತ್ರಿಯಾದರು. ಆದರೂ ಇವರು ಎಸ್.ಎಂ. ಕೃಷ್ಣ ಅವರನ್ನು ಒಲೈಸಲಿಲ್ಲ. ಕೃಷ್ಣ ಕಾಂಗ್ರೆಸ್ ಸಾರಥ್ಯ ವಹಿಸಿಕೊಳ್ಳುವ ಮುನ್ನ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದು ಮಲ್ಲಿಕಾರ್ಜುನ್ ಖರ್ಗೆ, ಧರಂ ಸಿಂಗ್ ಮತ್ತು ಎಚ್.ಕೆ.ಪಾಟೀಲ್. ಪ್ರತಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ್ ಖರ್ಗೆ ತೋರಿದ ಜಾಣ್ಮೆ ಚಾತುರ್ಯದ ಪರಿಣಾಮ, ಕಾಂಗ್ರೆಸ್ ಪಕ್ಷದ ಗತವೈಭವ ಮರಳಿತ್ತು. ಹೀಗಾಗಿ ಸಿಎಂ ಆಗಬೆಕಾಗಿದ್ದು ಎಸ್.ಎಂ ಕೃಷ್ಣ ಅಲ್ಲ ಮಲ್ಲಿಕಾರ್ಜುನ ಖರ್ಗೆ ಎಂದು ಪ್ರತಿಪಾದಿಸಿ ಎಸ್.ಎಂ ಕೃಷ್ಣ ಹಾಗೂ ಅವರ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾದರು.

ಮುಖ್ಯಮಂತ್ರಿಯಾಗಿ ಎಸ್.ಎಂ. ಕೃಷ್ಣ ತಮ್ಮ ನಾಯಕರು, ತಾವು ಅವರ ಸಂಪುಟದಲ್ಲಿ ಮಂತ್ರಿ ಹೀಗಾಗಿ ತಮ್ಮ ಶಾಸಕಾಂಗ ಪಕ್ಷದ ನಾಯಕನಿಗೆ ತಮ್ಮ ನಿಷ್ಠೆಯಿದೆ, ಆದರೆ ನ್ಯಾಯಯುತವಾಗಿ ಸಿಎಂ ಹುದ್ದೆ ಸಿಗಬೇಕಾಗಿದ್ದು ಮಲ್ಲಿಕಾರ್ಜುನ ಖರ್ಗೆ ಅವರಿಗೆ, ಆದರೆ ಅದರಿಂದ ಅವರನ್ನು ವಂಚಿಸಲಾಗಿದೆ ಎಂದು ಬಹಿರಂಗವಾಗಿಯೇ ನಿಲುವು ಪ್ರತಿಪಾದಿಸಿದ್ದರು. ಇದು ನಂತರದಲ್ಲಿ ದೊಡ್ಡ ಪರಿಣಾಮವನ್ನೇ ಬೀರಿತು. ಶಿಕ್ಷಣ ಮಂತ್ರಿಯಾಗಿ ಹಲವು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡರು. ಶಿಕ್ಷಕರಿಗೆ ಗ್ರಾಮವಾಸ್ತವ್ಯ, ಸಮುದಾಯದತ್ತ ಶಾಲೆ ಎಂಬ ಕಾರ್ಯಕ್ರಮ ರೂಪಿಸಿದರು. ಶಿಕ್ಷಕರಿಗೆ ನೂತನ ಶಿಕ್ಷಣ ಪದ್ಧತಿ ಬಗ್ಗೆ ತರಬೇತಿ ಅಗತ್ಯವಿದೆ, ಬಹುತೇಕ ಶಿಕ್ಷಕರು ಪಾಠ ಮಾಡುವುದನ್ನು ಬಿಟ್ಟು ರಾಜಕಾರಣ ಮತ್ತು ಚೀಟಿ ವ್ಯವಹಾರದಲ್ಲಿ ಕಾಲ ಕಳೆಯುತ್ತಾರೆ. ಎಂದು ಬಹಿರಂಗವಾಗಿ ಹೇಳುವ ಮೂಲಕ ಶಿಕ್ಷಕ ಸಮುದಾಯದ ವಿರೋಧವನ್ನು ಕಟ್ಟಿಕೊಂಡರು.

ರಾಜ್ಯದಲ್ಲಿ ಹಲವು ಮಠಗಳ ಒಡೆತನದಲ್ಲಿ ಅನೇಕ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಿವೆ. ಈ ಸಂಸ್ಥೆಗಳು ಸರ್ಕಾರದ ಮೇಲೆ ತಮ್ಮದೇ ಆದ ಪ್ರಭಾವ ಬೀರಿವೆ. ಶಿಕ್ಷಣ ಮಂತ್ರಿಯಾಗಿದ್ದ ವಿಶ್ವನಾಥ್ ಅವರಿಗೆ ಮಠಾಧೀಶರೊಬ್ಬರು ಕರೆ ಮಾಡಿ, ತಮ್ಮ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಕಡತವೊಂದನ್ನು ತೆಗೆದುಕೊಂಡು ಮಠಕ್ಕೆ ಬರುವಂತೆ ಹೇಳಿದರು ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ವಿಶ್ವನಾಥ್ ತಮಗೆ ವಿಧಾನಸೌಧವೇ ದೇವಾಲಯ, ಮಠ ಎಲ್ಲವೂ, ನೀವೇ ನಿಮ್ಮ ಶಾಲೆಯ ಬಗ್ಗೆ ಮಾಹಿತಿ ಪಡೆಯಲು ವಿಧಾನ ಸೌಧದ ತಮ್ಮ ಕಚೇರಿಗೆ ಬರುವಂತೆ ಉತ್ತರ ನೀಡಿದರು. ಅಷ್ಟೇ ಅಲ್ಲ ಈ ಸಂಗತಿಯನ್ನು ಮಾಧ್ಯಮಗಳಿಗೆ ತಿಳಿಸಿ, ಮಠ ಎಂದಿದ್ದರೂ ಮಠವೇ, ಮಠ ಎಂದಿಗೂ ವಿಧಾನಸೌಧ ವಾಗಲು ಸಾಧ್ಯವೇ ಇಲ್ಲ. ವಿಧಾನಸೌಧ ಪ್ರಜಾಸತ್ತೆಯ ದೊಡ್ಡ ದೇವಾಲಯ. ಇಲ್ಲಿಗೆ ಯಾವುದೇ ಮಠವಾಗಲಿ  ಬರಬೇಕು ಎಂದು ಹೇಳಿ ಮೈಮೇಲೆ ಎಳೆದುಕೊಂಡರು. ಅಷ್ಟೇ ಅಲ್ಲ ಇದಕ್ಕಾಗಿ ಶಿಕ್ಷಣ ಇಲಾಖೆಯ ಜವಾಬ್ದಾರಿಯಿಂದ ಬಿಡುಗಡೆ ಹೊಂದಿ ಸಹಕಾರ ಮಂತ್ರಿಯಾಗುವಂತಾಯಿತು. ಸಹಕಾರ ಮಂತ್ರಿಯಾದವರೇ ಈ ಹಿಂದೆ ಈ ಹುದ್ದೆಯಲ್ಲಿದ್ದ ಡಿ.ಕೆ. ಶಿವಕುಮಾರ್ ಕೈಗೊಂಡಿದ್ದ ಹಲವು ತೀರ್ಮಾನ ರದ್ದು ಮಾಡಿದರು. ಈ ಮೂಲಕ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡರು. ವಿರೋಧಿಗಳ ಸಂಖ್ಯೆ ಹೆಚ್ಚು ಮಾಡಿಕೊಂಡರು. ಆದರೂ ವಿಚಲಿತರಾಗದೇ ಸಿಎಂ ಆಗಿದ್ದ ಕೃಷ್ಣ ಅವರ ಮನವೊಲಿಸಿ ಯಶಸ್ವಿನಿ ಮತ್ತು ಸ್ತ್ರೀಶಕ್ತಿಯಂತಹ ಯೋಜನೆ ರೂಪಿಸಿದರು.

ಶಿಕ್ಷಣ ಇಲಾಖೆಯಲ್ಲಿ ರೂಪಿಸಿದ ಅಕ್ಷರ ದಾಸೋಹ, ಅಂದಿನ ಸರ್ಕಾರಕ್ಕೆ ದೊಡ್ಡ ಹೆಸರು ತಂದು ಕೊಟ್ಟಂತೆ, ಯಶಸ್ವಿನಿ, ಸ್ತೀಶಕ್ತಿ ಯೋಜನೆ ಕೂಡಾ ದೊಡ್ಡ ಮಟ್ಟದಲ್ಲಿ ಹೆಸರು ತಂದು ಕೊಟ್ಟಿತು. ಎಸ್.ಎಂ. ಕೃಷ್ಣ ಅವರನ್ನು ನಾಯಕರಾಗಿ ವಿರೋಧಿಸುತ್ತಲೇ ಮುಖ್ಯಮಂತ್ರಿಯಾಗಿ ಗೌರವಿಸತೊಡಗಿದರು. ಎಸ್.ಎಂ ಕೃಷ್ಣ ನೇತೃತ್ವದ ಸರ್ಕಾರ, ರಾಜ್ಯ ಕಂಡ ಅತ್ಯುತ್ತಮ ಸರ್ಕಾರ, ಈ ಸರ್ಕಾರದ ಅವಧಿಯ ಒಂದೊಂದು ಯೋಜನೆ ಕೂಡಾ ಮೈಲುಗಲ್ಲುಗಳೇ, ಆದರೆ, ಈ ಸರ್ಕಾರಕ್ಕೆ, ಎಸ್.ಎಂ. ಕೃಷ್ಣ ಅವರಿಗೆ ಕೆಟ್ಟ ಹೆಸರು ತಂದಿದ್ದು ಡಿ.ಕೆ. ಶಿವಕುಮಾರ್. ಗುಂಡೂರಾವ್ ನೇತೃತ್ವದ ಸರ್ಕಾರದ ವರ್ಚಸ್ಸಿಗೆ ಓರ್ವ ಎಫ್.ಎಂ. ಖಾನ್ ಕಳಂಕ ಬಳಿದಂತೆ, ಎಸ್.ಎಂ. ಕೃಷ್ಣ ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಕಂಟಕವಾಗಿದ್ದಾರೆ. ಕೃಷ್ಣ ಅವರು, ಶಿವಕುಮಾರ್ ಅವರನ್ನು ನಿಯಂತ್ರಣದಲ್ಲಿ ಇಟ್ಟರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ್ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಿ ಮತ್ತೆ ಒಕ್ಕಲಿಗರ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡರು. ಇದರ ಪರಿಣಾಮ 2004ರ ವಿಧಾನಸಭಾ ಚುನಾವಣೆಯಲ್ಲಿ ಸೋತರು. ಇದಾದ ಬಳಿಕ ಮತ್ತೊಂದು ರೀತಿಯ ರಾಜಕೀಯ ಆರಂಭಿಸಿದರು. ಜೆಡಿಎಸ್‍ನಲ್ಲಿ ಸಿಎಂ ಹುದ್ದೆ ತಪ್ಪಿ, ಡಿಸಿಎಂ ಆದ ಸಿದ್ದರಾಮಯ್ಯ ಅಹಿಂದ ಚಳುವಳಿ ಮೂಲಕ ಗಮನ ಸೆಳೆದಾಗ ವಿಶ್ವನಾಥ್ ಅವರು ಸಿದ್ದರಾಮಯ್ಯ ಆಪ್ತವಲಯಕ್ಕೆ ಸೇರ್ಪಡೆಯಾದರು.

ಜೆಡಿಎಸ್ ಬಿಟ್ಟು ಕಾಂಗ್ರೆಸ್‍ಗೆ ಬರುವಂತೆ ಸಿದ್ದರಾಮಯ್ಯ ಅವರ ಮನವೊಲಿಕೆ ಆರಂಭಿಸಿದರು. ಈ ಸಮಯದಲ್ಲಿ ವಿಶ್ವನಾಥ್ ಅವರ ಅನೇಕ ಆಪ್ತರು ಕಾಂಗ್ರೆಸ್‍ನಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಪ್ರಭಾವಿ ನಾಯಕ ನೀವು, ಸಿದ್ದರಾಮಯ್ಯ ಅವರನ್ನು ಕರೆತಂದರೆ ನಿಮ್ಮ ಸ್ಥಾನ ಏನಾಗಲಿದೆ, ಅಷ್ಟೇ ಅಲ್ಲ ನೀವು ಸ್ಪರ್ಧಿಸುತ್ತಿರುವ ಕೆ.ಆರ್.ನಗರ ಕ್ಷೇತ್ರ ಕೂಡ ಬಿಡಬೇಕಾದೀತು. ಅಲ್ಲಿ ಸಿದ್ದರಾಮಯ್ಯ ಅವರ ಆಪ್ತ ಮಂಚನಹಳ್ಳಿ ಮಹಾದೇವ್ ಇದ್ದಾರೆ ಎಂದು ಹೇಳಿದರೆ, ಅವರಿಗೆ, ವಿಶ್ವನಾಥ್ ನಾನು ಕಾಂಗ್ರೆಸ್ ಮುಖಂಡ ಅಷ್ಟೇ, ಸಿದ್ದರಾಮಯ್ಯ ಕುರುಬ ಸಮುದಾಯದ ಪ್ರಭಾವಿ ನಾಯಕ, ಹಿಂದುಳಿದ ವರ್ಗಗಳ ಪರ ಕಾಳಜಿಯುಳ್ಳವರು, ಅವರು ನಮ್ಮ ಪಕ್ಷಕ್ಕೆ ಬರಬೇಕು ಎಂದು ಹೇಳಿ ಕರೆತಂದರಷ್ಟೇ ಅಲ್ಲ, ಸಿದ್ದರಾಮಯ್ಯ ಆಪ್ತನಿಗಾಗಿ ತಮ್ಮ ಕ್ಷೇತ್ರವನ್ನೂ ತೆರವು ಮಾಡಿದರು.

ಇದಕ್ಕೆ ಪ್ರತಿಫಲವೇನೋ ಎಂಬಂತೆ ಮೈಸೂರು-ಮಡಿಕೇರಿ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಈ ಅವಧಿಯಲ್ಲಿ ಬಿಜೆಪಿಯ ಕಡು ವಿರೋಧಿಯಾದರು. ಬಿಜೆಪಿಯ ಹಿಂದೂ ಪರ ಧೋರಣೆಗಳನ್ನು ಬಲವಾಗಿ ಟೀಕಿಸತೊಡಗಿದರು. ಇದು ಸಹಜವಾಗಿ ಕೊಡಗು ಜಿಲ್ಲೆಯ ಹಿಂದೂ ಪರ ಬಲವುಳ್ಳ ಮತದಾರರಿಗೆ ತೀವ್ರ ಅಸಮಾಧಾನ ಹುಟ್ಟುವಂತೆ ಮಾಡಿತು.  ಸಂಸದರಾಗಿದ್ದ ಅವಧಿಯಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡರ ಕಡು ವಿರೋಧಿಯಾದರು. ದೇವೇಗೌಡರನ್ನು ಆಧುನಿಕ ಭಸ್ಮಾಸುರ ಎಂದು ಟೀಕಿಸುವ ಮೂಲಕ ಮತ್ತೊಮ್ಮೆ ವಿಶ್ವನಾಥ್ ಒಕ್ಕಲಿಗರ ವಿರೋಧಿ ಎಂದು ಹಣೆಪಟ್ಟಿ ಕಟ್ಟಿಕೊಂಡರು.  ಪರಿಣಾಮವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕೃಪಾಶಿರ್ವಾದ ಇದ್ದರೂ ದೇವೇಗೌಡರ ರಾಜಕೀಯ ಜಾಣ್ಮೆಯ ಎದುರು ಮತ್ತೆ ಸೋತು ಮಾಜಿಯಾಗಬೇಕಾಯಿತು.

ಮಾಜಿಯಾದ ಕೆಲ ದಿನ ಸುಮ್ಮನಿದ್ದ ವಿಶ್ವನಾಥ್ ಮತ್ತೆ ತಮ್ಮ ಹಳೇ ಚಾಳಿ ಆರಂಭಿಸಿದರು. ರಾಜ್ಯ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದರು. ಮೈಸೂರು ಗಡಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪ್ರಭಾವಿ ಮಂತ್ರಿಯೊಬ್ಬರ ಪುತ್ರನ ನೆರಳು ಕಾಣುತ್ತಿದ್ದು, ಸರ್ಕಾರ ಅವರನ್ನು ನಿಯಂತ್ರಿಸಬೇಕು ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದರು. ಇದನ್ನು ಸಿದ್ದರಾಮಯ್ಯನವರು ಪರಿಗಣಿಸದೇ ಹೋದಾಗ ಅವರ ಎಂ ವಿರುದ್ಧವೇ ತಿರುಗಿ ಬಿದ್ದರು. ಅಷ್ಟೇ ಅಲ್ಲ ಸಿಎಂ ಪುತ್ರ ದಿವಂಗತ ರಾಕೇಶ್ ಕಾರ್ಯ ವೈಖರಿಯ ಬಗ್ಗೆಯೂ ಕಿಡಿಕಾರಿದ್ದರು. ರಾಜ್ಯದಲ್ಲಿ ಪುತ್ರರ ಸಾಮ್ರಾಜ್ಯ ನಡೆಯುತ್ತಿದೆ, ಪುತ್ರ ವ್ಯಾಮೋಹದಲ್ಲಿ ಹಲವರು ಕುರುಡರಾಗುತ್ತಿದ್ದಾರೆ, ಪುತ್ರಾಡಳಿತದಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದೆ. ಎಂದು ಹೇಳುವ ಮೂಲಕ ದೊಡ್ಡ ಪ್ರಮಾಣದಲ್ಲಿ ವಿರೋಧಿ ಪಡೆಯನ್ನು ಕಟ್ಟಿಕೊಂಡರು. ಸಿದ್ದರಾಮಯ್ಯ ಬಹುವಾಗಿ ಇಷ್ಟ ಪಡುತ್ತಿದ್ದ ಇವರನ್ನು ಮುಖಕೊಟ್ಟು ನೋಡಲಾರದಂತಹ ಸ್ಥಿತಿ ತಂದಿಟ್ಟುಕೊಂಡರು. ಇದೇ ಅವಧಿಯಲ್ಲಿ ಶ್ರೀನಿವಾಸ್ ಪ್ರಸಾದ್, ಜನಾರ್ದನ ಪೂಜಾರಿ, ಎಂ.ವಿ. ರಾಜಶೇಖರನ್ ಸೇರಿದಂತೆ ಹಲವರು ಸರ್ಕಾರದ ವಿರುದ್ಧ ದ್ವನಿ ಎತ್ತಿದಾಗ ತಾವೂ ದನಿಗೂಡಿಸಿದರು. ಅಷ್ಟೇ ಅಲ್ಲ ರಾಜ್ಯದಲ್ಲಿ ದಲಿತರೊಬ್ಬರು ಸಿಎಂ ಆಗಬೇಕೆಂಬ ವಾದ ಮಂಡಿಸಿದರು. ಹಿಂದೆ ಎಸ್.ಎಂ. ಕೃಷ್ಣ ಅವರ ಕಾರಣಕ್ಕೆ ಖರ್ಗೆ ಈ ಹುದ್ದೆಯಿಂದ ವಂಚಿತರಾದರೆ, ಇಂದು ಸಿದ್ದರಾಮಯ್ಯ ಕಾರಣಕ್ಕೆ ಪರಮೇಶ್ವರ್ ಈ ಹುದ್ದೆಯಿಂದ ವಂಚಿತರಾದರು ಎಂದು ಹೇಳುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದರು.

ಇದರ ಪರಿಣಾಮ ಕಾಂಗ್ರೆಸ್‍ನಿಂದ ಹೊರಹೋಗುವ ಪರಿಸ್ಥಿತಿ ತಂದಿಟ್ಟುಕೊಂಡರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಸೂಟ್‍ಕೇಸ್ ಗಿರಾಕಿ ಎಂದು ಸಂಬೋಧಿಸಿ ಪಕ್ಷದಿಂದ ಹೊರ ಹಾಕಿಸಿಕೊಳ್ಳುವ ಹಂತ ತಲುಪಿದರು. ಆದರೆ, ಇದಕ್ಕೆ ಆಸ್ಪದ ನೀಡದೆ ತಾವೇ ಕಾಂಗ್ರೆಸ್‍ನಿಂದ ಹೊರ ನಡೆದ ಹೆಚ್.ವಿಶ್ವನಾಥ್, ಇದೀಗ ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಹುಣಸೂರು ಕ್ಷೇತ್ರದಿಂದ ಮತ್ತೆ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. ಬುದ್ಧಿವಂತ ರಾಜಕಾರಣಿಯಾಗಿರುವ ಹೆಚ್.ವಿಶ್ವನಾಥ್ ಅವರಿಗೆ, ಒಬ್ಬ ದೊಡ್ಡ ನಾಯಕ ಮತ್ತು ಸಮಾಜ ಸುಧಾರಕ ಆಗುವ ಎಲ್ಲಾ ಅವಕಾಶಗಳಿದ್ದವು. ಆದರೆ, ಒಂದಿಷ್ಟು ಸೋಮಾರಿತನದ ಜೊತೆಗೆ, ಕೃತಿಗಿಂತ ಮಾತು ಹೆಚ್ಚಾದದ್ದರಿಂದ, ಅವರು ಹೆಚ್ಚಿನ ಸಾಧನೆ ಮಾಡಲು ಆಗಲಿಲ್ಲ. ಸುಮಾರು 40 ವರ್ಷಗಳ ಕಾಲ, ಕಾಂಗ್ರೆಸ್ ಪಕ್ಷದಲ್ಲಿದ ವಿಶ್ವನಾಥ್ ಅವರು, ಪಕ್ಷದಿಂದ ಹೊರನಡೆಯಲು ನಿರ್ಧರಿಸಿದಾಗ, ಒಬ್ಬನೇ ಒಬ್ಬ ನಾಯಕನೂ ವಿಶ್ವನಾಥ್ ಅವರು, ಕಾಂಗ್ರೆಸ್ ನಲ್ಲೇ ಇರಲಿ, ಬೇರೆಡೆ ಹೋಗುವುದು ಬೇಡ ಎಂದು ಹೇಳಲಿಲ್ಲ.

ಇತ್ತ, ಜೆಡಿಎಸ್ ನಲ್ಲೂ ಕೂಡ ಹೆಚ್.ವಿಶ್ವನಾಥ್ ಅವರಿಗೆ, ತೀರಾ ದೊಡ್ಡಮಟ್ಟದ ಸ್ವಾಗತವೇನೂ ಸಿಗಲಿಲ್ಲ. ಅದಲ್ಲದೆ, ಪಕ್ಷಕ್ಕೆ ಇವರ ಸೇರ್ಪಡೆ ನಂತರ, ಅಲ್ಲಿ  ಆಂತರಿಕ ಭಿನ್ನಾಭಿಪ್ರಾಯ ತಲೆದೋರಿ, ಪಕ್ಷವೇ ಒಡೆದುಹೋಗುವ ಹಂತ ತಲುಪಿತ್ತು.  70ರ ಹರೆಯದ ನಾನು, ರಾಜಕಾರಣದಿಂದ ಗೌರವಯುತ ವಿದಾಯದ ಸಿದ್ಧತೆಯಲ್ಲಿದ್ದೆ, ಆದರೆ, ಪರಿಸ್ಥಿತಿ ಮತ್ತೆ ನನ್ನನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಭಾವುಕರಾಗಿ ಹೇಳಿರುವ ವಿಶ್ವನಾಥ್, ಜೆಡಿಎಸ್ ಪಕ್ಷದಲ್ಲಿದ್ದುಕೊಂಡು ಏನು ಸಾಧಿಸಲಿದ್ದಾರೆ ಎಂಬುವುದನ್ನು ಕಾದು ನೋಡಬೇಕು.


ಒಂದು ಕಮೆಂಟನ್ನು ಬಿಡಿ