ಚೀನಾ ಜನರಿಗೆ ಚಿಂತೆಯಿಲ್ಲ…!25-07-2017 1041

ಕಳೆದ ಕೆಲವು ಸಮಯದಿಂದ, ಭಾರತ-ಚೀನಾ-ಭೂತಾನ್ ಗಡಿಗಳು ಸೇರುವ ಡೋಕ್ಲಾಮ್ ಪ್ರದೇಶ ತನಗೆ ಸೇರಿದ್ದೆಂದು ವಾದಿಸುತ್ತಿರುವ ಚೀನಾ ದೇಶ ಕಾಲುಕೆರೆದು ಜಗಳಕ್ಕೆ ನಿಂತಿದೆ. ಭೂತಾನ್‌ ದೇಶಕ್ಕೆ ಸೇರಿದ ಡೋಕ್ಲಾಮ್ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಚೀನಾ ದೇಶ  ಮುಂದಾಗಿತ್ತು,  ಇದನ್ನು ಭಾರತೀಯ ಸೈನಿಕರು ವಿರೋಧಿಸಿದ್ದರು. ಈ ವಿಚಾರ, ಎರಡೂ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದು, ಇದನ್ನು 1962ರ ಯುದ್ಧದ ಬಳಿಕ, ಭಾರತ-ಚೀನಾ ನಡುವೆ ಸೃಷ್ಟಿಯಾಗಿರುವ ಅತ್ಯಂತ ದೊಡ್ಡ ಬಿಕ್ಕಟ್ಟು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಭಾರತ ದೇಶಾದ್ಯಂತ ಎಲ್ಲರ ಬಾಯಲ್ಲೂ ಇದೇ ವಿಚಾರ ಕೇಳಿ ಬರುತ್ತಿದೆ. ಈ ಸಮಸ್ಯೆ, ಮಾತುಕತೆ ಮೂಲಕ ನಿವಾರಣೆಯಾಗುತ್ತದೆಯೋ ಅಥವ ಯುದ್ಧ ಆಗುತ್ತದೋ ಹೇಳುವುದು ಸುಲಭವಲ್ಲ.  ಹಾಗೊಂದು ವೇಳೆ ಯುದ್ಧ ಆದರೆ, ಭಾರತ ಅದರಲ್ಲಿ ಮೇಲುಗೈ ಸಾಧಿಸುವುದು ಸಾಧ್ಯವೇ? ಇದೇ ಸಂದರ್ಭವನ್ನು ಬಳಸಿಕೊಂಡು ಪಾಕಿಸ್ತಾನದವರೂ ಮತ್ತಷ್ಟು ಕಿತಾಪತಿ ಮಾಡುತ್ತಾರಾ? ಎಂಬೆಲ್ಲಾ ಸಾಧ್ಯತೆಗಳ ಬಗ್ಗೆ ಭಾರತದ ಎಲ್ಲಾ ವರ್ಗದ ಜನತೆ ಚರ್ಚೆ ನಡೆಸುತ್ತಿದ್ದಾರೆ.

ಆದರೆ, ಅತ್ತ ಚೀನಾದಲ್ಲಿನ ನಾಗರಿಕರು ಈ ಬಗ್ಗೆ ಯಾವುದೇ ಚರ್ಚೆಯನ್ನೇ  ನಡೆಸುತ್ತಿಲ್ಲ, ತಮ್ಮ ಪಾಡಿಗೆ ತಾವು ಸುಮ್ಮನಿದ್ದಾರೆ ಎಂದು ವರದಿಗಳು ಹೇಳುತ್ತವೆ. ಚೀನಾ ದೇಶದ ಹೆಚ್ಚಿನ ದಿನಪತ್ರಿಕೆಗಳಲ್ಲಿ ಭಾರತ-ಚೀನಾ ದೇಶಗಳ ನಡುವಿನ ಬಿಕ್ಕಟ್ಟಿನ ಬಗ್ಗೆ ಹೆಚ್ಚು ಸುದ್ದಿಯೇ ಬರುತ್ತಿಲ್ಲ ಎನ್ನಲಾಗಿದೆ. ಎಲ್ಲೋ ಒಂದು ಕಡೆ ಪತ್ರಿಕೆಗಳ ಸಂಪಾದಕೀಯದಲ್ಲಿ ಈ ವಿಚಾರ ಪ್ರಸ್ತಾಪವಾಗುತ್ತಿದೆಯಂತೆ. ತಮ್ಮ ದೇಶದ ಮಿಲಿಟರಿ ಮತ್ತು ಅದರ ಸಾಮರ್ಥ್ಯದ ಬಗ್ಗೆ ಆ ದೇಶದ ಜನರಿಗೆ ಇರುವ ನಂಬಿಕೆ ಇದಕ್ಕೆ ಕಾರಣವೋ ಅಥವ ಅವರಿಗೆ ಇಂಥ ವಿಚಾರಗಳ ಬಗ್ಗೆ ಎಲ್ಲಾ ತಲೆ ಕೆಡಿಸಿಕೊಳ್ಳಲು ಬಿಡುವಿಲ್ಲವೋ ಗೊತ್ತಾಗುತ್ತಿಲ್ಲ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ಚೀನಾ ಚೀನಾ ಜನರಿಗೆ ಚಿಂತೆಯಿಲ್ಲ…!