ಮಹಾನ್ ಚಿಂತಕ ಮ್ಯಾಕ್ಲೂಹನ್21-07-2017 451

ಇವತ್ತು, ಎಲ್ಲೆಡೆ ಪದೇ ಪದೇ ಬಳಸಲ್ಪಡುವ ‘ಗ್ಲೋಬಲ್ ವಿಲೇಜ್’ ಅಥವ ‘ಜಾಗತಿಕ ಗ್ರಾಮ’ ಅನ್ನುವಂಥ ಪರಿಕಲ್ಪನೆಯನ್ನು ಜಗತ್ತಿಗೆ ಕೊಟ್ಟ ತತ್ವಜ್ಞಾನಿ, ಪ್ರಾಧ್ಯಾಪಕ ಹರ್ಬರ್ಟ್‌ ಮಾರ್ಷಲ್ ಮ್ಯಾಕ್ಲೂಹನ್ ಅವರ ನೂರ ಆರನೇ ಜನ್ಮದಿನ.

1911 ಜುಲೈ 21 ರಂದು ಕೆನಡಾದ ಎಡ್ಮಾಂಟನ್ ನಲ್ಲಿ ಹುಟ್ಟಿದ ಮ್ಯಾಕ್ಲೂಹನ್, ಮಾನಿಟೊಬ ವಿಶ್ವವಿದ್ಯಾಲಯ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಆನಂತರ ಟೊರಾಂಟೊ ವಿವಿಯಲ್ಲಿ ಪ್ರಾಧ್ಯಾಪಕರಾದರು. 1960ರ ದಶಕದಲ್ಲಿ Media Theory ಅಥವ ಮಾಧ್ಯಮ ಸಿದ್ಧಾಂತದ ಪ್ರತಿಪಾದನೆ ಮಾಡಿದ ಮ್ಯಾಕ್ಲೂಹನ್ ‘ಜಾಗತಿಕ ಗ್ರಾಮ’ ಅನ್ನುವ ಪದವನ್ನು ಸೃಷ್ಟಿ ಮಾಡಿದರು. ಇವತ್ತಿನ ಇಂಟರ್‌ನೆಟ್ ಯುಗದ ಬಗ್ಗೆ ಅರ್ಧಶತಮಾನಕ್ಕೂ ಹಿಂದೆಯೇ ಭವಿಷ್ಯ ನುಡಿದಿದ್ದಂತ ಚಿಂತಕ ಮ್ಯಾಕ್ಲೂಹನ್.

ಮಾನವನ ಇತಿಹಾಸವನ್ನು ಶಬ್ಧಗಳ ಯುಗ, ಗ್ರಂಥಗಳ ಯುಗ, ಮುದ್ರಣ ಯುಗ ಮತ್ತು ಎಲೆಕ್ಟ್ರಾನಿಕ್ ಯುಗ ಅಥವ ವಿದ್ಯುನ್ಮಾನ ಯುಗವೆಂದು ವಿಂಗಡಿಸಬಹುದೆಂದು ಹರ್ಬರ್ಟ್‌ ಮಾರ್ಷಲ್ ಮ್ಯಾಕ್ಲೂಹನ್ ಬಹಳ ಹಿಂದೆಯೇ ಹೇಳಿದ್ದರು. ಈ ಎಲ್ಲಾ ಪರಿಕಲ್ಪನೆಗಳನ್ನು ತಮ್ಮ The Gutenberg Galaxy ಎಂಬ 1962ರಲ್ಲಿ ಪ್ರಕಟಿಸಿದ ಪುಸ್ತಕದಲ್ಲಿ ಪರಿಣಾಮಕಾರಿಯಾಗಿ ಪ್ರತಿಪಾದಿಸಿದ್ದರು.

ನಮ್ಮ ಜಗತ್ತು ಎಲೆಕ್ಟ್ರಾನಿಕ್ ಯುಗವೆಂಬ ನಾಲ್ಕನೇ ಯುಗಕ್ಕೆ ಕಾಲಿಡುತ್ತಿದೆ. ಈ ಯುಗದಲ್ಲಿ ತಂತ್ರಜ್ಞಾನ ಅನ್ನುವುದೇ ಪ್ರಮುಖವಾಗಿ ಮೆರೆದು, ಜಗತ್ತಿನ ಸಮುದಾಯವನ್ನು ಒಟ್ಟಿಗೆ ಸೇರಿಸುತ್ತದೆ ಎಂದು ಭವಿಷ್ಯ ನುಡಿದಿದ್ದರು.

ತಮ್ಮ ಸಿದ್ಧಾಂತಗಳನ್ನು ಟಿವಿ ಮೂಲಕ ಪ್ರಚಾರಗೊಳಿಸಿ ಪ್ರಖ್ಯಾತರಾದ ಮ್ಯಾಕ್ಲೂಹನ್ ‘the medium is the message‘ ಮಾಧ್ಯಮ ಅನ್ನುವುದೇ ಸಂದೇಶ ಎಂದು ಅಭಿಪ್ರಾಯ ಪಡುತ್ತಿದ್ದರು.

ನಮ್ಮ ಜಗತ್ತಿಗೆ ಇಂಟರ್ ನೆಟ್ ಅನ್ನುವುದು ಕಾಲಿಡುತ್ತದೆ, ಇದು ಜಗತ್ತಿನೆಲ್ಲೆಡೆ ಇರುವ ಬೇಲಿಗಳನ್ನು ಕಿತ್ತೊಗೆದು, ಜ್ಞಾನ ಅನ್ನುವುದನ್ನು ಡೆಮಾಕ್ರೆಟೈಸ್ ಮಾಡುತ್ತದೆ, ಅಂದರೆ ಎಲ್ಲರಿಗೂ ದೊರೆಯುವ ಹಾಗೆ ಮಾಡುತ್ತದೆ ಎಂದು ಐವತ್ತಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಹೇಳಿದ್ದಂಥ ಮ್ಯಾಕ್ಲೂಹನ್ ಮಹಾಶಯನಿಗೆ Supersuddi.com ನಮನಗಳನ್ನು ಸಲ್ಲಿಸುತ್ತದೆ.


ಒಂದು ಕಮೆಂಟನ್ನು ಬಿಡಿ