ಆರೋಪಿಗಳ ಮೇಲೆ ಗುಂಡುಹಾರಿಸಿದ ಪೊಲೀಸರು !07-07-2017 229

ಬೆಂಗಳೂರು: ಪುಲಕೇಶಿನಗರದ ರೌಡಿ ಶೀಟರ್ ರಂಜಿತ್‍ನನ್ನು ದನದ ದೊಡ್ಡಿಯಲ್ಲಿ ಕೊಲೆಗೈದ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕಾಡುಗೊಂಡನಹಳ್ಳಿಯ ಕಾಚರಕನಹಳ್ಳಿಯ ಕೆರೆ ಬಳಿ ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. ತಪ್ಪಿಸಿಕೊಳ್ಳಲೆತ್ನಿಸಿದ ಲಗ್ಗೆರೆಯ ಸಂತೋಷ್ (19) ಹಾಗೂ ಸುಬ್ರಹ್ಮಣ್ಯಪುರದ ಶ್ಯಾಂ ಅಲಿಯಾಸ್ ಸುನಿಲ್ (19) ಮೇಲೆ ಪೊಲೀಸರು ಗುಂಡು ಹಾರಿಸಲಾಗಿದೆ. ಎಡಗಾಲಿಗೆ ಗುಂಡೇಟು ತಗುಲಿ ಗಾಯಗೊಂಡಿರುವ ಅವರಿಬ್ಬರೂ ಬಾಣಸವಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊನ್ನೆ (ಜು5ರ) ಮಧ್ಯರಾತ್ರಿ ದನದದೊಡ್ಡಿಯಲ್ಲಿ ಮಲಗಿದ್ದ ರಂಜಿತ್‍ಗೆ 55ಕ್ಕೂ ಹೆಚ್ಚು ಕಡೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ, ಸಂತೋಷ್ ಹಾಗೂ ಶ್ಯಾಮ್ ಕಾಚರಕನಹಳ್ಳಿಯ ಕೆರೆ ಬಳಿ ತಲೆಮರೆಸಿಕೊಂಡಿರುವ ಮಾಹಿತಿ ಅರಿತು ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ಅವರು ಪೂರ್ವವಿಭಾಗದ ಅಪರಾಧ ಸಿಬ್ಬಂದಿಯೊಂದಿಗೆ ಶುಕ್ರವಾರ ಮುಂಜಾನೆ 4.30ರ ವೇಳೆ ಕಾರ್ಯಾಚರಣೆಗಿಳಿದಿದ್ದರು, ಈ ವೇಳೆ ಪೊಲೀಸರನ್ನು ನೋಡಿ ಓಡಿ ಹೋಗುತ್ತಿದ್ದ ಸಂತೋಷ್ ಹಾಗೂ ಸುನಿಲ್‍ನನ್ನು ಹಿಡಿಯಲು ಮುಂದಾದಾಗ ಪೇದೆ ಶಶಿಧರ್ ಗೆ ಲಾಂಗ್ ನಿಂದ ಹಲ್ಲೆ ನಡೆಸಿ, ಓಡಿ ಹೋಗುತ್ತಿದ್ದಾಗ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ಇಬ್ಬರೂ ಪರಾರಿಯಾಗುತ್ತಿದ್ದರು. ಕೂಡಲೇ ಶ್ರೀನಿವಾಸ್ ಎರಡು ಸುತ್ತು ಗುಂಡು ಹಾರಿಸಿದ್ದು, ಇಬ್ಬರ ಎಡಗಾಲಿಗೂ ಗುಂಡುಗಳು ತಗುಲಿ ಕುಸಿದು ಬಿದ್ದಿದ್ದಾರೆ. ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಯಿಂದ ಬಲಗೈಗೆ ಗಾಯಗೊಂಡಿರುವ ಪೇದೆ ಶಶಿಧರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ಪ್ರಮೋದ್ ಹಾಗೂ ರಂಜಿತ್ ಜಗಳ ಮಾಡಿಕೊಂಡಿದ್ದು, ಪ್ರಮೋದ್ ನ ಸಹಚರರಾದ ಸಂತೋಷ್ ಹಾಗೂ ಸುನಿಲ್ ರಂಜಿತ್ ನನ್ನು ಕೊಲೆ ಮಾಡಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ. ಸಂತೋಷ್ ಹಾಗೂ ಶ್ಯಾಮ್ ಸಣ್ಣಪುಟ್ಟ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ