ಕಾಂಗ್ರೆಸ್‍ಗೆ ತೀವ್ರ ಮುಖಭಂಗ !15-06-2017 169

ಬೆಂಗಳೂರು:  ಸಭಾಪತಿ ಡಿ.ಹೆಚ್.ಶಂಕರಮೂರ್ತಿಯವರನ್ನು ವಿಧಾನಪರಿಷತ್ ಸಭಾಪತಿ ಹುದ್ದೆಯಿಂದ ಪದಚ್ಯುತಗೊಳಿಸಲು ಮುಂದಾಗಿದ್ದ ಆಡಳಿತಾರೂಢ ಕಾಂಗ್ರೆಸ್‍ಗೆ ತೀವ್ರ ಮುಖಭಂಗವಾಗಿದ್ದು ಪರಿಷತ್ತಿನ ಮೂವತ್ತೇಳು ಸದಸ್ಯರ ಬೆಂಬಲ ಗಳಿಸಿದ ಡಿ.ಹೆಚ್.ಶಂಕರಮೂರ್ತಿ ಸಭಾಪತಿ ಹುದ್ದೆಯನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಶಂಕರಮೂರ್ತಿಯವರನ್ನು ಸಭಾಪತಿ ಹುದ್ದೆಯಿಂದ ಪದಚ್ಯುತಗೊಳಿಸಲು ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯದ ಪರವಾಗಿ ಮೂವತ್ತಾರು ಮತಗಳು ಚಲಾವಣೆಯಾದರೆ, ವಿರುದ್ಧವಾಗಿ ಮೂವತ್ತೇಳು ಮತಗಳು ಚಲಾವಣೆಯಾದವು. ಆ ಮೂಲಕ ವಿಧಾನಪರಿಷತ್ ಸಭಾಪತಿ ಹುದ್ದೆಯಲ್ಲಿ ಶಂಕರಮೂರ್ತಿ ಮುಂದುವರಿದರೆ ಅವರನ್ನು ಪದಚ್ಯುತಗೊಳಿಸಲು ಕಾಂಗ್ರೆಸ್ ನಡೆಸಿದ ಪ್ರಯತ್ನ ವಿಫಲವಾಯಿತು. ಜೆಡಿಎಸ್ ಬೆಂಬಲದಿಂದ ಡಿ.ಹೆಚ್.ಶಂಕರಮೂರ್ತಿ ಅವರನ್ನು ಪದಚ್ಯುತಗೊಳಿಸಬಹುದು ಎಂದು ನಂಬಿದ್ದ ಕಾಂಗ್ರೆಸ್‍ಗೆ ಕೊನೇ ಘಳಿಗೆಯಲ್ಲಿ ಮರ್ಮಾಘಾತ ಕಾದಿತ್ತು. ಯಾಕೆಂದರೆ ಹಲವಾರು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜೆಡಿಎಸ್ ಶಂಕರಮೂರ್ತಿ ಪದಚ್ಯುತಿಯ ನಿರ್ಧಾರದಿಂದ ಹಿಂದೆ ಸರಿದು ಬಿಟ್ಟಿತು. ಶಂಕರಮೂರ್ತಿ ಅವರನ್ನು ಪದಚ್ಯುತಗೊಳಿಸಿ ಜೆಡಿಎಸ್‍ನ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಹುದ್ದೆಯಲ್ಲಿ ಕೂರಿಸಲು ಕಾಂಗ್ರೆಸ್ ಒಪ್ಪಿಕೊಂಡಿತ್ತಾದರೂ. ಉಪಸಭಾಪತಿ ಮರಿತಿಬ್ಬೇಗೌಡರು ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಇಂದು ಮತಕ್ಕೆ ಹಾಕಿದಾಗ ಕಾಂಗ್ರೆಸ್ ಮೂವತ್ತಾರು ಮತಗಳನ್ನು ಪಡೆದರೆ, ಅದು ಸಲ್ಲಿಸಿದ ಅವಿಶ್ವಾಸ ನಿರ್ಣಯದ ವಿರುದ್ದ ಮೂವತ್ತೇಳು ಮತಗಳು ಚಲಾವಣೆಯಾದವು. ಐದು ಮಂದಿ ಪಕ್ಷೇತರ ಸದಸ್ಯರ ಪೈಕಿ ಮೂರು ಮಂದಿ ಕಾಂಗ್ರೆಸ್ ಮಂಡಿಸಿದ ನಿರ್ಣಯದ ಪರವಾಗಿ ನಿಂತರೆ, ಇಬ್ಬರು ವಿರುದ್ಧವಾಗಿ ಮತ ಚಲಾಯಿಸಿದರು.